ತೆರಿಗೆ ಹಣದ ಲೂಟಿ ಬಗ್ಗೆ ಪಿಎಚ್‌ಡಿ ಮಾಡಲು ಬಿಬಿಎಂಪಿಯೇ ವಿಶ್ವವಿದ್ಯಾಲಯ, ಸರ್ಕಾರವೇ ಕುಲಾಧಿಪತಿ!; ಪತ್ರಕರ್ತ ರಾಜೀವ್ ಹೆಗಡೆ ಲೇಖನ-bengaluru news bbmp is the university the government is the chancellor to do a phd on looting tax money rajeev hegde uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ತೆರಿಗೆ ಹಣದ ಲೂಟಿ ಬಗ್ಗೆ ಪಿಎಚ್‌ಡಿ ಮಾಡಲು ಬಿಬಿಎಂಪಿಯೇ ವಿಶ್ವವಿದ್ಯಾಲಯ, ಸರ್ಕಾರವೇ ಕುಲಾಧಿಪತಿ!; ಪತ್ರಕರ್ತ ರಾಜೀವ್ ಹೆಗಡೆ ಲೇಖನ

ತೆರಿಗೆ ಹಣದ ಲೂಟಿ ಬಗ್ಗೆ ಪಿಎಚ್‌ಡಿ ಮಾಡಲು ಬಿಬಿಎಂಪಿಯೇ ವಿಶ್ವವಿದ್ಯಾಲಯ, ಸರ್ಕಾರವೇ ಕುಲಾಧಿಪತಿ!; ಪತ್ರಕರ್ತ ರಾಜೀವ್ ಹೆಗಡೆ ಲೇಖನ

ಬನಶಂಕರಿಯಿಂದ ಕೋಣನಕುಂಟೆ ಕ್ರಾಸ್‌ವರೆಗಿನ ಕನಕಪುರ ರಸ್ತೆಯ ಅವ್ಯವಸ್ಥೆ ನಿತ್ಯವೂ ಈ ಭಾಗದ ಜನರ ಹಿಡಿಶಾಪಕ್ಕೆ ಒಳಗಾಗಿದೆ. ಇದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದಿರುವ ಪತ್ರಕರ್ತ ರಾಜೀವ ಹೆಗಡೆ, ತೆರಿಗೆ ಹಣದ ಲೂಟಿ ನಡೆಯುತ್ತಿರುವುದರ ಕಡೆಗೆ ಗಮನಸೆಳೆದಿದ್ದಾರೆ.

 ಕನಕಪುರ ರಸ್ತೆಯ ಯಲಚೇನಹಳ್ಳಿ ಬಸ್‌ ನಿಲ್ದಾಣದ ಬಳಿ
ಕನಕಪುರ ರಸ್ತೆಯ ಯಲಚೇನಹಳ್ಳಿ ಬಸ್‌ ನಿಲ್ದಾಣದ ಬಳಿ (Rajeev Hegde)

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ಮೂಲಸೌಕರ್ಯದ ವಿಚಾರ ಈಗ ಪದೇಪದೆ ಚರ್ಚೆಗೆ ಒಳಗಾಗುತ್ತಿದೆ. ಇದಕ್ಕೆ ನಿತ್ಯವೂ ತಾಜಾ ನಿದರ್ಶನಗಳು ಸಿಗುತ್ತಿದ್ದು, ಪತ್ರಕರ್ತ ರಾಜೀವ್ ಹೆಗಡೆ ಕನಕಪುರ ರಸ್ತೆಯ ಅವ್ಯವಸ್ಥೆ ಬಗ್ಗೆ ಗಮನಸೆಳೆದಿದ್ದಾರೆ.

ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬಹಳ‍ಷ್ಟು ವಿವರಗಳನ್ನು ಹಂಚಿಕೊಂಡಿರುವ ಅವರು, ಅವೈಜ್ಞಾನಿಕವಾಗಿ, ಯಾವುದೇ ಮುಂದಾಲೋಚನೆ ಅಥವಾ ಸ್ಪಷ್ಟ ಯೋಜನೆಗಳು ಇಲ್ಲದೇ ಕೆಲಸ ಮಾಡುವ ಮತ್ತು ಮಾಡಿಸುವ ಆಡಳಿತ ವ್ಯವಸ್ಥೆಗೆ ಕನ್ನಡಿಯನ್ನೇ ಹಿಡಿದಿದ್ದಾರೆ. ಆ ಲೇಖನ ಇಲ್ಲಿದೆ.

