WhatsApp Update: ನಿಮ್ಮ ವಾಟ್ಸ್‌ಆಪ್ ಖಾತೆ ಇನ್ನಷ್ಟು ಸುರಕ್ಷಿತವಾಗಿರಲು ಬಂದಿದೆ ಹೊಸ ಮಾರ್ಗ; ಈ ಭದ್ರತಾ ವೈಶಿಷ್ಟ್ಯ ಹೀಗೆ ಸಕ್ರಿಯಗೊಳಿಸಿ
Nov 07, 2023 09:15 PM IST
WhatsApp Update: ನಿಮ್ಮ ವಾಟ್ಸ್‌ಅಪ್ ಖಾತೆ ಸಂರಕ್ಷಿಸಲು ಹೊಸ ಮಾರ್ಗ; ಈ ಭದ್ರತಾ ವೈಶಿಷ್ಟ್ಯ ಹೀಗೆ ಸಕ್ರಿಯಗೊಳಿಸಿ
- ವಾಟ್ಸ್‌ಅಪ್ ತನ್ನ ಬಳಕೆದಾರ ಖಾತೆಗಳಿಗೆ ಹೆಚ್ಚುವರಿ ರಕ್ಷಣೆ ನೀಡುವ ಸಲುವಾಗಿ ಇಮೇಲ್ ವಿಳಾಸ ಲಿಂಕ್ ಮಾಡಬಹುದಾದ ಮತ್ತೊಂದು ಹೊಸ ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ವಾಟ್ಸ್‌ಅಪ್ ಶಿಫಾರಸು ಮಾಡಿದ ಈ ಭದ್ರತಾ ವೈಶಿಷ್ಟ್ಯವು, ನಿಮ್ಮ ವಾಟ್ಸ್‌ಅಪ್ ಖಾತೆ ಪ್ರವೇಶಿಸಲು ನೀಡುತ್ತಿರುವ ಪರ್ಯಾಯ ರಕ್ಷಣಾ ಮಾರ್ಗವಾಗಿದೆ.
ಮೆಟಾದ ಒಡೆತನದಲ್ಲಿರುವ ತ್ವರಿತ ಸಂದೇಶ ಕಳುಹಿಸುವ ವೇದಿಕೆ (ಇನ್‌ಸ್ಟ್ಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್) ವಾಟ್ಸ್‌ಅಪ್ ಹೊಸ ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅದೇನೆಂದರೆ ಇಮೇಲ್ ವಿಳಾಸ (ಇಮೇಲ್ ಅಡ್ರೆಸ್) ಎಂಬ ಹೊಸ ಭದ್ರತಾ ವಿಭಾಗ. ಇದು ಬಳಕೆದಾರರು ತಮ್ಮ ವಾಟ್ಸ್‌ಅಪ್ ಖಾತೆಗೆ ಇಮೇಲ್ ವಿಳಾಸವನ್ನು ಲಿಂಕ್ ಮಾಡಿಕೊಳ್ಳಲು ಅನುಮತಿಸುತ್ತದೆ. ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ತಮ್ಮ ಖಾತೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಅವಕಾಶ ನೀಡುತ್ತದೆ.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ವಾಟ್ಸ್‌ಅಪ್ ಬೀಟಾದ ಇತ್ತೀಚಿನ ಆಂಡ್ರಾಯ್ಡ್ 2.23.24.10 ನವೀಕರಣವನ್ನು ಸ್ಥಾಪಿಸಿದ ನಂತರ ಈ ವೈಶಿಷ್ಟ್ಯವು ಕೆಲವು ಬೀಟಾ ಪರೀಕ್ಷರಿಗೆ ಲಭ್ಯವಿರಲಿದೆ ಎಂದು ವಾಬೀಟಾಇನ್ಫೋ (WABetaInfo) ವರದಿ ಮಾಡಿದೆ. ಈ ವರದಿಯ ಪ್ರಕಾರ ಕೆಲವು ಸಂದರ್ಭಗಳಲ್ಲಿ ಬಳಕೆದಾರರು ತಮ್ಮ ಖಾತೆಯನ್ನು ಬಳಸಲು ಇಮೇಲ್ ವಿಳಾಸದ ಮೂಲಕ ಪ್ರವೇಶಿಸಲು ಸಹಾಯ ಮಾಡುತ್ತದೆ. ಈ ಹೊಸ ಭದ್ರತಾ ವೈಶಿಷ್ಟ್ಯ ನಿಮ್ಮ ಖಾತೆಗೆ ಈಗಾಗಲೇ ಲಭ್ಯವಿದೆಯೇ ಎಂದು ತಿಳಿಯಲು ವಾಟ್ಸ್‌ಅಪ್ ಸೆಟ್ಟಿಂಗ್‌ನ ಅಕೌಂಟ್ ವಿಭಾಗಕ್ಕೆ ಹೋಗಿ, ಅಲ್ಲಿ ಇಮೇಲ್ ವಿಳಾಸ ಎಂಬ ವೈಶಿಷ್ಟ್ಯವಿದೆಯೇ ಎಂದು ಪರಿಶೀಲಿಸಬಹುದಾಗಿದೆ. ಅಲ್ಲಿ ಆ ವೈಶಿಷ್ಟ್ಯವನ್ನು ಕಾನ್ಫಿಗರ್ ಮಾಡಿಕೊಳ್ಳುವುದರ ಮೂಲಕ ಹೆಚ್ಚಿನ ಭದ್ರತೆಯನ್ನು ನಿಮ್ಮ ಖಾತೆಗೆ ಅಳವಡಿಸಿಕೊಳ್ಳಬಹುದು.
ಈ ವೈಶಿಷ್ಟ್ಯ ಐಚ್ಛಿಕವಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಆದರೆ ಇಮೇಲ್ ಮೂಲಕ ಮತ್ತೊಂದು ಸಾಧನದಲ್ಲಿ ಲಾಗ್ ಇನ್ ಮಾಡಲು ಬಯಸಿದರೆ ಇದನ್ನು ಸಕ್ರೀಯಗೊಳಿಸಲು ಶಿಫಾರಸು ಮಾಡಿದೆ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಈಗಾಗಲೇ ಇರುವ ಎಸ್‌ಎಮ್‌ಎಸ್ ಬಳಸುವ ಆಯ್ಕೆ ಅದರಲ್ಲಿ ಹಾಗೆಯೇ ಮುಂದುವರಿಯಲಿದೆ.
ವಾಟ್ಸ್‌ಅಪ್ ಖಾತೆಗೆ ನಿಮ್ಮ ಇಮೇಲ್ ವಿಳಾಸವನ್ನು ಸಂಯೋಜಿಸಲು ಇಮೇಲ್ ವಿಳಾಸ ಆಯ್ಕೆ ಮಾಡಿದ್ದರೂ, ಖಾತೆಯನ್ನು ರಚಿಸಲು ಇನ್ನೂ ನಿಮ್ಮ ಫೋನ್ ಸಂಖ್ಯೆಯ ಅಗತ್ಯವಿರುತ್ತದೆ. ಬಳಕೆದಾರು ಫೋನ್ ಸಂಖ್ಯೆಯನ್ನು ಬಳಸಿಕೊಂಡು ಅವರ ಖಾತೆಗೆ ಲಾಗ್ ಇನ್ ಮಾಡುವ ಆಯ್ಕೆಯು ಯಾವಾಗಲೂ ಅವರಿಗೆ ಇರುತ್ತದೆ ಎಂದು ವಾಬೀಟಾಇನ್ಫೋ ಹೇಳಿದೆ.
ಇಮೇಲ್ ವಿಳಾಸದ ಮೂಲಕ ಲಾಗ್‌ಇನ್ ಮಾಡುವ ವೈಶಿಷ್ಟ್ಯವಿದ್ದರೂ ಮುಂದೆಯೂ ಸಹ ನಿಮ್ಮ ಫೋನ್ ಸಂಖ್ಯೆಯೇ ವಾಟ್ಸ್‌ಅಪ್ ಖಾತೆಯ ಪ್ರಾಥಮಿಕ ಗುರುತಿಸುವಿಕೆಯಾಗಿಯೇ ಮುಂದುವರಿಯುತ್ತದೆ. ಲಾಗಿನ್ ಮಾಡಲು ನಿಮ್ಮ ಫೋನ್ ಸಂಖ್ಯೆಯು ನಿರ್ಣಾಯಕ ವಿಧಾನವಾಗಿಯೇ ಉಳಿದಿರುತ್ತದೆ. ವಾಟ್ಸ್‌ಅಪ್‌ನ ‘ಇಮೇಲ್ ವಿಳಾಸ‘ ಈ ಹೊಸ ವೈಶಿಷ್ಟ್ಯದ ಸೇರ್ಪಡೆಯು ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಇದು ಬಳಕೆದಾರರಿಗೆ ಅವರ ಖಾತೆಯ ಪ್ರವೇಶಕ್ಕೆ ಪರ್ಯಾಯ ಮಾರ್ಗವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಇದು ವಾಟ್ಸ್‌ಅಪ್ ಬಳಕೆಯ ಅನುಭವವನ್ನು ಸುಧಾರಿಸುತ್ತದೆ.
‘ಇಮೇಲ್ ವಿಳಾಸ ’ಈ ವೈಶಿಷ್ಟ್ಯದ ನವೀಕರಣ ಹೇಗೆ
ಹೊಸ ಭದ್ರತಾ ವೈಶಿಷ್ಟ್ಯವಾದ ಇಮೇಲ್ ವಿಳಾಸದ ಮೂಲಕ ವಾಟ್ಸ್‌ಅಪ್ ಖಾತೆಯನ್ನು ರಕ್ಷಿಸಲು ಗೂಗಲ್ ಪ್ಲೇ ಸ್ಟೋರ್‌ನಿಂದ ವಾಟ್ಸ್‌ಅಪ್‌ನ ಇತ್ತೀಚಿನ ಬೀಟಾ ನವೀಕರಣವನ್ನು ಸ್ಥಾಪಿಸಿಕೊಳ್ಳಬೇಕಾಗಿದೆ. ಈ ಸೌಲಭ್ಯವು ಸದ್ಯ ಬೀಟಾ ಪರೀಕ್ಷಕರು ಪ್ರವೇಶಿಸಬಹುದಾಗಿದೆ. ಮುಂಬರುವ ವಾರಗಳಲ್ಲಿ ಇದು ಕ್ರಮೇಣ ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗುತ್ತದೆ.