Monsoon Cravings Decoded: ಮಳೆಗಾಲದಲ್ಲಿ ಗರಿಗರಿ, ಬಿಸಿಬಿಸಿ ಸಮೋಸಾ, ಪಕೋಡಾಕ್ಕೆ ನಾಲಿಗೆ ಹಂಬಲಿಸುವುದೇಕೆ? ಕೊನೆಗೂ ಸಿಕ್ಕಿತು ನೋಡಿ ಉತ್ತರ
Jul 18, 2023 03:15 PM IST
ಮಳೆಗಾಲದಲ್ಲಿ ಗರಿಗರಿ, ಬಿಸಿಬಿಸಿ ಸಮೋಸಾ, ಪಕೋಡಾಕ್ಕೆ ನಾಲಿಗೆ ಹಂಬಲಿಸುವುದೇಕೆ?
- Monsoon Cravings Decoded: ಮಳೆಗಾಲದಲ್ಲಿ ಕರಿದ, ಮಸಾಲೆಯುಕ್ತ ಬಿಸಿ ಬಿಸಿ ಖಾದ್ಯಗಳನ್ನು ಮೆಲ್ಲುತ್ತಿರಬೇಕು ಎನ್ನಿಸುವುದು ಸಹಜ. ಮಾನ್ಸೂನ್‌ನ ಈ ಕಡುಬಯಕೆಗಳಿಗೆ ಕಾರಣ ಏನಿರಬಹುದು? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇದಕ್ಕೆ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಅದನ್ನು ನೀವು ತಿಳಿಯಿರಿ.
ಬೇಸಿಗೆ ಕಾಲದಲ್ಲಿ ಹಲ್ಲು ಜುಮ್ಮೆನ್ನಿಸುವ ಐಸ್‌ಕ್ಯಾಂಡಿ, ಚಳಿಗಾಲದಲ್ಲಿ ಕ್ಯಾರೆಟ್ ಹಲ್ವಾ, ಮಳೆಗಾಲದಲ್ಲಿ ಬಿಸಿ ಬಿಸಿ ಪಕೋಡಾ... ಹೀಗೆ ಋತುಮಾನಕ್ಕೆ ತಕ್ಕಂತೆ ನಮ್ಮ ನಾಲಿಗೆ ಹಾಗೂ ದೇಹವು ಆಹಾರದ ಕಡುಬಯಕೆಯನ್ನು ಹೊರ ಹಾಕುವುದು ಸಾಮಾನ್ಯ. ಇವುಗಳು ನಮ್ಮ ಡಯೆಟ್ ಪಾಲನೆಯನ್ನೂ ಮುರಿಯುವಂತೆ ಮಾಡುತ್ತವೆ.
ಮಳೆಗಾಲ ಬಂತೆಂದರೆ ಬೀದಿ ಬದಿ ತಿನಿಸುಗಳನ್ನು ತಯಾರಿಸುವ ವ್ಯಾಪಾರಿಗಳಿಗೆ ಹಬ್ಬವೋ ಹಬ್ಬ. ಬೋಂಡಾ ಬಜ್ಜಿ, ಸಮೋಸ, ಪಕೋಡಾ ಇಂತಹ ತಿನಿಸುಗಳ ವ್ಯಾಪಾರ ಜೋರಾಗಿರುತ್ತದೆ. ಇವು ನಮ್ಮ ಆರೋಗ್ಯ ಕೆಡಿಸುತ್ತವೆ ಎಂಬ ಅರಿವು ನಮಗಿದ್ದರೂ, ಮನಸ್ಸು ಬೇಡವೆಂದರೂ ನಾಲಿಗೆ ಅದನ್ನೇ ಸೆಳೆಯುತ್ತದೆ.
