Helicopter Parent : ನೀವು ಹೆಲಿಕಾಪ್ಟರ್ ಪೇರೆಂಟಾ!; ಏನಿದರ ಅರ್ಥ- ಗುಣಲಕ್ಷಣ?
Aug 21, 2022 03:10 PM IST
ಹೆಲಿಕಾಪ್ಟರ್ ಪೇರೆಂಟಿಂಗ್ (ಸಾಂದರ್ಭಿಕ ಚಿತ್ರ)
- Helicopter Parent Meaning and Symptoms: ಮಕ್ಕಳನ್ನು ಸದಾ ಬೆಂಬಲಿಸುತ್ತ, ಅವರ ಬೆನ್ನ ಹಿಂದೆಯೇ ಇದ್ದು ನೀವು 'ಹೆಲಿಕಾಪ್ಟರ್ ಪೇರೆಂಟ್' ಆಗುತ್ತಿದ್ದೀರಾ? ಏನಿದರ ಅರ್ಥ ಮತ್ತು ಗುಣಲಕ್ಷಣ ಏನು? ಇಲ್ಲಿದೆ ವಿವರ.
ಮಕ್ಕಳನ್ನು ಸದಾ ಬೆಂಬಲಿಸುತ್ತ ಬೆಂಬಲಿಸುತ್ತ, ಅವರ ಬೆನ್ನ ಹಿಂದೆಯೇ ಇದ್ದು ನೀವು 'ಹೆಲಿಕಾಪ್ಟರ್ ಪೇರೆಂಟ್' (Helicopter Parent) ಆಗುತ್ತಿದ್ದೀರಾ? ಹೆಚ್ಚಿನ ಪಾಲಕರಿಗೆ ಇದರ ಬಗ್ಗೆ ತಿಳಿದಿಲ್ಲ. ಆದರೆ ಅವರ ನಡವಳಿಕೆ ಹೀಗೆ ಅಂದರೆ ಹೆಲಿಕಾಪ್ಟರ್ ಪೇರೆಂಟ್ ಆಗಿ ಬದಲಾಗಿರುತ್ತದೆ.
ಒಮ್ಮೆ ನೀವು ಪಾಲಕರಾದ ನಂತರ, ನಿಮ್ಮ ಮಗುವನ್ನು ಸರಿಯಾಗಿ ಬೆಳೆಸುವುದು, ಅಪಾಯದಿಂದ ರಕ್ಷಿಸುವುದು ಮತ್ತು ಅವರ ಆದ್ಯತೆಗಳನ್ನು ಎಲ್ಲಕ್ಕಿಂತ ಹೆಚ್ಚಾಗಿ ಇರಿಸುವುದನ್ನು ಮಾತ್ರ ಮಾಡಲು ಬಯಸುತ್ತೀರಿ. ಪ್ರಪಂಚವು ನಿಮ್ಮ ಮಕ್ಕಳ ಸುತ್ತ ಸುತ್ತುತ್ತಿದೆ ಎಂಬ ಭಾವ ಇರುತ್ತದೆ. ಅವರಿಗಿಂತ ನಿಮಗೆ ಮುಖ್ಯವಾದುದು ಯಾವುದೂ ಇಲ್ಲ. ಆದರೆ ನೀವು ಯಾವಾಗಲೂ ಮಕ್ಕಳನ್ನು ಬೆಂಬಲಿಸುವ ಮತ್ತು ಬೆನ್ನು ಬೀಳುವ ಕೆಲಸದಲ್ಲಿದ್ದು 'ಹೆಲಿಕಾಪ್ಟರ್ ಪೇರೆಂಟ್' ಆಗುತ್ತಿದ್ದೀರಾ? ಆಲೋಚಿಸಿ ನೋಡಿ. ಅದರ ಗುಣಲಕ್ಷಣಗಳು (Helicopter Parent Meaning and Symptoms) ನಿಮ್ಮಲ್ಲೂ ಇವೆಯಾ? ಚೆಕ್ ಮಾಡಿ ಒಮ್ಮೆ.
ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಮೊದಲು 'ಹೆಲಿಕಾಪ್ಟರ್ ಪೇರೆಂಟ್' ಎಂದರೇನು ಎಂದು ತಿಳಿದುಕೊಳ್ಳಬೇಕು.
ಹೆಲಿಕಾಪ್ಟರ್ ಪೇರೆಂಟಿಂಗ್ ಎಂದರೇನು
ಹೆಲಿಕಾಪ್ಟರ್ ಪೇರೆಂಟಿಂಗ್ ಎನ್ನುವುದು ಒಂದು ರೀತಿಯ ಪಾಲನೆಯ ಶೈಲಿ. ಇದರಲ್ಲಿ ಪಾಲಕರು ತಮ್ಮ ಮಕ್ಕಳ ಜೀವನದಲ್ಲಿ ಅತಿಯಾದ ಹಸ್ತಕ್ಷೇಪವನ್ನು ಮಾಡಲು ಪ್ರಾರಂಭಿಸುತ್ತಾರೆ. ಅವರ ಪ್ರತಿಯೊಂದು ನಡೆಯನ್ನೂ ಗಮನದಲ್ಲಿಟ್ಟುಕೊಂಡು, ಅವರು ಮಾಡಲು ಬಯಸುವ ಎಲ್ಲದಕ್ಕೂ ಮಕ್ಕಳನ್ನು ಕರೆದೊಯ್ಯಲು ಬಯಸುತ್ತಾರೆ. ತಮ್ಮ ಸ್ನೇಹಿತರನ್ನು ಆಯ್ಕೆಮಾಡುವುದರಿಂದ ಹಿಡಿದು ಶಾಲೆಯ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸುವವರೆಗೆ, ಹೆಲಿಕಾಪ್ಟರ್ ಪೇರೆಂಟ್ಸ್ ಎಲ್ಲೆಡೆ ಇರುತ್ತಾರೆ.
ಅಂತಹ ಪಾಲಕರ ಗುರಿಯು ತಮ್ಮ ಮಕ್ಕಳನ್ನು ಅಪಾಯಗಳು ಮತ್ತು ನಿರಾಶೆ, ಸೋಲುಗಳಿಂದ ರಕ್ಷಿಸುವುದು ಎಂಬುದು ನಿರ್ವಿವಾದ ವಿಚಾರ. ಆದರೆ ಅವರು ತಮ್ಮ ಸ್ವಂತ ಮಗುವಿನ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದ್ದಾರೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ನಿಮ್ಮ ಮಗುವಿನ ಜೀವನದಲ್ಲಿ ತುಂಬಾ ತೊಡಗಿಸಿಕೊಂಡಿರುವುದು, ಆ ಮಗುವಿನ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಕಡಿಮೆ ಮಾಡುತ್ತದೆ ಎಂಬುದರ ಕಡೆಗೆ ತಜ್ಞರು ಬೆಟ್ಟು ಮಾಡಿ ತೋರಿಸುತ್ತಾರೆ.
ಹೆಲಿಕಾಪ್ಟರ್ ಪೇರೆಂಟ್ ಗುಣಲಕ್ಷಣ
ನಿಮ್ಮ ಮಕ್ಕಳಿಗಾಗಿ ಹೋರಾಡುತ್ತಾರೆ…
ನಿಮ್ಮ ಮಗುವಿನ ಪರವಾಗಿ ನಿಲ್ಲುವುದು ಒಳ್ಳೆಯದು. ಆದರೆ ಅವರಿಗಾಗಿ ಹೋರಾಡುವುದು ಸಂಪೂರ್ಣವಾಗಿ ವಿಭಿನ್ನ ವಿಷಯ. ಹೆಲಿಕಾಪ್ಟರ್ ಪಾಲಕರು ತಮ್ಮ ಮಕ್ಕಳಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಕಲಿಸುವುದಿಲ್ಲ. ಆದರೆ ಅವರ ಸಮಸ್ಯೆಗಳನ್ನು ಸ್ವತಃ ಪರಿಹರಿಸಲು ಹೋಗುತ್ತಾರೆ. ಆದರೆ ಮಕ್ಕಳು ಬೆಳೆದಾಗ ಅದು ವಿರುದ್ಧ ಪರಿಣಾಮವನ್ನು ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಅವರು ಸಂಪೂರ್ಣವಾಗಿ ಪಾಲಕರ ಮೇಲೆ ಅವಲಂಬಿತರಾಗಿ ಬಿಡುತ್ತಾರೆ.
