logo
ಕನ್ನಡ ಸುದ್ದಿ  /  ಜೀವನಶೈಲಿ  /  Free Electricity: ಉಚಿತ ವಿದ್ಯುತ್‌ ನಿಮ್ಮದಾಗಿಸಿ, ಮನೆಯಲ್ಲಿ ಕರೆಂಟ್‌ ಬಿಲ್‌ ಕಡಿಮೆ ಮಾಡಲು 10 ಸರಳ ಉಪಾಯಗಳು

Free Electricity: ಉಚಿತ ವಿದ್ಯುತ್‌ ನಿಮ್ಮದಾಗಿಸಿ, ಮನೆಯಲ್ಲಿ ಕರೆಂಟ್‌ ಬಿಲ್‌ ಕಡಿಮೆ ಮಾಡಲು 10 ಸರಳ ಉಪಾಯಗಳು

Praveen Chandra B HT Kannada

Jul 01, 2023 07:00 AM IST

google News

Free Electricity: ಉಚಿತ ವಿದ್ಯುತ್‌ ನಿಮ್ಮದಾಗಿಸಿ, ಮನೆಯಲ್ಲಿ ಕರೆಂಟ್‌ ಬಿಲ್‌ ಕಡಿಮೆ ಮಾಡಲು 10 ಸರಳ ಉಪಾಯಗಳು

    • How Reduce electricity consumption: ಕರ್ನಾಟಕದಲ್ಲಿ ಜುಲೈ 1ರಿಂದ ಗೃಹಜ್ಯೋತಿ (gruha jyothi scheme) ಉಚಿತ ವಿದ್ಯುತ್‌ ಯೋಜನೆ (karnataka free electricity scheme) ಜಾರಿಗೆ ಬರಲಿದೆ. ಉಚಿತ ವಿದ್ಯುತ್‌ ಪಡೆಯಲು ಅಥವಾ ಮನೆಯ ಕರೆಂಟ್‌ ಬಿಲ್‌ ಕಡಿಮೆ ಮಾಡಲು ಬಯಸುವವರಿಗೆ ಅಮೂಲ್ಯ ಸಲಹೆಗಳು ಇಲ್ಲಿವೆ.
Free Electricity: ಉಚಿತ ವಿದ್ಯುತ್‌ ನಿಮ್ಮದಾಗಿಸಿ, ಮನೆಯಲ್ಲಿ ಕರೆಂಟ್‌ ಬಿಲ್‌ ಕಡಿಮೆ ಮಾಡಲು 10 ಸರಳ ಉಪಾಯಗಳು
Free Electricity: ಉಚಿತ ವಿದ್ಯುತ್‌ ನಿಮ್ಮದಾಗಿಸಿ, ಮನೆಯಲ್ಲಿ ಕರೆಂಟ್‌ ಬಿಲ್‌ ಕಡಿಮೆ ಮಾಡಲು 10 ಸರಳ ಉಪಾಯಗಳು

