Masala Dosa: ಈ ಹೋಟೆಲ್ ಮಸಾಲೆ ದೋಸೆ ಸವಿಯೋಕೆ ದೂರದಿಂದ ಬರ್ತಾರೆ ಭೋಜನಪ್ರಿಯರು; ನಟ ಶಿವ ರಾಜ್‌ಕುಮಾರ್‌ಗೆ ಕೂಡಾ ಇದು ಫೇವರೆಟ್ ಸ್ಪಾಟ್
Jul 22, 2023 08:00 AM IST
ಕನಕಪುರದ ವಾಸು ಹೋಟೆಲ್
ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್, ಉಪಮುಖ್ಯಮಂತ್ರಿ, ಸ್ಥಳೀಯ ಶಾಸಕರೂ ಆದ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ವಾಸು ಹೋಟೆಲ್‌ಗೆೆ ಆಗ್ಗಾಗ್ಗೆ ಬಂದು ತಮ್ಮಿಷ್ಟದ ತಿಂಡಿ ಸವಿದು ಹೋಗುತ್ತಾರೆ.
ಮಸಾಲೆ ದೋಸೆ ಹೆಸರು ಕೇಳಿದರೆ ಯಾರಿಗಾದರೂ ಒಮ್ಮೆ ಬಾಯಲ್ಲಿ ನೀರೂರದೆ ಇರದು. ಬಹುತೇಕ ಎಲ್ಲಾ ಹೋಟೆಲ್‌ಗಳಲ್ಲೂ ಮಸಾಲೆ ದೋಸೆ ಸಿಗುತ್ತದೆ. ಆದರೆ ರುಚಿಕಟ್ಟಾಗಿರುವ ದೋಸೆ ದೊರೆಯುವುದು ಕೆಲವೇ ಕೆಲವು ಕಡೆ ಮಾತ್ರ. ಅದರಲ್ಲಿ ಕನಕಪುರದ ವಾಸು ಹೋಟೆಲ್ ಕೂಡಾ ಒಂದು. ಇಲ್ಲಿಗೆ ಹೋಗಿ ಮಸಾಲೆ ದೋಸೆ ತಿನ್ನಲು ಜನರು ದೋಸೆಗಿಂತೂ 10 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ ಎಂದರೆ ಅಲ್ಲಿನ ಮಸಾಲೆ ದೋಸೆ ರುಚಿ ಹೇಗಿರಬಹುದು ನೀವೇ ಊಹಿಸಿ.
ಕನಕಪುರದ ವಾಸು ಹೋಟೆಲ್
ಒಂದೇ ಹೋಟೆಲ್‌ನಲ್ಲಿ ಪದೇ ಪದೇ ಮಸಾಲೆ ದೋಸೆ ತಿನ್ನುತ್ತಿದ್ದರೆ ಅಷ್ಟೊಂದು ರುಚಿ ಸಿಗುವುದಿಲ್ಲ. ಆದರೆ ಹೋಟೆಲ್ ಬದಲಾಯಿಸುತ್ತಿದ್ದರೆ ಮಾತ್ರ ದೋಸೆಯ ರುಚಿ ನಾಲಿಗೆಗೆ ಹಿಡಿಯುತ್ತದೆ. ದೋಸೆ ತುಂಬಾ ರುಚಿ ಎಂದು ಗೊತ್ತಾದರೆ ಸಾಕು, ಎಷ್ಟೇ ದೂರವಿದ್ದರೂ ಭೋಜನಪ್ರಿಯರು ಆ ಹೋಟೆಲ್ ಹುಡುಕಿ ಹೋಗದೆ ಇರುವುದಿಲ್ಲ. ಅದು ನಾಲಿಗೆಯ ಗುಣವೋ, ದೋಸೆಯ ಗುಣವೋ ನೀವೇ ನಿರ್ಧರಿಸಿ. ಅಂತಹ ದೋಸೆಯ ಗುಣಕ್ಕೆ ಮಾರು ಹೋದ ಜನರು ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಕನಕಪುರದ ವಾಸು ಹೋಟೆಲ್‌ಗೆ ಮಸಾಲೆ ದೋಸೆ ತಿನ್ನಲು ಬರುತ್ತಾರೆ.