ತೆರಿಗೆ ಹಣದ ಲೂಟಿ ಬಗ್ಗೆ ಪಿಎಚ್‌ಡಿ ಮಾಡಲು ಬಿಬಿಎಂಪಿಯೇ ವಿಶ್ವವಿದ್ಯಾಲಯ

ಒಂದೆಡೆ ಸಾವಿರಾರು ಕೋಟಿ ಹಣವನ್ನು ಬಾಕಿ ಇರಿಸಿಕೊಳ್ಳಲಾಗಿದೆ ಎಂದು ಗುತ್ತಿಗೆದಾರರಿಂದ ಪ್ರತಿಭಟನೆ, ಇನ್ನೊಂದೆಡೆ ಅನಗತ್ಯವಾಗಿ ಸರಿ ಇರುವ ಪಾದಚಾರಿ ಮಾರ್ಗಗಳನ್ನು ಕಿತ್ತು ಹಾಕಿದ ಬಿಬಿಎಂಪಿ. ಇವೆಲ್ಲವನ್ನೂ ಬೆಂಗಳೂರಿನ ಸಾರ್ವಜನಿಕರು ರಸ್ತೆ ಗುಂಡಿಯಲ್ಲಿ ಬಿದ್ದು ಎದ್ದುಕೊಂಡು ನೋಡುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಬಿಬಿಎಂಪಿಯ ಗುತ್ತಿಗೆದಾರರಿಗೆ 1600 ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆಯಂತೆ. ಇದನ್ನು ವಿರೋಧಿಸಿ ಗುತ್ತಿಗೆದಾರರು ಅನಿರ್ಧಿಷ್ಟಾವಧಿಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಬಾಕಿ ಹಣವನ್ನು ಬಿಡುಗಡೆ ಮಾಡುವರೆಗೆ ಕಾಮಗಾರಿ ಮುಂದುವರಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಆದರೆ ಇದೆಲ್ಲ ಬೃಹತ್‌ ನಾಟಕಗಳ ಮಧ್ಯೆ ಗೋಳು ಅನುಭವಿಸುತ್ತಿರುವ ಬೆಂಗಳೂರಿನ ಜನತೆ ಹಾಗೂ ಇವರ ಪ್ರತಿನಿಧಿಗಳು ಮಾತ್ರ ಗಾಢ ನಿದ್ದೆಯಲ್ಲಿದ್ದಾರೆ. ಬಿಬಿಎಂಪಿಯು ಈಗ ಮಾಡುತ್ತಿರುವ ಅವೈಜ್ಞಾನಿಕ ಹಾಗೂ ಅನಗತ್ಯ ಕಾಮಗಾರಿಗಳನ್ನು ಇದೇ ರೀತಿ ಮುಂದುವರಿಸಿದರೆ ವಿಶ್ವಬ್ಯಾಂಕ್‌ನ ಖಜಾನೆಯನ್ನು ತೆರೆದಿಟ್ಟರೂ ಹಣ ಪಾವತಿ ಮಾಡಲು ಸಾಧ್ಯವಿಲ್ಲ.

