Night Yoga | ಮಲಗುವ ಮುನ್ನ ಈ ಯೋಗಾಸನಗಳನ್ನು ಮಾಡಿದರೆ ನೆಮ್ಮದಿಯಿಂದ ನಿದ್ರಿಸಬಹುದು!
May 12, 2022 10:47 AM IST
ರಾತ್ರಿ ಯೋಗ
- ನಿಮಗೆ ಉತ್ತಮ ನಿದ್ರೆ ಮತ್ತು ವಿಶ್ರಾಂತಿ ಪಡೆಯಲು ಯೋಗ ಶಿಕ್ಷಕರು ಸೂಚಿಸಿದ ಮೂರು ಆಸನಗಳು ಮತ್ತು ಎರಡು ಧ್ಯಾನ ಭಂಗಿಗಳ ಬಗ್ಗೆ ತಿಳಿಯಿರಿ.
ಪ್ರತಿದಿನ ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ವಿಶೇಷ ಆರೋಗ್ಯ ಪ್ರಯೋಜನಗಳಿವೆ ಎಂದು ನಮಗೆ ತಿಳಿದಿದೆ. ಎಲ್ಲದಕ್ಕಿಂತ ರಾತ್ರಿ ಚೆನ್ನಾಗಿ ಮಲಗುವುದು ಉತ್ತಮ ಎನ್ನುತ್ತಾರೆ ತಜ್ಞರು. ಕೆಲವು ಯೋಗಾಸನಗಳು ಮತ್ತು ಧ್ಯಾನಗಳು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಆಂತರಿಕವಾಗಿ ನಿಮ್ಮನ್ನು ಶಾಂತಗೊಳಿಸುತ್ತದೆ. ಇದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ.
ಹೆಚ್ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ, ಯೋಗ ಮಾಸ್ಟರ್ ಮತ್ತು ಆಧ್ಯಾತ್ಮಿಕ ಗುರು ಅಕ್ಷರ್ ಅವರು ರಾತ್ರಿಯಲ್ಲಿ ಅಭ್ಯಾಸ ಮಾಡುವ ಲಘು ಆಸನ ಮತ್ತು ಧ್ಯಾನದ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ಇದನ್ನು ಮಾಡಲು ಪ್ರತಿ ರಾತ್ರಿ 5, 10 ಅಥವಾ 15 ನಿಮಿಷಗಳನ್ನು ನಿಗದಿಪಡಿಸಿ. ಆರಂಭಿಕ ಹಂತಗಳಲ್ಲಿ ಮಲಗುವ 2-3 ನಿಮಿಷಗಳ ಮೊದಲು ಇದನ್ನು ಮಾಡಬಹುದು ಮತ್ತು ನಂತರ ಕ್ರಮೇಣ ಹೆಚ್ಚಿಸಬಹುದು ಎಂದು ಸೂಚಿಸಲಾಗುತ್ತದೆ. ಪ್ರತಿ ಯೋಗ ಭಂಗಿಯನ್ನು ಸುಮಾರು 30 ಸೆಕೆಂಡುಗಳ ಕಾಲ ಮಾಡಬೇಕು, ಇದನ್ನು ಮೂರು ಬಾರಿ ಪುನರಾವರ್ತಿಸಲು ಸೂಚಿಸಲಾಗುತ್ತದೆ.
ರಾತ್ರಿ ಬೇಗ ನಿದ್ರೆ ಬರಲು ಬಾಲಾಸನ, ಸುಖಾಸನ, ವಜ್ರಾಸನಗಳನ್ನು ಮಾಡಬೇಕು ಎಂದು ಯೋಗ ಶಿಕ್ಷಕರು ಸಲಹೆ ನೀಡುತ್ತಾರೆ.
ಇವುಗಳ ಜೊತೆಗೆ, ಎರಡು ಧ್ಯಾನ ಭಂಗಿಗಳನ್ನು ಸೂಚಿಸಲಾಗಿದೆ. ಅವೆಂದರೆ..,
ಪ್ರಾರ್ಥನೆ ಧ್ಯಾನ
ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಎರಡೂ ಅಂಗೈಗಳನ್ನು ನಿಮ್ಮ ಎದೆಯ ಮೇಲೆ ಇರಿಸಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿ. ಸ್ವಲ್ಪ ಸಮಯದವರೆಗೆ ಯಾವುದೇ ಆಲೋಚನೆಗಳಿಲ್ಲದೆ ಅಭ್ಯಾಸ ಮಾಡಿ.
ಉದ್ಗೀತ ಪ್ರಾಣಾಯಾಮ
ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ, ಕಣ್ಣುಗಳನ್ನು ಮುಚ್ಚಿ. ನಿಮ್ಮ ಮೊಣಕಾಲುಗಳ ಮೇಲೆ ನಿಮ್ಮ ಅಂಗೈಗಳನ್ನು ಇರಿಸಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ, ಸ್ವಲ್ಪ ಸಮಯದವರೆಗೆ ನಿಮ್ಮ ಉಸಿರನ್ನು ಹಿಡಿದುಕೊಳ್ಳಿ. ಈಗ ನಿಮಗೆ ಸಾಧ್ಯವಾದಷ್ಟು ಕಾಲ "ಓಂ" ಎಂದು ಜಪಿಸಿ. ಈ ಸರ್ವಶಕ್ತ ಧ್ವನಿಯ ಕಂಪನಗಳನ್ನು ನಿಮ್ಮ ದೇಹದಾದ್ಯಂತ ಹರಡುವುದನ್ನು ಅನುಭವಿಸಿ.