New Year Trip: ಹೊಸ ವರ್ಷಕ್ಕೆ ಪ್ರೈವೇಟ್ ಐಲ್ಯಾಂಡ್ ಪ್ಲಾನ್ ಮಾಡಿದ್ದೀರಾ? ಇಲ್ಲಿವೆ 10 ಬೆಸ್ಟ್ ಐಷಾರಾಮಿ ರೆಸಾರ್ಟ್‌ಗಳು
Dec 15, 2023 08:12 PM IST
ಪ್ರೈವೇಟ್ ಐಲ್ಯಾಂಡ್ ರೆಸಾರ್ಟ್ (PC: Unsplash)
- Private Island Resorts: ನೀವು ವರ್ಷದ ಕೊನೆಯ ರಜಾದಿನಗಳನ್ನು ಕಳೆಯಲು ಒಂದು ಚಿಕ್ಕ ಸುಸಜ್ಜಿತ ಐಷಾರಾಮಿ ಸ್ಥಳಗಳಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ಇಲ್ಲಿವೆ 10 ಪ್ರೈವೇಟ್ ಐಲ್ಯಾಂಡ್ ರೆಸಾರ್ಟ್‌ಗಳು.
ಇಯರ್-ಎಂಡ್ ಎಂದರೆ ಉಳಿದುರುವ ಎಲ್ಲಾ ರಜೆಗಳನ್ನು ಖಾಲಿ ಮಾಡುವ ಸಮಯ. ಜೊತೆಗೆ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಹೊಸ ಹೊಸ ಊರುಗಳಿಗೆ ಪ್ರವಾಸ ಹೋಗುವ ಸಮಯವೂ ಹೌದು. ಕೆಲವರು ಬೀಚ್, ಹಿಲ್‌ಸ್ಟೇಶನ್‌ಗೆ ಹೋದರೆ ಇನ್ನು ಕೆಲವರು ಯಾವುದಾದರೂ ಪ್ರಶಾಂತ ಸ್ಥಳಗಳನ್ನು ಆಯ್ದುಕೊಳ್ಳಲು ನೋಡುತ್ತಾರೆ. ಸಮುದ್ರ ಅಥವಾ ಸಾಗರದ ಹಿನ್ನೀರಿನ ಪ್ರದೇಶಗಳಲ್ಲಿರುವ ಐಲ್ಯಾಂಡ್‌ನಲ್ಲಿರುವ ಪ್ರೈವೇಟ್ ರೆಸಾರ್ಟ್‌ಗಳೆಂದರೆ ಕೆಲವರಿಗೆ ಬಹಳ ಇಷ್ಟ. ಇನ್ನು ಸ್ವಲ್ಪ ದಿನಗಳಲ್ಲೇ 2023 ಮುಗಿಯಲಿದೆ. ಹೊಸ ವರ್ಷ 2024 ಬರಲಿದೆ. ಈ ವರ್ಷದ ರಜೆಗಳನ್ನು ಖಾಲಿ ಮಾಡಲು ಈ ರೀತಿಯ ಸ್ಥಳಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಬೆಸ್ಟ್ ಸಲಹೆಗಳು. ಅಂತಹ ಜಗತ್ತಿನ 10 ಬೆಸ್ಟ್ ಐಷಾರಾಮಿ ರೆಸಾರ್ಟ್‌ಗಳು ಇಲ್ಲಿವೆ.
1. ಕೊಕೊಮಾ ಪ್ರೈವೇಟ್ ಐಲ್ಯಾಂಡ್ ರೆಸಾರ್ಟ್, ಫಿಜಿ
ಅಲ್ಟ್ರಾ-ಲಕ್ಸ್, ಕೊಕೊಮೊ ವಿಶ್ವದ ಅತ್ಯಂತ ವಿಶೇಷವಾದ ಖಾಸಗಿ ದ್ವೀಪ ರೆಸಾರ್ಟ್‌ಗಳಲ್ಲಿ ಒಂದಾಗಿದೆ. ಇಲ್ಲಿ 21 ವಿಶೇಷ ವಿಲ್ಲಾಗಳಿವೆ. ಪ್ರತಿಯೊಂದು ತಮ್ಮದೇ ಆದ ಖಾಸಗಿ ಪೂಲ್, ಉದ್ಯಾನ, ಬೀಚ್ ಹೊಂದಿವೆ. ಇದು ಐಷಾರಾಮಿ ನಿವಾಸಗಳನ್ನು ಸಹ ಹೊಂದಿದೆ. ಇಲ್ಲಿನ ಒಂದು ಕೋಣೆಯ ದರ 3,500 ಡಾಲರ್‌ನಿಂದ (ಸರಿಸುಮಾರು 2.90 ಲಕ್ಷ ರೂ.) ಪ್ರಾರಂಭವಾಗುತ್ತದೆ. ಕನಿಷ್ಠ 5 ರಾತ್ರಿ ಕಡ್ಡಾಯವಾಗಿ ವಾಸ್ತವ್ಯ ಇರಬೇಕಾಗುತ್ತದೆ.