ಕಳೆದ ಎರಡು ತಿಂಗಳಿಂದ ಬಹುತೇಕ ಲಾಲ್‌ಬಾಗ್‌ನಿಂದ ಕನಕಪುರ ರಸ್ತೆಯ ನೈಸ್‌ ಜಂಕ್ಷನ್‌ವರೆಗೂ ರಸ್ತೆಗಳನ್ನು ಕಿತ್ತು ಹಾಕಲಾಗುತ್ತಿದೆ. ಪಾದಚಾರಿ ಮಾರ್ಗವನ್ನು ನಿರ್ಮಾಣ ಮಾಡುತ್ತೇವೆ ಎಂದು, ಎಲ್ಲೆಡೆ ರಸ್ತೆಗಳನ್ನು ನುಂಗಲಾಗಿದೆ. ಹೆಚ್ಚಿನ ಕಡೆ ಆರು ಪಥಗಳ ರಸ್ತೆ ಇರುವಲ್ಲಿ ಈಗ ನಾಲ್ಕು ಪಥಕ್ಕೆ ಸೀಮಿತವಾಗಿದೆ. ಪಾದಚಾರಿ ಮಾರ್ಗ ಸರಿಯಿದ್ದರೂ, ಅಲ್ಲಿರುವ ಸಿಮೆಂಟ್‌ ಬ್ಲಾಕ್‌ಗಳನ್ನು ಕಿತ್ತು ಹೊಸದಾಗಿ ಅಳವಡಿಸುವ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇನ್ನೊಂದೆಡೆ ಕಾಂಕ್ರೀಟ್‌ ಅಥವಾ ಸಿಮೆಂಟ್‌ ರಸ್ತೆಗಳಿರಬೇಕಾದ ಒಂದು ಮಾರ್ಗದ ಮೂರನೇ ಅಥವಾ ಕೊನೆಯ ಪಥಕ್ಕೂ ಸಿಮೆಂಟ್‌ ಬ್ಲಾಕ್‌ ಅಳವಡಿಸುವ ಹುಚ್ಚು ಕೆಲಸವನ್ನು ಬಿಬಿಎಂಪಿ ಮಾಡುತ್ತಿದೆ.

ನಾನು ಪ್ರತಿದಿನ ಅಲ್ಲಿಯೇ ನಡೆದಾಡುವುದರಿಂದ ಹಾಗೂ ಕಾರು ಚಲಾಯಿಸುವುದರಿಂದ ಕನಕಪುರ ರಸ್ತೆಗೆ ಸೀಮಿತವಾಗಿ ಒಂದಿಷ್ಟು ಅಂಶವನ್ನು ನಿಮ್ಮ ಮುಂದಿಡುತ್ತೇನೆ. ಬನಶಂಕರಿಯಿಂದ ಕೋಣನಕುಂಟೆ ಕ್ರಾಸ್‌ವರೆಗೆ ವಾರದ ಏಳೂ ದಿನ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಇರುತ್ತದೆ. ಕೇವಲ ನಾಲ್ಕು ಕಿ.ಮೀ ಪ್ರಯಾಣಕ್ಕೆ ಕನಿಷ್ಠ ಅರ್ಧ, ಮುಕ್ಕಾಲು ಗಂಟೆ ಸಮಯ ಬೇಕಾಗುತ್ತದೆ. ಇತ್ತೀಚೆಗೆ ಸಿಲ್ಕ್‌ ಬೋರ್ಡ್‌ನಲ್ಲೂ ಆಗದಷ್ಟು ಸಂಚಾರ ದಟ್ಟಣೆ ಈ ರಸ್ತೆಯಲ್ಲಿ ಆಗುತ್ತದೆ. ಇಂತಹ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಅಥವಾ ಪರ್ಯಾಯ ವ್ಯವಸ್ಥೆಯ ಬದಲಿಗೆ ಒಂದು ಪಥವನ್ನೇ ನುಂಗುವ ʼಜನೋಪಯೋಗಿʼ ಕೆಲಸವನ್ನು ಬಿಬಿಎಂಪಿ ಮಾಡುತ್ತಿದೆ. ರಸ್ತೆಯ ಮೂರನೇ ಅಥವಾ ಕೊನೆಯ ಪಥದಲ್ಲಿ ಸಿಮೆಂಟ್‌ ಬ್ಲಾಕ್‌ ಅಳವಡಿಸಲಾಗುತ್ತಿದೆ. ಸಾಮಾನ್ಯವಾಗಿ ಪಾರ್ಕಿಂಗ್‌ಗೆ ಅವಕಾಶ ನೀಡುವ ಕಡೆ ಈ ರೀತಿಯ ಸಿಮೆಂಟ್‌ ಬ್ಲಾಕ್‌ ಹಾಕಲಾಗುತ್ತದೆ.

