Travel: ಜೊತೆಯಾಗಿ, ಹಿತವಾಗಿ ಸೇರಿ ನಡೆವ; ಸಂಗಾತಿಗಳು ಜೊತೆಯಾಗಿ ಪ್ರವಾಸ ಮಾಡಿದಾಗ ಕಲಿಯುವ 10 ವಿಚಾರಗಳಿವು
Nov 08, 2023 07:45 AM IST
ಸಂಗಾತಿಗಳು ಜೊತೆಯಾಗಿ ಪ್ರವಾಸ ಮಾಡಿದಾಗ ಅರ್ಥವಾಗುವ 10 ವಿಚಾರಗಳಿವು
- ಪ್ರೇಮಿ ಅಥವಾ ಸಂಗಾತಿಯ ಜೊತೆ ಪ್ರವಾಸ ಮಾಡಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತದೆ. ಈ ಪ್ರವಾಸ ಕೇವಲ ನಿಮ್ಮ ಮನಸ್ಸಿಗೆ ಖುಷಿ ನೀಡುವುದು ಮಾತ್ರವಲ್ಲ ಇದರಿಂದ ಹಲವು ವಿಚಾರಗಳನ್ನು ಕಲಿಯಬಹುದು. ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಈ ಪ್ರವಾಸ ಒಂದು ಉತ್ತಮ ಅವಕಾಶ ಒದಗಿಸುವುದರಲ್ಲಿ ಎರಡು ಮಾತಿಲ್ಲ
ಪ್ರವಾಸಕ್ಕೆ ಹೋಗೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಇಂದಿನ ಒತ್ತಡದ ಬದುಕಿನಲ್ಲಿ ಒಂದೆರಡು ದಿನ ನೆಮ್ಮದಿಯಾಗಿ ಸುತ್ತಾಡಲು ಅವಕಾಶ ಸಿಕ್ಕರೆ ಅಬ್ಬಾ ಅನ್ನಿಸುವುದು ಸುಳ್ಳಲ್ಲ. ಇನ್ನು ಪ್ರವಾಸಕ್ಕೆ ಹೋಗುವವರ ವಿಚಾರಕ್ಕೆ ಬಂದರೆ ಕೆಲವರಿಗೆ ಒಬ್ಬರೇ ಪ್ರವಾಸ ಮಾಡುವುದೆಂದರೆ ಇಷ್ಟ. ಇನ್ನೂ ಕೆಲವರಿಗೆ ಜೊತೆಗೆ ಸಂಗಾತಿಯೋ ಸ್ನೇಹಿತರೋ ಇದ್ದರಷ್ಟೇ ಪ್ರವಾಸ ಪೂರ್ಣವಾಗುತ್ತದೆ. ಪ್ರವಾಸಕ್ಕೆ ಹೋಗುವ ಮುನ್ನವೇ ನಿಮಗೆ ಒಂಟಿಯಾಗಿ ಪಯಣ ಮಾಡುವುದು ಇಷ್ಟವೋ ಅಥವಾ ಬೇರೆಯವರ ಜೊತೆ ಪ್ರವಾಸ ಮಾಡುವುದು ಇಷ್ಟವೋ ಎಂಬುದನ್ನು ನೀವು ಅರಿಯಬೇಕು.
ಸಂಗಾತಿಯ ಜೊತೆ ಪ್ರವಾಸ ಮಾಡುವುದು ನಿಮ್ಮ ಪ್ರೇಮ ಪಯಣದ ಹಾದಿಯಲ್ಲಿನ ಮೈಲಿಗಲ್ಲು. ಸಂಗಾತಿಯ ಜೊತೆ ಪ್ರವಾಸ ಮಾಡಲು ಧೈರ್ಯ ಮತ್ತು ತಾಳ್ಮೆ ಎರಡೂ ಬೇಕು. ಹಾಗಾದರೆ ಸಂಗಾತಿಯ ಜೊತೆ ಪ್ರವಾಸಕ್ಕೆ ಹೋದರೆ ನಾವು ಕಲಿಯುವ ಪ್ರಮುಖ 10 ವಿಚಾರಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ.
