ಕನ್ನಡ ಸುದ್ದಿ  /  ಜೀವನಶೈಲಿ  /  ಋತುಮತಿಯಾಗುವ ಮಗಳಿಗೆ ಯಾವೆಲ್ಲಾ ವಿಷಯ ಗೊತ್ತಿರಬೇಕು? ಅಮ್ಮನಾಗಿ ಇಂಥ ಪರಿಸ್ಥಿತಿ ಹೇಗೆ ನಿಭಾಯಿಸಲಿ -ಮನದ ಮಾತು

ಋತುಮತಿಯಾಗುವ ಮಗಳಿಗೆ ಯಾವೆಲ್ಲಾ ವಿಷಯ ಗೊತ್ತಿರಬೇಕು? ಅಮ್ಮನಾಗಿ ಇಂಥ ಪರಿಸ್ಥಿತಿ ಹೇಗೆ ನಿಭಾಯಿಸಲಿ -ಮನದ ಮಾತು

Parenting Tips: ಮಗಳಲ್ಲಿ ಋತುಮತಿಯಾಗುವ ಲಕ್ಷಣ ಕಂಡುಬಂದರೆ ತಾಯಿಗೆ ಸಂಭ್ರಮದೊಂದಿಗೆ ಆತಂಕವೂ ಶುರುವಾಗುತ್ತೆ. ಚರ್ಚೆಯೇ ಕಷ್ಟ ಎನಿಸುವ ವಿಷಯವನ್ನು ನಿಭಾಯಿಸುವುದು ಹೇಗೆ? ಇಂಥದ್ದೇ ಪ್ರಶ್ನೆಯೊಂದಕ್ಕೆ ಈ ಬರಹದಲ್ಲಿ ಉತ್ತರಿಸಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್. ಹೆಣ್ಣುಮಕ್ಕಳ ತಂದೆ-ತಾಯಂದಿರು ಓದಲೇಬೇಕಾದ ಬರಹ ಇದು.

ಭವ್ಯಾ ವಿಶ್ವನಾಥ್
ಭವ್ಯಾ ವಿಶ್ವನಾಥ್

Menstrual Cycle: ಪ್ರಶ್ನೆ- ಮೇಡಂ ನನ್ನ ಮಗಳು 8 ನೇ ತರಗತಿ. ಇನ್ನೇನು ಪರೀಕ್ಷೆಗಳು ಹತ್ತಿರದಲ್ಲಿವೆ. ಈ ಹಂತದಲ್ಲಿ ಅವಳು ಋತುಮತಿ ಆಗುವ ಲಕ್ಷಣಗಳು ಕಾಣಿಸುತ್ತಿವೆ. ನಮ್ಮ ಮನೆಯಲ್ಲಿ ಇಂಥ ವಿಚಾರಗಳನ್ನು ಮುಕ್ತವಾಗಿ ಮಾತನಾಡಲು ಆಗುವುದಿಲ್ಲ. ನಾನು ಅವಳಿಗೆ ಯಾವೆಲ್ಲ ವಿಷಯಗಳನ್ನು ತಿಳಿಸಿರಬೇಕು. ಇಂಥ ಸಂವಾದವನ್ನು ಹೇಗೆ ಆರಂಭಿಸಬಹುದು ತಿಳಿಯುತ್ತಿಲ್ಲ. ದಯವಿಟ್ಟು ಮಾರ್ಗದರ್ಶನ ಮಾಡಿ. -ಲಾವಣ್ಯ, ಮುಳಬಾಗಲು