ಆ ರಸ್ತೆಯ ಬಗ್ಗೆ ಯಾವುದೇ ಸಾಮಾನ್ಯ ಜ್ಞಾನ ಇರುವ ವ್ಯಕ್ತಿಯು ಇಂತಹ ಹುಚ್ಚು ಕೆಲಸಕ್ಕೆ ಅನುಮೋದನೆ ನೀಡುವುದಿಲ್ಲ. ನಮ್ಮ ಹಣದಿಂದ ಇಂತಹ ಹುಚ್ಚು ಕೆಲಸವನ್ನು ಮಾಡಿದ್ದಾರೆ ಎಂದು ಸಮಾಧಾನ ಮಾಡಿಕೊಂಡರೂ, ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಅಲ್ಲಿ ವಾಹನ ನಿಲುಗಡೆಗೆ ಸಂಚಾರ ಪೊಲೀಸರು ಹಸಿರು ನಿಶಾನೆ ನೀಡುವುದಿಲ್ಲ. ಇನ್ನು ಪಾದಚಾರಿ ಮಾರ್ಗಕ್ಕೆ ಪ್ರತ್ಯೇಕ ವ್ಯವಸ್ಥೆ ಇರುವುದರಿಂದ, ಇದು ಓಡಾಟಕ್ಕೂ ಬಳಕೆ ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ವಾಹನಗಳು ಅನಿವಾರ್ಯವಾಗಿ ಅಲ್ಲಿ ಓಡಾಡುತ್ತವೆ. ಒಂದು ಬಸ್‌ ಅಥವಾ ಲಾರಿಯು ಆ ಸಿಮೆಂಟ್‌ ಬ್ಲಾಕ್‌ ಮೇಲೆ ಓಡಾಡಿದರೆ, ಅದರ ಆಕಾರ-ವಿಕಾರಗಳು ಬದಲಾಗಿ ಎಲ್ಲ ಕಾಮಗಾರಿಗಳು ಒಂದೇ ಸಲಕ್ಕೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳದಂತಾಗುತ್ತದೆ. ಇಂತಹ ಅವೈಜ್ಞಾನಿಕ ಕಾಮಗಾರಿಗೆ ನಮ್ಮ ಕೋಟಿ-ಕೋಟಿ ಹಣ ಲೂಟಿ ಮಾಡುವುದರಲ್ಲಿ ಬಿಬಿಎಂಪಿಗೆ ಎಲ್ಲಿಲ್ಲದ ಖುಷಿ. ಇಷ್ಟೊಂದು ದುಡ್ಡು ಖರ್ಚು ಮಾಡಿ ಪಾದಚಾರಿ ಹಾಗೂ ಪಾರ್ಕಿಂಗ್‌ ಜಾಗಗಳನ್ನು ಮಾಡಿ ಒಂದು ಫೋಟೊವನ್ನು ಬಿಬಿಎಂಪಿ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ. ಮರು ದಿನದಿಂದಲೇ ಪಾದಚಾರಿ ಮಾರ್ಗದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟು, ಅವರಿಂದ ದಿನ ವಸೂಲಿ ಶುರು ಆಗುತ್ತದೆ. ಪಾರ್ಕಿಂಗ್‌ ರೀತಿ ಜಾಗವನ್ನು ತೋರಿಸಿ, ಜನರು ಪಾರ್ಕಿಂಗ್‌ ಮಾಡುವಂತೆ ಪ್ರೇರೇಪಿಸುತ್ತಾರೆ. ಸಂಚಾರ ಪೊಲೀಸರ ಅನುಮತಿ ಇಲ್ಲದಿದ್ದರಿಂದ ದಂಡ ಹಾಗೂ ಟೋಯಿಂಗ್‌ ಆರಂಭವಾಗುತ್ತದೆ. ಒಟ್ಟಿನಲ್ಲಿ ನಮ್ಮ ತೆರಿಗೆ ಹಣವೂ ಲೂಟಿ, ಬಳಿಕ ಸಾರ್ವಜನಿಕರ ಸಂಕಷ್ಟಕ್ಕೂ ಕೊನೆಯಿಲ್ಲ. ಹಾಗೆಯೇ ಇನ್ನಷ್ಟು ದಂಡ ವಸೂಲಿಗೆ ಹೊಸ ಹೊಸ ಮಾರ್ಗ ಸೃಷ್ಟಿಯಾಗುತ್ತದೆ.

