ಒಮ್ಮೆ ಆಸ್ಪತ್ರೆಗೆ ದಾಖಲಾದ್ರೆ ಸಾಕು, ಬಹುತೇಕ ಭಾರತೀಯರು ದಿವಾಳಿ, ಸಮಗ್ರ ಆರೋಗ್ಯ ವಿಮೆ ಅಗತ್ಯದ ಕಡೆಗೆ ಗಮನಸೆಳೆದ ಉದ್ಯಮಿ ನಿತಿನ್ ಕಾಮತ್
Sep 02, 2024 04:24 PM IST
ಒಮ್ಮೆ ಆಸ್ಪತ್ರೆಗೆ ದಾಖಲಾದ್ರೆ ಸಾಕು, ಬಹುತೇಕ ಭಾರತೀಯರು ದಿವಾಳಿ, ಸಮಗ್ರ ಆರೋಗ್ಯ ವಿಮೆ ಅಗತ್ಯದ ಕಡೆಗೆ ಗಮನಸೆಳೆದ ಉದ್ಯಮಿ ನಿತಿನ್ ಕಾಮತ್
ಭಾರತದಲ್ಲಿ ಆರೋಗ್ಯ ಸೇವೆ ದುಬಾರಿಯಾಗುತ್ತ ಸಾಗಿದೆ. ಆರೋಗ್ಯ ಕ್ಷೇತ್ರದ ಹಣದುಬ್ಬರ ಶೇಕಡ 14ರಂತೆ ಏರುತ್ತಿದೆ. ಹೀಗಾಗಿ, ಒಮ್ಮೆ ಆಸ್ಪತ್ರೆಗೆ ದಾಖಲಾದ್ರೆ ಸಾಕು, ಬಹುತೇಕ ಭಾರತೀಯರು ದಿವಾಳಿಯಾಗಿ ಬಿಡುತ್ತಾರೆ ಎಂದು ಝೆರೋದಾ ಸಹ ಸಂಸ್ಥಾಪಕ ನಿತಿನ್ ಕಾಮತ್ ಎಚ್ಚರಿಸಿದ್ದಾರೆ. ಇದು ಸಮಗ್ರ ಆರೋಗ್ಯ ವಿಮೆಯ ಅಗತ್ಯವೂ ಹೌದು ಎಂಬುದರ ಕಡೆಗೆ ಗಮನಸೆಳೆದಿದ್ದಾರೆ.
ಬೆಂಗಳೂರು: ಆರೋಗ್ಯ ಕ್ಷೇತ್ರದ ಹಣದುಬ್ಬರ ಪ್ರಮಾಣ ಯಾವ ಪ್ರಮಾಣದಲ್ಲಿದೆ ಎಂದರೆ ಒಮ್ಮೆ ಆಸ್ಪತ್ರೆಗೆ ದಾಖಲಾಗಿ ಬಂದರೆ ಬಹುತೇಕ ಭಾರತೀಯರ ಸಂಪತ್ತು ಕರಗಿ ದಿವಾಳಿಯಾಗಿ ಬಿಡುತ್ತಾರೆ ಎಂದು ಝೆರೋದಾ ಕಂಪನಿಯ ಸಹ ಸಂಸ್ಥಾಪಕ ನಿತಿನ್ ಕಾಮತ್ ಎಚ್ಚರಿಸಿದ್ದಾರೆ. ಅವರು ಈ ಮೂಲಕ ಸಮಗ್ರ ಆರೋಗ್ಯ ವಿಮೆಯ ಅಗತ್ಯವನ್ನು ಎತ್ತಿ ತೋರಿಸಿದ್ದಾರೆ.
ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಈ ವಿಚಾರ ಬರೆದುಕೊಂಡಿರುವ ನಿತಿನ್ ಕಾಮತ್, ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕ ತೊಂದರೆಗಳನ್ನು ತಪ್ಪಿಸಲು ಭಾರತೀಯರು ಕನಿಷ್ಠ ಐದರಿಂದ ಹತ್ತು ವರ್ಷಗಳ ಟ್ರ್ಯಾಕ್ ರೆಕಾರ್ಡ್ ಮತ್ತು 80-90 ಪ್ರತಿಶತದ ವ್ಯಾಪ್ತಿಯಲ್ಲಿ ಅಪೇಕ್ಷಣೀಯ ಕ್ಲೈಮ್ ಸೆಟ್ಲ್ಮೆಂಟ್ ಅನುಪಾತವನ್ನು ಹೊಂದಿರುವ ವಿಮಾ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಅವರಿಂದ ಪಾಲಿಸಿಯನ್ನು ಖರೀದಿಸಬೇಕು ಎಂದು ಹೇಳಿದ್ದಾರೆ.
ಈ ವರ್ಷ ಆರಂಭದಲ್ಲಿ ಅಂದರೆ ಫೆಬ್ರವರಿಯಲ್ಲಿ ಕಾಮತ್ ಸ್ವತಃ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅಲ್ಲದೇ ಆಗ ಅವರು ಅದಕ್ಕೆ ಕಾರಣಗಳನ್ನು ಉಲ್ಲೇಖಿಸುತ್ತ, ಕಡಿಮೆ ನಿದ್ರೆ, ಅತಿಯಾದ ಕೆಲಸ ಮತ್ತು ಬಳಲಿಕೆ ಕಾರಣ ಎಂದು ಉಲ್ಲೇಖಿಸಿದ್ದರು.
ನಿತಿನ್ ಕಾಮತ್ ಅವರ ಎಕ್ಸ್ ಪೋಸ್ಟ್ ಹೀಗಿದೆ
ಆರೋಗ್ಯ ವಿಮೆಯ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬ ಮೂರು ಅಂಶಗಳ ಮಾರ್ಗಸೂಚಿಯ ಗ್ರಾಫಿಕ್ ಚಿತ್ರವನ್ನು ನಿತಿನ್ ಕಾಮತ್ ತಮ್ಮ ಪೋಸ್ಟ್‌ನಲ್ಲಿಎ ಶೇರ್ ಮಾಡಿದ್ದಾರೆ.
“ಬಹುತೇಕ ಭಾರತೀಯರು ಒಮ್ಮೆ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ದಿವಾಳಿಯಾಗುತ್ತಾರೆ. ಆದ್ದರಿಂದ ಭಾರತೀಯರು ಕಡ್ಡಾಯವಾಗಿ ಉತ್ತಮ ಆರೋಗ್ಯ ವಿಮೆ ಹೊಂದುವುದು ಕಡ್ಡಾಯ” ಎಂದು ಅವರು ಬರೆದಿದ್ದಾರೆ.
ಕಾಮತ್ ಅವರು 5,000-8,000 ಆಸ್ಪತ್ರೆಗಳ ನಡುವಿನ ನೆಟ್‌ವರ್ಕ್ ಮತ್ತು 55-75 ಪ್ರತಿಶತದಷ್ಟು ಕ್ಲೈಮ್ ಅನುಪಾತವನ್ನು ಹೊಂದಿರುವ ವಿಮಾದಾರರನ್ನು ಆಯ್ಕೆ ಮಾಡಲು ಶಿಫಾರಸು ಮಾಡಿದ್ದಾರೆ. ಅಲ್ಲದೆ, ಪಾಲಿಸಿ ಆಯ್ಕೆ ಮಾಡುವಾಗ ಗಮನಿಸಬೇಕಾದ ಏಳು ಅಂಶಗಳನ್ನೂ ಅದರಲ್ಲಿ ಉಲ್ಲೇಖಿಸಿದ್ದಾರೆ.
ವೈದ್ಯಕೀಯ ವಿಮೆ ಪಡೆಯುವುದು ಯಾಕೆ ಮುಖ್ಯ
ಏಷ್ಯಾದಲ್ಲಿ ಅತ್ಯಧಿಕ ವೈದ್ಯಕೀಯ ಹಣದುಬ್ಬರ ದರ ಭಾರತದ್ದು. ಇದು ಸದ್ಯ 14 ಪ್ರತಿಶತ ತಲುಪಿದೆ. ಸರಳವಾಗಿ ಹೇಳಬೇಕು ಎಂದರೆ, ವೈದ್ಯಕೀಯ ವೆಚ್ಚಗಳು ಗಗನಮುಖಿಯಾಗಿವೆ. ಪ್ಲಮ್ ಎಂಬ ಇನ್ಶೂರ್‌ಟೆಕ್ ಕಂಪನಿ ಪ್ರಕಟಿಸಿದ "ಕಾರ್ಪೊರೇಟ್ ಇಂಡಿಯಾ 2023 ರ ಆರೋಗ್ಯ ವರದಿ" ಪ್ರಕಾರ, 71 ಪ್ರತಿಶತದಷ್ಟು ಕಾರ್ಮಿಕರು ತಮ್ಮ ಆರೋಗ್ಯದ ವೆಚ್ಚವನ್ನು ತಮ್ಮ ಜೇಬಿನಿಂದ ಭರಿಸುತ್ತಾರೆ. ಕೇವಲ 15 ಪ್ರತಿಶತದಷ್ಟು ಜನರು ಉದ್ಯೋಗದಾತರಿಂದ ಆರೋಗ್ಯ ವಿಮೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ವಿಮೆ ಕ್ಲೈಮ್ ಅಂಗೀಕಾರವಾಗುವಲ್ಲಿ ಕೂಡ ಅನೇಕ ತೊಂದರೆಗಳಿವೆ.
ಸಮೀಕ್ಷೆಯಲ್ಲಿ ಭಾಗವಹಿಸಿದ್ದ 302 ಜಿಲ್ಲೆಗಳ 39,000 ಜನರ ಪೈಕಿ ಶೇಕಡ 43 ಜನ ವಿಮೆ ಕ್ಲೈಮ್ ಮಾಡಲು ಕಿರಿಕಿರಿ ಅನುಭವಿಸಿದ್ದಾರೆ. ಪಾಲಿಸಿ ನಿಯಮಗಳ ಪೂರ್ಣ ಅರಿವು ಇಲ್ಲದೆ, ತಾಂತ್ರಿಕ ಸಮಸ್ಯೆಗಳ ಕಾರಣ ತೊಂದರೆ ಅನುಭವಿಸಿದ್ದಾರೆ. ಕೈಯಿಂದಲೇ ಖರ್ಚು ಭರಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾಗಿ ವರದಿ ವಿವರಿಸಿದೆ.