ಇಬ್ಬರೂ ಜೊತೆಯಾಗಿ ಪ್ರತಿ ಕ್ಷಣವನ್ನು ಎಂಜಾಯ್ ಮಾಡಲು ಕಲಿಯುತ್ತೀರಿ
ಪ್ರಕೃತಿಯ ರಮಣೀಯ ದೃಶ್ಯಕಾವ್ಯದ ಮುಂದೆ ಇಬ್ಬರೂ ಕುಳಿತ ಪ್ರಪಂಚವನ್ನೇ ಮರೆಯಬಹುದು. ಇಬ್ಬರೂ ಜೊತೆಯಾಗಿ ಸಮಯ ಕಳೆಯಲು ಕಲಿಯಲು ಇದು ಬೆಸ್ಟ್ ಉಪಾಯ. ಅಲ್ಲದೇ ಜೊತೆಯಾಗಿ ಪ್ರವಾಸಕ್ಕೆ ಹೋದಾಗ ತಾನಾಗಿಯೇ ಈ ಅಭ್ಯಾಸ ನಿಮ್ಮಲ್ಲಿ ರೂಢಿಯಾಗುತ್ತದೆ.
ಹೊಂದಾಣಿಕೆಯ ಬಗ್ಗೆ ಅರಿವಾಗುತ್ತದೆ
ನಿಮ್ಮ ಸಂಬಂಧವನ್ನು ಅರಿತುಕೊಳ್ಳಲು ಜೊತೆಯಾಗಿ ಟ್ರಾವೆಲ್ ಮಾಡುವುದಕ್ಕಿಂತ ಉತ್ತಮ ಉಪಾಯವಿಲ್ಲ. ಜೊತೆಗೆ ಪಯಣಿಸುವಾಗ ನಿಮ್ಮ ಮನೋಭಾವ, ಇಷ್ಟಕಷ್ಟ, ಹೊಂದಾವಣಿಕೆಯ ಮನೋಭಾವ ಎಲ್ಲವೂ ಅರ್ಥವಾಗುತ್ತದೆ.
ನಿಮ್ಮ ಸಂಗಾತಿಯ ಪ್ಲಾನಿಂಗ್ ಸ್ಕಿಲ್ ಅರಿವಾಗುತ್ತದೆ
ದೊಡ್ಡ ಟ್ರಿಪ್ ಆಯೋಜಿಸುವುದು ಮುಖ್ಯವಲ್ಲ, ಆಯೋಜಿಸಿರುವ ಟ್ರಿಪ್ ಅನ್ನೇ ಇಬ್ಬರಿಗೂ ಇಷ್ಟವಾಗುವಂತೆ ಏಕ್ಸೈಮೆಂಟ್ ಇರುವಂತೆ ಆಯೋಜಿಸುವುದು ಮುಖ್ಯವಾಗುತ್ತದೆ. ಒಂದು ವೇಳೆ ನಿಮಗೆ ರೂಮ್ ಸಿಗದಿದ್ದಾಗ ಸರಿಯಾದ ಊಟ ಸಿಗದಿದ್ದಾಗ ನಿಮ್ಮ ಸಂಗಾತಿ ಹೇಗೆ ಪ್ಲಾನ್ ಮಾಡುತ್ತಾರೆ ಎಂಬುದನ್ನು ನೀವು ಈ ಮೂಲಕ ಕಂಡುಕೊಳ್ಳಬಹುದು.
ಮನೋಭಾವ ಅರ್ಥವಾಗುತ್ತದೆ
ಒಟ್ಟಾಗಿ ಪ್ರವಾಸ ಅಥವಾ ಪ್ರಯಾಣ ಮಾಡುವ ಎಲ್ಲವೂ ಜೊತೆಯಾಗಿಯೇ ನಡೆಯಬೇಕು ಎಂಬ ಮನೋಭಾವ ಸಲ್ಲ. ನಿಮ್ಮ ಇಷ್ಟದ ಚಟುವಟಿಕೆಯಲ್ಲಿ ಒಂಟಿಯಾಗಿಯೂ ತೊಡಗಿಕೊಳ್ಳಬಹುದು. ಇದನ್ನು ಪ್ರವಾಸದಲ್ಲಿ ಕಲಿಯಬಹುದು. ಈ ಮೂಲಕ ಈ ವಿಚಾರದಲ್ಲಿ ನಿಮ್ಮ ಸಂಗಾತಿಯ ಮನೋಭಾವವನ್ನು ಅರಿಯಬಹುದು.
ನಿಮ್ಮ ಸಂಗಾತಿ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಅರಿವಾಗುತ್ತದೆ
ಹೊಸ ಜಾಗ ಅಥವಾ ದೇಶಗಳಿಗೆ ಪ್ರವಾಸ ಮಾಡುವಾಗ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ನಿಮ್ಮ ಸಂಗಾತಿ ಆ ಸಂದರ್ಭವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೀವು ನೋಡಿ ಕಲಿಯಬಹುದು.
ಒಬ್ಬಿಗೊಬ್ಬರ ಮೇಲೆ ನಂಬಿಕೆ ಹುಟ್ಟುವುದು
ಪ್ರವಾಸಕ್ಕೆ ಹೋದಾಗ ಇಂತಹ ಕಷ್ಟಗಳು ಎದುರಾದರೂ ಇಬ್ಬರೂ ಜೊತೆಯಾಗಿ ಎದುರಿಸುತ್ತೀರಿ, ಇದರಿಂದ ನಂಬಿಕೆ ಬೆಳೆಯುತ್ತದೆ.
ನಿಮ್ಮ ಸಂಗಾತಿಯ ಆಸಕ್ತಿ ತಿಳಿಯುತ್ತದೆ
ಜೊತೆಯಾಗಿ ಪ್ರವಾಸ ಮಾಡಿದಾಗ ನಿಮ್ಮ ಸಂಗಾತಿ ಪ್ರತಿಯೊಂದು ಆಸಕ್ತಿಯ ಬಗ್ಗೆ ನೀವು ಹತ್ತಿರವಿದ್ದು ನೋಡಬಹುದು ಹಾಗೂ ಅದರ ಬಗ್ಗೆ ಅರಿತುಕೊಳ್ಳಬಹುದು.
ಸಮಯ ಕಳೆಯುವ ಅಭ್ಯಾಸ
ಪ್ರವಾಸದಲ್ಲಿ ನಿಮ್ಮ ಸಂಗಾತಿ ನಿಮ್ಮೊಂದಿಗೆ ಹೇಗೆ ಸಮಯ ಕಳೆಯುತ್ತಾರೆ, ಅವರ ಜೊತೆ ಯಾವ ರೀತಿ ಟೈಮ್‌ಪಾಸ್ ಆಗುತ್ತದೆ ಈ ಎಲ್ಲಾ ವಿಚಾರಗಳನ್ನೂ ಕಲಿಯಬಹುದು.
ನೀವಾಗಿಯೇ ಇರಲು ಕಲಿಯುತ್ತೀರಿ
ಪ್ರವಾಸದಲ್ಲಿ ನಿಜವಾದ ನಮ್ಮತನ ಎನ್ನುವುದು ಹೊರ ಬರುತ್ತದೆ. ಯಾಕೆಂದರೆ ಪ್ರವಾಸಕ್ಕೆ ಹೋದಾಗ ಯಾವುದೇ ಒತ್ತಡ ಇರುವುದಿಲ್ಲ. ಮಾನಸಿಕ ನೆಮ್ಮದಿ ಇರುತ್ತದೆ, ಆಗ ನಿಮ್ಮತನ ಏನು ಎಂಬುದು ನಿಮಗೂ ನಿಮ್ಮ ಸಂಗಾತಿ ಇಬ್ಬರಿಗೂ ಅರ್ಥವಾಗುತ್ತದೆ.
ಒಬ್ಬರಿಗೊಬ್ಬರ ಕಂಪನಿಯನ್ನು ಇಷ್ಟಪಡಲು ಕಲಿಯುವುದು
ಕೆಲವೊಮ್ಮೆ ಇಬ್ಬರೂ ಸೇರಿ ಪ್ರವಾಸ ಮಾಡಿದಾಗ ನೀವು ಹೋದ ಜಾಗಕ್ಕಿಂತ ನೀವು ಕಳೆದ ಸಮಯವೇ ಮುಖ್ಯವಾಗುತ್ತದೆ.
ವಿಭಾಗ