logo
ಕನ್ನಡ ಸುದ್ದಿ  /  ಜೀವನಶೈಲಿ  /  ಪದೇ ಪದೇ ಎದುರುತ್ತರ ನೀಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ, ಈ ಅಭ್ಯಾಸ ಬಿಡಿಸಲು ಪೋಷಕರು ಏನು ಮಾಡಬೇಕು?- ಮನದ ಮಾತು

ಪದೇ ಪದೇ ಎದುರುತ್ತರ ನೀಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ, ಈ ಅಭ್ಯಾಸ ಬಿಡಿಸಲು ಪೋಷಕರು ಏನು ಮಾಡಬೇಕು?- ಮನದ ಮಾತು

Reshma HT Kannada

Mar 28, 2024 10:57 AM IST

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ

    • ಭವ್ಯಾ ವಿಶ್ವನಾಥ್: ಪೋಷಕರು ಹಾಗೂ ಹಿರಿಯರಿಗೆ ಎದುರುತ್ತರ ನೀಡುವ ಅಭ್ಯಾಸ ಇಂದಿನ ಮಕ್ಕಳಲ್ಲಿ ಹೆಚ್ಚುತ್ತಿದೆ. ಮಕ್ಕಳು ಪದೇ ಪದೇ ಎದುರುತ್ತರ ನೀಡುವುದೇಕೆ, ಅವರಲ್ಲಿ ಈ ಅಭ್ಯಾಸ ಬೆಳೆಯಲು ಕಾರಣವೇನು, ಇದನ್ನು ನಿಭಾಯಿಸುವುದು ಹೇಗೆ? ಪೋಷಕರಿಗಿಲ್ಲಿದೆ ಸಲಹೆ.
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ

ಪ್ರಶ್ನೆ: ಎದುರುತ್ತರ ನೀಡುವ ಮಕ್ಕಳನ್ನು ನಿಭಾಯಿಸುವುದು ಹೇಗೆ? ಯಾವ ಕಾರಣದಿಂದ ಅವರು ತಿರುಗುತ್ತರ ಕೊಡುತ್ತಾರೆ? ಇದರಿಂದ ಅವರಿಗೆ ಏನು ಸಿಗುತ್ತದೆ? ಅವರನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

ಟ್ರೆಂಡಿಂಗ್​ ಸುದ್ದಿ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ಮಮತಾ, ದಾವಣಗೆರೆ

ಉತ್ತರ: ಮೊದಲು ತಿರುಗುತ್ತರ ಅಥವಾ ಎದುರುತ್ತರ ಕೊಡುವ ಮಕ್ಕಳ ಮನಸ್ಸು ಹೇಗಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ತಿರುಗಿ ಉತ್ತರ ಕೊಡುವುದು ಒಂದು ರೀತಿಯ ಹಠಾತ್‌ ಪ್ರವೃತ್ತಿ (impulsive behaviour) ಹಾಗೂ ಇದು ಅಭ್ಯಾಸವೂ ಹೌದು. ಸಾಮಾನ್ಯವಾಗಿ 1 ರಿಂದ 5 ವಯಸ್ಸಿನ ಮಕ್ಕಳು ತಿರುಗೇಟು ಕೊಟ್ಟಾಗ, ಪೋಷಕರಿಗೆ ಬೇಸರ ಅಥವಾ ಸಿಟ್ಟು ಬರುವುದಿಲ್ಲ. ಬದಲು ಮಗುವಿನ ಚುರುಕುತ, ತೀಕ್ಷ್ಮಮತಿ, ಬುದ್ಧಿವಂತಿಕೆ ನೋಡಿ ಖುಷಿ ಎನ್ನಿಸುತ್ತದೆ. ಮೊದ ಮೊದಲಿಗೆ ಎಲ್ಲವೂ ಮುದ್ದು ಮತ್ತು ಮುದವೆನಿಸುತ್ತದೆ. ಪೋಷಕರು ಇದನ್ನು ಪ್ರಶಂಸೆಯ ಮೂಲಕ ಮಗುವನ್ನು ಕೊಂಡಾಡುತ್ತಾರೆ. ಆಗ ಮಗುವಿಗೆ ನಾನು ಮಾಡುತ್ತಿರುವುದು ತಪ್ಪಲ್ಲ, ನಾನು ಮಾತನಾಡುವ ರೀತಿ ಎಲ್ಲರಿಗೆ ಇಷ್ಟವಾಗುತ್ತದೆ ಎಂದು ಮನನವಾಗಿ, ತಿರುಗುತ್ತರ ನೀಡುವುದನ್ನೇ ಬಲವಾದ ರೂಢಿ ಮಾಡಿಕೊಳ್ಳುತ್ತದೆ.

