logo
ಕನ್ನಡ ಸುದ್ದಿ  /  ಜೀವನಶೈಲಿ  /  Halli Baduku: ಬದನೆ ಗಿಡದಲ್ಲಿ ಟೊಮೆಟೊ ಭರ್ಜರಿ ಫಸಲು; ತರಕಾರಿ ಬೆಳೆಯಲ್ಲೂ ಕಸಿ ಪ್ರಯೋಗ ಕೋಲಾರ ಜಿಲ್ಲೆಯಲ್ಲೇ ಮೊದಲು

Halli Baduku: ಬದನೆ ಗಿಡದಲ್ಲಿ ಟೊಮೆಟೊ ಭರ್ಜರಿ ಫಸಲು; ತರಕಾರಿ ಬೆಳೆಯಲ್ಲೂ ಕಸಿ ಪ್ರಯೋಗ ಕೋಲಾರ ಜಿಲ್ಲೆಯಲ್ಲೇ ಮೊದಲು

Raghavendra M Y HT Kannada

Jul 19, 2023 10:49 PM IST

google News

ಬದನೆ ಗಿಡದಲ್ಲಿ ಟೊಮೆಟೊ ಕಸಿ ಮಾಡಿ ಉತ್ತಮ ಆದಾಯ ಗಳಿಸಿದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರೈತ ನಾರಾಯಣಸ್ವಾಮಿ

  • ಬದನೆ ಗಿಡದಲ್ಲಿ ಟೊಮೆಟೊ ಕಸಿ ಮಾಡಿದ ಬೆಳೆಯ ಮೊದಲ ಪ್ರಯೋಗದಲ್ಲೇ ಕೋಲಾರ ಜಿಲ್ಲೆಯ ರೈತರೊಬ್ಬರು ಯಶಸ್ವಿಯಾಗಿದ್ದಾರೆ. ಟೊಮೆಟೊ ಬೆಲೆ ಹೆಚ್ಚಾಗಿರುವುದರಿಂದ ಉತ್ತಮ ಆದಾಯವನ್ನೂ ಮಾಡಿದ್ದಾರೆ.

ಬದನೆ ಗಿಡದಲ್ಲಿ ಟೊಮೆಟೊ ಕಸಿ ಮಾಡಿ ಉತ್ತಮ ಆದಾಯ ಗಳಿಸಿದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರೈತ ನಾರಾಯಣಸ್ವಾಮಿ
ಬದನೆ ಗಿಡದಲ್ಲಿ ಟೊಮೆಟೊ ಕಸಿ ಮಾಡಿ ಉತ್ತಮ ಆದಾಯ ಗಳಿಸಿದ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರೈತ ನಾರಾಯಣಸ್ವಾಮಿ

ಕೋಲಾರ: ಕರ್ನಾಟಕದಲ್ಲಿ (Karnataka) ಬರದನಾಡು ಅಂದರೆ ಥಟ್ ಅಂತ ಹೊಳೆಯುವುದೇ ಕೋಲಾರ (Kolar) ಜಿಲ್ಲೆ. ಮಳೆ ಕೊರತೆ, ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇಲ್ಲಿನ ರೈತರು ಕಷ್ಟಗಳಿವೆ ಅಂತ ಸುಮ್ಮನೆ ಕೈಕಟ್ಟಿ ಕುಳಿತು ಕೊಳ್ಳುವುದಿಲ್ಲ. ತಮ್ಮಲ್ಲಿ ಲಭ್ಯ ಇರುವ ಅಲ್ಪ ಸ್ವಲ್ಪ ನೀರನ್ನೇ ಬಳಸಿಕೊಂಡು ವಾತಾವರಣಕ್ಕೆ ಹೊಂದಾಣಿಕೆಯಾಗುವಂತಹ ಹಣ್ಣು, ತರಕಾರಿ ಬೆಳೆಗಳನ್ನು ಬೆಳೆದು ಲಕ್ಷಾಂತರ ರೂಪಾಯಿ ಲಾಭ ಮಾಡುತ್ತಾ ಎದುರಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಯಾವುದೂ ಅಸಾಧ್ಯವಲ್ಲ ಎಂಬುದು ಸಾಬೀತು ಮಾಡುತ್ತಿದ್ದಾರೆ.

