logo
ಕನ್ನಡ ಸುದ್ದಿ  /  ಜೀವನಶೈಲಿ  /  Burj Khalifa: ಜಗತ್ತಿನ ಅತಿ ಎತ್ತರದ ಕಟ್ಟಡ ಖ್ಯಾತಿಯ ಬುರ್ಜ್‌ ಖಲೀಫಾದ ಕುರಿತ ಆಸಕ್ತಿದಾಯಕ ವಿಚಾರಗಳಿವು

Burj Khalifa: ಜಗತ್ತಿನ ಅತಿ ಎತ್ತರದ ಕಟ್ಟಡ ಖ್ಯಾತಿಯ ಬುರ್ಜ್‌ ಖಲೀಫಾದ ಕುರಿತ ಆಸಕ್ತಿದಾಯಕ ವಿಚಾರಗಳಿವು

Reshma HT Kannada

Mar 19, 2024 04:50 PM IST

google News

ಬುರ್ಜ್‌ ಖಲೀಫಾ

    • ಆಧುನಿಕ ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿ ಹೊಂದಿರುವ ದುಬೈನ ಬುರ್ಜ್‌ ಖಲೀಫಾಕ್ಕೀಗ ಭರ್ತಿ 14 ವರ್ಷ ತುಂಬಿದೆ. ದುಬೈಗೆ ವಿಶೇಷವಾದ ಹೆಸರು ತಂದುಕೊಟ್ಟಿರುವ ಈ ಗಗನಚುಂಬಿ ಕಟ್ಟಡ ಹಲವು ದಾಖಲೆಗಳನ್ನು ಬರೆದಿದೆ. ಸಾಂಪ್ರದಾಯಿಕ ಇಸ್ಲಾಮಿಕ್‌ ಶೈಲಿಯ ಬುರ್ಜ್‌ ಖಲೀಫಾದ ಆಸಕ್ತಿದಾಯಕ ವಿಷಯಗಳು ಇಲ್ಲಿವೆ ಓದಿ.
ಬುರ್ಜ್‌ ಖಲೀಫಾ
ಬುರ್ಜ್‌ ಖಲೀಫಾ

ಜಗತ್ತಿನ ಅತಿ ಎತ್ತರದ ಕಟ್ಟಡ ಎಂದಾಕ್ಷಣ ನಮಗೆಲ್ಲರಿಗೂ ಥಟ್ಟನೆ ನೆನಪಾಗುವುದು ದುಬೈನ ಬುರ್ಜ್ ಖಲೀಫಾ. ಆಧುನಿಕ ಜಗತ್ತಿನ ಅದ್ಭುತ ವಾಸ್ತುಶಿಲ್ಪಕ್ಕೀಗ ಭರ್ತಿ 14 ವರ್ಷ. ಈ ಕಟ್ಟಡವನ್ನು 2010ರ ಜನವರಿ 4 ರಂದು ಮೊಟ್ಟ ಮೊದಲ ಬಾರಿಗೆ ಜಗತ್ತಿಗೆ ಅನಾವರಣಗೊಳಿಸಲಾಯಿತು. ಅಲ್ಲಿಂದ ಈಚೆಗೆ ಅದರ ಖ್ಯಾತಿ ಎತ್ತರಕ್ಕೆ ಬೆಳೆಯುತ್ತಲೇ ಇದೆ. ಗಗನಚುಂಬಿ ಕಟ್ಟಡಗಳಿಗೆ ಹೊಸ ಕಲ್ಪನೆ ನೀಡಿದ ಬುರ್ಜ್‌ ಖಲೀಫಾ ವಾಸ್ತುಶಿಲ್ಪದ ಮೇರುಕೃತಿ ಎನ್ನಬಹುದು. 14 ವರ್ಷಗಳ ಹಿಂದೆ ದುಬೈ ಈ ಭವ್ಯವಾದ ಕಟ್ಟಡವನ್ನು ಪರಿಚಯಿಸಿದಾಗ ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡಿತ್ತು. ಖ್ಯಾತ ವಾಸ್ತುಶಿಲ್ಪಿ ಆಡ್ರಿಯನ್‌ ಸ್ಮಿತ್‌ ವಿನ್ಯಾಸಗೊಳಿಸಿದ ಬುರ್ಜ್‌ ಖಲೀಪಾ, ಸಾಂಪ್ರದಾಯಿಕ ಇಸ್ಲಾಮಿಕ್‌ ಶೈಲಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಮೀಕರಣವಾಗಿದೆ. ಇಂಗ್ಲೀಷ್ ವೈ (Y) ಆಕಾರದಲ್ಲಿರುವ ವಿಶಿಷ್ಟವಾದ ಮಹಡಿಗಳ ಯೋಜನೆ ಹೊಂದಿರುವ ಈ ಕಟ್ಟಡ ಹೈಮೆನೋಕಾಲಿಸ್‌ ಹೂವಿನಿಂದ ಪ್ರೇರಿತವಾಗಿ ನಿರ್ಮಿಸಲಾಗಿದೆ. ಇದು ಅದರ ಆಕರ್ಷಕ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಪ್ರತಿಬಿಂಬಿಸುವ ಫಲಕಗಳಿಂದ ಅಲಂಕರಿಸಲ್ಪಟ್ಟ ಇದರ ಹೊರಭಾಗವು ಡೇಲೈಟ್‌ನಲ್ಲಿ ಮಿಂಚುತ್ತಿದ್ದರೆ, ರಾತ್ರಿಯಾಗುತ್ತಿದ್ದಂತೆ ಮೋಡಿ ಮಾಡುವ ಚಮತ್ಕಾರವಾಗಿ ರೂಪಾಂತರಗೊಳ್ಳುತ್ತದೆ.

