logo
ಕನ್ನಡ ಸುದ್ದಿ  /  ಜೀವನಶೈಲಿ  /  ತಿರುಪತಿ ಲಡ್ಡು ಪ್ರಸಾದ ವಿವಾದ; ಇಬ್ಬರ ಜಗಳ ಮೂರನೆಯವನಿಗೆ ಲಾಭ ಅನ್ನೋದು ಎದ್ದು ಕಾಣ್ತಾ ಇದೆ ನೋಡಿ!

ತಿರುಪತಿ ಲಡ್ಡು ಪ್ರಸಾದ ವಿವಾದ; ಇಬ್ಬರ ಜಗಳ ಮೂರನೆಯವನಿಗೆ ಲಾಭ ಅನ್ನೋದು ಎದ್ದು ಕಾಣ್ತಾ ಇದೆ ನೋಡಿ!

Umesh Kumar S HT Kannada

Sep 24, 2024 12:26 PM IST

google News

ತಿರುಪತಿಯಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆದಿದ್ದು, ಅರ್ಚಕರೊಬ್ಬರು ತಿರುಪತಿ ಲಡ್ಡು ಪ್ರಸಾದಕ್ಕೆ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ಮಾಡಿದ ಸಂದರ್ಭದ ಚಿತ್ರ.

  • ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬ ಮಾತನ್ನು ಪೂರ್ವಜರು ಹುಟ್ಟುಹಾಕಿರೋದು ಸುಮ್ಮನಲ್ಲ. ತಿರುಪತಿ ಲಡ್ಡು ಪ್ರಸಾದ ವಿವಾದವನ್ನು ಸೂಕ್ಷ್ಮವಾಗಿ ಅವಲೋಕಿಸಿ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಅನ್ನೋದು ಎದ್ದು ಕಾಣ್ತಾ ಇದೆ ನೋಡಿ ಎನ್ನುತ್ತ ಆ ರಾಜಕೀಯವನ್ನು ವಿವರಿಸಿದ್ದಾರೆ ಹವ್ಯಾಸಿ ಪತ್ರಕರ್ತೆ ದೀಪಿಕಾ ಅಮಿರಪು. 

ತಿರುಪತಿಯಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆದಿದ್ದು, ಅರ್ಚಕರೊಬ್ಬರು ತಿರುಪತಿ ಲಡ್ಡು ಪ್ರಸಾದಕ್ಕೆ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ಮಾಡಿದ ಸಂದರ್ಭದ ಚಿತ್ರ.
ತಿರುಪತಿಯಲ್ಲಿ ಶುದ್ಧೀಕರಣ ಪ್ರಕ್ರಿಯೆ ನಡೆದಿದ್ದು, ಅರ್ಚಕರೊಬ್ಬರು ತಿರುಪತಿ ಲಡ್ಡು ಪ್ರಸಾದಕ್ಕೆ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ಮಾಡಿದ ಸಂದರ್ಭದ ಚಿತ್ರ. (PTI)

ಆಂಧ್ರ ಪ್ರದೇಶದಲ್ಲಿ ತಿರುಪತಿ ಲಡ್ಡು ಪ್ರಸಾದದ ವಿಚಾರದಲ್ಲಿ ಭುಗಿಲೆದ್ದಿರುವ ರಾಜಕೀಯ ಪೈಪೋಟಿಗೆ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ವೇದಿಕೆಯಾಗಿದೆ. ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ಆಳ್ವಿಕೆಯಲ್ಲಿ ಪ್ರಾಣಿಕೊಬ್ಬು ಸೇರಿಸಿದ ಕಲಬೆರಕೆ ತುಪ್ಪ ಬಳಸಿ ತಿರುಪತಿ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಲಾಗಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಸೆಪ್ಟೆಂಬರ್ 19 ರಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದ ಲ್ಯಾಬ್ ರಿಪೋರ್ಟ್ ಕೂಡ ಬಂದಿದೆ. ಅದನ್ನು ಆಧರಿಸಿಯೇ ಈ ವಿಚಾರ ಬಹಿರಂಗಗೊಳಿಸಿರುವುದಾಗಿ ಅವರು ಹೇಳಿದ್ದರು. ವಾಸ್ತವದಲ್ಲಿ ಈ ವಿದ್ಯಮಾನದಲ್ಲಿ ಪಕ್ಷ ರಾಜಕೀಯ, ಜಾತಿ ರಾಜಕೀಯವೂ ಸೇರಿಕೊಂಡಿದೆ. ಟಿಟಿಡಿಯಲ್ಲಿ ಈ ರೀತಿ ರಾಜಕಾರಣ ನಡೆಯುತ್ತಿರುವುದು ಇದೇ ಮೊದಲಲ್ಲ. 90 ವರ್ಷಕ್ಕೂ ಹೆಚ್ಚು ಕಾಲದಿಂದ ಈ ರಾಜಕೀಯ ನಡೆಯುತ್ತಲೇ ಬಂದಿದೆ ಎಂಬುದ ಕಡೆಗೆ ಹವ್ಯಾಸಿ ಪತ್ರಕರ್ತೆ ದೀಪಿಕಾ ಅಮಿರಪು ಗಮನಸೆಳೆದಿದ್ದಾರೆ.

ತಿರುಪತಿ ದೇವಸ್ಥಾನದ ಆಡಳಿತದಲ್ಲಿ ಹಿಡಿತ ಸಾಧಿಸಲು ರೆಡ್ಡಿ ಮತ್ತು ಕಮ್ಮಾ ಎಂಬ ಎರಡು ಪ್ರಭಾವಿ ಸಮುದಾಯಗಳು ಪ್ರಯತ್ನಿಸುತ್ತ ಬಂದಿವೆ. ಈ ಸಮುದಾಯಗಳು ದೇವಸ್ಥಾನವಷ್ಟೇ ಅಲ್ಲ ಇಡೀ ರಾಜ್ಯದ ಆಡಳಿತದ ಮೇಲೆ ಹಿಡಿತ ಸಾಧಿಸುವ ವಿಷಯದಲ್ಲೂ ಪೈಪೋಟಿ ನಡೆಸುತ್ತಿವೆ. ಆ ವಿಷಯ ಹಾಗಿರಲಿ. ಸದ್ಯ ತಿರುಪತಿ ವಿಷಯದ ಮೇಲೆ ಗಮನ ಕೇಂದ್ರೀಕರಿಸೋಣ.

90ಕ್ಕೂ ಹೆಚ್ಚು ವರ್ಷದಿಂದ ಟಿಟಿಡಿ ರಾಜಕಾರಣಿಗಳ ಸಮರಾಂಗಣ

ತಿರುಪತಿಯ ಟಿಟಿಡಿ ಜಗತ್ತಿನ ಅತಿಶ್ರೀಮಂತ ದೇವಸ್ಥಾನದ ಆಡಳಿತ ಮಂಡಳಿ. 92 ವರ್ಷದ ಹಿಂದೆ ಇಲ್ಲಿ ಆಡಳಿತ ಮಂಡಳಿ ರಚನೆಯಾದ ಅಂದಿನಿಂದಲೂ ಇದು ರಾಜಕಾರಣಿಗಳ ಸಮರಾಂಗಣ. 1934ನೇ ಇಸವಿಯಿಂದ ಇಲ್ಲಿವರೆಗಿನ ಟಿಟಿಡಿ ಮುಖ್ಯಸ್ಥರ ಹೆಸರುಗಳ ಮೇಲೊಮ್ಮೆ ಕಣ್ಣು ಹಾಯಿಸಿ ನೋಡಿ. ಪ್ರತಿ ಐದು ವರ್ಷಗಳಿಗೆ ಒಮ್ಮೆ ಮಂಡಳಿ ಪುನಾರಚನೆಯಾಗುತ್ತದೆ. ಅಧಿಕಾರದಲ್ಲಿರುವ ಪಕ್ಷದವರು ಮಂಡಳಿಯ ಆಡಳಿತ ಸೂತ್ರ ಹಿಡಿಯುತ್ತಾರೆ.

