logo
ಕನ್ನಡ ಸುದ್ದಿ  /  ಜೀವನಶೈಲಿ  /  Kaali Mirch Chicken: ಚಳಿಗಾಲಕ್ಕೆ ಬೆಸ್ಟ್‌ ಕಾಂಬಿನೇಷನ್‌ ಬಾಯಲ್ಲಿ ನೀರೂರಿಸುವ ಪೆಪ್ಪರ್‌ ಚಿಕನ್; ಈ ಸ್ಪೆಷಲ್‌ ರೆಸಿಪಿಯನ್ನು ನೀವೂ ಮಾಡಿ ​

Kaali Mirch Chicken: ಚಳಿಗಾಲಕ್ಕೆ ಬೆಸ್ಟ್‌ ಕಾಂಬಿನೇಷನ್‌ ಬಾಯಲ್ಲಿ ನೀರೂರಿಸುವ ಪೆಪ್ಪರ್‌ ಚಿಕನ್; ಈ ಸ್ಪೆಷಲ್‌ ರೆಸಿಪಿಯನ್ನು ನೀವೂ ಮಾಡಿ ​

HT Kannada Desk HT Kannada

Nov 25, 2023 07:15 AM IST

google News

ಥಟ್​ ಅಂತಾ ತಯಾರಿಸಿ ಬಾಯಲ್ಲಿ ನೀರೂರಿಸುವಂತಹ ಕಾಳುಮೆಣಸಿನ ಚಿಕನ್​

    • ಚಳಿಗಾಲದಲ್ಲಿ ಮಾಂಸಾಹಾರದ ಬಯಕೆ ಹೆಚ್ಚುವುದು ಸಹಜ. ಚಳಿಗಾಲದಲ್ಲಿ ಖಾರ ಖಾರವಾಗಿ, ರುಚಿಯಾಗಿ ಚಿಕನ್‌ ಖಾದ್ಯ ಸೇವಿಸಬೇಕು ಎನ್ನುವ ಬಯಕೆಯಾದರೆ ಕಾಳುಮೆಣಸಿನ ಚಿಕನ್‌ ಟ್ರೈ ಮಾಡಿ, ರೆಸಿಪಿ ನಾವು ನಿಮಗೆ ಹೇಳಿ ಕೊಡ್ತೀವಿ. 
ಥಟ್​ ಅಂತಾ ತಯಾರಿಸಿ ಬಾಯಲ್ಲಿ ನೀರೂರಿಸುವಂತಹ ಕಾಳುಮೆಣಸಿನ ಚಿಕನ್​
ಥಟ್​ ಅಂತಾ ತಯಾರಿಸಿ ಬಾಯಲ್ಲಿ ನೀರೂರಿಸುವಂತಹ ಕಾಳುಮೆಣಸಿನ ಚಿಕನ್​

ಮಾಂಸ ಭಕ್ಷ್ಯ ಪ್ರಿಯರ ಎದುರು ಹೋಗಿ ನೀವು ಚಿಕನ್​ ಹೆಸರು ಹೇಳಿದರೆ ಸಾಕು ಅವರ ಬಾಯಲ್ಲಿ ನೀರೂರುತ್ತದೆ. ಈ ಚಿಕನ್​ ಮಾಂಸವನ್ನು ಬಳಸಿಕೊಂಡು ತರಹೇವಾರಿ ರೀತಿಯ ಆಹಾರವನ್ನು ತಯಾರಿಸಬಹುದಾಗಿದೆ. ಇವುಗಳಲ್ಲಿ ಒಂದು ಕಾಲಿ ಮಿರ್ಚ್​ ಚಿಕನ್​. ಇದು ಉತ್ತರ ಭಾರತ ಮೂಲದ ಚಿಕನ್​ ಖಾದ್ಯವಾಗಿದ್ದು ಕಾಳು ಮೆಣಸು ಹಾಗೂ ಕೋಳಿ ಮಾಂಸ ಈ ಖಾದ್ಯದ ಹೀರೋ ಪದಾರ್ಥಗಳಾಗಿವೆ. ಮಸಾಲೆ ಪದಾರ್ಥಗಳು, ತಾಜಾ ಕೊತ್ತಂಬರಿ ಸೊಪ್ಪು ಇವುಗಳನ್ನೆಲ್ಲ ಬಳಸಿ ತಯಾರಿಸಿದ ಕಾಲಿ ಮಿರ್ಚ್​ ಚಿಕನ್​ ಅಥವಾ ಕಾಳು ಮೆಣಸಿನ ಚಿಕನ್​ ಖಾದ್ಯವನ್ನು ನೀವು ಚಪಾತಿ, ಅಕ್ಕಿ ರೊಟ್ಟಿ ಅಥವಾ ಅನ್ನದ ಜೊತೆಯಲ್ಲಿ ಬೆರೆಸಿಕೊಂಡು ತಿಂದರೆ ನಿಮ್ಮ ಬಾಯಲ್ಲಿ ನೀರೂರುವುದಂತೂ ಪಕ್ಕಾ. ಅಂದಹಾಗೆ ಈ ಕಾಳುಮೆಣಸಿನ ಚಿಕನ್​ ಪದಾರ್ಥವನ್ನು ತಯಾರಿಸುವುದು ತುಂಬಾನೇ ಸುಲಭ. ಕಡಿಮೆ ಸಮಯದಲ್ಲಿ, ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಮಸಾಲೆ ಪದಾರ್ಥಗಳನ್ನು ಬಳಸಿ ರುಚಿಕರವಾದ ಚಿಕನ್​ ಖಾದ್ಯವನ್ನು ತಯಾರಿಸಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು

ಹುರಿದು ಪುಡಿ ಮಾಡಿದ ಒಣ ಮೆಣಸು: 3 ಟೇಬಲ್​ ಚಮಚ

ಮ್ಯಾರಿನೇಷನ್​ಗೆ ಬೇಕಾಗುವ ಪದಾರ್ಥಗಳು:

ಚಿಕನ್​: 500 ಗ್ರಾಂ.

ಮೊಸರು: 175 ಗ್ರಾಂ

ಪುಡಿಮಾಡಿದ ಕರಿಮೆಣಸು: 3-4 ಟೇಬಲ್​ ಚಮಚ

ಉಪ್ಪು: ರುಚಿಗೆ ತಕ್ಕಷ್ಟು

ಗ್ರೇವಿ ಮಾಡಲು ಬೇಕಾಗುವ ಆಹಾರ ಪದಾರ್ಥಗಳು:

ಅಡುಗೆ ಎಣ್ಣೆ: 2 ಚಮಚ

ಕಪ್ಪು ಏಲಕ್ಕಿ: 1

ಲವಂಗ: 2

ಹಸಿರು ಏಲಕ್ಕಿ: 2

ದಾಲ್ಚಿನ್ನಿ ಎಲೆ: 1

ಶುಂಠಿ: 1 ಇಂಚು(ಸಿಪ್ಪೆ ಸುಲಿದಿದ್ದು)

ಬೆಳ್ಳುಳ್ಳಿ: 7-8 ಎಸಳು

ನೆನೆಸಿದ ಗೋಡಂಬಿ: 10-12

ನೀರು: 1 ಕಪ್​

ಈರುಳ್ಳಿ: 1/2 ಕಪ್​

ಹಸಿ ಮೆಣಸು: 3-4

ಇನ್ನಿತರ ಪದಾರ್ಥಗಳು:

ಎಣ್ಣೆ:2 ಟೇಬಲ್​ ಸ್ಪೂನ್​

ಬೆಣ್ಣೆ: 1 1/2 ಟೇಬಲ್​ ಸ್ಪೂನ್​

ಫ್ರೆಶ್​ ಕ್ರೀಮ್: 2 ಟೇಬಲ್​ ಸ್ಪೂನ್​

ಪುಡಿಮಾಡಿದ ಕಾಳು ಮೆಣಸು: 2 ಟೇಬಲ್​ ಸ್ಪೂನ್​

ಕತ್ತರಿಸಿದ ಕೊತ್ತಂಬರಿ ಸೊಪ್ಪು: 1 ಟೇಬಲ್​ ಸ್ಪೂನ್​

ಉಪ್ಪು: ರುಚಿಗೆ ತಕ್ಕಷ್ಟು

ಸಕ್ಕರೆ:1/2 ಕಪ್​

ಮಾಡುವ ವಿಧಾನ:

ಕಾಳು ಮೆಣಸನ್ನು ಮೂರರಿಂದ ನಾಲ್ಕು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹುರಿದುಕೊಂಡು ಬಳಿಕ ಅದನ್ನು ಪುಡಿಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಚಿಕನ್​ ಮ್ಯಾರಿನೇಟ್​ಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ, 500 ಗ್ರಾಂ ಚಿಕನ್​ನ್ನು ಅರ್ಧ ಗಂಟೆಗಳ ಕಾಲ ಮ್ಯಾರಿನೇಷನ್​ನಲ್ಲಿ ಇಡಬೇಕು.