ಟ್ರೆಂಡಿಂಗ್​ ಸುದ್ದಿ

ಉತ್ತರ: ಇಷ್ಟು ಕಾಲ ಆರಾಮವಾಗಿ ನಿಮ್ಮ ಮುಂದೆ ಆಟವಾಡಿಕೊಂಡಿದ್ದ ಮಗಳು ಈಗ ಇನ್ನೊಂದು ಹಂತದ ಬೆಳವಣಿಗೆಗೆ ಕಾಲು ಇಡುತ್ತಿದ್ದಾಳೆ. ನಿಮ್ಮ ಮಗಳನ್ನು ನೋಡಿ ನಿಮಗೆ ಆತಂಕವಾಗುತ್ತಿರುವುದು ಸಹಜ. ಹೆಚ್ಚಾಗಿ, ಪರೀಕ್ಷೆಯೂ ಸಮೀಪದಲ್ಲೇ ಇರುವುದರಿಂದ ನಿಮಗೆ ಇನ್ನಷ್ಟು ದುಗುಡವಾಗುತ್ತಿರಬಹುದು. ನಿಮ್ಮ ಮಗಳ ಮೇಲಿರುವ ಕಾಳಜಿ ಮತ್ತು ಪ್ರೀತಿಯಿಂದಲೇ ನಿಮಗೆ ಈ ರೀತಿಯ ಆತಂಕ ಮತ್ತು ಉದ್ವೇಗವಾಗುತ್ತಿದೆ. ಒಂದು ಕಡೆ ಅವಳ ಪರೀಕ್ಷೆಯ ಮೇಲೆ ಪರಿಣಾಮ ಬಿದ್ದರೆ ಹೇಗೆ ಎನ್ನುವ ಆತಂಕ ನಿಮ್ಮನ್ನು ಕಾಡುತ್ತಿದೆ. ಇನ್ನೊಂದು ಕಡೆ ಅವಳ ಬಳಿ ಋತುಸ್ರಾವ (ಮುಟ್ಟು) ಕುರಿತು ಹೇಗೆ ಮತ್ತು ಯಾವ ಸಮಯದಲ್ಲಿ ಮಾತನಾಡುವುದೆಂದು ನಿಮಗೆ ಗೊಂದಲ ಕಾಡುತ್ತಿದೆ. ಮನೆಯಲ್ಲಿ ಇಂಥ ವಿಚಾರಗಳನ್ನು ಮುಕ್ತವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲವೆಂದು ಬೇಸರವೂ ಇದೆ. ಆದರೆ ಚಿಂತೆ ಮಾಡಬೇಡಿ, ಖಂಡಿತವಾಗಿಯೂ ನಿಮ್ಮ ಸಮಸ್ಯೆಗೆ ಪರಿಹಾರವಿದೆ.

ಹೆಣ್ಣುಮಗಳಾಗಿ ವೈಯಕ್ತಿಕವಾಗಿ ನೀವು ಸಹ ಈ ಹಂತವನ್ನು ದಾಟಿ ಬಂದಿದ್ದೀರಿ. ನೀವು ಚಿಕ್ಕ ವಯ್ಯಸ್ಸಿನಲ್ಲಿ ಹೇಗೆ ನಿಭಾಯಿಸಿದಿರಿ? ನಿಮ್ಮ ತಾಯಿ ಅಥವಾ ಮನೆಯ ಹಿರಿಯರು ಹೇಗೆ ಇದರ ಕುರಿತು ತಿಳಿವಳಿಕೆ ನೀಡಿದರು? ಒಮ್ಮೆ ಕುಳಿತು ಯೋಚಿಸಿ. ನಿಮಗೆ ಒಂದಿಷ್ಟು ಸಮಾಧಾನ ಸಿಗುತ್ತದೆ, ದಾರಿಯೂ ಕಾಣುತ್ತದೆ. ಋತುಮತಿ ಆಗುವುದು ಪ್ರತಿಯೊಂದು ಹೆಣ್ಣಿನ ಜೀವನದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದು ಹೆಣ್ಣು ಮಕ್ಕಳ ಬೆಳವಣಿಗೆಯ ಪ್ರಮುಖ ತಿರುವು. ದೈಹಿಕವಾಗಿ ಬದಲಾವಣೆಗಳನ್ನು ಹೊಂದುವುದರ ಜೊತೆಗೆ ಮಾನಸಿಕವಾಗಿಯೂ ಸಹ ಬದಲಾವಣೆಗಳನ್ನು ಹೊಂದುತ್ತಾಳೆ. ಆದ ಕಾರಣ ಈ ಹಂತದಲ್ಲಿ ಮಕ್ಕಳ ದೇಹ ಮತ್ತು ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ.