2. ಫೋರ್ ಸೀಸನ್ಸ್ ರೆಸಾರ್ಟ್ ಬೋರಾ ಬೋರಾ, ಫ್ರೆಂಚ್ ಪಾಲಿನೇಷ್ಯಾ
ಫ್ರೆಂಚ್ ಪಾಲಿನೇಷಿಯಾದ ಅದ್ಭುತವಾದ ನೈಸರ್ಗಿಕ ಸೌಂದರ್ಯ ಹೊಂದಿರುವ ರೆಸಾರ್ಟ್ ಆಗಿದೆ. ನೀರಿನಿಂದ ಸುತ್ತುವರಿದ ಐಷಾರಾಮಿ ಬಂಗಲೆಗಳು ಮತ್ತು ಬೀಚ್‌ಫ್ರಂಟ್ ವಿಲ್ಲಾಗಳು ಅಲ್ಲಿವೆ. ಅಲ್ಲಿನ ರುಚಿಕರವಾದ ಭಕ್ಷ್ಯ, ಸಾಂಸ್ಕೃತಿಕ ಚಟುವಟಿಕೆ, ಲೈವ್ ಸಂಗೀತ ಮತ್ತು ಪಟಾಕಿಗಳು ರಜಾದಿನಗಳನ್ನು ಕಳೆಯಲು ಪರ್ಫೆಕ್ಟ್ ಆಗಿದೆ. ಇಲ್ಲಿ ಪ್ರತಿ ರಾತ್ರಿಗೆ 4,509 ಡಾಲರ್‌ನಿಂದ (ಸರಿಸುಮಾರು 3.75 ಲಕ್ಷ ರೂ.ಗಳು, ತೆರಿಗೆಗಳು, ರೆಸಾರ್ಟ್ ಶುಲ್ಕ ಇತ್ಯಾದಿಗಳನ್ನು ಹೊರತುಪಡಿಸಿ) ಪ್ರಾರಂಭವಾಗುತ್ತದೆ.
3. ನೆಕರ್ ಐಲ್ಯಾಂಡ್, ಬ್ರಿಟಿಷ್ ವರ್ಜಿನ್ ದ್ವೀಪಗಳು
ಕೆರಿಬಿಯನ್ ಸಮುದ್ರದ ಹಿನ್ನೀರಿನಲ್ಲಿರುವ ನೆಕರ್ ಐಲ್ಯಾಂಡ್ ಐಷಾರಾಮಿ ದ್ವೀಪಕ್ಕೆ ಹೆಸರುವಾಸಿಯಾಗಿದೆ. 74-ಎಕರೆಯಲ್ಲಿರುವ ಖಾಸಗಿ ದ್ವೀಪವು ಪ್ರತ್ಯೇಕವಾಗಿ ಬಾಡಿಗೆಗೆ ನೀಡಬಹುದಾದ ವಿಲ್ಲಾಗಳನ್ನು ಹೊಂದಿದೆ. ಇದರಲ್ಲಿ 24 ಬಲಿನೀಸ್ ಶೈಲಿಯ ಮನೆಗಳಿವೆ. 48 ವಯಸ್ಕರು ಮತ್ತು ಆರು ಮಕ್ಕಳವರೆಗೆ ಮಲಗಬಹುದಾಗಿದೆ. ಇಲ್ಲಿ ಇಡೀ ದ್ವೀಪವನ್ನು ಬುಕ್ ಮಾಡಬಹುದಾದ ಅವಕಾಶವೂ ಇದೆ. ಇದರ ಬುಕಿಂಗ್ ದರ ಪ್ರತಿ ರಾತ್ರಿಗೆ 5,409 ಡಾಲರ್‌ನಿಂದ ಪ್ರಾರಂಭವಾಗುತ್ತದೆ. ನೀವು ಇಡೀ ದ್ವೀಪವನ್ನು ಒಂದು ರಾತ್ರಿ 134,500 ಡಾಲರ್‌ಗೆ ಬುಕ್ ಮಾಡಬಹುದಾಗಿದೆ. (ಒಂದು ರಾತ್ರಿಗೆ ಸರಿಸುಮಾರು 1.12 ಕೋಟಿ ರೂ.ಗಳು).
4. ಒನ್ & ಓನ್ಲಿ ಪಾಮ್ ರೆಸಾರ್ಟ್, ದುಬೈ
ದುಬೈನ ಪಾಮ್ ದ್ವೀಪದಲ್ಲಿದಲ್ಲಿರುವ ಈ ಐಷಾರಾಮಿ ರೆಸಾರ್ಟ್, ಉದ್ಯಾನಗಳು ಮತ್ತು ಕ್ಯಾಸ್ಕೇಡಿಂಗ್ ಕಾರಂಜಿಗಳ ಬೀಚ್‌ಫ್ರಂಟ್ ಓಯಸಿಸ್ ನಿಂದ ಕಂಗೊಳಿಸುತ್ತದೆ. ಮ್ಯಾನರ್ ಹೌಸ್ ರೂಮ್‌ಗಳು, ಪಾಮ್ ಬೀಚ್ ಮ್ಯಾನ್ಷನ್‌ಗಳು ಮತ್ತು ವಿಲ್ಲಾಗಳು ಇದರಲ್ಲಿವೆ. ಮ್ಯಾನರ್ ಹೌಸ್ ರೂಮ್‌ಗಳು ದುಬೈನ ಅತಿದೊಡ್ಡ ಅತಿಥಿ ಕೊಠಡಿಗಳಲ್ಲಿ ಒಂದಾಗಿದೆ. ಇದು ಖಾಸಗಿ ಬಾಲ್ಕನಿ ಮತ್ತು ಎದುರುಗಡೆಯೇ ಬೀಚ್ ಅನ್ನು ಹೊಂದಿದೆ. 2023 ರ ಕೊನೆಯ ವಾರಕ್ಕೆ, ಇಲ್ಲಿನ ಪ್ರತಿ ರಾತ್ರಿ ದರವು 1,742 ಡಾಲರ್ (ಸರಿಸುಮಾರು 1.45 ಲಕ್ಷ ರೂ.ಗಳು) ನಿಂದ ಪ್ರಾರಂಭವಾಗುತ್ತದೆ.
5. ಎಲೆವಾನಾ ಎಲಿಫೆಂಟ್ ಪೆಪ್ಪರ್ ಕ್ಯಾಂಪ್ ಮಸೈ ಮಾರಾ, ಕೀನ್ಯಾ
ಮಸಾಯಿ ಮಾರ ಪರಿಸರ ವ್ಯವಸ್ಥೆಯ ಹೃದಯ ಎಂದೇ ಕರೆಯುವ ಈ ರೆಸಾರ್ಟ್ ಮಾರಾ ನಾರ್ತ್ ಕನ್ಸರ್ವೆನ್ಸಿಯಲ್ಲಿದೆ. ಎಲಿಫೆಂಟ್ ಪೆಪ್ಪರ್ ಕ್ಯಾಂಪ್ ಮಾರಾದ ಅದ್ಭುತಗಳ ನೆಲೆಯಾಗಿದೆ. ಎಂಟು ಐಷಾರಾಮಿ ದೊಡ್ಡದಾದ ಸಫಾರಿ ಟೆಂಟ್‌ಗಳಿವೆ. ಭಾರತೀಯ ರಾಜ್ ಕ್ಯಾಂಪೇನ್ ಪೀಠೋಪಕರಣದಿಂದ ಸಂಪೂರ್ಣವಾಗಿ ಅಲಂಕೃತವಾಗಿದೆ. ಇದರಲ್ಲಿ ಎರಡು ಹನಿಮೂನ್ ಹಾಗೂ ಫ್ಯಾಮಿಲಿ ಸೂಟ್‌ಗಳೂ ಇವೆ. ಸಫಾರಿ ಟೆಂಟ್ ದರಗಳು ಪ್ರತಿ ರಾತ್ರಿಗೆ 1,512 ಡಾಲರ್‌ನಿಂದ (ಸರಿಸುಮಾರು 1.25 ಲಕ್ಷ ರೂ.) ಪ್ರಾರಂಭವಾಗುತ್ತವೆ. ಮತ್ತೂ ಸಫಾರಿ ಟೆಂಟ್ ಗೇಮ್ ಪ್ಯಾಕೇಜುಗಳು 1,892 ಡಾಲರ್‌ನಿಂದ (ಸರಿಸುಮಾರು 1.57 ಲಕ್ಷ ರೂ.) ಪ್ರಾರಂಭವಾಗುತ್ತವೆ.
