logo
ಕನ್ನಡ ಸುದ್ದಿ  /  ಜೀವನಶೈಲಿ  /  Summer And Pet Health: ಏರುತ್ತಿರುವ ತಾಪಮಾನ; ತಣಿಯಲಿ ಸಾಕುಪ್ರಾಣಿಗಳ ಮನ: ಹೀಗಿರಲಿ ಬೇಸಿಗೆಯ ಕಾಳಜಿ

Summer and pet health: ಏರುತ್ತಿರುವ ತಾಪಮಾನ; ತಣಿಯಲಿ ಸಾಕುಪ್ರಾಣಿಗಳ ಮನ: ಹೀಗಿರಲಿ ಬೇಸಿಗೆಯ ಕಾಳಜಿ

Reshma HT Kannada

Apr 08, 2023 03:30 PM IST

google News

ಸಾಕುಪ್ರಾಣಿಗಳ ಕಾಳಜಿ

    • Summer and pet health: ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಮೇಲೆ ಹಲವು ವಿಷಯಗಳಲ್ಲಿ ನಿಗಾ ವಹಿಸುವುದು ಮುಖ್ಯವಾಗುತ್ತದೆ. ಇದರಿಂದ ಅವುಗಳ ಆರೋಗ್ಯ ರಕ್ಷಿಸುವುದರೊಂದಿಗೆ ಬಿಸಿಲಿನ ಶಾಖದಿಂದಲೂ ಕಾಪಾಡಲು ಸಾಧ್ಯ.
ಸಾಕುಪ್ರಾಣಿಗಳ ಕಾಳಜಿ
ಸಾಕುಪ್ರಾಣಿಗಳ ಕಾಳಜಿ

ಬಿಸಿಲಿನ ತಾಪ ಏರಿಕೆಯಾಗಿದ್ದು, ಮಾತ್ರವಲ್ಲ ವಾತಾವರಣದಲ್ಲೂ ಸಾಕಷ್ಟು ಬದಲಾವಣೆಯಾಗುತ್ತಿದೆ. ಇದರಿಂದ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳ ದಿನಚರಿಯೂ ಬದಲಾಗಬೇಕು. ಬೇಸಿಗೆಯಲ್ಲಿ ಪ್ರಾಣಿಗಳನ್ನು ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಅವುಗಳ ದೇಹಕ್ಕೆ ಸಾಕಷ್ಟು ನೀರು ಸಿಗುವಂತೆ ಮಾಡುವುದು ಬಹಳ ಮುಖ್ಯವಾಗುತ್ತದೆ. ತಾಜಾ ನೀರು ಸಿಗದೇ ಇದ್ದಾಗ ಅವು ಚರಂಡಿ ಅಥವಾ ಕೊಳಚೆ ನೀರನ್ನು ಕುಡಿದು ಸೋಂಕು ಉಂಟಾಗಬಹುದು. ನೀರಿನೊಂದಿಗೆ ಹಣ್ಣು, ತರಕಾರಿಗಳನ್ನು ತಿನ್ನಿಸುವ ಮೂಲಕ ಅವುಗಳ ದೇಹ ತಾಪ ತಣಿಯುವಂತೆ ಮಾಡಬಹುದು. ಇದರೊಂದಿಗೆ ಅವುಗಳ ದೇಹವನ್ನು ತಂಪು ಮಾಡುವ ಕೂಲಿಂಗ್‌ ಮ್ಯಾಟ್‌, ಗಾಯಗಳನ್ನು ಗುಣಪಡಿಸುವ ಮುಲಾಮು ಕೂಡ ಅಗತ್ಯವಾಗುತ್ತದೆ.

ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಮೇಲೆ ಹಲವು ವಿಷಯಗಳಲ್ಲಿ ನಿಗಾ ವಹಿಸುವುದು ಮುಖ್ಯವಾಗುತ್ತದೆ. ಇದರಿಂದ ಅವುಗಳ ಆರೋಗ್ಯ ರಕ್ಷಿಸುವುದರೊಂದಿಗೆ ಬಿಸಿಲಿನ ಶಾಖದಿಂದಲೂ ಕಾಪಾಡಲು ಸಾಧ್ಯ.

ಶುದ್ಧ ನೀರು ಕುಡಿಸಿ

ನಿಮ್ಮ ಸಾಕುಪ್ರಾಣಿಗೆ ದಿನವಿಡೀ ಶುದ್ಧ ಹಾಗೂ ತಾಜಾ ನೀರು ಇರಿಸುವುದನ್ನು ಮರೆಯಬೇಡಿ. ಪ್ರತಿದಿನ ಪಾತ್ರೆಯಲ್ಲಿನ ನೀರು ಬದಲಿಸಿ. ನೀರಿಗೆ ಐಸ್‌ಕ್ಯೂಬ್‌ ಹಾಕಿ ಇಡಬಹುದು. ಕೆಲವೊಮ್ಮೆ ಮೊಸರು ಹಾಗೂ ಸಕ್ಕರೆರಹಿತ ಮಜ್ಜಿಗೆಯನ್ನೂ ಕುಡಿಯಲು ನೀಡಬಹುದು.

ಉರಿ ಬಿಸಿಲಿನಲ್ಲಿ ವ್ಯಾಯಾಮ ಬೇಡ

ಬೇಸಿಗೆಕಾಲದಲ್ಲಿ ಸಾಕುಪ್ರಾಣಿಗಳಿಗೆ ವ್ಯಾಯಾಮ ಮಾಡಿಸದೇ ಇರುವುದು ಉತ್ತಮ, ಒಂದು ವೇಳೆ ಮಾಡಿಸಲೇ ಬೇಕು ಅಂತಿದ್ದರೆ, ಬೆಳಗಿನ ಜಾವ ಅಥವಾ ಇಳಿ ಸಂಜೆಯ ಹೊತ್ತಿನಲ್ಲಿ ಮಾಡಿಸಬಹುದು. ರಸ್ತೆಯ ಮೇಲೆ ವಾಕಿಂಗ್‌ ಮಾಡಿಸುವುದಕ್ಕಿಂತ ಹುಲ್ಲಿನ ನಡೆಸುವುದು ಉತ್ತಮ.

ತಂಪು ಪಾನೀಯ ನೀಡಿ

ಹಣ್ಣು, ತರಕಾರಿಗಳಿಂದ ಮನೆಯಲ್ಲೇ ತಯಾರಿಸಿದ ಪಾನೀಯವನ್ನು ನಾಯಿಮರಿಗೆ ಕುಡಿಯಲು ನೀಡಬಹುದು. ಇದರೊಂದಿಗೆ ಅವುಗಳಿಗೆ ನೀಡುವ ಆಹಾರವನ್ನು ಕೆಲ ಹೊತ್ತು ಫ್ರಿಜ್‌ನಲ್ಲಿಟ್ಟು ತಂಪು ಮಾಡಿ ಕೊಡಬಹುದು.

ಕೂಲಿಂಗ್‌ ಮ್ಯಾಟ್‌ ಬಳಸಿ

ಬೇಸಿಗೆಯ ಧಗೆಯಿಂದ ಸಾಕುಪ್ರಾಣಿಯನ್ನು ರಕ್ಷಿಸಲು ಕೂಲಿಂಗ್‌ ಮ್ಯಾಟ್‌ ಉತ್ತಮ ಆಯ್ಕೆ. ಇದು ಪ್ರಾಣಿಯ ದೇಹದಿಂದ ಶಾಖವನ್ನು ಹೀರಿಕೊಳ್ಳುತ್ತದೆ, ಜೊತೆಗೆ ಚೈತನ್ಯ ನೀಡುವಂತೆ ಮಾಡುತ್ತದೆ. ತಣ್ಣನೆಯ ನೀರಿನಲ್ಲಿ ನೆನೆಸಿದ ಕೂಲಿಂಗ್‌ ಮ್ಯಾಟ್‌ 3 ದಿನಗಳವರೆಗೆ ತಣ್ಣಗೆ ಇರುತ್ತದೆ. ಆಗಾಗ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿಸುವುದು ಮುಖ್ಯವಾಗುತ್ತದೆ.

ಶಾಖಾಘಾತದ ಸಂಜ್ಞೆಗಳನ್ನು ಗುರುತಿಸಲು ಮರೆಯದಿರಿ

ಬೇಸಿಗೆಯಲ್ಲಿನ ಶಾಖಾಘಾತವು ಬಹಳ ಅಪಾಯ, ಸರಿಯಾದ ಚಿಕಿತ್ಸೆ ಸಿಗದಿದ್ದರೆ, ಇದರಿಂದ ಪ್ರಾಣಾಪಾಯವು ಉಂಟಾಗಬಹುದು. ಉಸಿರುಗಟ್ಟುವಿಕೆ, ಹೊಳಪಿನ ಕಣ್ಣುಗಳು, ಉಸಿರಾಟ ತೊಂದರೆ, ಜೊಲ್ಲು ಸುರಿಸುವುದು, ಆಲಸ್ಯ, ವಾಂತಿ, ಜ್ವರ, ತಲೆ ತಿರುಗುವಿಕೆ ಹಾಗೂ ಇನ್ನೂ ಅನೇಕ ಸಮಸ್ಯೆಗಳು ಇದರಿಂದ ಉಂಟಾಗಬಹುದು. ಈ ಯಾವುದೇ ಸಂಜ್ಞೆಗಳು ನಿಮ್ಮ ನಾಯಿ ಮರಿಯಲ್ಲಿ ಕಾಣಿಸಿದರೆ ತಕ್ಷಣಕ್ಕೆ ತಂಪಿನ ಜಾಗಕ್ಕೆ ಕರೆದ್ಯೊಯ್ದು, ನೀರು ಕುಡಿಸಿ, ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಉತ್ತಮ.

ಬಿಸಿಲಿನಲ್ಲಿ ನಿಲ್ಲಿಸಿದ ಗಾಡಿಯಲ್ಲಿ ಸಾಕುಪ್ರಾಣಿಯನ್ನು ಇರಿಸಿಬೇಡಿ

ಕಾರಿನ ಗಾಜನ್ನು ಇಳಿಸಿದ್ದರೂ ಕೂಡ ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನೊಳಗೆ ಕ್ಷಣ ಮಾತ್ರದಲ್ಲಿ ಬಿಸಿಯಾಗುತ್ತದೆ. ಪಾರ್ಕ್‌ ಮಾಡಿ ಕಾರಿನೊಳಗೆ ನಾಯಿ ಮರಿಯನ್ನು ಇರಿಸಿ ಹೋಗುವುದರಿಂದ ಶಾಖಾಘಾತ ಉಂಟಾಗಬಹುದು, ಅಲ್ಲದೆ ಇದರಿಂದ ಪ್ರಾಣಿಯ ಸಾವು ಸಂಭವಿಸುವ ಸಾಧ್ಯತೆ ಇದೆ.

ತುಪ್ಪಳಗಳ ರಕ್ಷಣೆ ಮಾಡಿ

ಮರಳಿನಲ್ಲಿ ನಡೆಯುವುದು, ಬಿಸಿಯಾದ ಬಿಸಿಲು ಇರುವ ಜಾಗದಲ್ಲಿ ನಡೆದಾಡಿಸುವುದರಿಂದ ಸಾಕುಪ್ರಾಣಿಗಳ ತುಪ್ಪಳಕ್ಕೆ ತೊಂದರೆ ಉಂಟಾಗಬಹುದು. ಆದ್ದರಿಂದ, ಬೇಸಿಗೆಯ ಶಾಖದಿಂದ ಸಾಕುಪ್ರಾಣಿಗಳ ಸೂಕ್ಷ್ಮವಾದ ತುಪ್ಪಳವನ್ನು ರಕ್ಷಿಸುವುದು ಮುಖ್ಯವಾಗಿದೆ. ತುಪ್ಪಳಕ್ಕೆ ಹಚ್ಚುವ ಮುಲಾಮುಗಳು ಬಿಸಿಲಿನಿಂದ ರಕ್ಷಣೆ ನೀಡಬಹುದು. ಬೆಣ್ಣೆ, ಜೇನುಮೇಣ ಮತ್ತು ತೆಂಗಿನೆಣ್ಣೆಯನ್ನು ಬಳಸಬಹುದು.

ಗ್ರೂಮಿಂಗ್‌ ಮಾಡಿ

ಬೇಸಿಗೆಯಲ್ಲಿ ಸಾಕುಪ್ರಾಣಿಗಳಿಗೆ ಗ್ರೂಮಿಂಗ್‌ ಮಾಡಿಸುವುದು ಅವಶ್ಯ ಎನ್ನಿಸುತ್ತದೆ. ಪ್ರತಿದಿನ ಅವುಗಳ ತುಪ್ಪಳ ಅಥವಾ ರೋಮವನ್ನು ಬಾಚಬೇಕು. ಇದರಿಂದ ಬೇಡದ ರೋಮ ತೊಡೆದು ಹೋಗುವ ಜೊತೆಗೆ ಚರ್ಮಕ್ಕೆ ಗಾಳಿಯಾಡಲು ಸಹಕಾರಿಯಾಗುತ್ತದೆ. ದೇಹವನ್ನು ತಂಪಾಗಿರಿಸಲು ಕೂದಲು ಅವಶ್ಯಕವಾಗಿದೆ, ಇದು ನೇರಳಾತೀತ ವಿಕಿರಣ ಮತ್ತು ಇತರ ಪರಿಸರ ಮಾಲಿನ್ಯಕಾರಕಗಳಿಂದ ರಕ್ಷಿಸುತ್ತದೆ. ಕೂದಲನ್ನು ಕತ್ತರಿಸುವುದು ಒಳ್ಳೆಯದಲ್ಲ, ಆದರೆ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.

ಈ ಎಲ್ಲಾ ಸಲಹೆಗಳೊಂದಿಗೆ ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ತಜ್ಞ ವೈದ್ಯರ ಸಲಹೆ ಪಡೆಯವುದೂ ಮುಖ್ಯವಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