ಇಲ್ಲಿನ ದೋಸೆಗೆ ಅಂತಹ ಆಯಸ್ಕಾಂತ ಗುಣವಿದೆ ಎಂದರೂ ತಪ್ಪಾಗುವುದಿಲ್ಲ. ಎಲ್ಲಾ ಹೋಟೆಲ್ ದೋಸೆಯೂ ಮಸಾಲೆ ದೋಸೆ ಆಗುವುದಿಲ್ಲ. ಮಸಾಲೆ ದೋಸೆಯ ಗುಣಗಳಿದ್ದರೆ ಮಾತ್ರ ಅದು ನಿಜವಾದ ಮಸಾಲೆ ದೋಸೆ ಆಗಲು ಸಾಧ್ಯ. ದೋಸೆ ಒಂದೊಂದು ಹೋಟೆಲ್‌ನಲ್ಲಿ ಒಂದೊಂದು ರೀತಿ ಇರುತ್ತದೆ. ಆದರೆ ಇಲ್ಲಿನ ಮಸಾಲೆ ದೋಸೆ ಸವಿದ ಮೇಲೆ ಹೀಗೆಯೇ ಇರಬೇಕು ಎಂದು ನೀವು ನಿರ್ಧರಿಸುವುದು ಗ್ಯಾರಂಟಿ. ಯಾವ ಯಾವ ಪದಾರ್ಥಗಳನ್ನು ಎಷ್ಟೆಷ್ಟು ಇರಬೇಕೋ ಅಷ್ಟು ಮಾತ್ರ ಬಳಸುವುದರಿಂದ ವಾಸು ಹೋಟೆಲ್‌ನ ದೋಸೆಗೆ ಅಷ್ಟು ರುಚಿ ಎನ್ನಬಹುದು. ಎಷ್ಟು ಅಕ್ಕಿಗೆ ಎಷ್ಟು ಉದ್ದಿನ ಬೇಳೆ ಮಿಕ್ಸ್ ಮಾಡಬೇಕೆಂದು ಕೆಲವರಿಗೆ ತಿಳಿದಿರುವುದೇ ಇಲ್ಲ. ಒಂದು ಹದವಾಗಿ ಮಿಕ್ಸ್ ಮಾಡಿದರೆ ಮಾತ್ರ ದೋಸೆ ರುಚಿಕರವಾಗಿರುತ್ತದೆ.
ದೋಸೆ ರುಚಿ ಹೆಚ್ಚಿಸುವ ಕೆಂಪು ಚಟ್ನಿ, ಆಲೂಗಡ್ಡೆ ಪಲ್ಯ
ದೋಸೆ ಹೊಯ್ಯುವ ಕಾವಲಿ, ದೋಸೆ ಬೇಯಿಸುವ ವಿಧಾನವೂ ಮುಖ್ಯ. ಕೆಲವು ಹೋಟೆಲ್‌ಗಳಲ್ಲಿ ಉರಿ ಹೆಚ್ಚು ಮಾಡಿ ದೋಸೆಯನ್ನು ಕೆಂಪಗೆ ಮಾಡಿ ಕೊಡುತ್ತಾರೆ. ಅದು ಅಷ್ಟೊಂದು ರುಚಿ ಕೊಡುವುದಿಲ್ಲ. ಆದರೆ ವಾಸು ಹೋಟೆಲ್‌ನಲ್ಲಿ ದೋಸೆ ಬೇಯಿಸಲೂ ಒಂದು ವಿಧಾನವೇ ಬೇರೆ. ಇಲ್ಲಿ ಸೌದೆ ಒಲೆಯಲ್ಲಿ ಮೀಡಿಯಂ ಉರಿ ಇಟ್ಟು ದೋಸೆ ಬೇಯಿಸುತ್ತಾರೆ. ದೋಸೆ ನಿಧಾನವಾಗಿ ಬೇಯುತ್ತಾ ಕಂದು ಬಣ್ಣಕ್ಕೆ ತಿರುಗಬೇಕು. ಆಗ ದೋಸೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಕೆಂಪು ಚಟ್ನಿ ಸವರಿದರೆ ಮಾತ್ರ ಅದು ಮಸಾಲೆ ದೋಸೆ. ಇಲ್ಲವಾದಲ್ಲಿ ಅದು ಪ್ಲೇನ್ ದೋಸೆಯಾಗುತ್ತದೆ. ಕೆಂಪು ಚಟ್ನಿ ತಯಾರಿಸಲೂ ಒಂದು ವಿಧಾನವಿದೆ.
ದೋಸೆಗೆ ರುಚಿ ಕೊಡುವ ಕೆಂಪು ಚಟ್ನಿಗೆ ಬೆಳ್ಳುಳ್ಳಿ, ಬ್ಯಾಡಗಿ ಮೆಣಸಿನಕಾಯಿ ಬಳಸಿ ತಯಾರಿಸುತ್ತಾರೆ. ನಂತರ ದೋಸೆ ಬೇಯುತ್ತಿರುವಾಗ ಅದರ ಮೇಲೆ ಆಲೂಗಡ್ಡೆ ಪಲ್ಯ ಇಡಬೇಕು. ದೋಸೆಯ ರುಚಿ ದುಪ್ಪಟ್ಟಾಗಲು ಆಲೂಗಡ್ಡೆ ಪಲ್ಯ ಕೂಡಾ ಬಹಳ ಮುಖ್ಯ. ಇಲ್ಲಿಯ ಪಲ್ಯಕ್ಕೆ ಆ ಗುಣವಿದೆ. ಇಲ್ಲಿ ಆಲೂಗಡ್ಡೆ ಜೊತೆಗೆ ಈರುಳ್ಳಿಯನ್ನು ಹೆಚ್ಚಾಗಿ ಬಳಸುತ್ತಾರೆ. ಅಷ್ಟಕ್ಕೇ ನಿಲ್ಲಲಿಲ್ಲ, ಆಲೂಗಡ್ಡೆ ಪಲ್ಯ, ಕೆಂಪು ಚಟ್ನಿ ಜೊತೆಗೆ ಕಾಯಿಚಟ್ನಿಯೂ ಬೇಕು. ಹಾಗಾಗಿ ಇಲ್ಲಿ ಚಟ್ನಿಯನ್ನೂ ಹದವಾಗಿ ಮಾಡಿರುತ್ತಾರೆ. ಹುರಿ ಗಡಲೆ, ತೆಂಗಿನಕಾಯಿ, ಹಸಿ ಮೆಣಸಿನಕಾಯಿಯನ್ನು ರುಚಿಗೆ ತಕ್ಕಷ್ಟು ಬೆರೆಸಿ ತಯಾರಿಸುತ್ತಾರೆ.