ಕರ್ನಾಟಕದಲ್ಲಿ ಜುಲೈ 1ರಿಂದ ಗೃಹಜ್ಯೋತಿ (gruha jyothi scheme) ಉಚಿತ ವಿದ್ಯುತ್‌ ಯೋಜನೆ (karnataka free electricity scheme) ಜಾರಿಗೆ ಬರಲಿದೆ. ಉಚಿತ ವಿದ್ಯುತ್‌ ಪ್ರಯೋಜನ ಪಡೆಯಲು ಬಹುತೇಕರು ಮನೆಯಲ್ಲಿ200 ಯೂನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸಲು ಇಂದಿನಿಂದ ಪ್ರಯತ್ನಿಸಬಹುದು. ಎಲ್ಲಾದರೂ 200 ಯೂನಿಟ್‌ಗಿಂತ ವಿದ್ಯುತ್‌ ಜಾಸ್ತಿ ಬಳಸಿದರೆ ಉಚಿತ ವಿದ್ಯುತ್‌ ಬಿಲ್‌ ಪ್ರಯೋಜನ ದೊರಕದು. ಪ್ರತಿನಿತ್ಯ 200 ಯೂನಿಟ್‌ ಆಸುಪಾಸಿನಲ್ಲಿ ವಿದ್ಯುತ್‌ ಬಳಸುವವರು ಇಂದಿನಿಂದಲೇ ನಿಮ್ಮ ವಿದ್ಯುತ್‌ ಬಳಕೆ ಮೇಲೆ ನಿಗಾ ಇರಿಸಿ ಹಣ ಉಳಿತಾಯ ಮಾಡಬಹುದು. ಉಚಿತ ವಿದ್ಯುತ್‌ ಸೌಕರ್ಯ ಬೇಡ ಎಂದುಕೊಳ್ಳುವವರು ಕೂಡ ವಿದ್ಯುತ್‌ ಉಳಿತಾಯ ಮಾಡುವ ವಿವಿಧ ವಿಧಾನಗಳನ್ನು ಅನುಸರಿಸಿ ಹಣ ಉಳಿತಾಯ ಮಾಡಬಹುದು. ಈಗ ಕರೆಂಟ್‌ ಬಿಲ್‌ ದುಬಾರಿಯಾಗಿದ್ದು, ಕಿಸೆಗೆ ದೊಡ್ಡ ಹೊಡೆತ ನೀಡುತ್ತಿದೆ. ಹೀಗಾಗಿ, ಮನೆಯಲ್ಲಿ ಕರೆಂಟ್‌ ಕಡಿಮೆ ಮಾಡಲು ಇರುವ ದಾರಿಗಳನ್ನು ಅನುಸರಿಸುವುದು ಸೂಕ್ತವಾಗಿದೆ. ಇಲ್ಲಿ ವಿದ್ಯುತ್‌ ಉಳಿತಾಯ ಮಾಡಲು ಒಂದಿಷ್ಟು ಸಲಹೆಗಳನ್ನು ನೀಡಿದ್ದು, ಇದು ಉಚಿತ ವಿದ್ಯುತ್‌ ವ್ಯಾಪ್ತಿಗೆ ಬರುವವರರಿಗೆ ಮತ್ತು ದುಬಾರಿ ಬಿಲ್‌ ಕಡಿಮೆ ಮಾಡಲು ಬಯಸುವವರಿಗೆ ಅನುಕೂಲಕ್ಕೆ ಬರಬಹುದು.

ಅವಶ್ಯಕತೆ ಇಲ್ಲದೆ ಇರುವಾಗ ಲೈಟ್‌ ಆಫ್‌ ಮಾಡಿ

ಕೆಲವು ಮನೆಯಲ್ಲಿ ಅಗತ್ಯವಿದ್ದರೂ ಅಗತ್ಯವಿಲ್ಲದೆ ಇದ್ದರೂ ಹಗಲು ಕೂಡ ಲೈಟ್‌ ಉರಿಸುತ್ತಾರೆ. ಹಗಲು ಹೊತ್ತಿನಲ್ಲಿ ದಯವಿಟ್ಟು ಲೈಟ್‌ ಆಫ್‌ ಮಾಡಿರಿ. ಇದರ ಬದಲು ಮನೆಯೊಳಗೆ ಹೆಚ್ಚು ನೈಸರ್ಗಿಕ ಬೆಳಕು ಬರುವಂತೆ ಕಿಟಕಿ ತೆರೆದಿಡಬಹುದು.

ಕಡಿಮೆ ವಿದ್ಯುತ್‌ ಬಳಸುವ ಲೈಟ್‌ಗಳನ್ನು ಬಳಸಿ

ಎಲ್‌ಇಡಿ, ಎಲ್‌ಸಿಡಿ ಇತ್ಯಾದಿ ಕಡಿಮೆ ವಿದ್ಯುತ್‌ ಬಳಸುವ ವಿದ್ಯುತ್‌ ಬಲ್ಬ್‌ಗಳನ್ನು ಬಳಸುವ ಮೂಲಕ ಮನೆಯ ವಿದ್ಯುತ್‌ ಬಿಲ್‌ ಕಡಿಮೆ ಮಾಡಬಹುದು.