ಇವೆಲ್ಲ ವಿಚಾರಗಳು ಬೆಂಗಳೂರು ವ್ಯಾಪ್ತಿಯಲ್ಲಿನ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಿಲ್ಲವೆಂದಲ್ಲ. ಹಣ ಲೂಟಿ ಹಾಗೂ ವಸೂಲಿಗೆ ಈ ಕೂಟ ಸೇರಿಕೊಂಡು ಹುಡುಕಿಕೊಂಡಿರುವ ಮಾರ್ಗವಿದು. ಬೆಂಗಳೂರಿನ ರಸ್ತೆಗಳು ನರಕ ಸದೃಶವಾಗಿದ್ದರೂ, ಅದಕ್ಕೆ ಹಣವಿಲ್ಲ ಅಥವಾ ಸಮಯವೂ ಇಲ್ಲ. ಆದರೆ ಪ್ರತಿ ವರ್ಷವೂ ಈ ರೀತಿ ಪಾದಚಾರಿ ಮಾರ್ಗದಲ್ಲಿನ ಕಲ್ಲು ಬದಲಾವಣೆ ಕಾರ್ಯಕ್ರಮ ಮಾತ್ರ ನಿಲ್ಲುವುದಿಲ್ಲ. ವರ್ಷ, ಎರಡು ವರ್ಷಕ್ಕೊಮ್ಮೆ ಈ ರೀತಿ ಬದಲಾಯಿಸುವ ಮಟ್ಟಿಗೆ ಗುಣಮಟ್ಟವನ್ನು ಇರಿಸಿಕೊಂಡು ಕಾಮಗಾರಿ ಮಾಡಿದರೆ ಸಾವಿರಾರು ಕೋಟಿ ಹಣ ಬಾಕಿ ಇರುವುದರಲ್ಲಿ ಸಂಶಯವಿಲ್ಲ.

ಕಾವಲುಗಾರರೇ ಲೂಟಿಕೋರರು; ಸಂಚಾರ ಪೊಲೀಸರ ಜಾಣ ಕುರುಡು!

ಇಂತಹ ಅವೈಜ್ಞಾನಿಕ ಕಾಮಗಾರಿಗಳು ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲೂ ನಡೆಯುತ್ತಿದೆ. ಆದರೆ ಯಾರೊಬ್ಬರೂ ಅದನ್ನು ನಿಯಂತ್ರಿಸುವ ಕೆಲಸವನ್ನು ಮಾಡುವುದಿಲ್ಲ. ಇಂತಹ ಭ್ರಷ್ಟ ಹಾಗೂ ಅವೈಜ್ಞಾನಿಕ ಯೋಜನೆಗಳನ್ನು ವಿರೋಧಿಸಿ ಪಕ್ಷಾತೀತವಾಗಿ ಯಾವೊಬ್ಬ ಜನಪ್ರತಿನಿಧಿ ಕೂಡ ಪ್ರತಿಭಟನೆಗೆ ಮುಂದಾಗುವುದಿಲ್ಲ. ಇಷ್ಟೊಂದು ವ್ಯಾಪಕವಾಗಿ ಹಗಲು ದರೋಡೆ ಆಗುತ್ತಿದ್ದರೂ ಕಣ್ಣುಮುಚ್ಚಿಕೊಂಡು ಜನಪ್ರತಿನಿಧಿಗಳು ಕೂರುತ್ತಿದ್ದಾರೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅದಕ್ಕೆ ಅನುಮತಿ ನೀಡುತ್ತಿದ್ದಾರೆ ಎಂದರೆ ಅರಾಜಕತೆ, ಭ್ರಷ್ಟಾಚಾರ ತಾರಕಕ್ಕೇರಿದೆ ಎಂದರ್ಥ.

ಜಯನಗರದಲ್ಲೂ ಇದೇ ರೀತಿ ರಸ್ತೆ ಮೇಲೆ ಸಿಮೆಂಟ್‌ ಬ್ಲಾಕ್‌ ಹಾಕಿ ರಸ್ತೆಗಳನ್ನು ನುಂಗಿದ್ದರು. ಆ ಕಾಮಗಾರಿಯ ಉದ್ದೇಶವು ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಕೊಡುವುದಾಗಿತ್ತು. ಆದರೆ ಅಲ್ಲಿ ಪಾರ್ಕ್‌ ಮಾಡಲಾದ ವಾಹನಗಳಿಗೆ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದರು. ಈ ಸಂಬಂಧ ನಾನು ಸಾಕಷ್ಟು ದೂರು ನೀಡಿದ ಬಳಿಕ ಕೆಲವೆಡೆ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಟ್ಟರು. ಆದರೆ ಕನಕಪುರ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ಪಾರ್ಕಿಂಗ್‌ಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ. ಒಂದೊಮ್ಮೆ ಅವಕಾಶ ನೀಡಿದರೆ, ಕನಕಪುರ ರಸ್ತೆಯಲ್ಲಿ ವಾಹನ ಚಲಾಯಿಸುವುದಿರಲಿ, ನಡೆದಾಡಲು ಕೂಡ ಸಿಗ್ನಲಿಂಗ್‌ ವ್ಯವಸ್ಥೆ ಮಾಡಬೇಕಾಗುತ್ತದೆ. ಹೀಗಿರುವಾಗ ಸಂಬಂಧಟ್ಟ ಸಂಚಾರ ಪೊಲೀಸ್‌ ಠಾಣೆಯ ಅಧಿಕಾರಿಗಳು ಕಾಮಗಾರಿ ಸಂದರ್ಭದಲ್ಲಿ ಪ್ರತಿರೋಧ ತೋರಬೇಕು ಎನ್ನುವ ಸಾಮಾನ್ಯ ಜ್ಞಾನವನ್ನು ಏಕೆ ಹೊಂದಿಲ್ಲ. ಕಾಮಗಾರಿಯಾದ ಬಳಿಕ ದಂಡ ವಸೂಲಿಗೆ ಮಶೀನ್‌ ತೆಗೆದುಕೊಂಡು ಬರುವ ಬದಲಿಗೆ, ಮೊದಲೇ ವಿರೋಧವ್ಯಕ್ತಪಡಿಸಿ, ಸಾರ್ವಜನಿಕರ ಹಣ ಉಳಿಸಬಹುದಲ್ಲವೇ? ಹಾಗೆಯೇ ಭವಿಷ್ಯದಲ್ಲಿ ಸಾಮಾನ್ಯ ಜನರಿಗೆ ಆಗುವ ಸಮಸ್ಯೆಯನ್ನು ತಪ್ಪಿಸಬಹುದಲ್ಲವೇ?

ಮಾಧ್ಯಮಗಳಿಗೆ ಮನವಿ: ಒಂದು ಕಾಲದಲ್ಲಿ ಪಾದಚಾರಿ ಮಾರ್ಗ, ಅವೈಜ್ಞಾನಿಕ ಕಾಮಗಾರಿ ಹಾಗೂ ಪಾರ್ಕಿಂಗ್‌ ಬಗ್ಗೆ ಮಾಧ್ಯಮಗಳು ತಿಂಗಳುಗಟ್ಟಲೇ ಅಭಿಯಾನಗಳನ್ನು ಮಾಡುತ್ತಿದ್ದವು. ದಯವಿಟ್ಟು ಮತ್ತೆ ಆ ದಿನಗಳು ಬರುವಂತೆ ಮಾಧ್ಯಮಗಳು ಗಮನ ಹರಿಸಲಿ. ಇಲ್ಲವಾದಲ್ಲಿ ಈ ಭ್ರಷ್ಟ ಕೂಟದ ಸದಸ್ಯರು ತಮಗೇ ಬೇಕಾದಂತೆ ಹುಚ್ಚಾಪಟ್ಟೆ ವ್ಯವಹಾರ ಮಾಡಿಕೊಂಡಿರುತ್ತಾರೆ. ಇಂತಹ ಅವೈಜ್ಞಾನಿಕ ಕಾಮಗಾರಿಗನ್ನೂ ಪ್ರಶ್ನಿಸದಿದ್ದರೆ, ಮುಂದೊಂದು ದಿನ ಕರ್ನಾಟಕ ಕೂಡ ಬಿಹಾರವಾದೀತು ಹುಷಾರ್!‌

ಕೊನೆಯದಾಗಿ: ನಾನು ಉಲ್ಲೇಖಿಸಿರುವ ಕನಕಪುರ ರಸ್ತೆಯ ಕಾಮಗಾರಿ ರೀತಿಯ ಉದಾಹರಣೆಯು ಪ್ರತಿಷ್ಠಿತರು ