ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮಕ್ಕಳಿಗೆ ಮನೆ ಎಂಬುದು ಮನೆಯಾಗಿಯೇ ಇರಲಿ, ಇನ್ನೊಂದು ಶಾಲೆಯಾಗುವುದು ಬೇಡ -ಮನದ ಮಾತು

Parenting Tips: ಮಕ್ಕಳಿಗೆ ಮನೆ ಎಂಬುದು ಮನೆಯಾಗಿಯೇ ಇರಲಿ, ಇನ್ನೊಂದು ಶಾಲೆಯಾಗುವುದು ಬೇಡ -ಮನದ ಮಾತು

Relationship Tips: ನಿಮ್ಮ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ಸಾಕಷ್ಟು ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್. ನೆನಪಿರಲಿ ಪೋಷಕರೇ, ಮಕ್ಕಳಿಗೂ ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಆದರೆ ಅವರಿಗೆ ನಿಮ್ಮಂತೆ ಹೇಳಿಕೊಳ್ಳಲು ಆಗದಿರಬಹುದು ಅಷ್ಟೇ.

ಆಪ್ತ ಸಮಾಲೋಚಕಿ ಭವ್ಯ ವಿಶ್ವನಾಥ್
ಆಪ್ತ ಸಮಾಲೋಚಕಿ ಭವ್ಯ ವಿಶ್ವನಾಥ್

ಪ್ರಶ್ನೆ: ನನ್ನ ಮಗಳು ಈಗಿನ್ನೂ 3ನೇ ತರಗತಿ ಓದುತ್ತಿದ್ದಾಳೆ. ಇತ್ತೀಚೆಗೆ ಯಾಕೋ ಮಂಕಾಗಿ ಇರುತ್ತಾಳೆ. ಒಳ್ಳೇ ಸ್ಕೂಲ್‌ಗೆ ಸೇರಿಸಿದ್ದೀವಿ, ಟ್ಯೂಷನ್‌ಗೆ ಕಳಿಸ್ತೀವಿ, ಮನೆಯಲ್ಲೂ ಶಿಸ್ತಿನಿಂದ ಬೆಳೆಸಿದ್ದೀವಿ. ಆದರೂ ಒಳ್ಳೇ ಮಾರ್ಕ್ಸ್‌ ತೆಗೆಯಲ್ಲ. ಅವಳಿಗೆ ಏನಾಗಿರಬಹುದು? ಈ ಸಮಸ್ಯೆಗೊಂದು ಪರಿಹಾರ ಸೂಚಿಸಿ ಮೇಡಂ. (ರಂಗನಾಥ ಸ್ವಾಮಿ, ಮೈಸೂರು)

ಟ್ರೆಂಡಿಂಗ್​ ಸುದ್ದಿ

ಉತ್ತರ: ಶಾಲೆಗಳಲ್ಲಿ ಮಕ್ಕಳು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ಆದರೆ ಈ ಸವಾಲುಗಳ ಬಗ್ಗೆ ಮಾತನಾಡಲು ಭಯ ಮತ್ತು ಸಂಕೋಚದಿಂದ ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರ ಪಾತ್ರ ಬಹು ಮುಖ್ಯ. ಸವಾಲುಗಳನ್ನು ಎದುರಿಸುವುದಕ್ಕೆ ಮಕ್ಕಳಿಗೆ ಪೋಷಕರ ಸಹಾಯ ಅಗತ್ಯವಿದೆ. ಮನೆಯು ಮಕ್ಕಳಿಗೆ ಕಷ್ಟ ಸುಖ ಹಂಚಿಕೊಳ್ಳುವ, ಸಂಬಂಧಗಳನ್ನು ಬೆಸೆಯುವ, ನೊಂದ ಮನಸ್ಸುಗಳಿಗೆ ಮುದ ನೀಡುವ, ನೆಮ್ಮದಿ ನೀಡುವ ನೆಲೆಯಾಗಬೇಕು. ಮನೆಯ ವಾತಾವರಣ ಶಾಲೆಯಂತೆಯೇ ಆದರೆ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ.

ಪೋಷಕರು ಮಕ್ಕಳನ್ನು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ಮತ್ತು ಸುರಕ್ಷಿತ ವಾತಾವರಣ ನೀಡಬೇಕು. ಮಕ್ಕಳ ಮೇಲೆ ಅನುಕಂಪ ಮತ್ತು ಸಹಾನುಭೂತಿಯನ್ನು ತೋರಿಸಿದರೆ ಮಕ್ಕಳ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮಕ್ಕಳು ಸಹ ಕ್ರಮೇಣ ಪೋಷಕರಿಗೆ ಪ್ರೀತಿ ಮತ್ತು ಗೌರವ ತೋರುತ್ತಾರೆ.

ಶಾಲೆಯಲ್ಲಿ ಶಿಕ್ಷಕರು ವೃತ್ತಿ ನಿಯಮಾವಳಿಯನ್ನು ಪಾಲಿಸಿ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಹಾಗಾಗಿ ಮಕ್ಕಳ ಜೊತೆ ಸ್ವಲ್ಪ ಕಟ್ಟುನಿಟ್ಟಾಗಿ ವರ್ತಿಸುತ್ತಾರೆ, ಪ್ರತ್ಯೇಕವಾಗಿ ಪ್ರತಿಯೊಂದು ವಿದ್ಯಾರ್ಥಿಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಕ್ಕಳ ಸ್ವಭಾವ, ಆಸಕ್ತಿ, ಅಗತ್ಯ, ದೌರ್ಬಲ್ಯ, ಸಾಮರ್ಥ್ಯ ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಇಂತಹ ಕೊರತೆಗಳನ್ನು ಮನೆಯಲ್ಲಿ ಪೋಷಕರು ಪೂರೈಸಬೇಕು.

ಮಕ್ಕಳು ಮನೆಗೆ ಬಂದಾಗ ಪೋಷಕರು ಹೇಗೆ ವರ್ತಿಸಬೇಕು?

1) ನಗು ಮುಖದ ಸ್ವಾಗತ ಕೋರಿ: ಶಾಲೆಯಿಂದ ಮನೆಗೆ ಬಂದ ಮಕ್ಕಳನ್ನು ಪೋಷಕರು ನಗು ಮುಖದಿಂದ ಬರಮಾಡಿಕೊಳ್ಳಿ. ಮಕ್ಕಳು ಶಾಲೆಯಿಂದ ಮನೆಗೆ ತಲುಪಿದ ತಕ್ಷಣವೇ ಓದಿನ ಬಗ್ಗೆ, ಶಾಲೆಯ ಕುರಿತು ಪ್ರಶ್ನೆಗಳನ್ನು ಕೇಳಬೇಡಿ. ಇದರಿಂದ ಮಕ್ಕಳಿಗೆ ಕಿರಿಕಿರಿ, ಬೇಸರವಾಗುವ ಸಾಧ್ಯತೆ ಹೆಚ್ಚು. ಉದಾ: ಪರೀಕ್ಷೆ ಯಾವಾಗ? ಪರೀಕ್ಷೆ ಹೇಗಿತ್ತು? ಏನು ಹೋಮ್ ವರ್ಕ್ ಕೊಟ್ಟಿದ್ದಾರೆ? ಇತ್ಯಾದಿ ಪ್ರಶ್ನೆಗಳನ್ನು ತಕ್ಷಣಕ್ಕೆ ಕೇಳಬೇಡಿ.

2) ಓದಿನ ಬಗ್ಗೆ ಜಿಗುಪ್ಸೆ ತರಿಸಬೇಡಿ: ಮನೆಯಲ್ಲಿ ಸದಾ ಓದು ಮತ್ತು ಪರೀಕ್ಷೆಯ ಕುರಿತು ಮಾತನಾಡಬೇಡಿ. ಸದಾ ಓದಿನ ಬಗ್ಗೆ ಮಾತನಾಡುವುದರಿಂದ ಕೆಲ ಮಕ್ಕಳಿಗೆ ಓದಿನ ಬಗ್ಗೆ ಜಿಗುಪ್ಸೆ ಉಂಟಾಗಬಹುದು, ಒತ್ತಡ ಹೆಚ್ಚಾಗಬಹುದು. ಉದಾ: ನೀನು ಚೆನ್ನಾಗಿ ಓದಬೇಕು, ಪರೀಕ್ಷೆ ಚೆನ್ನಾಗಿ ಮಾಡಬೇಕು, ಓದಿದ್ದನ್ನು ನೆನಪು ಮಾಡಿಕೊ. ಒಳ್ಳೆ ಅಂಕ ಗಳಿಸಬೇಕು ಇತ್ಯಾದಿ ಮಾತುಗಳನ್ನು ಕಡಿಮೆ ಮಾಡಿ.

3) ಕೊರತೆಗಳನ್ನೇ ಸದಾ ಮಾತನಾಡಬೇಡಿ: ಮಕ್ಕಳ ಕೊರತೆಗಳ ಬಗ್ಗೆಯೇ ಹೆಚ್ಚು ಚರ್ಚಿಸುವುದು ತಪ್ಪು. ಕೆಲವು ಗುಣಗಳು ಮತ್ತೆಮತ್ತೆ ಹೇಳುವುದರಿಂದ ಹೆಚ್ಚಾಗುತ್ತವೆ ಉದಾ: ಓದಿದ್ದು ನೆನಪಿರುವುದಿಲ್ಲ, ಏಕಾಗ್ರತೆಯ ಕೊರತೆ ಇದೆ ಇತ್ಯಾದಿ ಮಾತನ್ನು ನೀವು ಪದೇಪದೆ ಆಡಿದರೆ ಮಕ್ಕಳು ತಮ್ಮ ಸಾಮರ್ಥ್ಯವೇ ಇಷ್ಟು ಎಂದುಕೊಳ್ಳುವ ಅಪಾಯ ಇದೆ.

4) ನಿಂದನೆ ಬೇಡ: ಮಕ್ಕಳು ತಪ್ಪು ಮಾಡಿದಾಗ ಪೋಷಕರು ಬುದ್ಧಿ ಹೇಳಬೇಕು. ಆದರೆ ಅತಿಯಾಗಿ ನಿಂದಿಸುವುದು ಮತ್ತು ದೂಷಿಸುವುದು ಬೇಡ. ಇದರಿಂದ ಮಕ್ಕಳಿಗೆ ತಮ್ಮ ಮೇಲೆ ಕೀಳರಿಮೆ ಉಂಟಾಗುತ್ತದೆ. ಪೋಷಕರು ಮತ್ತು ಮಕ್ಕಳ ನಡುವೆ ವಾದವಿವಾದ ಉಂಟಾಗಿ ಮನೆಯ ವಾತಾವರಣ ಕೆಡಬಹುದು.

5) ಅತಿ ಶಿಸ್ತು ಬೇಕಿಲ್ಲ: ಸಮಯಪಾಲನೆ ಅಥವಾ ಸಂಪ್ರದಾಯಗಳ ಹೆಸರಿನಲ್ಲಿ ಮನೆಯಲ್ಲಿ ಅತಿಯಾದ ಶಿಸ್ತು, ನಿಯಮಗಳನ್ನು ಮಕ್ಕಳ ಮೇಲೆ ಹೇರುವುದು ಬೇಡ. ಯಾಕೆಂದರೆ ಶಾಲೆಯಲ್ಲಿ, ಟ್ಯೂಷನ್ಸ್‌ ಕ್ಲಾಸ್‌ಗಳಲ್ಲಿ ಸಾಕಷ್ಟು ನಿಯಮಗಳು ಇರುತ್ತವೆ. ಮತ್ತೆ ಮನೆಯಲ್ಲಿಯೂ ಇಂಥದ್ದೇ ವಾತಾವರಣ ನಿರ್ಮಾಣವಾದರೆ ಮಕ್ಕಳಿಗೆ ಮಾನಸಿಕವಾಗಿ ಕಿರಿಕಿರಿಯಾಗುತ್ತದೆ

ಮನೆಯ ವಾತಾವರಣ ಹೀಗಿದ್ದರೆ ಒಳ್ಳೆಯದು

1) ಒತ್ತಡ ಸಲ್ಲದು: ಮನೆಯಲ್ಲಿ ಮಕ್ಕಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ. ಸ್ಕೂಲ್, ಟ್ಯೂಷನ್ಸ್, ಆಟ, ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಕೆಲ ಮಕ್ಕಳು ಎಲ್ಲವನ್ನೂ ಸರಿಯಾಗಿ ನಿರ್ವಹಿಸಲು ಆಗದೆ ದೊಡ್ಡವರಂತೆ ಮಾನಸಿಕ ಒತ್ತಡ ಎದುರಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಕೆಡುತ್ತದೆ. ಪೋಷಕರು ಗಮನವಿಟ್ಟು ಮಕ್ಕಳಿಗೆ ಸಹಾಯ ಮಾಡಬೇಕು. ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ನೆರವಾಗಬೇಕು.