ಆಂಧ್ರದಲ್ಲ ಯಾರೇ ಅಧಿಕಾರ ಸೂತ್ರ ಹಿಡಿದರೂ ಆ ಸರ್ಕಾರದ, ಪ್ರಭಾವಿ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಟಿಟಿಡಿಯನ್ನು ಬಳಸುವ ಪರಿಪಾಠ ದಶಕಗಳಿಂದ ನಡೆದುಕೊಂಡು ಬಂದಿದೆ. ಇಂತಹ ಸನ್ನಿವೇಶದಲ್ಲಿ ಜಾತಿ ಹಿತಾಸಕ್ತಿ ಕಾಪಾಡುವ ಗುಂಪುಗಳು ಟಿಟಿಡಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತ ದೇಗುಲದ ಹುಂಡಿ ಹಣ, ಅನುದಾನಗಳನ್ನು ದುರ್ಬಳಕೆ ಮಾಡುತ್ತ, ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ಕೆಲಸ ಮಾಡುತ್ತ ಹೋಗುವುದು ನಡೆದೇ ಇದೆ ಎಂದು ಟಿಟಿಡಿಯ ಅರ್ಚಕರೊಬ್ಬರು ಹೆಸರು ಹೇಳಲು ಇಚ್ಛಿಸದೆ ಅಂತರಂಗದ ವಿಚಾರ ಬಹಿರಂಗ ಪಡಿಸಿದ್ದಾಗಿ ದೀಪಿಕಾ ವಿವರಿಸಿದ್ದಾರೆ.

ತಿರುಮಲ ಮತ್ತು ಅಲ್ಲಿನ ರಾಜಕಾರಣ

ಸದ್ಯ ಮೇಲ್ನೋಟಕ್ಕೆ, ಶ್ರೀ ವೆಂಕಟೇಶ್ವರ ಸ್ವಾಮಿಯ ಸಂಪತ್ತಿನ ಪಾಲಕ ಸ್ಥಾನದಲ್ಲಿರುವ ಟಿಟಿಡಿಯು 2025 ರ ಹಣಕಾಸು ವರ್ಷಕ್ಕಾಗಿ 5,141 ಕೋಟಿ ರೂಪಾಯಿಗಳ ಬಜೆಟ್ ಅನ್ನು ರೂಪಿಸಿದೆ. ಹೆಚ್ಚುವರಿಯಾಗಿ, ಮಂಡಳಿಯು ಸುಮಾರು 18,000 ಕೋಟಿ ರೂಪಾಯಿಗಳ ಸ್ಥಿರ ಠೇವಣಿಗಳ ಮೇಲೆ ಬಡ್ಡಿಯನ್ನು ಪಡೆದು ಬಳಸುತ್ತದೆ. ತಿರುಪತಿ ಮತ್ತು ಪ್ರಪಂಚದಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಇಂಡಿಕ್ ನಾಲೆಡ್ಜ್ ಸಿಸ್ಟಮ್ಸ್ ಕೇಂದ್ರಗಳನ್ನು ನಡೆಸುತ್ತದೆ. ಸುಮಾರು 23 ದೇವಾಲಯಗಳು ಅದರ ನಿಯಂತ್ರಣದಲ್ಲಿವೆ ಮತ್ತು 2023 ರ ವೇಳೆಗೆ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಪಾಂಡಿಚೇರಿ ದಕ್ಷಿಣ ರಾಜ್ಯಗಳಲ್ಲಿ ನಿರ್ಮಿಸಿದ ದೇವಾಲಯಗಳ ಸಂಖ್ಯೆ 2,000 ದಾಟಿದೆ.

“ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲ ಗಣ್ಯ ಅತಿಥಿಗಳೊಂದಿಗೆ ಟಿಟಿಡಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿ (ಇಒ) ಹೋಗುತ್ತಾರೆ. ಹಾಗಾಗಿ, ಹಲವು ಪಕ್ಷಗಳ ನಡುವೆ ಸಂಧಾನಕ್ಕೆ ಮುನ್ನೆಲೆಯಾಗಿ ದೇವಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ದೇವಾಲಯದ ಅಧ್ಯಕ್ಷ ಸ್ಥಾನವು ರಾಜಕೀಯ ನಿಷ್ಠೆ ಅಥವಾ ಪಕ್ಷ ನಿಷ್ಠೆಗೆ ಪಾರಿತೋಷಕವಾಗಿ ಕೂಡ ನೀಡಲ್ಪಟ್ಟಿದೆ. ಚಿತ್ತೂರು ಸಂಸದ ರಾಜಗೋಪಾಲ್ ನಾಯ್ಡು ಅವರು ತೆಲುಗು ದೇಶಂ ಪಕ್ಷಕ್ಕೆ ಹೋಗದೆ ಕಾಂಗ್ರೆಸ್‌ನೊಂದಿಗೆ ಉಳಿಯಲು ನಿರ್ಧರಿಸಿದ್ದಕ್ಕಾಗಿ ಅಂದಿನ ಮನಮೋಹನ್ ಸಿಂಗ್ ಸರ್ಕಾರವು ಅವರನ್ನು ಟಿಟಿಡಿ ಅಧ್ಯಕ್ಷರನ್ನಾಗಿ ಮಾಡಿತು" ಎಂಬುದನ್ನು ರಾಜಕೀಯ ವಿಶ್ಲೇಷಕ ಟಿ ರವಿ ಉಲ್ಲೇಖಿಸಿದ್ದಾಗಿ ದೀಪಿಕಾ ವಿವರಿಸಿದ್ದಾರೆ.

ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದೆ. ಈ ಸಲ ಟಿಟಿಡಿ ರಾಜಕಾರಣಕ್ಕೆ ಮತ್ತೊಂದು ಸಮುದಾಯ ಎಂಟ್ರಿಯಾಗಿದೆ. ಅದು ಕಮ್ಮಾ ಅಲ್ಲ ಕಾಪು ಸಮುದಾಯದವರು. 1954ರಿಂದೀಚೆಗೆ ಟಿಟಿಡಿ ಅಧ್ಯಕ್ಷರಾದವರೆಲ್ಲ ರೆಡ್ಡಿ ಅಥವಾ ಕಮ್ಮಾ ಜನಾಂಗದವರು. ಈ ಬಾರಿ ಕಾಪು ಸಮುದಾಯದವರು ಅಧಿಕಾರದ ರುಚಿ ನೋಡಿದ್ದು, ಟಿಟಿಡಿ ಅಧ್ಯಕ್ಷರಾಗಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸಹೋದರ ಕೆ ನಾಗಬಾಬು ಅವರನ್ನು ನೇಮಿಸುವ ಸಾಧ್ಯತೆ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಈ ಬಗ್ಗೆ ನಾಯ್ಡು ಅವರ ಮೇಲೆ ಒತ್ತಡ ಹೇರುವ ಕೆಲಸಗಳು ಶುರುವಾಗಿವೆ.

ಇನ್ನೊಂದು ವಿಚಾರ ಗಮನಿಸಬೇಕು. ತಿರುಪತಿ ಲಡ್ಡು ವಿಚಾರ ಮುನ್ನೆಲೆಗೆ ಬಂದ ಕೂಡಲೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಇಡೀ ವಿದ್ಯಮಾನವನ್ನು ತನ್ನೆಡೆ ಸೆಳೆದುಕೊಂಡಿದ್ದಾರೆ. 11 ದಿನಗಳ ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡು ಎಲ್ಲರ ಗಮನವೂ ಅವರ ಮೇಲೆ ಇರುವಂತೆ ಮಾಡಿಕೊಂಡಿದ್ದಾರೆ. ಜಗನ್‌ ಆಡಳಿತ ವೈಫಲ್ಯವನ್ನು ಬಹಿರಂಗಗೊಳಿಸಿ ರಾಜಕೀಯ ಲಾಭಕ್ಕೆ ನಾಯ್ಡು ಪ್ರಯತ್ನಿಸಿದರೂ, ಅದರ ಫಲವನ್ನು ಪವನ್ ಕಲ್ಯಾಣ್ ಬಹಳ ನಾಜೂಕಾಗಿ ಎತ್ತಿಕೊಳ್ಳಲು ಮುಂದಾಗಿರುವುದು ಸ್ಪಷ್ಟ ಎಂಬುದರ ಕಡೆಗೆ ಲೇಖನ ಗಮನಸೆಳೆದಿದೆ.

ಹವ್ಯಾಸಿ ಪತ್ರಕರ್ತೆ ದೀಪಿಕಾ ಅಮಿರಪು ಅವರ ಲೇಖನ ಇಲ್ಲಿದೆ - Southern Lights | Tirupati: The world’s richest temple body is a battleground for politicians

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