logo
ಕನ್ನಡ ಸುದ್ದಿ  /  ಜೀವನಶೈಲಿ  /  Varalakshmi Vrata Story: ಪರಮೇಶ್ವರ ಪಾರ್ವತಿಗೆ ಹೇಳಿದ ವರಮಹಾಲಕ್ಷ್ಮೀ ವ್ರತದ ಕಥೆ ಹೀಗಿದೆ

Varalakshmi Vrata Story: ಪರಮೇಶ್ವರ ಪಾರ್ವತಿಗೆ ಹೇಳಿದ ವರಮಹಾಲಕ್ಷ್ಮೀ ವ್ರತದ ಕಥೆ ಹೀಗಿದೆ

HT Kannada Desk HT Kannada

Aug 05, 2022 07:18 AM IST

google News

ಪರಮೇಶ್ವರ ಮತ್ತು ಪಾರ್ವತಿ ದೇವರು

    • ಪ್ರತಿ ಹಬ್ಬ ಹರಿದಿನಗಳಿಗೂ ಒಂದು ಹಿನ್ನೆಲೆ ಇದ್ದೇ ಇದೆ. ಪುರಾಣ ಐತಿಹ್ಯದಲ್ಲಿ ಇದಕ್ಕೆ ಕಥೆಗಳ ಉಲ್ಲೇಖಗಳೂ ಇವೆ. ಅಂಥದ್ದೇ ಒಂದು ಕಥೆಯ ಉಲ್ಲೇಖ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮಾಡುವ ವ್ರತಾಚರಣೆಗೂ (Varamahalakshmi pooje) ಇದೆ. ಅದು ಯಾವ ಕಥೆ?
ಪರಮೇಶ್ವರ ಮತ್ತು ಪಾರ್ವತಿ ದೇವರು
ಪರಮೇಶ್ವರ ಮತ್ತು ಪಾರ್ವತಿ ದೇವರು

ಅದು ಪೂರ್ವಕಾಲ. ದೇಶ ಸತ್ಯಲೋಕ. ಅಲ್ಲಿ ಋಷಿಶ್ರೇಷ್ಠರೆಲ್ಲರೂ ಸೇರಿದ್ದರು. ಪುರಾಣಿಕ ಶಿಖಾಮಣಿ ಸೂತಮಹರ್ಷಿ ಅವರ ಪ್ರವಚನ ಇತ್ತು. ಆ ಋಷಿಶ್ರೇಷ್ಠರೆಲ್ಲರೂ ಸೂತಮಹರ್ಷಿಗಳ ಬಳಿ ಪ್ರವಚನದ ವಿಚಾರ ಮಾತನಾಡುತ್ತ, ʻಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿಗಳು. ನೀವು ನಮಗೆ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತಾಚರಣೆಯನ್ನು ಹೇಳಿʼ ಎಂದು ಕೇಳಿಕೊಂಡರು.

ಋಷಿ ಶ್ರೇಷ್ಠರ ಮಾತನ್ನು ಮನ್ನಿಸಿದ ಸೂತಮಹರ್ಷಿಗಳು ತಮ್ಮ ಪ್ರವಚನದಲ್ಲಿ ಕಥೆಯೊಂದನ್ನು ಹೇಳಲು ಅಣಿಯಾದರು.

ಋಷಿ ಶ್ರೇಷ್ಠರೇ, ಈ ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳು ಈಡೇರುವಂತಹ ಅತ್ಯುತ್ತಮವಾದ ವ್ರತಾಚರಣೆ ಒಂದು ಇದೆ. ಆ ವ್ರತಾಚರಣೆಯ ಹಿನ್ನೆಲೆಯನ್ನು ನಿಮಗೆ ತಿಳಿಸಿಕೊಡುವೆ ಎನ್ನುತ್ತ ಕಥೆ ಹೇಳಲಾರಂಭಿಸಿದರು.

ಅದು, ಕೈಲಾಸ ಪರ್ವತ. ದೇವನದಿಗಳು ಹರಿಯುವ ನಿತ್ಯ ಹರಿದ್ವರ್ಣದ ನಾನಾ ಬಗೆಯ ವೃಕ್ಷ ಸಮೂಹದಿಂದ ಕೂಡಿದ ಪ್ರದೇಶ. ಕಾಮಧೇನು, ಕಲ್ಪವೃಕ್ಷ ಏನಿಲ್ಲ ಅಲ್ಲಿ. ಎಲ್ಲವೂ ಇರುವ ಆವಾಸಸ್ಥಾನವದು.

ಆದ್ದರಿಂದ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಹೋಗಿ ಆ ಪ್ರದೇಶದ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು. ಕೈಲಾಸ ಎಂಬುದು ಪಾರ್ವತಿ ಪರಮೇಶ್ವರರ ನಿತ್ಯಸಾನ್ನಿಧ್ಯ ಇರುವಂಥದ್ದು.

ಅಲ್ಲಿ ಹಿಂದೊಮ್ಮೆ, ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿದ್ದ. ಆಗ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, ʻಮಹಾದೇವಾ, ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು? ಅದನ್ನು ನನಗೆ ಹೇಳುʼ ಎಂದು ಕೇಳಿಕೊಂಡಳು.

ಆಗ ಪರಮೇಶ್ವರನು ಪಾರ್ವತಿಯೇ ಕೇಳು, ʻಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತ (Varamahalakshmi pooje) ಎಂಬುದು ಒಂದು ಇದೆ. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕುʼ ಎಂದು ಹೇಳಿದನು.