ಮಾನ್ಸೂನ್ ಸಮಯದಲ್ಲಿ ಕರಿದ ಹಾಗೂ ಮಸಾಲೆಯುಕ್ತ ಆಹಾರದ ಕಡುಬಯಕೆ ಹೆಚ್ಚುವುದು ಏಕೆ ಎಂದು ನೀವು ಸಾಕಷ್ಟು ಬಾರಿ ಯೋಚಿಸಿರಬಹುದು ಅಲ್ವಾ? ನಿಮ್ಮ ಯೋಚನೆಗೆ ಈಗ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ.
ʼವಡಾಗಳು, ಬೋಂಡ ಬಜ್ಜಿ, ಸಮೋಸಾ, ಇಂಡೋ ಚೈನಿಸ್ ಮತ್ತು ಇತರ ಮಸಾಲೆಯುಕ್ತ ಹಾಗೂ ಕರಿದ ತಿನಿಸುಗಳು ಮಳೆಗಾಲದಲ್ಲಿ ನಮ್ಮನ್ನು ಸೆಳೆಯುವುದು ಸಹಜ. ಮಳೆಯು ಕರಿದ ಮತ್ತು ಮಸಾಲೆಯುಕ್ತ ಆಹಾರದ ಕಡುಬಯಕೆಯನ್ನು ಹೆಚ್ಚಿಸುತ್ತದೆʼ ಎಂದು ಫುಡ್ ಡಾರ್ಜಿ ಸಂಸ್ಥಾಪಕ, ಫಿಟ್ನೆಸ್ ಮತ್ತು ಪೌಷ್ಟಿಕತಜ್ಞ ಡಾ. ಸಿದ್ಧಾಂತ್ ಭಾರ್ಗವ ಹೇಳುತ್ತಾರೆ.
ಇದು ಸಾಮೂಹಿಕ ಆಹಾರ ಕಲ್ಪನೆಯೇ ಅಥವಾ ಈ ಕಡುಬಯಕೆಗೆ ವೈಜ್ಞಾನಿಕ ಕಾರಣವಿದೆಯೇ?
ಈ ಬಗ್ಗೆ ಡಾ. ಸಿದ್ಧಾಂತ್ ಹೇಳುವುದು ಹೀಗೆ ʼಮಳೆಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆಯು ನಮ್ಮ ಸಂತೋಷದ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಧನಾತ್ಮಕ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುವ ಆಹಾರಕ್ಕಾಗಿ ನಾವು ಹಂಬಲಿಸಬಹುದುʼ ಎಂದು ಅವರು ಹೇಳುತ್ತಾರೆ.
ಮಳೆಗಾಲದಲ್ಲಿ ಕರಿದ ಪದಾರ್ಥಗಳನ್ನು ಏಕೆ ಇಷ್ಟ ಪಡುತ್ತೇವೆ?
ʼಮಾನ್ಸೂನ್ ಸಮಯದಲ್ಲಿ ನಮ್ಮ ದೇಹದಲ್ಲಿ ಸಂತೋಷದ ಹಾರ್ಮೋನ್ ಸಿರೊಟೋನಿನ್ ಮಟ್ಟದಲ್ಲಿ ಕುಸಿತವನ್ನು ಕಾಣಬಹುದು. ಅದಕ್ಕೆ ಕಾರಣ ಸರಿಯಾದ ಸೂರ್ಯನ ಬೆಳಕು ಬೀಳದೇ ಇರುವುದು. ಇದು ದೇಹದಲ್ಲಿನ ವಿಟಮಿನ್ ಡಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕೊರತೆಗಳಿಗೆ ಹೊಂದಿಕೊಳ್ಳಲು ನಮ್ಮ ದೇಹವು ಕಾರ್ಬೋಹೈಡ್ರೇಟ್‌ಗಳನ್ನು ಹಂಬಲಿಸುತ್ತದೆ. ಕಾರ್ಬೋಹೈಡ್ರೇಟ್‌ಗಳು ದೇಹದಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ. ಜೊತೆಗೆ ನಿರಂತರ ಕಡುಬಯಕೆಗೂ ಇದು ಕಾರಣವಾಗುತ್ತದೆ. ಕಾರ್ಬೋಹೈಡ್ರೇಟ್‌ಗಳ ಜೊತೆಗೆ ಡೀಪ್ ಫ್ರೈ ಮಾಡಿದ ತಿಂಡಿಗಳಲ್ಲಿ ತೇವಾಂಶ ಕೊರತೆ ಇರುತ್ತದೆ. ಇದು ಬಾಯಲ್ಲಿ ಇನ್ನಷ್ಟು ನೀರೂರಲು ಕಾರಣವಾಗುತ್ತದೆ. ಆ ಕಾರಣಕ್ಕೆ ನಾವು ಕರಿದ ಪದಾರ್ಥಗಳನ್ನು ತಿನ್ನಲು ಹೆಚ್ಚು ಬಯಸುತ್ತೇವೆʼ ಎಂದು ಅವರು ಹೇಳುತ್ತಾರೆ.
ಮಳೆಗಾಲದಲ್ಲಿ ಮಸಾಲೆ ಪದಾರ್ಥಗಳ ಮೇಲಿನ ಬಯಕೆಗೆ ಕಾರಣ
ಮಳೆಗಾಲದಲ್ಲಿ ಮಸಾಲೆಯುಕ್ತ ಪದಾರ್ಥಗಳ ಸೇವನೆಗೆ ನಾಲಿಗೆ ಹಾಗೂ ದೇಹ ಬಯಸಲು ಕಾರಣ ವಿವರಿಸುವ ಡಾ. ಸಿದ್ಧಾಂತ್
ʼಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಎಂಬ ಸಂಯುಕ್ತವಿದೆ. ಇದು ನಾವು ಬಿಸಿಯಾದ ಪದಾರ್ಥವನ್ನು ಸೇವಿಸಿದ್ದೇವೆ ಎಂದು ಭಾವಿಸುವಂತೆ ಬಾಯಿಯಲ್ಲಿರುವ ನರಗಳಿಗೆ ಮೋಸ ಮಾಡಬಹುದು. ಇದರಿಂದ ಮೆದುಳು ಕೂಡ ಮೋಸಗೊಂಡು ದೇಹ ಬೆವರುವಂತೆ ಮಾಡುತ್ತದೆ. ಮಾತ್ರವಲ್ಲ ರಕ್ತಪ್ರವಾಹಕ್ಕೆ ಸಂತೋಷವನ್ನು ಉಂಟು ಮಾಡುವ ಡೋಪಮೈನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಪ್ರತಿಕ್ರಿಯಿಸುತ್ತದೆʼ ಎಂದು ಅವರು ಹೇಳುತ್ತಾರೆ.
ಮಳೆಗಾಲದಲ್ಲಿ ಈ ಆಹಾರಗಳು ನಮ್ಮ ಆರೋಗ್ಯವನ್ನು ಕೆಡಿಸುತ್ತವೆ. ಅದಕ್ಕೆ ಬದಲಿಯಾಗಿ ನಾವು ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು ಎನ್ನುತ್ತಾರೆ ಅವರು.
ಮಳೆಗಾಲದಲ್ಲಿ ಕಡುಬಯಕೆಗಳನ್ನು ಶಮನಗೊಳಿಸುವ ಆರೋಗ್ಯಕರ ಮಾರ್ಗಗಳು
ಅತಿಯಾಗಿ ಕರಿದ ಅಥವಾ ಡೀಪ್ ಫ್ರೈ ಮಾಡಿದ ಆಹಾರಗಳಲ್ಲಿ ಕ್ಯಾಲೊರಿ ಅಂಶ ಅಧಿಕವಾಗಿರುತ್ತದೆ. ಇಂತಹ ಆಹಾರಗಳನ್ನು ಸೇವಿಸುವುದರಿಂದ ತೂಕ ಮತ್ತು ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ಮಾತ್ರವಲ್ಲ ಇದು ನಮ್ಮ ಆರೋಗ್ಯಕ್ಕೂ ಹಾನಿ ಮಾಡಬಹುದು. ಈ ರೀತಿಯ ಅನಗತ್ಯ ತೂಕ ಹೆಚ್ಚಾಗುವುದನ್ನು ತಪ್ಪಿಸಲು, ನಮ್ಮ ರುಚಿ ಮೊಗ್ಗುಗಳನ್ನು ತೃಪ್ತಿ ಪಡಿಸಲು ಮತ್ತು ಸಂತೋಷದ ಹಾರ್ಮೋನ್‌ಗಳನ್ನು ಹೆಚ್ಚಿಸಿಕೊಳ್ಳಲು ಮಳೆಗಾಲದಲ್ಲಿ ಕೆಲವು ಆರೋಗ್ಯಕರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಅವರು ನೀಡಿದ ಸಲಹೆಗಳು ಹೀಗಿವೆ:
*ಮಳೆಗಾಲದಲ್ಲಿ ಮಸಾಲೆ ಹಾಗೂ ಬೆಣ್ಣೆ ಸೇರಿಸಿದ ಹುರಿದ ಅಥವಾ ಬೇಯಿಸಿದ ಜೋಳ ತಿನ್ನುವುದು ಬೆಸ್ಟ್. ಇದಕ್ಕೆ ನಿಮ್ಮಿಷ್ಟದ ಮಸಾಲೆ ಹಾಗೂ ನಿಂಬೆರಸ ಸೇರಿಸಿಕೊಳ್ಳಬಹುದು. ಇದು ಜನಪ್ರಿಯ ಭಾರತೀಯ ಮಾನ್ಸೂನ್ ತಿನಿಸೂ ಹೌದು.
* ಮೊಳಕೆಕಾಳುಗಳ ಸಲಾಡ್, ತರಕಾರಿ ಸಲಾಡ್ ಅಥವಾ ಕಾರ್ನ್ ಸಲಾಡ್ ಅನ್ನು ವಿವಿಧ ತರಕಾರಿಗಳು ಮತ್ತು ಸರಳವಾದ ಮಸಾಲೆಗಳೊಂದಿಗೆ ಸೇರಿಸಿ ಸವಿಯಬಹುದು.
* ಆಲೂ ಚಾಟ್, ಆಲೂ ದಹಿ ಚಾಟ್ ಅಥವಾ ಬೇಯಿಸಿದ ಅಲೂ ಚಾಟ್ ಆರೋಗ್ಯಕರ ಹಾಗೂ ರುಚಿಕರ ಆಯ್ಕೆಯಾಗಿದೆ.
* ತಾಜಾ ತರಕಾರಿಗಳಿಂದ ತುಂಬಿದ ಗರಿಗರಿಯಾದ ಸ್ಯಾಂಡ್ವಿಚ್ ಪಕೋಡಾಗಳಿಗೆ ಪರ್ಯಾಯವಾಗಿದೆ.
* ಸುಟ್ಟ ಹಪ್ಪಳ ಮೇಲೆ ವಿವಿಧ ಬಗೆಯ ಹೆಚ್ಚಿದ ತರಕಾರಿ ಹಾಗೂ ಪುದಿನಾ ಚಟ್ನಿ ಜೊತೆ ಸೇವಿಸಬಹುದು.
* ಚಿಪ್ಸ್ ಪ್ಯಾಕೆಟ್ ಬದಲು ಮಂಡಕ್ಕಿ ಚುರುಮುರಿ ತಯಾರಿಸಿ ತಿನ್ನಬಹದು.
ಮಾನ್ಸೂನ್ ಕಡುಬಯಕೆಗಳನ್ನು ಮನಸ್ಸಿನ ಆಹಾರದ ಆಯ್ಕೆಗಳು ಮತ್ತು ದೇಹವನ್ನು ಪೋಷಿಸುವ ಆಹಾರಗಳನ್ನು ಸೇವಿಸುವುದರ ಮೂಲಕ ತೃಪ್ತಿಪಡಿಸಬಹುದು.