ಇದೀಗ ಗ್ರೇವಿ ತಯಾರಿಸಲು ನೀವು ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಬಳಿಕ ಸಂಪೂರ್ಣ ಮಸಾಲೆ ಪದಾರ್ಥಗಳನ್ನು ಹಾಕಿ 1 ನಿಮಿಷ ಫ್ರೈ ಮಾಡಿ. ಇದಾದ ಬಳಿಕ ಈರುಳ್ಳಿ, ಮೆಣಸಿನಕಾಯಿ, ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಸೇರಿಸಿ ಅದನ್ನೂ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಇದಕ್ಕೆ ನೆನೆಸಿಟ್ಟ ಗೋಡಂಬಿಯನ್ನೂ ಸೇರಿಸಿಕೊಂಡು ಇನ್ನೊಂದು ಮೂವತ್ತು ಸೆಕೆಂಡುಗಳ ಕಾಲ ಫ್ರೈ ಮಾಡಬೇಕು. ಈಗ ನೀವು ನೀರನ್ನು ಸೇರಿಸಿ ಹಾಗೂ ಐದರಿಂದ ಆರು ನಿಮಿಷಗಳ ಕಾಲ ಗ್ರೇವಿಯನ್ನು ಕುದಿಸಬೇಕು. ಬಳಿಕ ಇದನ್ನು ತಣ್ಣಗಾಗಲು ಬಿಟ್ಟು ಮಿಕ್ಸಿಯಲ್ಲಿ ಪೇಸ್ಟ್​​ ರೀತಿ ಗ್ರೈಂಡ್​ ಮಾಡಿಕೊಳ್ಳಿ.

ಈಗ ಮತ್ತೊಂದು ಬಾಣಲೆಯನ್ನು ತೆಗೆದುಕೊಂಡು ಇದಕ್ಕೆ ಎಣ್ಣೆ ಹಾಗೂ ಬೆಣ್ಣೆಯನ್ನು ಹಾಕಿ ಬಿಸಿಮಾಡಿಕೊಳ್ಳಿ. ಇದಕ್ಕೆ ಈಗಾಗಲೇ ಮಿಕ್ಸಿಯಲ್ಲಿ ಪೇಸ್ಟ್​ ಮಾಡಿಕೊಂಡಿರುವ ಪದಾರ್ಥವನ್ನು ಸೇರಿಸಿಕೊಳ್ಳಿ. ಇದಾದ ಬಳಿಕ ನೀವು ಸೌಟಿನಲ್ಲಿ ಪೇಸ್ಟ್​ನ್ನು ಕದಡುತ್ತಲೇ ಇರಬೇಕು. ಇಲ್ಲವಾದಲ್ಲಿ ತಳ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಈಗ ಈ ಪೇಸ್ಟ್​ಗೆ ಮ್ಯಾರಿನೇಷನ್​ ಮಾಡಲು ಇಟ್ಟಿದ್ದ ಚಿಕನ್​ನ್ನು ಹಾಕಿ 1 ಕಪ್​ ನೀರು ಸೇರಿಸಿಕೊಳ್ಳಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು 15 ರಿಂದ 20 ನಿಮಿಷಗಳ ಕಾಲ ಮುಚ್ಚಳವನ್ನು ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಬೇಕು.

ಗ್ರೇವಿಯಿಂದ ಎಣ್ಣೆ ಬೇರ್ಪಡಲು ಆರಂಭವಾಗುತ್ತಿದ್ದಂತೆಯೇ ಚಿಕನ್​ ಬೆಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಇದಕ್ಕೆ ನೀವು ಫ್ರೆಶ್​ ಕ್ರೀಮ್​​ ಹಾಗೂ ಪುಡಿ ಮಾಡಿದ ಕರಿಮೆಣಸನ್ನು ಸೇರಿಸಿ. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಗಾರ್ನಿಶ್​ ಮಾಡಿ. ಸ್ಟೌ ಆಫ್​ ಮಾಡಿ. ಈ ರುಚಿ ರುಚಿಯಾದ ಹೊಸ ಮಾದರಿಯ ಚಿಕನ್​ ರೆಸಿಪಿಯನ್ನು ನೀವು ರೊಟ್ಟಿಯೊಂದಿಗೆ ಸವಿಯಲು ನೀಡಿದರೆ ಬಾಯಲ್ಲಿ ನೀರೂರೋದಂತೂ ಪಕ್ಕಾ .

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