ಇವತ್ತಿನ ಮಟ್ಟಿಗೆ ಹೇಳುವುದಾದರೆ ಕೋಲಾರ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ತರಕಾರಿ ಬೆಳೆಯುವ ಜಿಲ್ಲೆಗಳ ಪೈಕಿ ಅಗ್ರಸ್ಥಾನದಲ್ಲಿದೆ. ಜೊತೆಗೆ ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಅತ್ಯಂತ ಶ್ರಮಜೀವಿಗಳಾಗಿರುವ ಇಲ್ಲಿನ ರೈತರು ತರಕಾರಿ, ಹಣ್ಣು ಬೆಳೆಯುವುದಕ್ಕೆ ಮಾತ್ರ ಸಮೀತಿವಾಗಿಲ್ಲ. ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಕೃಷಿ ಇಲಾಖೆಯ ಅಧಿಕಾರಿಗಳು, ತಜ್ಞರೇ ಅಚ್ಚರಿ ಪಡುವಂತೆ ಮಾಡುತ್ತಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೈತರೊಬ್ಬರು ಬದನೆಕಾಯಿ ಗಿಡಕ್ಕೆ ಟೊಮೆಟೊ ಕಸಿ ಮಾಡಿರುವ ಬೆಳೆಯನ್ನು ಯಶಸ್ವಿಯಾಗಿ ಬೆಳೆದಿದ್ದಾರೆ. ತರಕಾರಿ ಬೆಳೆಯಲ್ಲೂ ಈ ಕಸಿ ಪ್ರಯೋಗ ಜಿಲ್ಲೆಯಲ್ಲೇ ಮೊದಲು. ಕೊತ್ತಪೇಟೆ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವರೇ ಬದನೆಕಾಯಿ ಗಿಡದಲ್ಲಿ ಟೊಮೆಟೊ ಕಸಿ ಮಾಡಿ ಭರ್ಜರಿ ಇಳುವರಿ ಪಡೆದಿದ್ದಾರೆ. ದೇಶದಲ್ಲೇ ಟೊಮೆಟೊಗೆ ಉತ್ತಮ ಬೆಲೆ ಇರುವ ಕಾರಣ ಉತ್ತಮ ಆದಾಯವನ್ನೂ ಪಡೆಯುತ್ತಿದ್ದಾರೆ.

ರೋಗಗಳಿಂದ ಪಾರಾಗಲು ಹೊಸ ಪ್ರಯೋಗ

ರೈತ ನಾರಾಯಣಸ್ವಾಮಿ ಅವರು ಈ ಹಿಂದೆ ಟೊಮೆಟೊ, ಹೂಕೋಸು, ಜೋಳ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಆದ್ರೆ ರೋಗಗಳ ಕಾಟದಿಂದ ಬೆಳೆ ಸರಿಯಾಗಿ ಆಗದೆ ಭಾರಿ ನಷ್ಟವನ್ನು ಅನುಭವಿಸಿದ್ದರು. ರೈತರೊಬ್ಬರು ಅಂಟು ಟೊಮೊಟೊ ಬೆಳೆಯುವಂತೆ ಇವರಿಗೆ ಸಲಹೆ ನೀಡಿದ್ದಾರೆ. ಅದರಂತೆ ಪಕ್ಕದ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿ ಕಸಿ ಮಾಡಿದ್ದ ಬೆಳೆಯನ್ನು ಖುದ್ದು ವೀಕ್ಷಣೆ ಮಾಡಿ ಅಲ್ಲಿನ ರೈತರಿಂದ ಮಾಹಿತಿ ಪಡೆದಿದ್ದಾರೆ. ಜಿಲ್ಲೆಯಲ್ಲಿ ಯಾರೂ ಕೂಡ ಇಂತಹ ಪ್ರಯೋಗ ಮಾಡಿರಲಿಲ್ಲ. ಹೀಗಾಗಿ ನಾರಾಯಣಸ್ವಾಮಿ ಅವರು ಆರಂಭದಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ. ನಂತರ ಇತರೆ ರೈತರು ಹಾಗೂ ಕೃಷಿ ಅಧಿಕಾರಿಗಳ ಸಲಹೆ ಮೇರೆಗೆ ಧೈರ್ಯ ಮಾಡಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.