ಸಂತುಷ್ಠಳಾದ ಪಾರ್ವತಿಯು, ʻಸ್ವಾಮಿ ವರಲಕ್ಷ್ಮೀ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?ʼ ಎಂದು ಕೇಳಿದಳು.

ಆಗ ಪರಮೇಶ್ವರನು, ʻಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು. ಆ ರೀತಿ ವ್ರತ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುದು. ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ಹೇಳುತ್ತೇನೆ ಕೇಳುʼ ಎಂದು ಪಾರ್ವತಿಗೆ ಕಥೆಯನ್ನು ಹೇಳಲು ಮುಂದಾದ.

ವಿದರ್ಭ ದೇಶಕ್ಕೆ ರಾಜಧಾನಿ ಕುಂಡಿನನಗರ. ಅಲ್ಲಿ ಚಾರುಮತಿ ಎಂಬ ಮಹಿಳೆ ಇದ್ದಳು. ಆಕೆ ದರಿದ್ರಳಾದರೂ ಸದಾಚಾರ ಸಂಪನ್ನಳು, ಪತಿ ಶುಶ್ರೂಷೆಯೆ ಮುಖ್ಯ ಎಂದು ತಿಳಿದು ಸದಾ ಸಂತೋಷ ಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ತೋರುತ್ತಿದ್ದವಳು.

ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಹೇಳಿದಳು- "ಪತಿವ್ರತೆಯಾದ ಚಾರುಮತಿ, ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನಗೆ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನ್ನ ದಾರಿದ್ರ್ಯವು ನಾಶವಾಗಿ, ಅಷ್ಟೈಶ್ವರ್ಯವು ಪ್ರಾಪ್ತಿಯಾಗುತ್ತದೆ.

ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ಯಾರು ನನ್ನ ಪೂಜೆಯನ್ನು ಮಾಡುವರೋ ಅಂಥವರಿಗೆ ನಾನು ಸಕಲ ಭೋಗಭಾಗ್ಯಗಳನ್ನು ಕೊಡುವೆನು. ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುತ್ತದೆ.

ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು! ಅವರೇ ಶೂರರು! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು" ಎಂದು ಉಪದೇಶಿಸಿ ಅಂತರ್ದಾನಳಾದಳು.

ಈ ಘಟನೆ ಬಳಿಕ ನಿದ್ದೆಯಿಂದ ಎದ್ದ ಚಾರುಮತಿಯು ನಡೆದ ಘಟನೆಯನ್ನು ತನ್ನವರಿಗೆ ಹೇಳಿದಳು. ಕೆಲ ದಿನಗಳ ಬಳಿಕ ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು.

ಆದರೆ, ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು.

ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಭೂಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು.

ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರುʼ ಎಂದು ಹೇಳಿ ಪರಮೇಶ್ವರನು ಕಥೆ ಮುಗಿಸಿದನು.

ಕಥೆ ಕೇಳಿದ ಪಾರ್ವತಿಯು, "ಮಹಾದೇವ ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು" ಎಂದು ಕೇಳಿಕೊಂಡಳು.

ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು-

ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳ ಸ್ನಾನದ ನಂತರ ಶುಭವಸ್ತ್ರಗಳನ್ನು ಧರಿಸಬೇಕು. ಮನೆಯಲ್ಲಿ ರಂಗೋಲಿಯಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು.

ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನ ಮಾಡಿ, ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. ಷೋಡಶೋಪಚಾರ ಮಾಡಿ ಸತ್ಕರಿಸಿ

ಪದ್ಮಾಸನೆ, ಪದ್ಮಊರು, ಪದ್ಮಾಕ್ಷಿ, ಪದ್ಮ ಸಂಭವೆ ಎಂಬ ಮಂತ್ರದೊಂದಿಗೆ ಶಾಸ್ತ್ರೋಸ್ತ್ರ ಪೂಜೆಯಿಂದ ದೇವಿಯನ್ನು ತೃಪ್ತಿಪಡಿಸಿ, ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು.

ಅನಂತರ ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು" ಎಂದು ಪರಮೇಶ್ವರನು ವಿವರಿಸಿದನು.

***

ಸೂತಪುರಾಣಿಕರು ಈ ಕಥೆಯನ್ನು ಋಷಿಗಳಿಗೆ ಹೇಳಿದರು. ಈ ಕಥೆಯನ್ನು ಕೇಳಿದ ಋಷಿಗಳು ಸಂತೋಷ ಭರಿತರಾದರು.

---------------------------------------

ಈ ವರಮಹಾಲಕ್ಷ್ಮೀ ವ್ರತವನ್ನು ಯಾರು ಮಾಡುವರೋ ಹಾಗೂ ಈ ಕಥೆಯನ್ನು ಯಾರು ಕೇಳುವರೋ ಅವರಿಗೆ ದಾರಿದ್ರ್ಯ ದುಃಖ ನಾಶವಾಗಿ ಸಂಪತಿನಿಂದ ಸಕಲ ಭಾಗ್ಯಗಳೂ ಕೂಡಿ ಬರುತ್ತವೆ ಎಂದು ಪುರಾಣ ಹೇಳುತ್ತದೆ. ಹೆಚ್ಚಿನ ಮಾಹಿತಿಗೆ, ಸಂದೇಹ ನಿವಾರಣೆಗೆ ಧಾರ್ಮಿಕ ಆಚರಣೆಗಳ ಪರಿಣತರನ್ನು ಸಂಪರ್ಕಿಸುವುದು ಒಳಿತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