ನಟ ಶಿವರಾಜ್‌ಕುಮಾರ್, ಡಿಸಿಎಂ ಡಿಕೆ ಶಿವಕುಮಾರ್ ಮೆಚ್ಚಿನ ಹೋಟೆಲ್
ಮಸಾಲೆ ದೋಸೆ ಮಾತ್ರವಲ್ಲ, ಎಲ್ಲಾ ರೀತಿಯ ದೋಸೆಯೂ ಇಲ್ಲಿ ದೊರೆಯುತ್ತದೆ. ಅನೇಕ ವಿಧದ ರೈಸ್ ಐಟಂಗಳೂ ಲಭ್ಯ. ಇಡ್ಲಿ ವಡೆ, ಪೂರಿ, ಮಕಮಲ್ ಪೂರಿ, ಜಾಮೂನ್, ಮುರುಕು, ಮಿಕ್ಸ್ಚರ್ ಎಲ್ಲವೂ ಸಿಗುತ್ತದೆ. ಆದರೂ ಇಲ್ಲಿ ಮಸಾಲೆ ದೋಸೆ ಬಹಳ ಫೇಮಸ್. ಅಷ್ಟೇ ಅಲ್ಲ ದೋಸೆ ಬೆಲೆಯೂ ಕಡಿಮೆ. ಇಲ್ಲಿ ಯಾವುದೇ ದೋಸೆ ಅಥವಾ ತಿಂಡಿಗೆ 40 ರೂಪಾಯಿ ಮಾತ್ರ. ಇಲ್ಲಿ ದೋಸೆ ತಿನ್ನುವ ಗ್ರಾಹಕರು ರುಚಿಗೆ ಮಾರುಹೋಗಿ ಹೋಟೆಲ್ ಮಾಲೀಕರಿಗೆ 35 ರೂಪಾಯಿ ಇದ್ದ ಬೆಲೆಯನ್ನು 40 ರೂಪಾಯಿಗೆ ಹೆಚ್ಚಿಸುವಂತೆ ಹೇಳಿದ್ದಾರೆ. ಹೋಟೆಲ್ ಮಾಲೀಕ ಜನಾರ್ಧನ್ ಪ್ರತಿದಿನ, ಎಲ್ಲಾ ತಿಂಡಿಯನ್ನೂ ಟೇಸ್ಟ್ ನೋಡಿ ನಂತರ ಗ್ರಾಹಕರಿಗೆ ಒದಗಿಸುತ್ತಾರೆ. ರುಚಿ ಕಾಪಾಡಿಕೊಳ್ಳಲು ಮಾಲೀಕರು ಅನುಸರಿಸುವ ತಂತ್ರ ಇದು.
ನಟ ಶಿವರಾಜ್ ಕುಮಾರ್, ಉಪಮುಖ್ಯಮಂತ್ರಿ ಸ್ಥಳೀಯ ಶಾಸಕರೂ ಆದ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಇಲ್ಲಿಗೆ ಆಗ್ಗಾಗ್ಗೆ ಬಂದು ತಮ್ಮಿಷ್ಟದ ತಿಂಡಿ ಸವಿದು ಹೋಗುತ್ತಾರೆ. ವೀಕೆಂಡ್‌ಗಳಲ್ಲಿ ಬೆಂಗಳೂರಿನಿಂದ ನೂರಾರು ಮಂದಿ ಇಲ್ಲಿಗೆ ಮಸಾಲೆ ದೋಸೆ ರುಚಿ ನೋಡಲೆಂದು ಹೋಗುತ್ತಾರೆ. ಹಾಗಿದ್ರೆ ನೀವು ಭೋಜನಪ್ರಿಯರಾಗಿದ್ದಲ್ಲಿ, ಅದರಲ್ಲೂ ಮಸಾಲೆ ದೋಸೆ ಇಷ್ಟಪಡುವವರಾಗಿದ್ದಲ್ಲಿ ಮುಂದಿನ ಬಾರಿ ತಪ್ಪದೆ ವಾಸು ಹೋಟೆಲ್‌ಗೆ ಹೋಗಿ ಬನ್ನಿ.
ವರದಿ: ಮಾರುತಿ ಹನುಮಂತಯ್ಯ
ವಿಭಾಗ