logo
ಕನ್ನಡ ಸುದ್ದಿ  /  ಜೀವನಶೈಲಿ  /  Halli Baduku: ತಾಜಾ ಮೀನುಗಳಿಗೆ ಹೆಸರುವಾಸಿ ಬೇತಮಂಗಲದ ಕೆರೆ; ಬೆಲೆ ಕಡಿಮೆ, ರುಚಿ ಹೆಚ್ಚು, ಮೀನುಗಾರಿಕೆಯನ್ನೇ ನಂಬಿವೆ 70 ಕುಟುಂಬಗಳು

Halli Baduku: ತಾಜಾ ಮೀನುಗಳಿಗೆ ಹೆಸರುವಾಸಿ ಬೇತಮಂಗಲದ ಕೆರೆ; ಬೆಲೆ ಕಡಿಮೆ, ರುಚಿ ಹೆಚ್ಚು, ಮೀನುಗಾರಿಕೆಯನ್ನೇ ನಂಬಿವೆ 70 ಕುಟುಂಬಗಳು

Raghavendra M Y HT Kannada

Jul 12, 2023 08:30 AM IST

google News

ಕೆಜಿಎಫ್ ತಾಲೂಕಿನ ಬೇತಮಂಗಲ ಕೆರೆಯಲ್ಲಿ ಮೀನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ 70 ಕುಟುಂಬಗಳು

  • ಬೇತಮಂಗಲ ಕೆರೆಯಲ್ಲಿ ನೀರು ಇದ್ದಾಗ ಜೀವನ ಚೆನ್ನಾಗಿಯೇ ನಡೆಯುತ್ತದೆ. ಆದರೆ ನೀರು ಖಾಲಿಯಾದಾಗ ಜೀವನ ನಡೆಸಲು ತಂಬಾ ಕಷ್ಟವಾಗುತ್ತದೆ. ಕೋಲಾರದ ಜನರಿಗೆ ಕಡಿಮೆ ಬೆಲೆಗೆ ರುಚಿಯಾದ ಮೀನುಗಳನ್ನು ಕೊಡುವ ಇಲ್ಲಿನ ಮೀನುಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. 

ಕೆಜಿಎಫ್ ತಾಲೂಕಿನ ಬೇತಮಂಗಲ ಕೆರೆಯಲ್ಲಿ ಮೀನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ 70 ಕುಟುಂಬಗಳು
ಕೆಜಿಎಫ್ ತಾಲೂಕಿನ ಬೇತಮಂಗಲ ಕೆರೆಯಲ್ಲಿ ಮೀನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ 70 ಕುಟುಂಬಗಳು

ಕೋಲಾರ (Kolar) ಜಿಲ್ಲೆಯಲ್ಲಿ ಅತಿ ದೊಡ್ಡ ಹಾಗೂ ಹಳೆಯ ಕೆರೆಗಳಲ್ಲಿ ಒಂದಾದ ಬೇತಮಂಗಲ (Bethamangala Lake) ಕೆರೆ ತಾಜಾ ಮೀನುಗಳಿಗೆ (Fish) ಜನಪ್ರಿಯ. ಕೆಜಿಎಫ್ (KGF) ತಾಲೂಕಿನಲ್ಲಿರುವ ಈ ಕೆರೆ ಬರೋಬ್ಬರಿ 1600 ಎಕರೆ ವಿಸ್ತೀರ್ಣವಾಗಿದ್ದು, ನೂರಾರು ವರ್ಷಗಳಿಂದ ಇಲ್ಲಿ ಮೀನುಗಾರಿಕೆ ಮಾಡಲಾಗುತ್ತಿದೆ. ಪ್ರಸ್ತುತ ಸುಮಾರು 70 ಕುಟುಂಬಗಳು ಕೆರೆಯಲ್ಲಿ ಮೀನುಗಾರಿಕೆ ಮೂಲಕ ಜೀವನ ಸಾಗಿಸುತ್ತಿವೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬೇತಮಂಗಲ ಕೆರೆಯಲ್ಲಿ ಸುಮಾರು 150 ವರ್ಷಗಳಿಂದ ಇವರು ಮೀನುಗಾರಿಕೆ ಮಾಡುತ್ತಿದ್ದಾರೆ. ತಾತ-ಮುತ್ತಾಂದಿರ ಕಾಲದ ಕಸುಬನ್ನು ಈ ಕುಟುಂಬಗಳ ಇಂದಿನ ಪೀಳಿಗೆಯವರು ಮುಂದುವರೆಸಿಕೊಂಡು ಬಂದಿದ್ದಾರೆ.

