SmilePay; ನಿನ್ನ ಮುದ್ದಿನ ನಗುವೇ ಸಾಕು, ಆ ನಗುವಲಿ ಒಪ್ಪಿಗೆ ಹಾಕು, ಅರೆ ಸಾಕು, ಆ ನಗುವಾ ಬಿಸಾಕು; ಇದು ಫೆಡರಲ್ ಬ್ಯಾಂಕ್ ಸ್ಮೈಲ್‌ಪೇ ವಿಶೇಷ
Federal Bank SmilePay; ಇನ್ಮೇಲೆ ಹಣ ಖರ್ಚು ಮಾಡಲು ಅಳುವಂತಿಲ್ಲವೇ ಇಲ್ಲ. ನಗದಿದ್ದರೆ ನಗದು ಅಲ್ಲಲ್ಲ ಹಣಕಾಸು ವಹಿವಾಟು ನಡೆಯದು! ಹೌದು, ಫೆಡರಲ್ ಬ್ಯಾಂಕ್ ಪರಿಚಯಿಸಿರುವ ಸ್ಪೈಲ್ ಪೇ ವಿಶೇಷವಿದು- ನಿನ್ನ ಮುದ್ದಿನ ನಗುವೇ ಸಾಕು, ಆ ನಗುವಲಿ ಒಪ್ಪಿಗೆ ಹಾಕು, ಅರೆ ಸಾಕು, ಅರೆ ಸಾಕು, ಆ ನಗುವಾ ಬಿಸಾಕು ಎಂದು ಗುಣುಗುತ್ತಾ ಇದೇನು ತಂತ್ರಜ್ಞಾನ ಅನ್ನೋದನ್ನು ನೋಡೋಣ.
ಬೆಂಗಳೂರು: ನಿನ್ನ ಮುದ್ದಿನ ನಗುವೇ ಸಾಕು, ಆ ನಗುವಲಿ ಒಪ್ಪಿಗೆ ಹಾಕು, ಅರೆ ಸಾಕು, ಅರೆ ಸಾಕು, ಆ ನಗುವಾ ಬಿಸಾಕು… ಅರೆ ಇದೇನಿದು ಈ ಹಾಡಿನ ಸಾಲು ಯಾಕೆ ನೆನಪಿಗೆ ಬಂತು ಅಂತೀರಾ… ಫೆಡರಲ್ ಬ್ಯಾಂಕ್ ಪರಿಚಯಿಸಿರುವ ಸ್ಮೈಲ್ ಪೇ ನೋಡಿದ ಕೂಡಲೇ ನೆನಪಿಗೆ ಬಂತು ಈ ಹಾಡು.
ಬಹುಶಃ ನಿಧಾನವಾಗಿ ಕಾರ್ಡ್‌ಗಳು ಅಂದ್ರೆ ಕ್ರೆಡಿಟ್, ಡೆಬಿಡ್ ಕಾರ್ಡ್‌ಗಳು ಮರೆಯಾಗುವ ಲಕ್ಷಣ ಕಂಡುಬಂದಿದೆ. ಯುಪಿಐ ಪಾವತಿಯಲ್ಲಿ ಈಗ ಟೈಪ್ ಮಾಡಿ, ಭರ್ತಿ ಮಾಡಿದ ಬಳಿಕ ಹಣಕಾಸಿನ ವಹಿವಾಟು ನಡೆಸುತ್ತಿದ್ದೇವಲ್ಲ. ಅದು ಕೂಡ ನಿಧಾನವಾಗಿ ಮರೆಯಾಗುವ ಸಾಧ್ಯತೆ ಇದೆ. ಕಾರಣ ಇಷ್ಟೆ, ಮುಖ ಚಹರೆ ಮತ್ತು ಧ್ವನಿ, ನಗು ಗುರುತು ಹಿಡಿದು ಹಣಕಾಸು ವಹಿವಾಟು ನಡೆಸುವ ಸುಧಾರಿತ ತಂತ್ರಜ್ಞಾನ ಬಳಕೆಗೆ ಬಂದಿದೆ.