2) ಸ್ವಾತಂತ್ರ್ಯ: ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ಸ್ವಾತಂತ್ರ್ಯ ಕೊಡಿ. ಪ್ರಶ್ನೆ ಕೇಳುವುದಕ್ಕೆ, ಚಿಕ್ಕ ಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು, ತಮ್ಮ ಭಾವನೆಗಳು ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ನೀಡಿದರೆ ಮಕ್ಕಳು ಭವಿಷ್ಯದಲ್ಲಿ ಜವಾಬ್ದಾರಿಯುತ ಮತ್ತು ಸ್ವಾವಲಂಬಿ ವ್ಯಕ್ತಿಗಳಾಗುವ ಸಾಧ್ಯತೆ ಇರುತ್ತದೆ.

3) ವಿರಾಮ: ಮನೆಯಲ್ಲಿ ಮಕ್ಕಳು ತುಸು ವಿರಾಮದ ಕ್ಷಣಗಳನ್ನು ಅನುಭವಿಸಬೇಕು. ಸದಾ ಚುರುಕಿನ ದಿನಚರಿಯಿಂದ ಉಂಟಾಗುವ ಒತ್ತಡವನ್ನು ವಿರಾಮದ ಕ್ಷಣಗಳು ಹಗುರ ಮಾಡುತ್ತವೆ. ಬಿಡುವಿನ ವೇಳೆಯಲ್ಲಿ ಮಕ್ಕಳನ್ನು ಅವರಿಗೆ ಇಷ್ಟವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ. ಕೆಲವೊಮ್ಮೆ ಅವರು ಏನೂ ಮಾಡದೆ ಸುಮ್ಮನೆ ಇದ್ದರೂ ಪರವಾಗಿಲ್ಲ. ಅವರಿಗೆ ಸ್ವಲ್ಪ ಬೋರ್ ಆಗುತ್ತಿದೆ ಎನಿಸಿದರೂ ಚಿಂತಿಸಬೇಡಿ, ಅವರಿಗೇ ನಿಭಾಯಿಸಿಕೊಳ್ಳಲು ಬಿಡಿ.

4) ಮುಕ್ತ ವಾತಾವರಣ ಇರಲಿ: ಮನೆಯಲ್ಲಿ ಶಾಂತಿಯುತ ಮತ್ತು ಮುಕ್ತ ವಾತಾವರಣ ನೆಲೆಗೊಳ್ಳುವುದು ಅತ್ಯಗತ್ಯ. ಮನೆಯ ವಾತಾವರಣ ಮಕ್ಕಳ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುವಂತೆ ಇಟ್ಟುಕೊಳ್ಳುವುದು ಪೋಷಕರ ಜವಾಬ್ದಾರಿ. ಶಾಲೆಯಲ್ಲಿ ಆಗಿರುವ ಒತ್ತಡವು ಮನೆಯಲ್ಲಿ ಶಮನವಾಗುವಂತೆ ಮನೆಯ ವಾತಾವರಣವಿರಲಿ. ಮತ್ತಷ್ಚು ಒತ್ತಡ ಹೆಚ್ಚಾಗುವಂತೆ ಇರುವುದು ಬೇಡ. ಪೋಷಕರ ಆತಂಕ, ಚಿಂತೆ, ಮಾನಸಿಕ ಒತ್ತಡವು ಮಕ್ಕಳಿಗೆ ವರ್ಗಾವಣೆಯಂತೆ ಆಗದಂತೆ ನೋಡಿಕೊಳ್ಳಿ. ಶಾಲೆಯಲ್ಲಿ ಬರುವ ಸವಾಲುಗಳ ಬಗ್ಗೆ, ತಮ್ಮ ಸಮಸ್ಯೆಗಳ ಕುರಿತು ಮುಕ್ತವಾಗಿ ಪೋಷಕರ ಬಳಿ ಹೇಳಿಕೊಳ್ಳುವ ಹಾಗೆ ಮುಕ್ತ ವಾತಾವರಣ ಇರಲಿ.

5) ಮಕ್ಕಳು ಮಾತು ಕೇಳಿಸಿಕೊಳ್ಳಿ: ಮಕ್ಕಳು ಪೋಷಕರ ಬಳಿ ತಮ್ಮ ಅನುಭವ, ಭಾವನೆಗಳನ್ನು ಹಂಚಿಕೊಳ್ಳುತಿರುವಾಗ ಮೊದಲು ಗಮನವಿಟ್ಟು ಕೇಳಿಸಿಕೊಳ್ಳಿ. ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸಿ. ನಂತರ ಸರಿ ತಪ್ಪುಗಳ ಬಗ್ಗೆ ವಿವರಿಸಿ. ಒಮ್ಮೊಮ್ಮೆ ಮಕ್ಕಳು ಮೌನದಲ್ಲೂ, ಹಾವ ಭಾವಗಳಲ್ಲಿಯೂ ಸಹ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಪೋಷಕರು ಇದನ್ನೆಲ್ಲ ಗಮನಿಸಬೇಕು . ಗಮನವಿಟ್ಟು ಕೇಳಿದಾಗ ಮಕ್ಕಳ ಮನಸ್ಥಿತಿಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಭಾವನೆಗಳ ಮೇಲೆ ಇರಲಿ ನಿಯಂತ್ರಣ

ಎಲ್ಲ ಪೋಷಕರಿಗೂ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು, ವಿದ್ಯಾವಂತರಾಗಬೇಕು, ಗುಣವಂತರಾಗಬೇಕು, ಜವಾಬ್ಧಾರಿಯುತ ಪ್ರಜೆಯಾಗಬೇಕು, ಸಮಾಜದಲ್ಲಿ ಏನಾದರು ಸಾಧಿಸಬೇಕೆಂಬ ಬಯಕೆ ಸಹಜವಾಗಿ ಇರುತ್ತದೆ. ಆದರೆ ಈ ಬಯಕೆಗಳೇ ಪೋಷಕರಲ್ಲಿ ಒಂದು ರೀತಿಯ ಒತ್ತಡ ಮತ್ತು ಆತಂಕವನ್ನುಂಟು ಮಾಡಿ ಪೋಷಕರ ನಡವಳಿಕೆ ಮತ್ತು ಮನೆಯ ವಾತಾವರಣದ ಮೇಲೆ ಪರಿಣಾಮ ಬೀಳುತ್ತದೆ. ಆದ್ದರಿಂದ ಪೋಷಕರು ತಮ್ಮ ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ತಮ್ಮ ನಡವಳಿಕೆಗಳ ಮೇಲೆಯೂ ಗಮನ ಹರಿಸಿಕೊಳ್ಳಬೇಕು. ಇನ್ನು ಮನೆಯ ವಾತಾವರಣದ ಮೇಲೆಯೂ ಸಹ ಗಮನ ವಹಿಸುವುದು ಬಹಳ ಮುಖ್ಯ. ಶಾಂತಿಯುತವಾದ ಮತ್ತು ಖುಷಿಯಾದ ವಾತಾವರಣ ಮಕ್ಕಳ ಮನಸ್ಸನ್ನು ಹುರಿದುಂಬಿಸುತ್ತದೆ. ಮನೆಯ ವಾತಾವರಣ ಕಲುಷಿತಗೊಂಡರೆ ಮಕ್ಕಳು ತಪ್ಪು ದಾರಿ ಹಿಡಿಯಬಹುದು, ಮಾನಸಿಕ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆಯೂ ಕೂಡ ದುಷ್ಪರಿಣಾಮ ಆಗಬಹುದು. ಆದ್ದರಿಂದ ಮನೆಯಲ್ಲಿ ಪೋಷಕರ ನಡೆ ನುಡಿ ಆಚಾರ ವಿಚಾರಗಳ ವಿಚಾರದಲ್ಲಿ ಎಚ್ಚರ ಇರಬೇಕು. ಇಲ್ಲವಾದರೆ ಮಕ್ಕಳ ಸಮಸ್ಯೆ ಮನೆಯಿಂದಲೆೇ ಪ್ರಾರಂಭವಾಗುತ್ತದೆ, ಮರೆಯಬೇಡಿ!

ಗಮನಿಸಿ: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).