ಭಾರತದಲ್ಲಿ ಏರಿಕೆಯಾಗುತ್ತಿದೆ ಅವಧಿ ಪೂರ್ವ ಪ್ರೌಢಾವಸ್ಥೆಯ ಪ್ರಮಾಣ; ಬಾಲಪ್ರೌಢಿಮೆಯ ಕುರಿತು ಪ್ರತಿ ಪೋಷಕರು ತಿಳಿದಿರಲೇಬೇಕಾದ ಮಾಹಿತಿಯಿದು
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದಲ್ಲಿ ಏರಿಕೆಯಾಗುತ್ತಿದೆ ಅವಧಿ ಪೂರ್ವ ಪ್ರೌಢಾವಸ್ಥೆಯ ಪ್ರಮಾಣ; ಬಾಲಪ್ರೌಢಿಮೆಯ ಕುರಿತು ಪ್ರತಿ ಪೋಷಕರು ತಿಳಿದಿರಲೇಬೇಕಾದ ಮಾಹಿತಿಯಿದು

ಭಾರತದಲ್ಲಿ ಏರಿಕೆಯಾಗುತ್ತಿದೆ ಅವಧಿ ಪೂರ್ವ ಪ್ರೌಢಾವಸ್ಥೆಯ ಪ್ರಮಾಣ; ಬಾಲಪ್ರೌಢಿಮೆಯ ಕುರಿತು ಪ್ರತಿ ಪೋಷಕರು ತಿಳಿದಿರಲೇಬೇಕಾದ ಮಾಹಿತಿಯಿದು

ಭಾರತದಲ್ಲಿ ಮಕ್ಕಳು ಅವಧಿಗಿಂತ ಮುಂಚೆ ಪ್ರೌಢಾವಸ್ಥೆಗೆ ಕಾಲಿರಿಸುತ್ತಿದ್ದಾರೆ. 8 ರಿಂದ 9 ವಯಸ್ಸಿನ ಮಕ್ಕಳು ಪ್ರೌಢರಾಗುತ್ತಿದ್ದಾರೆ. ಕೋವಿಡ್‌ ಸಾಂಕ್ರಾಮಿಕದ ಬಳಿಕ ಇದರ ಪ್ರಮಾಣ ಭಾರಿ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣ, ಮಕ್ಕಳ ಅಕಾಲಿಕ ಪ್ರೌಢವಸ್ಥೆಯ ಲಕ್ಷಣಗಳ ಬಗ್ಗೆ ಪ್ರತಿ ಷೋಷಕರು ತಿಳಿದಿರಲೇಬೇಕಾದ ವಿಚಾರಗಳಿವು.

ಬಾಲಪ್ರೌಢಿಮೆಗೆ ಕಾರಣ, ಲಕ್ಷಣಗಳ ಕುರಿತು ಪೋಷಕರು ತಿಳಿದಿರಲೇಬೇಕಾದ ಮಾಹಿತಿಯಿದು
ಬಾಲಪ್ರೌಢಿಮೆಗೆ ಕಾರಣ, ಲಕ್ಷಣಗಳ ಕುರಿತು ಪೋಷಕರು ತಿಳಿದಿರಲೇಬೇಕಾದ ಮಾಹಿತಿಯಿದು

ಮಕ್ಕಳು ಪ್ರೌಢಾವಸ್ಥೆಗೆ ತಲುಪುವುದು ಪೋಷಕರಿಗೆ ಸಂತೋಷದ ಜೊತೆಗೆ ಭಯ, ಆತಂಕ ಹಾಗೂ ಇಲ್ಲದ ಗೊಂದಲಗಳು ಕಾಡುವ ಕಾಲಘಟ್ಟ. ಹಿಂದೆಲ್ಲಾ 14,15 ವರ್ಷದ ಮೇಲಷ್ಟೇ ಮಕ್ಕಳಲ್ಲಿ ಪ್ರೌಢಾವಸ್ಥೆಯ ಲಕ್ಷಣಗಳು ಗೋಚರವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು 7 ರಿಂದ 8 ವರ್ಷಕ್ಕೆ ಕಾಲಿಡುತ್ತಿದ್ದಂತೆ ಪ್ರೌಢರಾಗುತ್ತಿದ್ದಾರೆ. ಅದರಲ್ಲೂ ಭಾರತದಲ್ಲಿ ಕೋವಿಡ್‌ ಕಾಲಘಟ್ಟದ ನಂತರ ಬಾಲ ಪ್ರೌಢಿಮೆಯ ಪ್ರಮಾಣ ಏರಿಕೆಯಾಗಿದೆ ಎಂಬ ಅಂಶವೊಂದು ಈಗ ಬೆಳಕಿಗೆ ಬಂದಿದೆ. ಅಲ್ಲದೆ ಇದಕ್ಕೆ ಉತ್ತರ ಕಂಡುಕೊಳ್ಳಲು ಐಸಿಎಂಆರ್‌ (ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌) ಯೋಜನೆಯೊಂದನ್ನು ರೂಪಿಸಿದೆ.

ಬಾಲ ಪ್ರೌಢಿಮೆ ಅಥವಾ ಅಕಾಲಿಕ ಪ್ರೌಢಾವಸ್ಥೆ ಎನ್ನುವುದು ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳು ಇಬ್ಬರಲ್ಲೂ ಕಾಣಿಸುತ್ತಿದೆ. ಹೆಣ್ಣುಮಕ್ಕಳು 8 ವರ್ಷಕ್ಕೆ ಪ್ರೌಢಾವಸ್ಥೆಗೆ ಕಾಲಿಟ್ಟರೆ ಗಂಡು ಮಕ್ಕಳು 9 ವರ್ಷಕ್ಕಿಂತ ಮೊದಲೇ ಪ್ರೌಢಾವಸ್ಥೆ ತಲುಪುತ್ತಿದ್ದಾರೆ.

ಏನಿದು ಬಾಲಪ್ರೌಢಿಮೆ?

ಬಾಲಪ್ರೌಢಿಮೆಯನ್ನು ಆಂಗ್ಲಭಾಷೆಯಲ್ಲಿ ಪ್ರಿಕಾಷಿಯಸ್‌ ಪ್ಯೂಬರ್ಟಿ ಅಥವಾ ಅರ್ಲಿ ಪ್ಯೂಬರ್ಟಿ ಎಂದು ಕರೆಯುತ್ತಾರೆ. ಬಾಲ ಪ್ರೌಢಿಮೆ ಎಂದರೆ ಮಕ್ಕಳ ದೇಹದಲ್ಲಿ ಬಹಳ ಬೇಗನೆ ಪ್ರೌಢ ಲಕ್ಷಣಗಳು ಕಾಣಿಸುವುದು. ಈ ಸಮಯದಲ್ಲಿ ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಚಾರಗಳಲ್ಲಿ ಹಲವು ಬದಲಾವಣೆಗಳಾಗುತ್ತವೆ. ವಿದೇಶಗಳಲ್ಲಿ ಕೆಲ ವರ್ಷಗಳಿಂದೇಚೆಗೆ ಸಾಮಾನ್ಯ ಎಂಬಂತಿದ್ದ ಬಾಲಪ್ರೌಢಿಮೆಯ ಪ್ರಮಾಣವು ಕೋವಿಡ್‌ ಕಾಲಘಟ್ಟದ ನಂತರ ಭಾರತದಲ್ಲೂ ಕಾಣಿಸುತ್ತಿದೆ.

ಮಕ್ಕಳು ಪ್ರೌಢಾವಸ್ಥೆಗೆ ಕಾಲಿರಿಸಿದ ತಕ್ಷಣ ಅವರ ಸ್ನಾಯುಗಳು ಹಾಗೂ ಮೂಳೆಗಳಲ್ಲಿ ತ್ವರಿತ ಬೆಳವಣಿಗೆ ಕಾಣಿಸುತ್ತದೆ. ದೇಹ ಆಕಾರ ಹಾಗೂ ಗಾತ್ರ ಎರಡೂ ಬದಲಾಗುತ್ತದೆ.

ಅದೇನೆಂದರೆ ಇದ್ದರೂ ಮಕ್ಕಳಲ್ಲಿ ಅಕಾಲಿಕ ಪ್ರೌಢಾವಸ್ಥೆ ಹೆಚ್ಚಲು ಕಾರಣ ಏನು ಎಂಬುದರ ಬಗ್ಗೆ ಈವರೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಬಹಳ ಅಪರೂಪ ಎಂಬಂತೆ, ಸೋಂಕುಗಳು, ಹಾರ್ಮೋನ್‌ ಸಮಸ್ಯೆಗಳು, ಗಡ್ಡೆಗಳು ಅಥವಾ ಮೆದುಳಿನ ಗಾಯದಂತಹ ಪರಿಸ್ಥಿತಿಗಳು ಅಕಾಲಿಕ ಪ್ರೌಢಾವಸ್ಥೆಗೆ ಕಾರಣವಾಗಬಹುದು.

ಬಾಲ ಪ್ರೌಢಿಮೆಯ ಲಕ್ಷಣಗಳು

* ಹುಡುಗಿರಯಲ್ಲಿ ಋತುಚಕ್ರ ಆರಂಭವಾಗುವುದು ಹಾಗೂ ಸ್ತನಗಳ ಬೆಳವಣಿಗೆ.

* ಹುಡುಗರಲ್ಲಿ ವೃಷಣ ಹಾಗೂ ಶಿಶ್ನ ಬೆಳವಣಿಗೆ. ಮುಖದ ಮೇಲೆ ಕೂದಲು ಮೂಡಲು ಆರಂಭವಾಗುವುದು. ಧ್ವನಿಯ ಬದಲಾವಣೆ.

* ಖಾಸಗಿ ಭಾಗ ಹಾಗೂ ಕುಂಕುಳಿನ ಕೆಳಗೆ ಕೂದಲು ಹುಟ್ಟುವುದು

* ವೇಗದ ಬೆಳವಣಿಗೆ

* ಮೊಡವೆ

* ದೇಹದಲ್ಲಿ ಒಂದು ರೀತಿಯ ವಾಸನೆ.