ದುಬೈನ ಖ್ಯಾತಿ ಹೆಚ್ಚಿಸಿರುವ ಬುರ್ಜ್‌ ಖಲೀಫಾದ ಆಸಕ್ತಿಕರ ವಿಷಯಗಳು

* ಜಗತ್ತಿನ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಬುರ್ಜ್ ಖಲೀಫಾ 828 ಮೀಟರ್‌ (2717 ಫೀಟ್‌) ಎತ್ತರ, 163 ಫ್ಲೋರ್‌ ಹೊಂದಿದೆ. ಇದು ಐಫೆಲ್‌ ಟವರ್‌ಗಿಂತ ಮೂರು ಪಟ್ಟು ಎತ್ತರ ಮತ್ತು ಎಂಪೈರ್‌ ಸ್ಟೇಟ್‌ ಬಿಲ್ಡಿಂಗ್‌ಗಿಂತ ಸುಮಾರು ಎರಡು ಪಟ್ಟು ಎತ್ತರವಾಗಿದೆ. ದುಬೈನಲ್ಲಿರುವ ವಿಶ್ವಪ್ರಸಿದ್ಧ ಈ ಕಟ್ಟಡಕ್ಕೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.

* ಬುರ್ಜ್‌ ಖಲೀಫಾದ 148ನೇ ಫ್ಲೋರ್‌ನಲ್ಲಿದೆ ವಿಶ್ವದ ಅತಿ ಎತ್ತರದ ಹೊರಾಂಗಣ ವೀಕ್ಷಣಾ ಡೆಕ್‌. 1821 ಅಡಿ ಎತ್ತರದಲ್ಲಿರುವ ವೀಕ್ಷಣಾ ಡೆಕ್‌ನಿಂದ ದುಬೈನ ಅತ್ಯದ್ಭುತ ದೃಶ್ಯವನ್ನು ನೋಡಬಹುದು.

* ಜಗತ್ತಿನ ಬೇರೆಲ್ಲೂ ಕಾಣಸಿಗದ 163 ಫ್ಲೋರ್‌ಗಳು ಬುರ್ಜ್‌ ಖಲೀಪಾದಲ್ಲಿದೆ. ಇದರ ಎತ್ತರದಷ್ಟು ಮತ್ತೆ ಬೇರೆ ಯಾವುದೇ ಕಟ್ಟಡಗಳಿಲ್ಲ.

* ಜಗತ್ತಿನಲ್ಲಿ ಅತಿ ಎತ್ತರದ ರೆಸ್ಟೋರೆಂಟ್‌ ಹೊಂದಿರುವ ಹೆಗ್ಗಳಿಕೆ ಬುರ್ಜ್ ಖಲೀಫಾದ್ದಾಗಿದೆ. ಆಟ್‌ ಮೊಸ್ಫಿಯರ್‌ ಎಂಬ ಹೆಸರಿನ ರೆಸ್ಟೋರೆಂಟ್‌ 122ನೇ ಫ್ಲೋರ್‌ನಲ್ಲಿದೆ. ಜೊತೆಗೆ 160 ನೇ ಫ್ಲೋರ್‌ನಲ್ಲಿಯೂ ಜನರು ವಾಸಿಸಬಹುದಾದ ಮಹಡಿಯನ್ನು ಹೊಂದಿರುವ ಬುರ್ಜ್‌ ಖಲೀಫಾ ದಾಖಲೆ ಬರೆದಿದೆ.

* ಬುರ್ಜ್‌ ಖಲೀಫಾ ತನ್ನ ಸುತ್ತಮುತ್ತಲಿನ ಉದ್ಯಾನಗಳಿಗೆ ನೀರು ಒದಗಿಸುವ, ತಂಪಾಗಿಸುವ ವ್ಯವಸ್ಥೆಯನ್ನು ಹೊಂದಿದೆ. ನೀರಿನ ಘನೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿ ಇದು ಇಕೊ–ಫ್ರಂಡ್ಲೀ ಆಗಿದೆ.

* ಬುರ್ಜ್‌ ಖಲೀಫಾವನ್ನು 59 ಮೈಲ್‌ (95 ಕಿಮೀ) ದೂರದಿಂದ ಹಗಲಿನಲ್ಲಿ ನೋಡಬಹುದು. ದುಬೈನ ಬುರ್ಜ್‌ ಖಲೀಫಾದ ಆಬ್ಸರ್ವೇಟರಿ ಡೆಕ್‌ ಆಕರ್ಷಣೀಯ ಸ್ಥಳವಾಗಿದೆ.

* ಲಿಫ್ಟ್‌ ವ್ಯವಸ್ಥೆಯಲ್ಲಿಯೂ ಸಹ ಬುರ್ಜ್‌ ಖಲೀಫಾ ದಾಖಲೆ ಬರೆದಿದೆ. ಜಗತ್ತಿನ ಅತಿ ಎತ್ತರದಲ್ಲಿ ಸಾಗುವ ಲಿಫ್ಟ್‌ ಎಂಬ ಖ್ಯಾತಿ ಹೊಂದಿದೆ. ಈ ಗಗನಚುಂಬಿ ಕಟ್ಟಡದ ಫ್ಲೋರ್‌ಗಳನ್ನು ತಲುಪಲು ಇದು ಅತಿ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಇಲ್ಲಿನ ಲಿಫ್ಟ್‌ ವ್ಯವಸ್ಥೆಯ ವೇಗ ಅಷ್ಟಿದೆ. ಇದು 10 ಮೀಟರ್‌ಗಳಷ್ಟು ದೂರವನ್ನು ಕ್ರಮಿಸಲು ತೆಗೆದುಕೊಳ್ಳುವ ಸಮಯ ಕೇವಲ 1 ಸೆಕೆಂಡ್‌. ಇಷ್ಟು ವೇಗವಾಗಿ ಚಲಿಸುವು ಲಿಫ್ಟ್‌ ಜಗತ್ತಿನಲ್ಲಿ ಬೇರೊಂದಿಲ್ಲ. 124ನೇ ಫ್ಲೋರ್‌ನಲ್ಲಿರುವ ಆಬ್ಸರ್ವೇಷನ್‌ ಡೆಕ್‌ ಅನ್ನು ವೀಕ್ಷಿಸಲು ಬರುವ ಪ್ರವಾಸಿಗರನ್ನ ಕೇವಲ 1 ನಿಮಿಷದಲ್ಲಿ ಅಲ್ಲಿಗೆ ತಲುಪಿಸುತ್ತದೆ.

ನೀವು ದುಬೈಗೆ ಭೇಟಿ ನೀಡಿದ್ದರೆ, ತಪ್ಪದೇ ಬುರ್ಜ್‌ ಖಲೀಫಾವನ್ನು ನೋಡಿ ಕಣ್ತುಂಬಿಕೊಳ್ಳಲು ಮರೆಯಬೇಡಿ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