ಸೋಲಾರ್‌ ದೀಪಗಳನ್ನು ಬಳಸಿ

ಮನೆಯಲ್ಲಿ ವಿದ್ಯುತ್‌ ಸಂಪರ್ಕದ ಜತೆಗೆ ಸೋಲಾರ್‌ ವಿದ್ಯುತ್‌ನ ವ್ಯವಸ್ಥೆಯನ್ನೂ ಮಾಡಿ. ಬಿಸಿನೀರು, ಲೈಟ್‌ಗಳಿಗೆ ಈ ಸೋಲಾರ್‌ ವಿದ್ಯುತ್‌ ಬಳಕೆಯಾಗಲಿ. ಕರೆಂಟ್‌ ಇಲ್ಲದ ಸಂದರ್ಭದಲ್ಲಿಯೂ ಇದು ಉಪಯೋಗಕ್ಕೆ ಬರುತ್ತದೆ.

ನೋಡುವವರು ಇಲ್ಲದೆ ಇರುವಾಗ ಟೀವಿ ಆಫ್‌ ಮಾಡಿ

ಕೆಲವೊಂದು ಮನೆಯಲ್ಲಿ ನೋಡುವವರು ಇಲ್ಲದೆ ಇರುವಾಗಲೂ ಟೀವಿ ಚಾಲು ಆಗಿರುತ್ತದೆ. ಈ ರೀತಿ ಮಾಡಬೇಡಿ. ಟೀವಿ ನೋಡದೆ ಇದ್ದಾಗ ಆಫ್‌ ಮಾಡಿಡಿ.

ಹಳೆ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಬದಲಾಯಿಸಿ

ಕಡಿಮೆ ವಿದ್ಯುತ್‌ ಬಳಸುವ, ಹೆಚ್ಚು ಸ್ಟಾರ್‌ ರೇಟಿಂಗ್‌ ಇರುವ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಬಳಸಿ. ನೀವು ತುಂಬಾ ಹಳೆಯಕಾಲದ ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಬಳಸುತ್ತಿದ್ದರೆ ದಯವಿಟ್ಟು ಅದನ್ನು ಬದಲಾಯಿಸಿ. ಅದು ಅಪಾಯಕಾರಿಯೂ ಹೌದು. ಹಳೆ ಫ್ರಿಡ್ಜ್‌ ವೈರ್‌ನಿಂದ ಶಾಕ್‌ ಹೊಡೆದು ಮೃತಪಟ್ಟ ಹಲವು ಘಟನೆಗಳು ನಡೆದಿವೆ.

ಏರ್‌ ಕಂಡಿಷನ್‌ ಬಳಕೆಯಲ್ಲಿ ಜಾಗೃತಿ ಇರಲಿ

ಏರ್‌ ಕಂಡಿಷನ್‌ ವ್ಯವಸ್ಥೆಯು ಮನೆಯಲ್ಲಿದ್ದರೆ ಅದು ಹೆಚ್ಚಿನ ವಿದ್ಯುತ್‌ ಬಳಸುತ್ತದೆ. ಏರ್‌ ಕಂಡಿಷನ್‌ ಬಳಸುವವರು ಮನೆಯಲ್ಲಿ ಯಾವ ರೀತಿ ವಿದ್ಯುತ್‌ ಬಳಸಬೇಕೆಂದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ವಿಶೇಷ ಲೇಖನದಲ್ಲಿ ಸಲಹೆ ನೀಡಿದೆ. ನೀವು ಇನ್ನೂ ಓದಿಲ್ಲವೆಂದಾದರೆ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಓದಿ.

ಇದನ್ನು ಓದಿ: Current Bill: ಕರೆಂಟ್‌ ಬಿಲ್‌ ಜಾಸ್ತಿ ಬರ್ತಾ ಇದೆಯೇ? ಈ 5 ಏಸಿ ಟಿಪ್ಸ್‌ ಮತ್ತು ಟ್ರಿಕ್ಸ್‌ ಫಾಲೋ ಮಾಡಿ, ವಿದ್ಯುತ್‌ ಬಿಲ್‌ ಕಡಿಮೆ ಕಟ್ಟಿ

ಬಿಸಿನೀರಿಗೆ ಉತ್ತಮ ಹೀಟರ್‌ ಬಳಸಿ

ಈಗ ಮಳೆಗಾಲ. ಬಹುತೇಕರಿಗೆ ತಣ್ಣೀರಿನಲ್ಲಿ ಸ್ನಾನ ಮಾಡಿ ಎಂದರೆ ಇಷ್ಟವಾಗದು. ಆದರೆ, ಅನಗತ್ಯವಾಗಿ ವಾಟರ್‌ ಹೀಟರ್‌ ಸ್ವಿಚ್‌ ಹಾಕುವುದನ್ನು ತಪ್ಪಿಸಿ. ಒಮ್ಮೆ ವಾಟರ್‌ ಹೀಟರ್‌ ಪೂರ್ತಿ ಬಿಸಿಯಾದ ಬಳಿಕ ಸ್ವಿಚ್‌ ಆಫ್‌ ಮಾಡಿ. ಆ ಬಿಸಿನೀರು ಕನಿಷ್ಠ ಇಬ್ಬರಿಗೆ ಸಾಕಾಗುತ್ತದೆ. ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆಯೋ ಅಷ್ಟು ಬಾರಿ ವಾಟರ್‌ ಹೀಟರ್‌ ಸ್ವಿಚ್‌ ಹಾಕುವುದನ್ನು ಮಾಡಬೇಡಿ.

ಫ್ರಿಡ್ಜ್‌ ಸ್ವಿಚ್‌ ಆನ್‌ ಆಂಡ್‌ ಆಫ್‌

ಫ್ರಿಡ್ಜ್‌ ಆಫ್‌ ಮಾಡಿಟ್ಟರೆ ಫ್ರಿಡ್ಜ್‌ ಹಾಳಾಗುತ್ತದೆ. ಹಾಗಂತ ಫ್ರಿಡ್ಜ್‌ ಬಹುತೇಕ ಖಾಲಿ ಇರುವಾಗ ದಿನವಿಡಿ ಚಾಲು ಇರಬೇಕೆಂದಿಲ್ಲ. ದಿನದಲ್ಲಿ ಕೆಲವು ಗಂಟೆಗಳ ಕಾಲ ಫ್ರಿಡ್ಜ್‌ ಆಫ್‌ ಮಾಡಿಡುವ ಅಭ್ಯಾಸ ಮಾಡಿ. ದಿನದಲ್ಲಿ ನಾಲ್ಕು ಗಂಟೆ ಫ್ರಿಡ್ಜ್‌ ಆಫ್‌ ಮಾಡುವ ಅಭ್ಯಾಸ ಮಾಡಿನೋಡಿ. ತಿಂಗಳ ಅಂತ್ಯದಲ್ಲಿ ಕರೆಂಟ್‌ ಬಿಲ್‌ ಎಷ್ಟು ಕಡಿಮೆಯಾಗಿರುತ್ತದೆ ಎಂದು ಲೆಕ್ಕಹಾಕಿನೋಡಿ. ನೆನಪಿಡಿ, ಫ್ರಿಡ್ಜ್‌ನೊಳಗೆ ಕರಗುವ ವಸ್ತುಗಳನ್ನು ಇಟ್ಟ ಸಂದರ್ಭದಲ್ಲಿ ಈ ಪ್ರಕ್ರಿಯೆ ಮಾಡಬೇಡಿ.

ಕಡಿಮೆ ಬಟ್ಟೆಗಳಿದ್ದಾಗ ವಾಷಿಂಗ್‌ ಮೆಷಿನ್‌ ಬೇಡ

ಈ ವಾಷಿಂಗ್‌ ಮೆಷಿನ್‌ ಬಂದ ಬಳಿಕ ಕೈಯಲ್ಲಿ ವಾಷ್‌ ಮಾಡೋ ಅಭ್ಯಾಸವನ್ನು ಕೆಲವರು ಬಿಟ್ಟಿರಬಹುದು. ಆದರೆ, ಪ್ರತಿದಿನ ವಾಷಿಂಗ್‌ ಮೆಷಿನ್‌ಗೆ ಬಟ್ಟೆಬರೆ ಹಾಕುವ ಅಭ್ಯಾಸ ಬಿಟ್ಟುಬಿಡಿ. ಪ್ರತಿದಿನ ಬಳಸುವ ಬಟ್ಟೆಗಳನ್ನು ಕೈಯಲ್ಲಿಯೇ ವಾಷ್‌ ಮಾಡಿ. ವಾರಕ್ಕೊಮ್ಮೆ ಮಾತ್ರ ವಾಷಿಂಗ್‌ ಮೆಷಿನ್‌ ಬಳಸುವ ಶಪಥ ಮಾಡಿ. ಇದರಿಂದ ನಿಮಗೂ ತುಸು ಎಕ್ಸರ್‌ಸೈಸ್‌ ದೊರಕುತ್ತದೆ. ಮನೆಯ ಇತರೆ ಸದಸ್ಯರಲ್ಲಿಯೂ ಅವರವರ ಬಟ್ಟೆ ಅವರವರೇ ವಾಷ್‌ ಮಾಡುವಂತೆ ವಿನಂತಿಸಿ.

ರಾತ್ರಿ ಹೊತ್ತಿನಲ್ಲಿ ಎಲ್ಲಾ ಕೋಣೆಯಲ್ಲಿ ಲೈಟ್‌ ಉರಿಸಬೇಡಿ

ರಾತ್ರಿಯಾದ ತಕ್ಷಣ ಮನೆಯ ಒಳಗೆ ಮತ್ತು ಹೊರಗೆ ಎಲ್ಲಾ ಲೈಟ್‌ ಉರಿಸುವ ಅಭ್ಯಾಸ ನಿಮಗಿರಬಹುದು. ಇದರಿಂದ ಮನೆ ಜಗಮಗ ಕಾಣಿಸುತ್ತದೆ ನಿಜ. ಆದರೆ, ಮನೆಯಲ್ಲಿ ಕಡಿಮೆ ಸದಸ್ಯರು ಇರುವಾಗ ಎಲ್ಲಾ ಲೈಟ್‌ಗಳನ್ನು ಉರಿಸುವ ಅಗತ್ಯವೇನಿದೆ. ಯಾವ ಕೋಣೆಯಲ್ಲಿ ನೀವು ಇದ್ದಿರೋ ಆ ಕೋಣೆಯ ದೀಪ ಮತ್ತು ಮನೆಯ ಮುಂಭಾಗದ ಒಂದು ದೀಪ (ಮಂದವಾಗಿ ಉರಿಯುವಂತದ್ದು) ಉರಿದರೆ ಸಾಕಲ್ಲವೇ?

ಈ ಎಲ್ಲಾ ಟೆಕ್ನಿಕ್‌ಗಳು ಕರ್ನಾಟಕ ಕಾಂಗ್ರೆಸ್‌ ಸರಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ನೆರವಾಗಬಹುದು. ಗ್ಯಾರಂಟಿ ಯೋಜನೆ ಬಯಸುವ 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೂ ತಿಂಗಳ ಕರೆಂಟ್‌ ಬಿಲ್‌ ಕಡಿಮೆ ಮಾಡಲು ಉಪಯೋಗವಾಗಬಹುದು. ಇವೆರಡಕ್ಕಿಂತಲೂ ಮುಖ್ಯವಾಗಿ ನಮ್ಮ ಪರಿಸರಕ್ಕೆ, ಮುಗಿದು ಹೋಗುವ ಸಂಪನ್ಮೂಲಕ್ಕೆ, ಈ ಭೂಮಿಗೆ ಸಾಕಷ್ಟು ಇದರಿಂದ ಪ್ರಯೋಜನವಿದೆ. ಹೀಗಾಗಿ, ಈ ಹತ್ತು ಸಲಹೆಗಳನ್ನು ನೀವು ಪಾಲಿಸಿ, ನಿಮ್ಮ ಬಂಧುಬಳಗ ಮತ್ತು ಸ್ನೇಹಿತರೂ ಪಾಲಿಸುವಂತೆ ಅವರಿಗೂ ಈ ಮಾಹಿತಿಯನ್ನು ಷೇರ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