ಕಪ್ಪು ಬದನೆ ಗಿಡಕ್ಕೆ ಸಾಹೋ ಜಾತಿಯ ಟೊಮೊಟೊ ಕಸಿ

ಆಂಧ್ರ ಪ್ರದೇಶದ ಕುಪ್ಪಂನ ಕೃಷಿ ವಿಜ್ಞಾನ ಕೇಂದ್ರದಿಂದ ಕಪ್ಪು ಬದನೆಕಾಯಿ ಗಿಡದ ಕಾಂಡದಲ್ಲಿ ಸಾಹೋ ಜಾತಿಯ ಟೊಮೆಟೊವನ್ನು ಅಂಟು ಕಟ್ಟಿದ್ದ ತಳಿಯನ್ನು ತರಲಾಗಿದೆ. ಅಲ್ಲೇ ಒಂದು ಗಿಡ 6 ರೂಪಾಯಿ 25 ಪೈಸೆ ನೀಡಲಾಗಿದೆ. ಸಾರಿಗೆ ವೆಚ್ಚ ಎಲ್ಲಾ ಸೇರಿ ತೋಟಕ್ಕೆ ಬರುವಷ್ಟರಲ್ಲಿ ಒಂದು ಗಿಡಕ್ಕೆ 8 ರೂಪಾಯಿ ವೆಚ್ಚವಾಗಿದೆ. 1 ಎಕರೆಗೆ 5 ಸಾವಿರ ಗಿಡಗಳಂತೆ 2 ಎಕರೆಗೆ ಒಟ್ಟು 10 ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದೆ. ಕೊಟ್ಟಿಗೆ ಗೊಬ್ಬರ, ಔಷಧಿ, ಕೂಲಿಯಾಳುಗಳು ಎಲ್ಲಾ ಸೇರಿದಂತೆ ಎರಡು ಎಕರೆಗೆ ಒಟ್ಟು 6 ಲಕ್ಷ ರೂಪಾಯಿ ಬಂಡವಾಳ ಹಾಕಿರುವುದಾಗಿ ರೈತರ ನಾರಾಯಣಸ್ವಾಮಿ ವಿವರಿಸಿದ್ದಾರೆ.

ಗಿಡ ನಾಟಿಮಾಡಿದ 2 ತಿಂಗಳಿಗೆ ಸ್ಯಾಂಪಲ್ ಆರಂಭವಾಯಿತು. ಮಾಧ್ಯಮ ಗಾತ್ರದಲ್ಲಿ ಹಣ್ಣು ಸಿಗುತ್ತಿದ್ದು, ಈವರೆಗೆ 15 ಕೊಯ್ಲು ಮಾಡಲಾಗಿದೆ. ಇನ್ನೂ ಮೂರುನಾಲ್ಕು ಕೊಯ್ಲು ಸಿಗುತ್ತದೆ. ಸಾಮಾನ್ಯ ಟೊಮೆಟೊ ಬೆಳೆಯಾದರೆ ಒಂದೂವರೆ ತಿಂಗಳಿಂದ ಎರಡು ತಿಂಗಳ ವರೆಗೆ ಹಣ್ಣು ಬಿಡುತ್ತೆ ಆದರೆ. ಕಸಿ ಮಾಡಿದ ಈ ಗಿಡದಲ್ಲಿ 4 ರಿಂದ 5 ತಿಂಗಳು ಫಸಲು ತೆಗೆದುಕೊಳ್ಳಬಹುದು. ವಿಶೇಷ ಎಂದರೆ ಶ್ರೀನಿವಾಸಪುರ ತಾಲೂಕಿನಲ್ಲಿ ಟೊಮೆಟೊ ಬೆಳೆಯೇ ಆಗುವುದಿಲ್ಲ. ಆದರೆ ಈ ಗಿಡಗಳಿಗೆ ವೈರಸ್ ಕಾಟ ಇದ್ದರೂ ಇಳುವರಿ ಅರ್ಧಕ್ಕೆ ಅರ್ಧ ಕಡಿಮೆಯಾಗಿದೆ. ಆದರೂ ಈವರೆಗೆ 15 ಲಕ್ಷ ರೂಪಾಯಿ ಆದಾಯ ಬಂದಿದೆ. ಇನ್ನೂ ನಾಲ್ಕು ಕೊಯ್ಲು ಸಿಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಜಾಸ್ತಿ ಇರುವುದರಿಂದ 3 ಲಕ್ಷ ರೂಪಾಯಿ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತರಕಾರಿ ಬೆಳೆಗಳಲ್ಲೂ ಕಸಿ ಪ್ರಯೋಗದ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜೊತೆಗೆ ಮಾತನಾಡಿದ ಕೋಲಾರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಸ್‌ಆರ್ ಕುಮಾರಸ್ವಾಮಿ, ಬೆಳೆಗಳಿಗೆ ರೋಗ ಹೆಚ್ಚಾದಾಗ ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ರೈತರು ಇಂತಹ ಪ್ರಯೋಗಗಳಿಗೆ ಮುಂದಾಗುತ್ತಾರೆ. ಕಸಿ ಮಾಡಿದ ಬೆಳೆಗಳನ್ನು ಪ್ರತ್ಯೇಕವಾಗಿ ಬೆಳೆಯಲಾಗುತ್ತದೆ ಎಂದು ವಿವರಿಸಿದ್ದಾರೆ.

ಹೊಸ ತಳಿ ಉತ್ತಮವಾದ ಇಳುವರಿ ನೀಡುತ್ತದೆ. ಎಷ್ಟೇ ಮಳೆ ಬಂದರೂ, ತೇವ ಇದ್ದರೂ ಗಿಡಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಜೊತೆಗೆ ಗಿಡಗಳು ಬೇಗ ಒಣಗುವುದಿಲ್ಲ. ಕಾಂಡ ಯಾವಾಗಲೂ ಹಸಿರಾಗಿಯೇ ಇರಲಿದ್ದು, ಮತ್ತೆ ಮತ್ತೆ ಚಿಗುರೊಡೆಯುತ್ತದೆ.

ಉತ್ತಮ ಗುಣಮಟ್ಟದ ಹಣ್ಣು ಸಿಗುವುದರಿಂದ ಕೋಲಾರದಿಂದ ಬೇರೆ ಬೇರೆ ರಾಜ್ಯಗಳಿಗೆ ಪಾರ್ಸೆಲ್ ಮಾಡುವುದಕ್ಕೂ ಈ ಟೊಮೊಟೊ ಸಹಕಾರಿಯಾಗಿದೆ. 7 ರಿಂದ 8 ದಿನಗಳ ವರೆಗೆ ಸಂಗ್ರಹಿಸಿಟ್ಟರೂ ಹಣ್ಣು ಕೆಡುವುದಿಲ್ಲ. ಬೇರೆ ರೈತರೂ ಈ ಪದ್ದತಿಯನ್ನು ಅಳವಡಿಸಿಕೊಂಡರೆ ಉತ್ತಮ ಆದಾಯ ಪಡೆಯಬಹುದು ಎಂದು ಶ್ರೀನಿವಾಸಪುರದ ಸಹಾಯಕ ತೋಟಗಾರಿಕಾ ನಿರ್ದೇಶಕಾರದ ಬೈರಾರೆಡ್ಡಿ ಸಲಹೆ ನೀಡಿದ್ದಾರೆ. ಕೋಲಾರದ ರೈತರು ಹಲವು ಹೊಸ ತಳಿ, ಬೆಳೆಗಳನ್ನು ಬೆಳೆದು ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. ಬದನೆ ಗಿಡದಲ್ಲಿ ಟೊಮೆಟೊ ಕಸಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ನಾರಾಯಣಸ್ವಾಮಿ ಅವರನ್ನು ಸಂಪರ್ಕಿಸಬಹುದು ಮೊಬೈಲ್ ಸಂಖ್ಯೆ: 77609 00536 (ಬೆಳಗ್ಗೆ 9 ರಿಂದ ಸಂಜೆ 5ರೊಳಗೆ)

ನೀವೂ ಸಲಹೆ ಕೊಡಿ

ಹಳ್ಳಿ ಬದುಕು ವಿಶೇಷ ಅಂಕಣದಲ್ಲಿ ಮುಂದಿನ ಬುಧವಾರ ಮತ್ತೊಂದು ಹೊಸ ವಿಷಯದೊಂದಿಗೆ ಸಿಗೋಣ. ನಿಮ್ಮ ಹಳ್ಳಿಯಲ್ಲಿ ನೀವು ಗಮನಿಸಿದ ಅಪರೂಪದ ವಿದ್ಯಮಾನ, ವಿಶೇಷ ಎನಿಸುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕನ್ನಡ ಡಿಜಿಟಲ್ ಜಗತ್ತಿಗೆ ಕರ್ನಾಟಕದ ಗ್ರಾಮೀಣ ಬದುಕು ಪರಿಚಯಿಸುವ ಈ ಅಂಕಣ ಬೆಳೆಸಲು ನೀವೂ ನೆರವಾಗಬಹುದು. ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳಿಗೂ ಸ್ವಾಗತ. ಇಮೇಲ್: raghavendra.y@htdigital.in, ht.kannada@htdigital.in

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