6. ರಿಟ್ಜ್ ಕಾರ್ಲ್‌ಟೋನ್, ಲಂಕಾವಿ, ಮಲೇಷ್ಯಾ
ಮಲೇಷ್ಯಾ 10 ಮಿಲಿಯನ್ ವರ್ಷ ಹಳೆಯ ಮಳೆಕಾಡು ಮತ್ತು ಪ್ರಾಚೀನ ಕಡಲತೀರಗಳ ನೆಲೆಯಾಗಿದೆ. ಲಂಕಾವಿಯ ರಿಟ್ಜ್ ಕಾರ್ಲ್‌ಟೋನ್ ಖಾಸಗಿ ರೆಸಾರ್ಟ್, ಹೊರಾಂಗಣ ಸ್ಥಳಗಳು, ಗಾಜಿನ ಗೋಡೆಗಳು ಮತ್ತು ನೈಸರ್ಗಿಕ ವಸ್ತುಗಳ ಪ್ಯಾಲೆಟ್ ಹೊಂದಿರುವ ಕೊಠಡಿಗಳನ್ನು ಹೊಂದಿದೆ. ಇಲ್ಲಿರುವ ವಿಲ್ಲಾಗಳು ಖಾಸಗಿ ಪೂಲ್‌ಗಳನ್ನು ಸಹ ಹೊಂದಿವೆ. ಇಲ್ಲಿ ಒಂದು ರಾತ್ರಿ ತಂಗಲು 810 ಡಾಲರ್‌ನಿಂದ (ಸರಿಸುಮಾರು 67,000 ರೂ.) ಪ್ರಾರಂಭವಾಗುತ್ತದೆ.
7. ಫೋರ್ ಸೀಸನ್ಸ್ ರೆಸಾರ್ಟ್, ಲಾನೈ, ಹವಾಯಿ, ಯುಎಸ್‌ಎ
ಸಾಗರದ ಮುಂಭಾಗದಲ್ಲೇ ಇರುವ ಈ ರೆಸಾರ್ಟ್ ಹವಾಯಿಯಲ್ಲಿರುವ ಕೊನೆಯ ಹಾಳಾಗದ ದ್ವೀಪವಾಗಿದೆ. ಇದು ಲಗೂನ್ ಶೈಲಿಯ ಪೂಲ್‌ಗಳು, ಬೊಟಾನಿಕಲ್ ಗಾರ್ಡನ್‌ಗಳನ್ನು ಹೊಂದಿದೆ. ಇಲ್ಲಿಯ ಹವಾನಾವಾನಾ ಸ್ಪಾ ನಿಮಗೆ ಚೈತನ್ಯವನ್ನು ಮರುಕಳಿಸುತ್ತದೆ. ಇಲ್ಲಿ ಜಪನೀಸ್ ಪಾಕ ವೈವಿಧ್ಯಗಳನ್ನು ಸವಿಯಬಹುದಾಗಿದೆ. ಇಲ್ಲಿ ನೀವು 4 ರಾತ್ರಿ ಉಳಿದಿದ್ದರೆ, 5 ನೇ ರಾತ್ರಿ ಉಚಿತ. ಪ್ರತಿ ದಿನಕ್ಕೆ 4,691 ಡಾಲರ್‌ನಿಂದ ಪ್ರಾರಂಭವಾಗುತ್ತದೆ (ಸರಿಸುಮಾರು 3.91 ಲಕ್ಷ ರೂ.ಗಳು)
8. ವಾರ್ಕೌಹೌ ಕಂಟ್ರಿ ಎಸ್ಟೇಟ್, ನ್ಯೂಜಿಲೆಂಡ್
ರೆಮುಟಾಕಾ ಪರ್ವತ ಶ್ರೇಣಿಯ ಅದ್ಭುತವಾದ ತಪ್ಪಲಿನ ಮತ್ತು ಪಲ್ಲಿಸರ್ ಕೊಲ್ಲಿಯ ಬಂಡೆಗಳ ಮೇಲೆ ಸ್ಥಾಪಿಸಲಾಗಿದೆ. ವಾರ್ಕೌಹೌ ಕಂಟ್ರಿ ಎಸ್ಟೇಟ್ ಅನ್ನು ನ್ಯೂಜಿಲೆಂಡ್‌ನ ಅತ್ಯಂತ ಐಷಾರಾಮಿ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು 3,000-ಎಕರೆ ಖಾಸಗಿ ಫಾರ್ಮ್‌ನಲ್ಲಿದೆ. ಪ್ರಾಚೀನ ಕಾಡುಗಳು, ಶಾಂತಿಯುತ ಸರೋವರಗಳು, ನದಿಗಳು ಮತ್ತು ಕಾಡು ಮತ್ತು ಬೀಚ್‌ಗಳಿರುವ ಭೂಮಿಯಾಗಿದೆ. ಇಲ್ಲಿ ಪ್ರತಿ ರಾತ್ರಿಗೆ 3,170 ಡಾಲರ್ (ಸರಿಸುಮಾರು 2.64 ಲಕ್ಷ ರೂ.ಗಳು) ನಿಂದ ಪ್ರಾರಂಭವಾಗುತ್ತದೆ. ಇಲ್ಲಿ ಕನಿಷ್ಠ 2 ರಾತ್ರಿಗಳ ತಂಗುವುದು ಕಡ್ಡಾಯವಾಗಿದೆ.