ಒಂದೊಂದು ದೋಣಿಗೆ ಇಬ್ಬರಂತೆ ಎಲ್ಲರೂ ಮುಂಜಾನೆ 5 ಗಂಟೆಗೆ ಮೀನುಗಾರಿಕೆಗೆ ಹೋದರೆ ಬೆಳಗ್ಗೆ 7 ಗಂಟೆಯೊಳಗೆ ಸಮಾರು 500 ಕೆಜಿ ಮೀನುಗಳೊಂದಿಗೆ ವಾಪಸ್ ದಡಕ್ಕೆ ಬರುತ್ತಾರೆ. ಕೆಲವರಿಗೆ 10 ಕೆಜಿ ಸಿಗಬಹುದು, ಇನ್ನೂ ಕೆಲವರಿಗೆ 50 ಕೆಜಿ ಸಿಗಬಹುದು. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಎಷ್ಟು ಬೇಕಾದರೂ ಮೀನುಗಳನ್ನು ಹಿಡಿದುಕೊಳ್ಳಬಹುದು. ಕೆಲವೊಂದು ಸೀಸನ್‌ಗಳಲ್ಲಿ ಬರೋಬ್ಬರಿ 2 ಟನ್‌ನಷ್ಟು ಮೀನು ಹಿಡಿದಿರುವ ನಿದರ್ಶನಗಳೂ ಇವೆ.

ಹೀಗೆ ಹಿಡಿದ ಮೀನುಗಳನ್ನು ಕೆಲವರು ತಮ್ಮದೇ ಅಂಗಡಿಗಳಲ್ಲಿ ಮಾರಾಟ ಮಾಡಿದರೆ, ಇನ್ನೂ ಕೆಲವರು ಮಾರುಕಟ್ಟೆಗೆ ಸಾಗಿಸುತ್ತಾರೆ. ಮಾರುಕಟ್ಟೆಯಲ್ಲಿ ಒಂದೊಂದು ಜಾತಿಯ ಮೀನಿಗೆ ಒಂದೊಂದು ಬೆಲೆ ನಿಗದಿಯಾಗುತ್ತದೆ. ಹೆಚ್ಚಿನ ಮೀನು ಸಿಗುವ ಸಂದರ್ಭಗಳಲ್ಲಿ ಕೋಲಾರ ಜಿಲ್ಲೆ ಮಾತ್ರವಲ್ಲದೆ, ಪಕ್ಕದ ಜಿಲ್ಲೆಗಳ ಮಾರುಕಟ್ಟೆಗೂ ಪೂರೈಸುತ್ತಾರೆ. ಅಲ್ಲದೆ, ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳುನಾಡಿಗೂ ರವಾನಿಸುತ್ತಾರೆ. ಮಾರಾಟ ಮುಗಿಯುತ್ತಿದ್ದಂತೆ ಮಧ್ಯಾಹ್ನದ ಬಳಿಕ ಮತ್ತೆ ಕೆರೆಗೆ ಹೋಗಿ ಬಲೆಗಳನ್ನು ಬಿಟ್ಟು ಬರುತ್ತಾರೆ. ಮರುದಿನ ಬೆಳಗ್ಗೆ ಮತ್ತೆ ಅದೇ ಬೇಟೆ. ಈ ಕುಟುಂಬಗಳಲ್ಲಿನ ಮಕ್ಕಳು ಕೂಡ ಓದಿನ ಜೊತೆಗೆ ಮೀನು ಹಿಡಿಯುವ ಕಾಯಕದಲ್ಲಿ ಪೋಷಕರಿಗೆ ನೆರವಾಗುತ್ತಾರೆ.

ಕೆರೆ ಬಳಿಯೇ ತಾಜಾ ಮೀನುಗಳ ಮಾರಾಟ

ಕೆರೆ ಬಳಿಯೇ ಒಂದು ಕೆಜಿಗೆ 100 ರೂಪಾಯಿಯಂತೆ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡುತ್ತಾರೆ. ಹೆಚ್ಚಾಗಿ ಸುತ್ತಮುತ್ತಲಿನ ರೈತರು, ಸಣ್ಣ ಪುಟ್ಟ ವ್ಯಾಪಾರಿಗಳು ಕೆರೆ ಬಳಿ ಮೀನು ಖರೀದಿ ಮಾಡುತ್ತಾರೆ. ಕೆಲವು ವ್ಯಾಪಾರಿಗಳು ಇಲ್ಲಿ ಮೀನು ಖರೀಸಿ ಗಾಡಿ ಮೂಲಕ ಊರೂರಿಗೆ ಹೋಗಿ ಕೆಜಿ 150 ರೂಪಾಯಿಗೆ ಮಾರಾಟ ಮಾಡುತ್ತಾರೆ. ಕುಚ್ಚು ಮೀನು, ಗಿರ್ಲು, ನಾಟಿ ಮೀನು, ರಘು, ಕಟ್ಲಾ, ಹುಲ್ಲುಗೆಂಡೆ, ಜಿಲೇಬಿ, ಪೈಲಟ್, ಕಾಮನ್ ಕರ್ಪ್ ಹಾಗೂ ಮೃಗಲ್ ತಳಿಯ ಮೀನುಗಳು ಬೇತಮಂಗಲ ಕೆರೆಯಲ್ಲಿವೆ.

