ಧಾತ್ರಿ ಹವನ ಎಂದರೇನು, ಬ್ರಹ್ಮನ ಕಣ್ಣೀರಿನಿಂದ ಹುಟ್ಟಿದ ನೆಲ್ಲಿಕಾಯಿ ಮರ ಪೂಜಿಸುವುದರಿಂದ ದೊರೆಯುವ ಫಲಗಳೇನು?
Nov 22, 2023 11:29 AM IST
ಕಾರ್ತಿಕ ಮಾಸದಲ್ಲಿ ಧಾತ್ರಿ ಹವನ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪಗಳಿಂದ ವಿಮುಕ್ತಿ ಹೊಂದಬಹುದು
Dhatri Havana: ಧಾತ್ರಿ ಹೋಮ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪ ಕರ್ಮಗಳು ನಿವಾರಣೆ ಆಗುವುದೆಂಬ ನಂಬಿಕೆ ಇದೆ. ಧಾತ್ರಿ ಹವನ, ಭೋಜನ ಮಾಡದವರ ಚಾತುರ್ಮಾಸ್ಯ ವ್ರತ ಅಪೂರ್ಣ ಎನಿಸಿಕೊಳ್ಳುತ್ತದೆ. ಈ ಹೋಮ ಮಾಡಿದರೆ ಅಶ್ವಮೇಧ ಯಾಗವನ್ನು ಮಾಡಿದಷ್ಟೇ ಶುಭಫಲಗಳು ದೊರೆಯುತ್ತದೆ ಎಂಬ ನಂಬಿಕೆ ಇದೆ.
Dhatri Havana: ಹಿಂದೂಗಳಿಗೆ ಕಾರ್ತಿಕಮಾಸವು ಅತ್ಯಂತ ಪವಿತ್ರವಾದದ್ದು. ಈ ಮಾಸದಲ್ಲಿ ಶಿವನ ಪೂಜೆ, ವಿಷ್ಣುವಿನ ಆರಾಧನೆ, ಸುಬ್ರಹ್ಮಣ್ಯನ ಪೂಜೆ ಬಹಳ ಮಹತ್ವ ಪಡೆದಿದೆ. ಈ ಮಾಸದಲ್ಲಿ ಒಮ್ಮೆಯಾದರೂ ನದಿ ಸ್ನಾನ ಮಾಡಿದರೆ ಸಕಲ ಪಾಪಗಳೆಲ್ಲವೂ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ದೀಪಾರಾಧನೆಗೂ ಬಹಳ ಪ್ರಾಮುಖ್ಯತೆ ಇದೆ. ಹಾಗೇ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ಧಾತ್ರಿ ಹವನಕ್ಕೂ ಅದರದ್ದೇ ಆದ ವೈಶಿಷ್ಟ್ಯವಿದೆ.
ಧಾತ್ರಿ ಹವನ ಎಂದರೇನು?
ಧಾತ್ರಿ ಎಂದರೆ ಬೆಟ್ಟದ ನೆಲ್ಲಿಕಾಯಿ ಮರ. ಧಾತ್ರಿ ಹವನವನ್ನು ವನ ಭೋಜನ ಎಂದೂ ಕರೆಯುತ್ತಾರೆ. ಈ ಹೋಮವನ್ನು ರಾಜಸೂಯ ಯಾಗಕ್ಕೆ ಸಮಾನವಾದ ಪುಣ್ಯಕರ ಕಾರ್ಯವೆಂದು ಪಂಚರಾತ್ರದಲ್ಲಿ ಹೇಳಲಾಗಿದೆ. ಧಾತ್ರಿ ವನಭೋಜನದಿಂದ ನಾವು ಮಾಡಿದ ದುಷ್ಟಾನ್ನ ಭೋಜನದ ಪಾಪವೆಲ್ಲವೂ ನಾಶವಾಗುವುದು ಎಂದು ನಂಬಲಾಗಿದೆ. ಧಾತ್ರಿ ಹವನವನ್ನು ನೆಲ್ಲಿಕಾಯಿ ಮರದ ಕೆಳಗೆ ಮಾಡಬೇಕು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನೆಲ್ಲಿಕಾಯಿ ಮರದ ಒಂದು ಭಾಗವನನಾದರೂ ತಂದು ಮನೆ ಆವರಣದಲ್ಲಿ ನೆಟ್ಟು ನಂತರ ಪೂಜೆ ಮಾಡಬೇಕು.