ಆದರೆ ಈ ಸ್ವಭಾವವು ಬೆಳೆದು ನಿಂತ ಮಕ್ಕಳು ಅಳವಡಿಸಿಕೊಂಡಾಗ ದೊಡ್ಡವರಿಗೆ ಇಷ್ಟವಾಗುವುದಿಲ್ಲ. ಬದಲಿಗೆ, ಅಗೌರವ ತುಂಬಿದ ಮತ್ತು ಬಿರುಸಾದ ಮಾತುಗಳಾಗಿ ಪ್ರತಿಬಿಂಬಿಸುತ್ತದೆ, ಜೊತೆಗೆ ಇದು ಸಮಸ್ಯೆಯಾಗಿ ಕಾಡತೊಡಗುತ್ತದೆ. ಹಾಗಾದರೆ, ಇದಕ್ಕೆ ಪರಿಹಾರವೇನು ಏನಿರಬಹುದೆಂದು ಚಿಂತಿಸಬೇಡಿ. ಈ ಸಮಸ್ಯೆಗೆ ಇದೊಂದೆ ಕಾರಣವಲ್ಲ, ಇನ್ನು ನಾನಾ ವಿಧದ ಕಾರಣಗಳಿವೆ, ಇವನ್ನು ತಿಳಿದುಕೊಂಡರೆ ಖಂಡಿತವಾಗಿಯೂ ಪರಿಹಾರ ಕಂಡುಕೊಳ್ಳಬಹುದು.

ಮನಸ್ಥಿತಿ-ಕಾರಣಗಳು

1. ಅನುಕರಣೆ: ಒಂದು ಪಕ್ಷ ಪೋಷಕರ ಅಥವಾ ಸ್ನೇಹಿತರ ಸ್ವಭಾವವೂ ಕೂಡ ತಿರುಗೇಟು ಕೊಡುವುದಿದ್ದರೆ, ಇದನ್ನು ಕೆಲವು ಮಕ್ಕಳು ಅನುಕರಣೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

2. ʼಬಿಂದಾಸ್- coolʼ ಕೆಲವು ಮಕ್ಕಳಿಗೆ ತಿರುಗುತ್ತರ ಕೊಡುವುದು ಬಿಂದಾಸ್ ಅಥವ ಸ್ಮಾರ್ಟ್‌ (smart) ಎನ್ನುವ ಅಭಿಪ್ರಾಯವಿರುತ್ತದೆ. ಸ್ನೇಹಿತರಿಂದ ಮತ್ತು ಕುಟುಂಬ ಸದಸ್ಯರಿಂದ ಮೆಚ್ಚುಗೆ ಪಡೆಯಬಹುದು ಎನ್ನುವ ಕಾರಣದಿಂದ ಈ ಅಭ್ಯಾಸ ರೂಢಿ ಮಾಡಿಕೊಂಡಿರುತ್ತಾರೆ.

3. ಅನುಕಂಪ ಮತ್ತು ಸಹಾನುಭೂತಿಯ ಕೊರತೆ: ಹಲವು ಬಾರಿ ಅನುಕಂಪ ಹಾಗೂ ಸಹಾನುಭೂತಿಯ ಕೊರತೆಯಿಂದ ಮಗು ತಟ್ಟೆಂದು ತಿರುತ್ತರ ಕೊಡುತ್ತದೆ. ನಾನು ಹೀಗೆ ಮಾತಾನಾಡುವುದರಿಂದ ಬೇರೆಯವರಿಗೆ ಯಾವ ರೀತಿಯಲ್ಲಿ ನೋವಾಗಬಹುದೆಂದು ಊಹೆ ಅಥವಾ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದ ಕೊರತೆ ಮಗುವಿನಲ್ಲಿರುತ್ತದೆ. ನನಗೇ ಯಾರಾದರೂ ಈ ರೀತಿ ಮಾತಾನಾಡಿದರೆ ಹೇಗೆ ಅನ್ನಿಸುತ್ತದೆ ಎನ್ನುವ ಪರಿವೆಯೂ ಸಹ ಇರುವುದಿಲ್ಲ (ಸ್ವ ಅರಿವಿನ ಕೊರತೆ).

5. ಅಸಹಾಯಕತನ/ನಿರಾಸೆ/ಸೋಲು/ಮನಸ್ತಾಪ: ಮಕ್ಕಳು ಹೊರಗಡೆ ಸ್ನೇಹಿತರ ಜೊತೆ ಅಥವಾ ತಾವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಅಸಹಾಯಕತೆ, ಸೋಲು, ಮನಸ್ತಾಪ ಅನುಭವಿಸಿದ್ದರೆ ಮನಸ್ಸು ಕಿರಿಕಿರಿಯಾಗಿ, ಮನೆಯಲ್ಲಿ ಪೋಷಕರಿಗೆ ತಿರುತ್ತರ ಕೊಟ್ಟು ತಮ್ಮಲ್ಲಿರುವ ಸಿಟ್ಟು, ಬೇಸರವನ್ನು ಹೊರ ಹಾಕುತ್ತಾರೆ.

6. ಪೋಷಕರ ಗಮನ ಸೆಳೆಯಲು: ಇನ್ನು ಕೆಲವು ಮಕ್ಕಳು, ಪೋಷಕರ ಗಮನ ತಮ್ಮತ್ತ ಸೆಳೆಯುವ ಸಲುವಾಗಿಯೂ ತಿರುತ್ತರ ಕೊಡುತ್ತಾರೆ. ಪೋಷಕರು ಸದಾ ಬ್ಯುಸಿ ಇದ್ದರೆ ಅಥವಾ ತಮ್ಮನ್ನು ನಿರ್ಲಕ್ಷ್ಯ ಮಾಡಿದಾಗಲು ಮಕ್ಕಳು ಹೀಗೆ ತಿರುತ್ತರ ಕೊಟ್ಟು ಗಮನ ಸೆಳೆಯಲು ಪ್ರಯತ್ನಿಸುತ್ತಾರೆ.

7. ಅತಿಯಾದ ಪ್ರೀತಿ, ಸಲಿಗೆ: ಕೆಲವೊಮ್ಮೆ ಪೋಷಕರು ಅತಿಯಾದ ಸಲುಗೆ, ಮುದ್ದು ಮಾಡುವುದು ಕೂಡ ಮಕ್ಕಳು ಎದುರುತ್ತರ ನೀಡಲು ಕಾರಣವಾಗುತ್ತದೆ.

ದೈನಂದಿನ ಸಂಭಾಷಣೆಯಲ್ಲಿ ಮಕ್ಕಳನ್ನು ಹೀಗೆ ತಿದ್ದಿ

1. ಸದಾ ಎದುರುತ್ತರ ನೀಡುವ ಮಕ್ಕಳಿಗೆ ಸಂಬಂಧದ ಗಡಿ-ಮಿತಿ ಮತ್ತು ಗೌರವ-ಅಗೌರವ (Relationship Boundary) ಕುರಿತು ಮಕ್ಕಳಲ್ಲಿ ಪೋಷಕರು ಕಾರ್ಯತಃ ಅರಿವು ಮೂಡಿಸಬೇಕು. ಉದಾ: ಓದು ಎಂದಾಗ ಮಕ್ಕಳು ʼಓದಲ್ಲ, ಯಾಕೆ ಓದಬೇಕು?ʼ ಅಥವಾ ಫೋನ್ ನೋಡಿದ್ದು ಸಾಕು ಎಂದಾಗ ʼನಿಂಗೇನು ಕಷ್ಟ, ನಾನು ನೋಡ್ತೀನಿ, ನೀನು ನೋಡೋಲ್ವಾ ಎಷ್ಟು ಹೊತ್ತುʼ ಎಂದು ಎದುರತ್ತರ ಕೊಟ್ಟರೆ, ಪೋಷಕರು ಕೋಪ ಮಾಡಿಕೊಂಡು, ಏರು ಧ್ವನಿಯಲ್ಲಿ ರೇಗಾಡಬಾರದು. ಬದಲು ಹೀಗೆ ಪ್ರತಿಕ್ರಿಯಿಸಿ, ʼನಮ್ಮ ಮನೆಯಲ್ಲಿ ಚಿಕ್ಕವರಿಗೆ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ʼಗೌರವದಿಂದ ವ್ಯಕ್ತಪಡಿಸಬೇಕೆಂಬುದು ನಿಯಮ. ನೀನು ಸಹ ಇದನ್ನು ಪಾಲಿಸಬೇಕುʼ ಸಂಬಧಗಳ ಮಧ್ಯೆ ವ್ಯವಹರಿಸುವಾಗ ಪ್ರೀತಿ, ಕಾಳಜಿ, ವಿಶ್ವಾಸದ ಜೊತೆ ಗೌರವ ಕೊಡುವುದನ್ನು ಪಾಲಿಸಲೇಬೇಕುʼ ಎನ್ನುವುದನ್ನು ಮಕ್ಕಳಿಗೆ ಆಗಾಗ ಮನದಟ್ಟು ಮಾಡಬೇಕು. ಆಗ ಇದೇ ಮಕ್ಕಳಿಗೆ ಇದೇ ರೂಢಿ ಆಗುತ್ತದೆ.

2. ಅನುಕಂಪ ಮತ್ತು ಸಹಾನುಭೂತಿ: ಮಕ್ಕಳಿಗೆ ಅನುಕಂಪ ಹಾಗೂ ಸಹಾನುಭೂತಿಯೆಂದರೇನೆಂದು ಪೋಷಕರು ಮಾದರಿಯಾಗಿ ತೋರಿಸಿಕೊಡಬೇಕು. ಇದರಿಂದ ಬೇರೆಯವರ ಅನಿಸಿಕೆ, ಭಾವನೆಗಳ ಬಗ್ಗೆ ಅರಿವಾಗಿ ಅನುಕಂಪ ಉಂಟಾಗುತ್ತದೆ ಹಾಗು ನಾನು ಬೇರೆಯವರ ಪರಿಸ್ಥಿತಿಯಲ್ಲಿದ್ದರೆ ಹೇಗಿರುತ್ತಿತ್ತೆಂದು ಸಹಾನುಭೂತಿಯೂ ಹುಟ್ಟುತ್ತದೆ. ಕ್ರಮೇಣ ತಿರುತ್ತರ ಕೊಡುವುದು ಕಡಿಮೆಯಾಗುತ್ತದೆ

3. ಸಹನೆ‌ ಇರಲಿ ಮತ್ತು ನಿರ್ಲಕ್ಷ್ಯ ಸಲ್ಲ: ಮಕ್ಕಳು ಬಿರುಸಾಗಿ ಪದೇ ಪದೇ ತಿರುತ್ತರ ಕೊಟ್ಟಾಗ ಅದನ್ನು ಸಹಿಸಲೂ ಬಾರದು. ಹಾಗಂತ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಯಾಕೆಂದರೆ ಭವಿಷ್ಯದಲ್ಲಿ ಈ ಸ್ವಭಾವವೇ ದೊಡ್ಡ ಸಮಸ್ಯೆಯಾಗಬಹುದು ಎಚ್ಚರ.

ಭವ್ಯಾ ವಿಶ್ವನಾಥ್ ಪರಿಚಯ

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯಮಿತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು