ಮುಟ್ಟಾದ ಮೇಲೆ ಚಿಕ್ಕ ಹುಡುಗಿಯ ವರ್ತನೆಯೇ ಬದಲಾಗಿದೆ, ಸಂಕೋಚ-ಹಿಂಜರಿಕೆಯಿಂದ ಕುಗ್ಗಿದ್ದಾಳೆ, ಅವಳ ಭವಿಷ್ಯದ ಬಗ್ಗೆ ಭಯವಾಗ್ತಿದೆ -ಮನದ ಮಾತು-kids health impact of early periods on behaviour of children how to handle little girl with early puberty symptoms bvy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಟ್ಟಾದ ಮೇಲೆ ಚಿಕ್ಕ ಹುಡುಗಿಯ ವರ್ತನೆಯೇ ಬದಲಾಗಿದೆ, ಸಂಕೋಚ-ಹಿಂಜರಿಕೆಯಿಂದ ಕುಗ್ಗಿದ್ದಾಳೆ, ಅವಳ ಭವಿಷ್ಯದ ಬಗ್ಗೆ ಭಯವಾಗ್ತಿದೆ -ಮನದ ಮಾತು

ಮುಟ್ಟಾದ ಮೇಲೆ ಚಿಕ್ಕ ಹುಡುಗಿಯ ವರ್ತನೆಯೇ ಬದಲಾಗಿದೆ, ಸಂಕೋಚ-ಹಿಂಜರಿಕೆಯಿಂದ ಕುಗ್ಗಿದ್ದಾಳೆ, ಅವಳ ಭವಿಷ್ಯದ ಬಗ್ಗೆ ಭಯವಾಗ್ತಿದೆ -ಮನದ ಮಾತು

ಭವ್ಯಾ ವಿಶ್ವನಾಥ್: ಚಿಕ್ಕ ವಯಸ್ಸಿಗೆ ಋತುಮತಿ (ಮುಟ್ಟು) ಆಗುತ್ತಿರುವ ಮಕ್ಕಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇಂಥ ಮಕ್ಕಳು ಭಾವನಾತ್ಮಕ ಏರಿಳಿತಗಳಿಂದ ತಲ್ಲಣಿಸುತ್ತಾರೆ. ಇಂಥ ಸಂದರ್ಭದಲ್ಲಿ ಹೆಣ್ಣುಮಕ್ಕಳ ತಂದೆ ತಾಯಿ ಹೇಗೆ ವರ್ತಿಸಬೇಕು? ಮಕ್ಕಳ ಮನಸ್ಸಿಗೆ ಹೇಗೆ ಬಲ ತುಂಬಬೇಕು? ಚಿಕ್ಕ ವಯಸ್ಸಿಗೆ ಮುಟ್ಟಾಗುವ ಮಕ್ಕಳ ಪೋಷಕರಿಗೆ ಕಿವಿಮಾತು ಇಲ್ಲಿದೆ.

ಮನದ ಮಾತು; ಚಿಕ್ಕ ವಯಸ್ಸಿನಲ್ಲಿ ಮುಟ್ಟಾಗುವುದರಿಂದ ಮಕ್ಕಳ ಮನಸ್ಸಿನಲ್ಲಾಗುವ ಬದಲಾವಣೆಗಳು
ಮನದ ಮಾತು; ಚಿಕ್ಕ ವಯಸ್ಸಿನಲ್ಲಿ ಮುಟ್ಟಾಗುವುದರಿಂದ ಮಕ್ಕಳ ಮನಸ್ಸಿನಲ್ಲಾಗುವ ಬದಲಾವಣೆಗಳು

ಪ್ರಶ್ನೆ: ನನ್ನ ಮಗಳಿಗೆ ಈಗ 11 ವರ್ಷ. ಬಹಳ ತುಂಟಿ, ಧೈರ್ಯವಂತೆ, ದಿಟ್ಟತನನ ಹುಡುಗಿ. ಆದರೆ ಸಿಟ್ಟು ಹೆಚ್ಚು. ಇತ್ತೀಚಿಗಷ್ಟೇ ಅವಳಿಗೆ ಋತುಚಕ್ರ ಆರಂಭವಾಗಿದೆ. ಇಂದಿಗೂ ಅವಳು ಆಟ ಮತ್ತು ಓದುವುದರಲ್ಲಿ ಬಹಳ ಚೂಟಿಯಾಗಿದ್ದಾಳೆ. ಆದರೆ ಅವಳ ನಡವಳಿಕೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಸಣ್ಣಪುಟ್ಟದ್ದಕ್ಕೂ ಕೋಪ ಮಾಡಿಕೊಳ್ಳುತ್ತಾಳೆ. ಹೊರಗೆ ಹೋದರೆ ಸಾಕು ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಎನ್ನುವ ಭಾವನೆ. ಸಂಕೋಚ ಮತ್ತು ಅತಿ ಎನ್ನಿಸುವಷ್ಟು ಜಾಗರೂಕತೆ ವಹಿಸುತ್ತಾಳೆ. ದೇಹ ಭಂಗಿಯನ್ನೂ ಸಂಕುಚಿತಗೊಳಿಸುತ್ತಾಳೆ. ನಾವು ಎಷ್ಟು ಪ್ರಯತ್ನ ಮಾಡಿದರೂ ಉಪಯೋಗವಾಗುತ್ತಿಲ್ಲ. ಏನು ಮಾಡಬೇಕು?

- ಶ್ರೀದೇವಿ, ಅತ್ತಿಬೆಲೆ

ಉತ್ತರ: ನಿಮ್ಮ ಮಗಳಿಗೆ ಇನ್ನೂ ಬಾಲ್ಯ. ದೈಹಿಕ ವಿಕಸನ ಪೂರ್ಣಗೊಳ್ಳುವ ಮೊದಲೇ, ಅಂದರೆ ಬೇಗನೆಯೇ ಋತುಮತಿಯಾಗಿದ್ದಾಳೆ (ಮೆಚೂರ್) ಆಗಿದ್ದಾಳೆ. ಬಹುಶಃ ಈಗ ಅವಳು 5ನೇ ತರಗತಿಯಲ್ಲಿ ಓದುತ್ತಿರಬಹುದು. ಮಾನಸಿಕವಾಗಿ ಸಜ್ಜಾಗುವ ಮೊದಲೇ ದೇಹದಲ್ಲಿ ಬದಲಾವಣೆಗಳಾದಾಗ ಮಕ್ಕಳಿಗೆ ಆಘಾತವಾಗುತ್ತದೆ. ಆಗುತ್ತಿರುವ ಬದಲಾವಣೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಮುಜುಗರ, ಸಂಕೋಚ, ಗೊಂದಲ, ಭಯಗಳ ಜೊತೆ ಕೂತೂಹಲ, ತವಕಗಳನ್ನೂ ಅಂಥ ಮಕ್ಕಳು ಎದುರಿಸುತ್ತವೆ. ಆದ್ದರಿಂದ ಮಕ್ಕಳು ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯಾವಕಾಶ ಕೊಡಿ. ಅವಳ ಬಗ್ಗೆ ತಾತ್ಸಾರದ ಮಾತುಗಳನ್ನು ಆಡಬೇಡಿ. ಬದಲಿಗೆ ಸೂಕ್ತ ಸಮಯದಲ್ಲಿ ಆಗಿರುವ ಬದಲಾವಣೆ ಬೆಳವಣಿಗೆಯ ಹಾದಿ ಎಂದು ಅವಳಿಗೆ ನಿಧಾನವಾಗಿ ಮನವರಿಕೆ ಮಾಡಿಸಿ.

ಭಾವನಾತ್ಮಕ ಏರಿಳಿತಗಳು ಅಥವಾ ಮನಃಸ್ಥಿತಿಯಲ್ಲಿ ಏಕಾಏಕಿ ಆಗುವ ಬದಲಾವಣೆಗಳು (Mood Swings) ಹದಿಹರೆಯದ ಬೆಳವಣಿಗೆಯಲ್ಲಿ. ಇದು ಸಹಜ, ನೈಸರ್ಗಿಕ ಮತ್ತು ಆ ವಯೋಮಾನದಲ್ಲಿ ಪ್ರಮುಖ ಭಾಗವಾಗಿದೆ. ಹದಿಹರೆಯದ ಹಂತಕ್ಕೆ ಬರುವ ಮೊದಲು ಮತ್ತು ಆ ಹಂತದಲ್ಲಿ ಹಲವರು ಅನೇಕ ಪ್ರಬಲ ಭಾವನೆಗಳನ್ನು ಅನುಭವಿಸುತ್ತಾರೆ.

ನಿಮ್ಮ ಮಗಳಲ್ಲಿಯೂ ಇಂಥದ್ದೇ ದೈಹಿಕ ಬೆಳಣಿಗೆ ಆಗುತ್ತಿದೆ. ಆದರೆ ಈ ಬದಲಾವಣೆಯು ಅವಳಿಗೆ ಮುಜುಗರ, ಭಯ ಮತ್ತು ಆತಂಕವನ್ನು ಉಂಟುಮಾಡಿರಬಹುದು. ಆಗುತ್ತಿರುವ ಬದಲಾವಣೆಗಳನ್ನು ಹೊರಗೆ ಇದ್ದ ಜನಗಳು ಗುರುತಿಸಿರುವುದನ್ನು ನಿಮ್ಮ ಮಗಳು ಗಮನಿಸಿದಾಗ, ಅಥವಾ ತನ್ನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಎಲ್ಲರೂ ಗುರುತಿಸಬಹುದು ಎಂದು ಭಾವಿಸಿ ಮುಜುಗರ ಮತ್ತು ಸಂಕೋಚಪಡುತ್ತಿರಬಹುದು.

ಜನರ ನೋಟವೇ ಅಹಿತಕರ ಎನಿಸಬಹುದು

ಕೆಲವು ಜನರ ನೋಟ ಅವಳಿಗೆ ಅಹಿತಕರವಾಗಿದ್ದು, ಭಯ, ಗಾಬರಿಯನ್ನೂ ಸಹ ಮೂಡಿಸಿರಬಹುದು. ತಾನು ಸುರಕ್ಷಿತವಾಗಿಲ್ಲ ಎಂದುಕೊಳ್ಳುವ ಅವಳು ತನ್ನನ್ನು ತಾನು ರಕ್ಷಸಿಕೊಳ್ಳಲು ಪ್ರಯತ್ನಿಸುವುದರಿಂದಲೂ ಸಹ ದೇಹ ಭಂಗಿಯನ್ನು ಸಂಕುಚಿತವಾಗಿ ಮಾಡಿಕೊಂಡು, ಅತಿಯಾದ ಜಾಗರೂಕತೆ ವಹಿಸುವ ಸಾಧ್ಯತೆಯಿದೆ.

ಇಂಥ ಅನುಭವಗಳಿಂದಾಗಿ ಅವಳಿಗೆ ಎಲ್ಲರೂ ತನ್ನನ್ನು ಹಾಗೆಯೇ ನೋಡುತ್ತಾರೆ ಎನ್ನುವ ನಿರ್ಣಯಕ್ಕೆ ಬರುವಂತೆ ಮಾಡಿರಬಹುದು. ಅವಳ ಅನಿಸಿಕೆಗಳು ನಿಜವಲ್ಲ ಎಂದು ನೀವು ತಿಳಿ ಹೇಳಿದಾಗ ಅಥವಾ ಹೊಂದಿಕೊಂಡು ಹೋಗು, ಅಂಥವರನ್ನು ನಿರ್ಲಕ್ಷಿಸು ಎಂದು ನೀವು ಹೇಳಿದಾಗ ಅವಳಿಗೆ ನಿರಾಸೆ ಉಂಟಾಗಿ ಸಿಡಿಮಿಡಿಗೊಳ್ಳಬಹುದು. ಹೊಸ ಬದಲಾವಣೆಯ ಜೊತೆಗೆ ಹೊಸ ಯೋಚನೆಗಳು, ಹೊಸ ಭಾವನೆಗಳು, ಹೊಸ ಜವಾಬ್ಧಾರಿ, ಒಟ್ಚಾರೆ ಹೊಸ ವಾತಾವರಣ ಮತ್ತು ಅನುಭವಗಳು ಸಹ ಮಕ್ಕಳಿಗೆ ಒಂದು ಹೊಸ ಸವಾಲಾಗುತ್ತವೆ.

ಇಂತಹ ಮಕ್ಕಳ ಮಾನಸಿಕ ಸಮಸ್ಯೆಗಳನ್ನು ಈಗ ನಿರ್ಲಕ್ಷಿಸಿದರೆ, ಸಕಾಲದಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ಸಿಗದಿದ್ದರೆ ಇದೇ ಸಮಸ್ಯೆ ಮುಂದುವರಿದು ಭವಿಷ್ಯದಲ್ಲಿ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ಇಂಥವರು ಶೈಕ್ಷಣಿಕವಾಗಿ ಹಿಂದೆ ಬೀಳಬಹುದು. ಆತ್ಮವಿಶ್ವಾಸದ ಕೊರತೆ, ಭಯ ಮತ್ತು ಆತಂಕದ ಸಮಸ್ಯೆ ಕಾಡಬಹುದು. ವಿಶ್ವಾಸಾರ್ಹತೆಯ ಸಮಸ್ಯೆಗಳೊಂದಿಗೆ ವೈಯಕ್ತಿಕ ಸಮಸ್ಯೆಗಳನ್ನೂ ಎದುರಿಸಬೇಕಾಗಬಹುದು.

ನಿಮ್ಮ ಮಗಳಿಗೆ ಈ ರೀತಿ ಮಾನಸಿಕ ಬೆಂಬಲ ಕೊಡಿ

1) ಮನೆಯ ಹಿರಿಯರು ಇಂಥ ಮಕ್ಕಳಿಗೆ ಹೆಚ್ಚು ಸಮಯ ಕೊಡಬೇಕು. ಅವರಿಗೆ ಹಿರಿಯರ ಮಾನಸಿಕ ಬೆಂಬಲ ಬೇಕು. ಮಕ್ಕಳ ಈ ಸ್ವಭಾವವು ಸ್ವಲ್ಪ ಸಮಯದ ನಂತರ ಕ್ರಮೇಣ ಬದಲಾಗುತ್ತದೆ.

2) ⁠ಬದಲಾವಣೆಗಳನ್ನು ಒಪ್ಪಿಕೊಂಡು, ಹೊಂದಿಕೊಳ್ಳುವುದಕ್ಕೆ ಕಾಲಾವಕಾಶ ನೀಡಬೇಕು.

3) ಅವಳಿಗೆ ತಕ್ಷಣವೇ ಬದಲಾವಣೆಗೆ ಹೊಂದಿಕೊಳ್ಳುವಂತೆ ಬಲವಂತ ಮಾಡಬೇಡಿ.

4) ⁠ಅವಳ ಅನಿಸಿಕೆಗಳನ್ನು ನಡುವಳಿಕೆಗಳನ್ನು ಕುಚೋದ್ಯ ಮಾಡಬೇಡಿ, ವಿಮರ್ಶೆ ಮಾಡುವುದು ಅಥವಾ ಅಣಕಿಸುವುದು ಸಹ ಸಲ್ಲದು.

5) ⁠ಅವಳ ಮನಸ್ಸಿನ ಭಾವನೆಯನ್ನು ನಿಮ್ಮ ಬಳಿ ಹಂಚಿಕೊಳ್ಳುವುದಕ್ಕೆ ಉತ್ತೇಜನ ಕೊಡಿ.

6) ಅವಳು ಹೇಳಿದ್ದೆಲ್ಲಾ ನಿರಾಕರಿಸಬೇಡಿ. ಸಮಾಧಾನವಾಗಿ ಕೇಳಿಸಿಕೊಂಡು ನಿಮ್ಮ ಪ್ರತಿಕ್ರಿಯೆ ನೀಡಿ. ಇದರಿಂದ ಅವಳಿಗೆ ನಿಮ್ಮ ಮೇಲೆ ವಿಶ್ವಾಸ ಬೆಳೆಯುತ್ತದೆ. ತನ್ನ ಭಾವನೆಗಳನ್ನು ಅರ್ಥಮಾಡಿಕ್ಕೊಳ್ಳುವುದಕ್ಕೆ ಸುಲಭವಾಗುತ್ತದೆ. ಮತ್ತು ನನ್ನ ತಾಯಿ/ ತಂದೆ ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಸಮಾಧಾನವಾಗುತ್ತದೆ. ಇಲ್ಲವಾದಲ್ಲಿ, ಸಿಟ್ಟು, ಕೋಪ ಹೆಚ್ಚಾಗಬಹುದು.

7) ಈ ಬೆಳವಣಿಗೆಯ ಹಂತದಲ್ಲಿ ಮಕ್ಕಳು ತಮಗಾಗಿ ಕೆಲ ಹೊತ್ತು ಸ್ವಂತ ಸಮಯ (ಖಾಸಗಿ ) ಬಯಸಬಹುದು. ಇದನ್ನು ಕೆಲವು ಮಕ್ಕಳು ಸಂಕೋಚದಿಂದ ಕೇಳಿ ಪಡೆದರೆ, ಇನ್ನು ಕೆಲವು ಮಕ್ಕಳು ಬಲವಂತವಾಗಿ ಅಧಿಕಾರದಿಂದ ಕೇಳಿ ಪಡೆಯುತ್ತಾರೆ. ಪೋಷಕರು ಈ ಮಕ್ಕಳ ಈ ಅಗತ್ಯವನ್ನು ಅರ್ಥಮಾಡಿಕೊಂಡು, ಗೌರವಿಸಬೇಕು.