9. ವೈನ್ ಲಾಸ್ ವೇಗಾಸ್, ಯುಎಸ್‌ಎ
ಇದು 2005 ರಲ್ಲಿ ಪ್ರಾರಂಭವಾದಾಗ, ವೈನ್ ಲಾಸ್ ವೇಗಾಸ್ ರೆಸಾರ್ಟ್ ಕ್ಯಾಸಿನೊ ಪರಿಕಲ್ಪನೆಯನ್ನು ಸ್ಥಾಪಿಸಿತ್ತು. ಅಲ್ಲಿನ ಉದ್ಯಾನಗಳು, ಹೂವಿನ ಮೊಸಾಯಿಕ್ ಮಹಡಿಗಳು, ಖಾಸಗಿ ಸರೋವರಗಳು ಮತ್ತು ಜಲಪಾತಗಳು ಮತ್ತು ಅಲಂಕೃತ ಕೊಠಡಿಗಳಿಗೆ ಹೆಸರುವಾಸಿಯಾಗಿದೆ. ವೈನ್ ಲಾಸ್ ವೇಗಾಸ್ ಗಾಲ್ಫ್ ಕೋರ್ಸ್ ಅನ್ನು ಸಹ ಹೊಂದಿದೆ. ಇದು ಪ್ರಸಿದ್ಧ ಸ್ಟ್ರಿಪ್ನ ಏಕೈಕ ಗಾಲ್ಫ್ ಕೋರ್ಸ್ ಆಗಿದೆ. ಇಲ್ಲಿಯ ಪ್ರತಿ ರಾತ್ರಿಗೆ ದರವು 301 ಡಾಲರ್ ನಿಂದ ಪ್ರಾರಂಭವಾಗುತ್ತದೆ (ಸರಿಸುಮಾರು 25,000 ರೂ.)
10. ಸೇಂಟ್ ರೆಗಿಸ್ ಪಂಟಾ ಮಿಂಟಾ ರೆಸಾರ್ಟ್, ಮೆಕ್ಸಿಕೋ
ಮೆಕ್ಸಿಕೋದ ಪಂಟಾ ಡಿ ಮಿಟಾದಲ್ಲಿನ ಶಾಂತ ದ್ವೀಪದಲ್ಲಿ ನೆಲೆಗೊಂಡಿರುವ ಸೇಂಟ್ ರೆಗಿಸ್ ಪಂಟಾ ಮಿಟಾ ರೆಸಾರ್ಟ್ 22 ಎಕರೆಗಳ ವಿಶಾಲ ಪರಿಸರದಲ್ಲಿದೆ. ಇಲ್ಲಿನ ವಿಲ್ಲಾಗಳಲ್ಲಿ ಮೆಕ್ಸಿಕನ್ ಕಲೆ ಕಾಣಬಹುದಾಗಿದೆ. ಕರಕುಶಲ ಪೀಠೋಪಕರಣಗಳೊಂದಿಗೆ ಹಳ್ಳಿಗಾಡಿನ ಸ್ಪರ್ಶವನ್ನು ಒಳಗೊಂಡಿದೆ. ಈ ವಿಲ್ಲಾಗಳು ಸಹ ಬೀಚ್‌ಫ್ರಂಟ್ ವ್ಯೂ ಅನ್ನು ಹೊಂದಿವೆ. ಇಲ್ಲಿ ಒಂದು ದಿನ ಕಳೆಯಲು 2,274 ಡಾಲರ್ ರಿಂದ ಪ್ರಾರಂಭವಾಗುತ್ತದೆ (ಸರಿಸುಮಾರು 1.89 ಲಕ್ಷ ರೂ.ಗಳು)