ಜೂನ್, ಜುಲೈನಲ್ಲಿ ಮೀನುಗಾರಿಕೆ ನಿಷೇಧ

ಮುಂಗಾರು ಮಳೆ ಆರಂಭವಾಗುವ ಜೂನ್ ಮತ್ತು ಜುಲೈನಲ್ಲಿ ಮೀನುಗಾರಿಕೆ ಮಾಡುವಂತಿಲ್ಲ. ಸರ್ಕಾರವೂ ಎರಡು ತಿಂಗಳು ಮೀನು ಹಿಡಿಯುವುದನ್ನು ನಿಷೇಧಿಸಿದೆ. ಮೀನುಗಳು ಸಂತಾನ ವೃದ್ಧಿಸಿಕೊಳ್ಳುವ ಹಾಗೂ ಬೆಳವಣಿಗೆಯ ಸಮಯವಾಗಿರುವುದರಿಂದ ಯಾರೊಬ್ಬರು ಈ ಅವಧಿಯಲ್ಲಿ ಮೀನಿಗಾಗಿ ಕೆರೆಗೆ ಇಳಿಯುವುದಿಲ್ಲ.

'ನೋಡಿ ಅಣ್ಣ ಕೆರೆ ಬಳಿಯೇ ಕಡಿಮೆ ಬೆಲೆಗೆ ಅಂದರೆ ಹೋಲ್‌ಸೇಲ್ ಲೆಕ್ಕದಲ್ಲಿ ಮೀನು ಕೊಡುತ್ತೇವೆ' ಎಂದು ಮಾತು ಆರಂಭಿಸಿದ ಮೀನುಗಾರರ ಕುಟುಂಬಗಳ ಪೈಕಿ ಒಬ್ಬರಾದ ಸೌಂದರ್ ರಾಜ್, 'ಪ್ರತಿ ವರ್ಷ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಲೈಸೆನ್ಸ್ ಪಡೆದು ಕೆರೆಯಲ್ಲಿ ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ (ಜುಲೈ) ಮೀನುಗಳ ಸಂತಾನದ ಸಮಯವಾಗಿರುವುದರಿಂದ ಮೀನು ಹಿಡಿಯುತ್ತಿಲ್ಲ. ಈ ಎರಡು ತಿಂಗಳಿಗೂ ಹಿಂದಿನ ದಿನಗಳಲ್ಲಿ ಒಳ್ಳೆಯ ಶಿಕಾರಿಯಾಗುತ್ತಿತ್ತು. ಪ್ರತಿ ದಿನ ಬೆಳಗ್ಗೆ 5 ಗಂಟೆಗೆ ಕೆರೆಯ ಒಳಗೆ ಹೋದರೆ 7 ಗಂಟೆಯೊಳಗೆ ಹೊರಗೆ ಬರುತ್ತೇವೆ. ಒಬ್ಬರಿಗೆ 10 ರಿಂದ 50 ಕೆಜಿಯವರೆಗೆ ಮೀನು ಸಿಗುತ್ತದೆ. ಒಂದೊಂದು ದಿನ ಈ ಪ್ರಮಾಣ ಜಾಸ್ತಿಯೂ ಆಗಿರುತ್ತದೆ. ಕೆರೆ ಬಳಿ ಯಾರೇ ಬಂದರು 100 ರಿಂದ 110 ರೂಪಾಯಿಗೆ ಮಾರಾಟ ಮಾಡುತ್ತೇವೆ' ಎಂದು ಅವರು ತಮ್ಮ ದಿನಚರಿ ವಿವರಿಸಿದರು.