ಹಿನ್ನೆಲೆ ಹಾಗೂ ಮಹತ್ವ
ಪ್ರತಿಯೊಂದು ಆಚರಣೆ ಹಿಂದೆಯೋ ಒಂದೊಂದು ಕಥೆ ಇದೆ. ಹಾಗೇ ಧಾತ್ರಿ ಹವನಕ್ಕೆ ಸಂಬಂಧಿಸಿದಂತೆ ಪೌರಾಣಿಕ ಕಥೆ ಪ್ರಚಲಿತದಲ್ಲಿದೆ. ಒಮ್ಮೆ ಬ್ರಹ್ಮದೇವನು ಆನಂದಪರವಶನಾಗಿ ಕಣ್ಣಿಂದ ಆನಂದಭಾಷ್ಪ ಹರಿದು ಹನಿಗಳೂ ಭೂಮಿಯ ಮೇಲೂ ಬಿದ್ದವು. ಆಗ ಆ ಜಾಗದಲ್ಲಿ ಒಂದು ಮರ ಹುಟ್ಟಿತು. ಅದೇ ನೆಲ್ಲಿಕಾಯಿ ಮರ. ಅಂದಿನಿಂದ ಬೆಟ್ಟದ ನೆಲ್ಲಿಕಾಯಿ ಮರಕ್ಕೆ ಧಾರ್ಮಿಕ ಪ್ರಾಮುಖ್ಯತೆ ಇದೆ. ತುಳಸಿ ಹಬ್ಬದಂದು ಕೂಡಾ ಬೆಟ್ಟದ ನೆಲ್ಲಿಕಾಯಿ ತಂದು ಪೂಜೆ ಮಾಡಲಾಗುತ್ತದೆ. ಧಾತ್ರಿ ಹೋಮ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪ ಕರ್ಮಗಳು ನಿವಾರಣೆ ಆಗುವುದೆಂಬ ನಂಬಿಕೆ ಇದೆ. ಧಾತ್ರಿ ಹವನ, ಭೋಜನ ಮಾಡದವರ ಚಾತುರ್ಮಾಸ್ಯ ವ್ರತ ಅಪೂರ್ಣ ಎನಿಸಿಕೊಳ್ಳುತ್ತದೆ. ಈ ಹೋಮ ಮಾಡಿದರೆ ಅಶ್ವಮೇಧ ಯಾಗವನ್ನು ಮಾಡಿದಷ್ಟೇ ಶುಭಫಲಗಳು ದೊರೆಯುತ್ತದೆ ಎಂಬ ನಂಬಿಕೆ ಇದೆ. ಹಾಗೇ ಹೋಮದ ನಂತರ ಕೈಗೊಳ್ಳುವ ಭೋಜನ ಕೂಡಾ ಅತ್ಯಂತ ಪವಿತ್ರವಾದದ್ದು ಎನ್ನಲಾಗಿದೆ. ಈ ಹೋಮ ಮಾಡಿದರೆ ನಮ್ಮ ಜಾತಕದಲ್ಲಿನ ದೋಷಗಳು ನಿವಾರಣೆ ಆಗಲಿವೆ ಎಂದು ನಂಬಲಾಗಿದೆ.
ಧಾತ್ರಿ ಹವನಕ್ಕೆ ಸೂಕ್ತ ಸಮಯ ಯಾವುದು?
ಧಾತ್ರಿ ಹವನವನ್ನು ಕಾರ್ತಿಕ ಶುಕ್ಲ ತ್ರಯೋದಶಿಯಿಂದ ಕಾರ್ತಿಕ ಕೃಷ್ಣ ಪಂಚಮಿಯವರೆಗೆ ಆಚರಿಸಬಹುದು. ವೈಕುಂಠ ಚತುರ್ದಶಿ ದಿನ ಅತ್ಯಂತ ಪ್ರಶಸ್ತವಾದ ಕಾಲ. ಸಪ್ತಮಿ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಧಾತ್ರಿ ಹವನ ಮಾಡುವುದನ್ನು ನಿಷೇಧಿಸಲಾಗಿದೆ. ಈ ವ್ರತವನ್ನು ಒಂಟಿಯಾಗಿ ಮಾಡದೆ ಬಂಧು ಮಿತ್ರರೊಂದಿಗೆ ಆಚರಿಸಬೇಕು. ಆ ದಿನ ನೆಲ್ಲಿಕಾಯಿಯಿಂದ ಶ್ರೀ ರಾಧಾ ದಾಮೋದರನಿಗೆ ಶೋಡಚೋಪಚಾರ ಪೂಜೆ ಮಾಡಿ, ಬ್ರಾಹ್ಮಣರು, ಮುತ್ತೈದೆಯರಿಗೆ ಊಟ ಬಡಿಸಬೇಕು.
ಧಾತ್ರಿ ಹವನ ಮಾಡುವ ವೇಳೆ ಈ ಮಂತ್ರವನ್ನು ಪಠಿಸಬೇಕು
ದೇವೀ ಧಾತ್ರಿ ನಮಸ್ತುಭ್ಯಂ ಗೃಹಾಣ ಬಲಿಮುತ್ತಮಂ |
ಮಿಶ್ರಿತಂ ಗುಡಸೂಪಾಭ್ಯಾಂ ಸರ್ವಮಂಗಲದಾಯಿನೀ |
ಪುತ್ರಾನ್ ದೇಹಿ ಮಹಾಪ್ರಾಜ್ಞಾನ್ ಯಶೋ ದೇಹಿ ನಿರಂತರಂ |
ಪ್ರಜ್ಞಾಂ ಮೇಧಾಂ ಚ ಸೌಭಾಗ್ಯಂ ವಿಷ್ಣುಭಕ್ತಿಂ ಚ ದೇಹಿ ಮೇ |
ನೀರೋಗಂ ಕುರು ಮಾಂ ನಿತ್ಯಂ ನಿಷ್ಪಾಪಂ ಕುರು ಸರ್ವದಾ |
ಸರ್ವಜ್ಞಂ ಕುರು ಮಾಂ ದೇವಿ ಧನವಂತಂ ತಥಾ ಕುರು |