8) ಚಿಕ್ಕ ವಯಸ್ಸಿನಲ್ಲಿ ಮುಟ್ಚಾದ ಮಕ್ಕಳು ದೈಹಿಕ ಬದಲಾವಣೆಗಳ ಬಗ್ಗೆ ಮಾನಸಿಕವಾದ (ಭಾವನಾತ್ಮಕವಾದ) ಸವಾಲುಗಳನ್ನು ತಮ್ಮದೇ ವಯಸ್ಸಿನ ಇತರರಿಗಿಂತಲೂ ಹೆಚ್ಚು ಎದುರಿಸಬಹುದು. ಭಾವನೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದಕ್ಕೆ ಹಿರಿಯರ ಅನುಕಂಪ, ಸಹಾನುಭೂತಿ , ಮಾರ್ಗದರ್ಶನ ಅಗತ್ಯ ಮತ್ತು ಅಮೂಲ್ಯ.

ನಿಮ್ಮ ಮಗಳಿಗೆ ನೀವು ಹೀಗೆ ನೆರವಾಗಬಹುದು

1) ಮಗಳನ್ನು ಓದಿನ ಜೊತೆಗೆ, ಇತರೆ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಿ. ವಿಶೇಷವಾಗಿ ಹೊರಾಂಗಣ ಆಟಗಳು. ಇದರಿಂದ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಗಮನವೂ ಸಹ ಆಟದ ಮೇಲೆ ಹೆಚ್ಚು ಕೇಂದ್ರಿಕೃತವಾಗುತ್ತದೆ. ದೈಹಿಕ ಬದಲಾವಣೆಗಳ ಮೇಲೆ ಹೆಚ್ಚು ಗಮನ ಹರಿಯುವುದಿಲ್ಲ.

2) ಹೆಣ್ಣುಮಕ್ಕಳ ಸಾಹಸ, ಧೈರ್ಯವನ್ನೊಳಗೊಂಡ, ಸಾಧನೆಗೆ ಪ್ರೇರೇಪಿಸುವ ಸಿನಿಮಾಗಳು, ಹೆಣ್ಣು ಮಕ್ಕಳ ಕ್ರೀಡೆಗಳು, ಮಹಿಳಾ ಸಾಧಕರ ಕಥೆಗಳು ಇರುವ ಸಿನಿಮಾ ತೋರಿಸಿ. ಇಂಥ ಪುಸ್ತಕಗಳನ್ನು ತಂದುಕೊಟ್ಟು ಓದಲು ಪ್ರೇರೇಪಿಸಿ. ಇದರಿಂದ ಅವಳಿಗೆ ಧೈರ್ಯ, ಉತ್ತೇಜನ ಮತ್ತು ಪ್ರೇರಣೆ ಸಿಗುತ್ತದೆ.

3) ಹಾಗೆಯೇ ನೀವು ಇಂತಹ ಬೆಳವಣಿಗೆಯನ್ನು ನಿಮ್ಮ ಚಿಕ್ಕಂದಿನ ದಿನಗಳಲ್ಲಿ ಹೇಗೆ ನಿಭಾಯಿಸಿದಿರಿ, ನಿಮ್ಮ ಅನುಭವವನ್ನು ನಿಮ್ಮ ಮಗಳ ಬಳಿ ಹಂಚಿಕೊಳ್ಳಿ. ಇದರಿಂದ ಮಗಳಿಗೆ ಮುಟ್ಟು ಎನ್ನುವುದು ಒಂದು ಸಹಜ ಮತ್ತು ಸ್ವಾಭಾವಿಕ ಕ್ರಿಯೆ, ಪ್ರತಿಯೊಂದು ಹೆಣ್ಣಿನ ಜೀವನದ ಭಾಗವೆಂದು ಒಪ್ಪಿಕೊಂಡು, ಮುನ್ನಡೆಯಲು ಸಹಾಯವಾಗುತ್ತದೆ

4) ಇಷ್ಟೆಲ್ಲ ಪ್ರಯತ್ನಗಳ ನಂತರವೂ ಮಗಳ ವರ್ತನೆ ಸುಧಾರಿಸದಿದ್ದರೆ ಅದನ್ನು ನಿರ್ಲಕ್ಷ್ಯ ಮಾಡದೆ ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ. ಮಾರ್ಗದರ್ಶನ ಪಡೆದುಕೆೊಳ್ಳಿ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಭವ್ಯಾ ವಿಶ್ವನಾಥ್ ಪರಿಚಯ

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯಮಿತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

mysore-dasara_Entry_Point