ವಿಶೇಷ ಅಂದರೆ 70 ಮೀನುಗಾರರ ಪೈಕಿ ಒಬ್ಬರ ಬಲೆಯನ್ನು ಮತ್ತೊಬ್ಬರು ಮುಟ್ಟುವುದಿಲ್ಲ. 'ನೀರಿನಲ್ಲಿ ನಮ್ಮ ಬಲೆಗಳು ನಮಗೆ ಗೊತ್ತಾಗುತ್ತವೆ. ಜೂನ್ ಮತ್ತು ಜುಲೈನಲ್ಲಿ ಸರ್ಕಾರವೇ ಉಚಿತವಾಗಿ 5 ರಿಂದ 6 ಲಕ್ಷದವರೆಗೆ ಮೀನಿನ ಮರಿಗಳನ್ನು ಕೊಡುತ್ತೆ. ಒಂದು ಹೆಕ್ಟೇರ್ ಕೆರೆ ಪ್ರದೇಶಕ್ಕೆ 2 ಸಾವಿರ ಮರಿ ಕೊಡ್ತಾರೆ. ಇಷ್ಟೇ ಮರಿ ಬಿಟ್ಟರೆ ಮೀನುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಎರಡು ಸಾವಿರಕ್ಕಿಂತ ಹೆಚ್ಚಿನ ಮರಿ ಬಿಟ್ಟರೆ ಆಹಾರ ಸಿಗದೆ ಮೀನುಗಳ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. 1 ರೂಪಾಯಿ ಹಾಕಿ 4 ರೂಪಾಯಿ ಲಾಭ ಮಾಡಬಹುದು. ಆದರೆ ಆಸಕ್ತಿಯಿಂದ ಮಾಡಬೇಕು' ಎನ್ನುತ್ತಾರೆ ಸೌಂದರ್ ರಾಜ್.

'ಜಿಲೇಬಿ ಮೀನು 10 ಕೆಜಿ ಹಾಕಿದಾರೆ ಸಾಕು ಅದು ಮರಿ ಹಾಕುತ್ತಲೇ ಇರುತ್ತದೆ. ಎಲ್ಲಾ ಮೀನುಗಳಿಗಿಂತ ಕುಚ್ಚೆ ಮೀನಿನ ಬೆಲೆ ಜಾಸ್ತಿ ಇದೆ. ಕೆರೆಯ ಬಳಿಯೇ ಆದರೆ 200 ರೂಪಾಯಿಗೆ ಕೊಡ್ತೀವಿ. ಮಾರುಕಟ್ಟೆಯಲ್ಲಿ ಇದನ್ನು 400 ರಿಂದ 500 ರೂಪಾಯಿಗೆ ಮಾರುತ್ತಾರೆ. ಆನ್‌ಲೈನ್‌ನಲ್ಲಿ ಕೆಜಿ ಕುಚ್ಚೆ ಮೀನು 700 ರೂಪಾಯಿ ವರೆಗೆ ಇದೆ' ಎಂದು ಅವರು ವ್ಯವಹಾರದ ಗುಟ್ಟು ಬಿಚ್ಚಿಟ್ಟರು.

'ರೈತರಿಗೆ ಅಂದ್ರೆ 200 ರೂಪಾಯಿಗೆ ಮಾರುತ್ತೇವೆ. ಆಸಕ್ತಿ ಇರೋರಿಗೆ ಒಳ್ಳೆ ಬ್ಯುಸಿನೆಸ್. ಸರ್ಕಾರದಿಂದ ತರಬೇತಿ ನೀಡಲಾಗುತ್ತಿದೆ. ಟ್ರೈನಿಂಗ್ ಮಾಡಿದವರಿಗೆ ಕೆರೆಯಲ್ಲಿ ಮೀನುಗಾರಿಕೆಗೆ ಒಂದು ವರ್ಷದ ಮಟ್ಟಿಗೆ ಪರವಾನಗಿ ಕೊಡುತ್ತಾರೆ. ಪ್ರತಿವರ್ಷ ಮರಿಗಳನ್ನು ತೆಗೆದುಕೊಳ್ಳಬೇಕಾದರೆ ಸಬ್ಸಿಡಿ ಕೊಡ್ತಾರೆ, ಮೀನು ಬೆಳವಣಿಗೆ ಆಗಿಲ್ಲ, ಕೆರೆ ಕಟ್ಟೆ ಒಡೆದು ಹೋದರೆ, ಮೀನುಗಳು ಸತ್ತುಹೋದರೆ, ಸರ್ಕಾರ ಪರಿಹಾರ ನೀಡುತ್ತೆ. ಆದರೆ ಇದು ಸರ್ಕಾರಿಂದ ಹರಾಜು ಆಗಿರುವ ಕೆರೆಗಳಿಗೆ ಮಾತ್ರ ಅನ್ವಯಿಸುತ್ತದೆ' ಎಂದು ಹೇಳಲು ಸೌಂದರ್ ರಾಜ್ ಮರೆಯಲಿಲ್ಲ.

ಕೆರೆಯ ನೀರು, ಮೀನುಗಾರರ ಬದುಕು

ಇವರು ಬದುಕು ಸಂಪೂರ್ಣವಾಗಿ ಕೆರೆಯನ್ನೇ ಆಶ್ರಯಿಸಿದೆ. ಕೆರೆಯಲ್ಲಿ ನೀರು ಇದ್ದಾಗ ಜೀವನ ಚೆನ್ನಾಗಿಯೇ ನಡೆಯುತ್ತದೆ. ಆದರೆ ನೀರು ಖಾಲಿಯಾದಾಗ ಜೀವನ ನಡೆಸಲು ತಂಬಾ ಕಷ್ಟವಾಗುತ್ತದೆ. ಹಲವು ವರ್ಷಗಳಿಂದ ಮೀನುಗಾರಿಕೆ ಮಾಡಿ ಜೀವನ ನಡೆಸಲು ಕಷ್ಟವಾಗಿ ಹಲವು ಕುಟುಂಬಗಳು ಬೇರೆ ಕಡೆ ವಲಸೆ ಹೋಗಿವೆ. ಕಷ್ಟವೋ ಸುಖವೋ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತೇವೆ ಎಂಬ ವಿಶ್ವಾಸ ಇರುವವರು ಮಾತ್ರ ಅಲ್ಲಿದ್ದಾರೆ.

ಇವರಿಗೆ ಸರ್ಕಾರದಿಂದಲೂ ಹತ್ತಾರು ಸೌಲಭ್ಯಗಳು ಸಿಗುತ್ತವೆ. ಮನೆ, ಬಲೆ, ದೋಣಿ, ಡೀಸೆಲ್, ದ್ವಿಚಕ್ರ ವಾಹನ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತವೆ. ಬೇತಮಂಗಲ ಮೀನುಗಾರಿಕೆ ಕಚೇರಿಯ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ ಅವರು ಸೌಲಭ್ಯಗಳ ಬಗ್ಗೆ ಆಗಾಗ ಮಾಹಿತಿ ನೀಡುತ್ತಾರೆ. ಅಧಿಕಾರಿಗಳು ಮೀನುಗಾರಿಕೆ ಬಗ್ಗೆ ಕಾರ್ಯಗಾರವನ್ನೂ ಮಾಡುತ್ತಾರೆ. ಸೋಮವಾರ (ಜುಲೈ 10) ಮೀನು ಕೃಷಿಕರ ದಿನಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲೂ ಮೀನುಗಾರಿಕೆಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ನೀಡಿದ್ದಾರೆ.

ಸರ್ಕಾರ ಇವರಿಗೆ ದೋಣಿ, ಸೇಫ್ಟಿ ಜಾಕೆಟ್, ಕಿಟ್, ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನದ ಸೌಲಭ್ಯಗಳನ್ನು ನೀಡಿದೆ. ಆದರೆ ದೋಣಿಗಳ ಗುಣಮಟ್ಟ ಸರಿಯಾಗಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ದೋಣಿಗಳು ಹಾಗೂ ಮೀನು ಸಾಗಿಸಲು ಸರಿಯಾದ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.

ನೀವೂ ಸಲಹೆ ಕೊಡಿ

ಹಳ್ಳಿ ಬದುಕು ವಿಶೇಷ ಅಂಕಣದಲ್ಲಿ ಮುಂದಿನ ಬುಧವಾರ ಮತ್ತೊಂದು ಹೊಸ ವಿಷಯದೊಂದಿಗೆ ಸಿಗೋಣ. ನಿಮ್ಮ ಹಳ್ಳಿಯಲ್ಲಿ ನೀವು ಗಮನಿಸಿದ ಅಪರೂಪದ ವಿದ್ಯಮಾನ, ವಿಶೇಷ ಎನಿಸುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕನ್ನಡ ಡಿಜಿಟಲ್ ಜಗತ್ತಿಗೆ ಕರ್ನಾಟಕದ ಗ್ರಾಮೀಣ ಬದುಕು ಪರಿಚಯಿಸುವ ಈ ಅಂಕಣ ಬೆಳೆಸಲು ನೀವೂ ನೆರವಾಗಬಹುದು. ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳಿಗೂ ಸ್ವಾಗತ. ಇಮೇಲ್: raghavendra.y@htdigital.in, ht.kannada@htdigital.in

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