ನಿಮ್ಮ ಮಗಳು 8ನೇ ತರಗತಿಯಲ್ಲಿಯಿದ್ದು ಋತುಮತಿ ಆಗುವ ಲಕ್ಷಣಗಳು ಸಹ ಕಾಣಿಸುತ್ತಿವೆ ಎಂದರೆ ಸರಿಯಾದ ವಯಸ್ಸಿನಲ್ಲಿಯೇ ಆಗುತ್ತಿದೆ ಎಂದು ಅರ್ಥ. ಬಹಳ ಬೇಗನೆಯೂ ಅಲ್ಲ ಅಥವಾ ನಿಧಾನವೂ ಅಲ್ಲ. ಬಾಲ್ಯದ ವಯಸ್ಸಿನಿಂದ ಆಚೆ ಬಂದಿದ್ದು, ಆಕೆಯ ದೇಹವು ಸಹ ಋತುಮತಿಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿರುತ್ತದೆ. ಹಾಗಾಗಿ ನೀವು ಭಯ ಅಥವಾ ಗಾಬರಿ ಆಗುವ ಅವಶ್ಯಕತೆಯಿಲ್ಲ. ನೀವು ಯಾವುದೇ ಸಂಕೋಚವಿಲ್ಲದೆ ಮಗಳಿಗೆ ಸೂಕ್ತ ಸಮಯ ನೋಡಿ ಮುಟ್ಟಿನ ಬಗ್ಗೆ ಮಾತಾನಾಡಿ. ಅದರ ಬಗ್ಗೆ ಅರಿವು ಮೂಡಿಸಿ. ಆರಂಭದಲ್ಲಿ ಅವಳಿಗೆ ಮುಜುಗರ, ಸಂಕೋಚ, ಭಯ, ಕೋಪ ಆಗಬಹುದು. ನೀವು ಇವೆಲ್ಲವನ್ನೂ ಗಮನಿಸಿ. ಆದರೆ ಹೀಗೆ ಭಾವಿಸಬೇಡವೆಂದು ಮಗಳಿಗೆ ಹೇಳಬೇಡಿ.

ಯಾಕೆಂದರೆ ಮಕ್ಕಳಿಗೆ ಈ ವಿಷಯ ಹೊಸತು ಮತ್ತು ವಿಚಿತ್ರವೂ ಆಗಿರುತ್ತದೆ. ಹಾಗಾಗಿ ಇವೆಲ್ಲಾ ಭಾವನೆಗಳು ಸಹಜ ಮತ್ತು ಸ್ವಾಭಾವಿಕವಾಗಿ ಆಗುವಂತಹದು. ಕ್ರಮೇಣವಾಗಿ, ಅವರು ಈ ಬದಲಾವಣೆಗಳನ್ನು ಆರೋಗ್ಯಕರ ಮತ್ತು ಸ್ವಾಭಾವಿಕ ಬೆಳವಣಿಗೆಯೆಂದು ಅರ್ಥ ಮಾಡಿಕೊಂಡು ಹೊಂದಿಕೊಳ್ಳುತ್ತಾರೆ. ಒಂದು ಪಕ್ಷ ನಿಮ್ಮ ಮಗಳು ಈ ವಿಷಯದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದರೆ, ಶಾಂತವಾಗಿ ಸಂಯಮದಿಂದ ಉತ್ತರಿಸಿ. ಅವಳ ಎಲ್ಲಾ ಸಂಶಯ, ಕುತೂಹಲವನ್ನು ಮುಕ್ತವಾಗಿ ಯಾವ ಸಂಕೋಚವಿಲ್ಲದೆ ನಿಮ್ಮ ಬಳಿ ಹೇಳಿಕೆೊಳ್ಳಬಹುದೆಂದು ಭರವಸೆ ನೀಡಿ.

ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ 5ನೇ ತರಗತಿಯಿಂದಲೇ ಮಕ್ಕಳಿಗೆ ಋತುಸ್ರಾವದ ಕುರಿತು ಕಾರ್ಯಾಗಾರಗಳ ಮೂಲಕ ಪರಿಚಯಿಸುತ್ತಾರೆ. ಪ್ರಾಯೋಗಿಕವಾಗಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತಾರೆ. ಆದ್ದರಿಂದ ನಿಮ್ಮ ಮಗಳಿಗೆ ಮುಟ್ಟಿನ ಕುರಿತು ಏನಾದರೂ ಮಾಹಿತಿ ಇದೆಯೇ ಎಂದು ಕೇಳಿನೋಡಿ. ಅಥವಾ ಸ್ನೇಹಿತರ ಜೊತೆಯೂ ಸ್ವಲ್ಪ ಮಾಹಿತಿ ಅಥವ ಚರ್ಚೆ ಆಗಿರಬಹುದು. ನಿಮಗೆ ಗೊತ್ತಿದ್ದನ್ನು ಹೇಳುವ ಮೊದಲು ಒಮ್ಮೆ ಮಗಳಿಗೆ ಏನಾದರೂ ಗೊತ್ತಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ಸ್ವಲ್ಪ ಮಟ್ಟಿಗೆ ಗೊತ್ತಿದ್ದರೆ, ಅದು ಸರಿಯಾದ ಮಾಹಿತಿಯೇ ಎಂದು ಅವಲೋಕಿಸಿ. ತಪ್ಪುಗಳಿದ್ದರೆ ಅಥವಾ ಮಾಹಿತಿಯಲ್ಲಿ ಕೊರತೆಯಿದ್ದರೆ ನೀವು ತಿದ್ದಬಹುದು.

ಋತುಚಕ್ರದ ಬಗ್ಗೆ ನಿಮ್ಮ ಮಗಳಿಗೆ ಈ 3 ಅಂಶಗಳನ್ನು ತಿಳಿಸಿಕೊಡಿ

ಋತುಮತಿ ಆಗುವ ಮೊದಲು ಅದರ ಬಗ್ಗೆ ಚರ್ಚೆ ಪ್ರಾರಂಭಿಸುವುದರಿಂದ ಮಕ್ಕಳಿಗೆ ಆ ಸಮಯ ಬಂದಾಗ ನಿಭಾಯಿಸುವುದು ಸುಲಭವಾಗುತ್ತದೆ. ಒಂದು ವೇಳೆ ನಿಮ್ಮ ಮಗಳಿಗೆ ಮುಟ್ಟಿನ ಬಗ್ಗೆ ಮಾಹಿತಿಯಿಲ್ಲವಾದರೆ, ಹೀಗೆ ವಿವರಿಸಿ:

1) ವಿವರ: ಋತುಚಕ್ರದ ಸಮಯದಲ್ಲಿ ನಿಜವಾಗಿ ಏನಾಗುತ್ತದೆ ಎಂದು ವೈಜ್ಞಾನಿಕವಾಗಿ ವಿವರಿಸಿ

2) ಅಗತ್ಯ ಮಾಹಿತಿ: ⁠ಮುಟ್ಟು ಎಂದರೇನು, ಇದರ ಮಹತ್ವ ಮತ್ತು ಯಾವಾಗ ಪ್ರಾರಂಭವಾಗುತ್ತದೆ, ಅದು ಎಷ್ಟು ಕಾಲ ಇರುತ್ತದೆ.. ಇತ್ಯಾದಿ

3) ⁠ನೈರ್ಮಲ್ಯ: ಮುಟ್ಟಿನ ಸಮಯದಲ್ಲಿ ನೈರ್ಮಲ್ಯವು ಅತ್ಯಂತ ಪ್ರಮುಖ ಅಂಶ. ನೈಮ೯ಲ್ಯದ ಕೊರತೆಯಿದ್ದಲ್ಲಿ ಸೋಂಕುಗಳಿಗೆ ಕಾರಣವಾಗಬಹುದು. ಆದ್ದರಿಂದ ಯಾವ ರೀತಿಯಲ್ಲಿ ದೇಹದ ಸ್ವಚ್ಚತೆ ಕಾಪಾಡಿಕೊಳ್ಳಬೇಕೆಂದು ವಿವರಿಸಿ.

ಅವಳ ಆತಂಕ ದೂರ ಮಾಡಲು ಈ 3 ಅಂಶಗಳನ್ನು ಗಮನಿಸಿ

1) ಆತಂಕ ಬೇಡ: ಒಂದು ಪಕ್ಷ ಅವಳ ಪರೀಕ್ಷೆ ಹತ್ತಿರವಿರುವಾಗಲೇ ಅವಳು ಋತುಮತಿಯಾದರೆ ಎನ್ನುವ ಆತಂಕ ನಿಮಗಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ. ಸಮಸ್ಯೆ ಬಗ್ಗೆ ಅತಿಯಾಗಿ ಚಿಂತಿಸುವುದರ ಬದಲು ಅದನ್ನು ನಿರ್ವಹಿಸುವ ಕಡೆಗೆ ಗಮನ ಹರಸಿದಾಗ ಆತಂಕ ದುಗುಡ ಕಡಿಮೆಯಾಗುತ್ತದೆ.

2) ಮಗಳನ್ನು ಸದೃಢಗೊಳಿಸಿ: ಮುಟ್ಚಿನ ಕುರಿತು ಮಗಳಲ್ಲಿ ಭಯ ಹುಟ್ಟಿಸಬೇಡಿ. ಎಂದಿನಂತೆ ಸಹಜ ಸ್ಥಿತಿಯಲ್ಲಿ ಅವಳೊಂದಿಗೆ ವರ್ತಿಸಿ. ಅವಳನ್ನು ಮಾನಸಿಕ ಸಿದ್ಧತೆ ಮತ್ತು ದೈಹಿಕವಾಗಿ ಸಧೃಢಗೊಳಿಸಿ. ಶಾಲೆಯಲ್ಲಿ ಪರೀಕ್ಷೆ ವೇಳೆಯಲ್ಲೇ ಮಗಳು ಋತುಮತಿಯಾದರೆ ಎಂಬ ಪ್ರಶ್ನೆ ನಿಮಗಿರಬಹುದು. ನೀವು ಮುಂಚೆಯೇ ಶಿಕ್ಷಕರಿಗೆ ಮಗಳ ಕುರಿತು ತಿಳಿಸುವುದು ಒಳ್ಳೆಯದು. ಮಗಳಿಗೂ ಅಷ್ಟೇ, ಅಂಥ ಸಂದರ್ಭದಲ್ಲಿ ಭಯ ಅಥವಾ ಆತಂಕಗೊಳ್ಳದೆ ಶಿಕ್ಷಕರಿಗೆ ತಕ್ಷಣ ತಿಳಿಸು, ಅವರು ಸಹಾಯ ಮಾಡುತ್ತಾರೆ ಎಂದು ಮಗಳಿಗೂ ಹೇಳಿಕೊಡಿ. ಇದರಿಂದ ಅವಳಿಗೆ ನೆಮ್ಮದಿ ಸಿಗುತ್ತದೆ.

3) ಮನೆಯಲ್ಲಿ ಮುಕ್ತ ವಾತಾವರಣ ಇರಲಿ: ಮನೆಯ ಇತರ ಸದಸ್ಯರಿಗೆ ಋತುಸ್ರಾವದ ಮಹತ್ವ ಮತ್ತು ಇದು ಒಂದು ಸ್ವಾಭಾವಿಕ ಕ್ರಿಯೆಯೆಂದು ವಿವರಿಸಿ. ಇದರ ಬಗ್ಗೆ ಮಾತನಾಡುವುದು ಸಂಕೋಚದ ವಿಷಯವಲ್ಲ, ಮುಕ್ತವಾಗಿ ಮಕ್ಕಳ ಬಳಿ ಮಾತನಾಡಿ ಅರಿವು ಮೂಡಿಸುವುದರಿಂದ ಮಕ್ಕಳಿಗೆ ಮುಟ್ಟಿನಿಂದಾಗುವ ಮಾನಸಿಕ, ದೈಹಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾದ ಅನಾರೋಗ್ಯಕರ ಬದಲಾವಣೆಯನ್ನು ತಡೆಯಬಹುದು.

ಮೇಲಿನ ಎಲ್ಲ ಅಂಶಗಳ ಜೊತೆಗೆ ಮತ್ತೊಂದು ವಿಷಯ ಮಕ್ಕಳಲ್ಲಿ ಆದಷ್ಟು ಋತುಸ್ತ್ರಾವದ ಬಗ್ಗೆ ಚರ್ಚೆಯನ್ನು ಪ್ರೋತ್ಸಾಹಿಸುವುದು ನಿಮ್ಮ ಜವಾಬ್ದಾರಿ. ಮಕ್ಕಳ ಆರೋಗ್ಯಕರ ಬೆಳವಣಿಗೆ ಮತ್ತು ಭವಿಷ್ಯಕ್ಕೆ ನಾಂದಿಯಾಗುತ್ತದೆ.

---

ಗಮನಿಸಿ: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.