ಕಾರಣಗಳು

ಬಾಲಪ್ರೌಢಿಮೆಗೆ ಕಾರಣಗಳು ಹಲವು. ಆದರೆ ಇದಕ್ಕೆ ಇಂಥಹದ್ದೇ ಕಾರಣ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದಾದರೂ ಈ ಕೆಳಗಿನ ಕಾರಣಗಳು ಸೇರಿಕೊಳ್ಳುತ್ತವೆ.

* ದೇಹ ಪ್ರಕೃತಿ

* ಅನುವಂಶೀಯತೆ

* ಅಂಗರಚನೆಯಲ್ಲಿನ ವ್ಯತ್ಯಾಸ, ಆಹಾರ ಪದ್ಧತಿ

* ಜೀವನಕ್ರಮ

* ಸ್ಥೂಲಕಾಯತೆ

* ಆರೋಗ್ಯ ಸಮಸ್ಯೆ

ಈ ಎಲ್ಲಾ ಅಂಶಗಳ ಜೊತೆಗೆ ವೈದ್ಯಕೀಯ ವಿಚಾರಕ್ಕೆ ಬರುವುದಾದರೆ ಥೈರಾಯ್ಡ್‌, ಟೆಸ್ಟೋಸ್ಟಿರಾನ್‌ ಹಾಗೂ ಈಸ್ಟ್ರೋಜನ್‌ ಹಾರ್ಮೋನ್‌ಗಳ ವ್ಯತ್ಯಯದಿಂದಲೂ ಮಕ್ಕಳು ಅಕಾಲಿಕ ಪ್ರೌಥವಸ್ಥೆಗೆ ಕಾಲಿರಿಸಿಬಹುದು.

ಅಡ್ಡ ಪರಿಣಾಮಗಳು

ಬಾಲಪ್ರೌಢಿಮೆಯಿಂದ ಗಂಭೀರವಾದ ಅಡ್ಡಪರಿಣಾಮಗಳು ಏನು ಇಲ್ಲದೇ ಹೋದರು ಕೆಲವೊಮ್ಮೆ ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದು.

* ಆರಂಭದಲ್ಲಿ ವೇಗವಾಗಿ ಬೆಳೆಯುವ ಮಕ್ಕಳಲ್ಲಿ ನಂತರ ಬೆಳವಣಿಗೆ ಕುಂಠಿತವಾಗಬಹುದು.

* ಕೆಲವು ಮಕ್ಕಳಿಗೆ ಮಾನಸಿಕ ಸಮಸ್ಯೆಗಳು ಎದುರಾಗಬಹುದು.

* ಬೇಗನೆ ಪ್ರೌಢಾವಸ್ಥೆಗೆ ಪ್ರವೇಶ ಮಾಡುವುದರಿಂದ ಆತಂಕ, ಖಿನ್ನತೆಯಂತಹ ಸಮಸ್ಯೆ ಕೂಡ ಹೆಚ್ಚಬಹದು.

ಪೋಷಕರಿಗೆ ಸಲಹೆ

* ಮಕ್ಕಳು 7-8 ವರ್ಷಕ್ಕೆ ಕಾಲಿರಿಸಿದಾಗ ಪ್ರೌಢಾವಸ್ಥೆಗೆ ಬಗ್ಗೆ ಪಾಠ ಮಾಡಿ. ಪ್ರೌಢಾವಸ್ಥೆ ತಲುಪಿದ ಮೇಲೆ ದೇಹ ಹಾಗೂ ಮನಸ್ಸಿನಲ್ಲಿ ಆಗುವ ಬದಲಾವಣೆಗಳ ಬಗ್ಗೆ ವಿವರವಾಗಿ ತಿಳಿಸಿ.

* ಮುಟ್ಟಿನ ಬಗ್ಗೆ ಹೆಣ್ಣುಮಕ್ಕಳಲ್ಲಿ ಅರಿವು ಮೂಡಿಸಿ.

* ಮಕ್ಕಳ ಬೆಳವಣಿಗೆಯ ಮೇಲೆ ಗಮನ ಇಡಿ.

* ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡರೂ ವೈದ್ಯರಿಗೆ ತೋರಿಸಿ.

* ಹೆಣ್ಣುಮಕ್ಕಳು ಪ್ರೌಢವಸ್ಥೆಗೆ ಬಂದ ಮೇಲೆ ಯಾವ ರೀತಿ ಎಚ್ಚರ ವಹಿಸಬೇಕು ಎಂಬುದನ್ನು ವಿವರವಾಗಿ ತಿಳಿಸಿ.

* ಗಂಡುಮಕ್ಕಳಿಗೆ ಹೆಣ್ಣುಮಕ್ಕಳ ಜೊತೆ ವರ್ತನೆ ಹೇಗಿರಬೇಕು ಎಂಬುದನ್ನು ವಿವರಿಸಿ.

Whats_app_banner