logo
ಕನ್ನಡ ಸುದ್ದಿ  /  ಜೀವನಶೈಲಿ  /  Viral Video: ನನ್ನ ಅಮ್ಮಂಗೆ ಹೆದರಿಸ್ತಿಯಾ, ಮಾಡ್ತೀನಿ ಇರು ನಿಂಗೆ; ಆನೆಯನ್ನೇ ಓಡಿಸಿದ ಮುದ್ದಾದ ಎಮ್ಮೆ ಮರಿ; ವಿಡಿಯೊ ವೈರಲ್‌

Viral Video: ನನ್ನ ಅಮ್ಮಂಗೆ ಹೆದರಿಸ್ತಿಯಾ, ಮಾಡ್ತೀನಿ ಇರು ನಿಂಗೆ; ಆನೆಯನ್ನೇ ಓಡಿಸಿದ ಮುದ್ದಾದ ಎಮ್ಮೆ ಮರಿ; ವಿಡಿಯೊ ವೈರಲ್‌

Reshma HT Kannada

Aug 09, 2023 12:41 PM IST

google News

ಆನೆಯನ್ನು ಓಡಿಸುತ್ತಿರುವ ಎಮ್ಮೆ ಮರಿ; ಮರಿ ಹಿಂದೆ ಓಡುತ್ತಿರುವ ಅಮ್ಮ; ವೈರಲ್‌ ವಿಡಿಯೊದ ದೃಶ್ಯ

    • ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೊಗಳು ನಮ್ಮ ಮನಸ್ಸಿಗೆ ಸಾಕಷ್ಟು ಖುಷಿ ಕೊಡುತ್ತವೆ. ಎಮ್ಮೆ ಮರಿಯೊಂದು ಆನೆಯನ್ನು ಓಡಿಸುವುದು, ಆನೆ ಅದಕ್ಕೆ ಮುದ್ದಾಗಿ ಪ್ರತಿಕ್ರಿಯಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ನಿಮಗೆ ಇಷ್ಟವಾಗದೇ ಇರದು.
ಆನೆಯನ್ನು ಓಡಿಸುತ್ತಿರುವ ಎಮ್ಮೆ ಮರಿ; ಮರಿ ಹಿಂದೆ ಓಡುತ್ತಿರುವ ಅಮ್ಮ; ವೈರಲ್‌ ವಿಡಿಯೊದ ದೃಶ್ಯ
ಆನೆಯನ್ನು ಓಡಿಸುತ್ತಿರುವ ಎಮ್ಮೆ ಮರಿ; ಮರಿ ಹಿಂದೆ ಓಡುತ್ತಿರುವ ಅಮ್ಮ; ವೈರಲ್‌ ವಿಡಿಯೊದ ದೃಶ್ಯ

ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೊಗಳನ್ನು ನೋಡಿದಾಗ ಮನಸ್ಸಿಗೆ ಖುಷಿ ಸಿಗುವುದು ಸುಳ್ಳಲ್ಲ. ಕೆಲವೊಮ್ಮೆ ಪ್ರಾಣಿಗಳ ಮುದ್ದಾಗ ಪ್ರತಿಕ್ರಿಯೆಗಳು ನಮ್ಮ ಮನಸ್ಸನ್ನು ಗೆಲ್ಲುತ್ತವೆ. ಈಗ ಇಂತಹದ್ದೇ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರ ಹೃದಯ ಗೆದ್ದಿದೆ.

ಎಮ್ಮೆಯ ಮರಿಯೊಂದು ಆನೆಯನ್ನು ಅಟ್ಟಿಸಿಕೊಂಡು ಹೋಗುವುದು, ಆನೆಯು ಅದಕ್ಕೆ ಪ್ರತಿಕ್ರಿಯಿಸುವುದು ಈ ವಿಡಿಯೊದಲ್ಲಿದೆ. ಕಾಡಿನ ಭಾಗವೊಂದರಲ್ಲಿ ನಡೆದ ಈ ಘಟನೆಯ ವಿಡಿಯೊವು ಜನರನ್ನು ಸೆಳೆದಿದೆ. ಮಾತ್ರವಲ್ಲ ಮರಿಗಳ ಮುಂದೆ ಪ್ರಾಣಿಗಳು ಕೂಡ ತಮ್ಮ ತುಂಟಾಟ ತೋರುತ್ತವೆ ಎಂಬುದನ್ನು ತೋರಿಸುವಂತಿದೆ ಈ ವಿಡಿಯೊ.

ಈ ವಿಡಿಯೊವನ್ನು ಕೆಲವು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಆದರೆ ಇತ್ತೀಚೆಗೆ ರೆಡ್ಡಿಟ್‌ ವೇದಿಕೆಯಲ್ಲಿ ಪುನಃ ಅಪ್‌ಲೋಡ್‌ ಆಗಿದ್ದು, ಮತ್ತೆ ವೈರಲ್‌ ಆಗಿದೆ. ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಆಂಡ್ರ್ಯೂ ಕೊಹೆನ್‌ ಎನ್ನುವವರು ಈ ವಿಡಿಯೊವನ್ನು ರೆಕಾರ್ಡ್‌ ಮಾಡಿದ್ದಾರೆ ಎಂದು ಯೂಟ್ಯೂಬ್‌ ಹೇಳಿಕೊಂಡಿದೆ. ಅವರು ವಿಡಿಯೊ ಕುರಿತು ಹೇಳಿದ ಮಾಹಿತಿಯನ್ನು ಯೂಟ್ಯೂಬ್‌ನಲ್ಲಿ ಶೇರ್‌ ಮಾಡಲಾಗಿದೆ.

ʼಒಂದು ದಿನ ನಾವು ಮಧ್ಯಾಹ್ನದ ಮೇಲೆ ಡ್ರೈವ್‌ಗೆ ಹೋಗಿದ್ದೆವು. ಒಂದು ವಿಶಾಲವಾದ ಬಯಲಿನ ಜಾಗದಲ್ಲಿ ಗಾಡಿ ಪಾರ್ಕ್‌ ಮಾಡಿ, ಸುತ್ತಲಿನ ಜಾಗವನ್ನು ವೀಕ್ಷಣೆ ಮಾಡುತ್ತಿದ್ದೆವು. ಆಗ ಒಂದು ಎಮ್ಮೆ ಪೊದೆಯ ಹಿಂದಿನಿಂದ ಅಲ್ಲೇ ಸಮೀಪದಲ್ಲಿದ್ದ ನೀರಿನ ಹೊಂಡದ ಬಳಿಗೆ ನಡೆದುಕೊಂಡು ಬರುತ್ತಿತ್ತು. ಅದನ್ನು ಪುಟ್ಟ ಮರಿಯೊಂದು ಹಿಂಬಾಲಿಸುತ್ತಿತ್ತು. ಆದರೆ ಸ್ವಲ್ಪ ಹೊತ್ತಿಗೆ ಆನೆಯೊಂದು ಆ ಎಮ್ಮೆಯ ಕಡೆ ಬಂತು. ಸ್ವಲ್ಪ ಹೊತ್ತು ಆನೆ ಹಾಗೂ ಎಮ್ಮೆ ಏನೋ ಸಂಭಾಷಣೆ ನಡೆಸಿದಂತೆ ಕಂಡುಬಂತು. ನಂತರ ನೋಡಿದಾಗ ಎಮ್ಮೆಯ ಮರಿಯು ಆನೆಯನ್ನು ಓಡಿಸಿಕೊಂಡು ಹೋಗುತ್ತಿತ್ತು. ಅದಕ್ಕೆ ಗುದ್ದಲು ನೋಡುತ್ತಿತ್ತುʼ ಎಂದು ಆತ ವಿವರಿಸಿದ್ದಾರೆ.

ʼಮೊದಲು ನಮಗೆ ಆನೆ ಎಮ್ಮೆ ಮರಿಗೆ ನೋವು ಮಾಡಬಹುದು ಅನ್ನಿಸಿತು, ಆದರೆ ಆನೆ ಹಾಗೆ ಮಾಡಲಿಲ್ಲ, ಅದು ಕೂಡ ಮರಿಯೊಂದಿಗೆ ಮುದ್ದಾಗಿ ನಡೆದುಕೊಂಡಿತುʼ ಎಂದು ಬರೆದುಕೊಂಡಿದ್ದಾರೆ. ʼಆನೆಯನ್ನು ಹೆದರಿಸಿದ ಬೋಲ್ಡ್‌ ಎಮ್ಮೆ ಮರಿʼ ಎಂದು ಅವರು ಶೀರ್ಷಿಕೆ ಬರೆದುಕೊಂಡಿದ್ದಾರೆ.

5 ದಿನಗಳ ಹಿಂದೆ ಈ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 4,500 ಮಂದಿ ಈ ವಿಡಿಯೊಗೆ ಅಪ್‌ವೋಟ್‌ ಮಾಡಿದ್ದಾರೆ. ಇನ್ನು ಹಲವರು ವಿಡಿಯೊ ವೀಕ್ಷಣೆ ಮಾಡುತ್ತಲೇ ಇದ್ದಾರೆ. ಹಲವರು ಈ ವಿಡಿಯೊಗೆ ಕಾಮೆಂಟ್‌ ಮಾಡಿದ್ದಾರೆ.

ಈ ವಿಡಿಯೊವನ್ನು ಶೇರ್‌ಬೇರ್‌ ಎನ್ನುವ ಟ್ವಿಟರ್‌ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ.

ಕಾಮೆಂಟ್‌ಗಳು ಹೀಗಿವೆ

ʼಆನೆ ಈ ರೀತಿ ಸೌಮ್ಯವಾಗಿ ಪ್ರತಿಕ್ರಿಯೆ ನೀಡಿರುವುದು ನಾನೆಂದೂ ನೋಡಿಲ್ಲʼ ಎಂದು ರೆಡ್ಡಿಟ್‌ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಆನೆಯು ತನಗಿಂತ ಚಿಕ್ಕ ಪ್ರಾಣಿಗೆ ಎಂದಿಗೂ ನೋವು ಮಾಡುವುದಿಲ್ಲʼ ಎಂದು ಇನ್ನೊಬ್ಬರು ಕಾಮೆಂಟ್‌ ಮೂಲಕ ಈ ವಿಡಿಯೊಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼಖಂಡಿತ ಅದು ನೋವು ಮಾಡುವುದು. ಇದನ್ನೇ ಪ್ರಾಣಿಪ್ರೀತಿ ಎನ್ನುವುದುʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ʼಆನೆಯದ್ದು ಸೌಮ್ಯ ಹೃದಯʼ ಎಂದು ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