ಮಕ್ಕಳ ಶಿಕ್ಷಕರ ಶಿಕ್ಷಕರಾಗಲು ಪ್ರಯತ್ನಿಸುತ್ತಾರೆ
ಹೆಲಿಕಾಪ್ಟರ್ ಪಾಲಕರು ತಮ್ಮ ಮಕ್ಕಳ ಶಾಲಾ ಶಿಕ್ಷಕರ ಮೇಲೂ ಸದಾ ಕಣ್ಣಿಟ್ಟಿರುತ್ತಾರೆ. ಅವರು ಹೇಗೆ ಕಲಿಸಬೇಕೆಂದು ಶಿಕ್ಷಕರಿಗೆ ಕಲಿಸಲು ಪ್ರಯತ್ನಿಸುತ್ತಾರೆ. ತಮ್ಮ ಮಗು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ಭಾವಿಸಿದಾಗ, ಅವರು ಶಿಕ್ಷಕರಿಗೆ ಸಲಹೆ ನೀಡಲು ಹಿಂಜರಿಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ವಿಷಯವು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಮಕ್ಕಳನ್ನು ಯಾವಾಗಲೂ ಸೋಲಿನಿಂದ ತಪ್ಪಿಸಲು ಪ್ರಯತ್ನಿಸುತ್ತಾರೆ…
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಿಮವಾಗಿ ನೀವು ಅವರೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ. ಹೆಲಿಕಾಪ್ಟರ್ ಪಾಲಕರು ತಮ್ಮ ಮಕ್ಕಳನ್ನು ವೈಫಲ್ಯ ಮತ್ತು ನಿರಾಶೆಯಿಂದ ರಕ್ಷಿಸಬೇಕು ಎಂದು ನಂಬುತ್ತಾರೆ. ಇದು ಅವರ ಸ್ವಾಭಿಮಾನವನ್ನು ರಕ್ಷಿಸಲು ಉತ್ತಮ ಮಾರ್ಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಯಾವಾಗಲೂ ಮಗುವಿನ ಮೇಲೆ ಗೆದ್ದೇ ಗೆಲ್ಲಬೇಕು ಎಂಬ ಒತ್ತಡವನ್ನು ಉಂಟುಮಾಡುತ್ತಾರೆ.
ಮಕ್ಕಳ ಸ್ನೇಹಿತರನ್ನು ಆಯ್ಕೆ ಮಾಡುವುದು ಮತ್ತು ಸಂಬಂಧದ ನಿರ್ಧರಿಸುವುದು
ಹೆಲಿಕಾಪ್ಟರ್ ಪಾಲಕರು ಯಾವ ಮಕ್ಕಳೊಂದಿಗೆ ಸ್ನೇಹಿತರಾಗಬೇಕು ಮತ್ತು ಯಾರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಅವರು ತಮ್ಮ ಮಕ್ಕಳಿಗಾಗಿ ಎಲ್ಲವನ್ನೂ ನಿರ್ಧರಿಸುತ್ತಾರೆ. ಅವರ ಸ್ನೇಹಿತರು ಯಾರು ಎಂಬುದನ್ನು ಕೂಡ. ಇದನ್ನು ಮಾಡುವುದರಿಂದ ಅವರು ಮಕ್ಕಳನ್ನು ಕೆಟ್ಟ ಸ್ನೇಹಿತರಿಂದ ಉಳಿಸುತ್ತಾರೆ ಎಂಬ ಭಾವನೆಯಲ್ಲಿ ಅಂತಹ ಪಾಲಕರು ಇರುತ್ತಾರೆ. ಆದರೆ ಅಂತಹ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅಂತಹ ಪಾಲಕರು ಅರ್ಥಮಾಡಿಕೊಳ್ಳಬೇಕು.