ಹೌದು ಫೆಡರಲ್ ಬ್ಯಾಂಕ್ ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಬಳಸಿಕೊಂಡು ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡುವುದಕ್ಕೆ ಮುಂದಾಗಿದೆ. ಇದು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಬಹುದೊಡ್ಡ ಮೈಲಿಗಲ್ಲಾಗುವ ಸಾಧ್ಯತೆಯನ್ನು ಬ್ಯಾಂಕ್ ನಿರೀಕ್ಷಿಸುತ್ತಿದೆ. ನಗದು, ಕಾರ್ಡ್ ವಹಿವಾಟು ಅಥವಾ ಮೊಬೈಲ್ ಉಪಕರಣ ಬಳಸಿದ ವಹಿವಾಟು ಕಡಿಮೆಯಾಗಿ ಎಲ್ಲೇ ಹೋದರು ನಗುನಗುತ್ತಾ ಹಣ ಖರ್ಚು ಮಾಡುವ ವ್ಯವಸ್ಥೆ ಬರಬಹುದು!
ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಪರಿಚಯಿಸಲಾದ ಈ ವ್ಯವಸ್ಥೆಯು ಭಾರತಕ್ಕೆ ಹೊಸದು. ಇದು ಸರ್ಕಾರಿ ಬೆಂಬಲಿತ ಭೀಮ್, ಆಧಾರ್ ಪೇ ಮೂಲಸೌಕರ್ಯದಲ್ಲಿ ಕಾರ್ಯನಿರ್ವಹಿಸುತ್ತದೆ.
ಫೆಡರಲ್ ಬ್ಯಾಂಕ್ ಸ್ಮೈಲ್‌ಪೇ ಹೇಗೆ ಕೆಲಸ ಮಾಡುತ್ತೆ
ಫೆಡರಲ್ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಸ್ಮೈಲ್‌ಪೇ, ಬ್ಯಾಂಕಿನ ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ತಡೆರಹಿತ, ಬಯೋಮೆಟ್ರಿಕ್ ಆಧಾರಿತ ಪಾವತಿಗಳನ್ನು ಸರಾಗಗೊಳಿಸಲಿದೆ. ಇದು ಭೀಮ್ ಆಧಾರ್ ಪೇ ಪ್ಲಾಟ್‌ಫಾರಂನಲ್ಲಿ ಕೆಲಸಮಾಡುತ್ತದೆ. ಇದನ್ನು ಫೆಡರಲ್ ಬ್ಯಾಂಕ್ ಗ್ರಾಹಕರಾಗಿರುವ ವ್ಯಾಪಾರೋದ್ಯಮಿಗಳು FED MERCHANT ಹೆಸರಿನ ಬ್ಯಾಂಕಿನ ವ್ಯಾಪಾರಿ ಅಪ್ಲಿಕೇಶನ್ ಮೂಲಕ ಪಡೆಯಬಹುದು. ಈ ಅಪ್ಲಿಕೇಶನ್ ವ್ಯಾಪಾರಿಗಳಿಗೆ ಆಧಾರ್ ದೃಢೀಕರಣ ಮತ್ತು ಮುಖ ಗುರುತಿಸುವಿಕೆಯ ಮೂಲಕ ಕ್ಯಾಶ್ ಕೌಂಟರ್‌ನಲ್ಲಿ ಗ್ರಾಹಕರಿಂದ ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಅನುಮತಿಸುತ್ತದೆ. ಇದಕ್ಕಾಗಿ ವ್ಯಾಪಾರಿಯ ಆಧಾರ್ ಅನ್ನು ಅವರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಗ್ರಾಹಕರ ವಿಚಾರಕ್ಕೆ ಬಂದರೆ ಅವರು ಕೂಡ ವಹಿವಾಟನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಾದರೆ ಆಧಾರ್ ಜೋಡಣೆಯಾಗಿರುವ ಮತ್ತು ಸಾಕಷ್ಟು ಬ್ಯಾಲೆನ್ಸ್ ಹೊಂದಿರುವ ಮಾನ್ಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ಸರಳವಾದ 4 ಹಂತಗಳಲ್ಲಿ ಹೇಳಬೇಕು ಎಂದರೆ,
1) ಫೆಡರಲ್ ಬ್ಯಾಂಕ್‌ನಲ್ಲಿ ಆಧಾರ್ ಜೋಡಣೆಯಾಗಿರುವ ಖಾತೆ ಹೊಂದಿರುವ ಗ್ರಾಹಕರು, ಅದೇ ಬ್ಯಾಂಕ್‌ನಲ್ಲಿ ಗ್ರಾಹಕರಾಗಿರುವ ವ್ಯಾಪಾರಿ ಮಳಿಗೆಗೆ ಹೋಗಿ ಅಲ್ಲಿ ಕ್ಯಾಶ್ ಕೌಂಟರ್‌ಗೆ ಹಣ ಪಾವತಿಸಲು ಬರುತ್ತಾರೆ.
2) ಕ್ಯಾಶ್ ಕೌಂಟರ್‌ನಲ್ಲಿ ಹಣ ಪಾವತಿ ಮಾಡಲು ಅವರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಯುಪಿಐ ಸ್ಕ್ಯಾನ್ ಮಾಡದೆ, ವ್ಯಾಪರಿ ಮಳಿಗೆಯಲ್ಲಿರುವ ಸ್ಮೈಲ್‌ಪೇ ಸಂಬಂಧಿಸಿದ ಆಪ್‌ನಲ್ಲಿ ತಮ್ಮ ಬೆರಳಚ್ಚು ಅಥವಾ ಮುಖಚಹರೆ ಸ್ಕ್ಯಾನ್ ಮಾಡಿಸಿಕೊಳ್ಳುತ್ತಾರೆ.
3) ವ್ಯಾಪಾರಿಗಳು ತಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್‌ನಲ್ಲಿ FED MERCHANT ಡೌನ್‌ಲೋಡ್ ಮಾಡಿಟ್ಟುಕೊಂಡು ಅದರಲ್ಲಿ ಭೀಮ್ ಆಧಾರ್ ಪೇ ಆಪ್‌ನ ಬಯೋಮೆಟ್ರಿಕ್ ಸ್ಕ್ಯಾನರ್ ಮೂಲಕ ಗ್ರಾಹಕರ ದತ್ತಾಂಶವನ್ನು ದೃಢೀಕರಿಸುತ್ತಾರೆ.
4) ಗ್ರಾಹಕರು ನಗುತ್ತಿದ್ದಂತೆ ಆಪ್‌ನ ಸ್ಕ್ಯಾನರ್ ಅವರ ಮುಖಚಹರೆ ಸೆರೆಹಿಡಿದು ಕಣ್ಣಿನ ಗುರುತು ದೃಢೀಕರಿಸುತ್ತದೆ. ಅದರೊಂದಿಗೆ ಹಣಪಾವತಿ ಸಲೀಸಾಗಿ ನಡೆದು ಹೋಗುತ್ತದೆ.
ಅರೆ ಮರೆತೇ ಬಿಟ್ಟೆ ನೋಡಿ, ಸುದ್ದಿ ಶುರುಮಾಡಬೇಕಾದರೆ ಉಲ್ಲೇಖಿಸಿದ್ದ ಆ ಹಾಡು ಯಾವುದು ಅಂತ ಹೇಳಿಲ್ಲ ಅಲ್ವ, ಶಿವರಾಜ್ ಕುಮಾರ್ ಅಭಿನಯದ ಎಕೆ 47 ಸಿನಿಮಾದ್ದು. 1999ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.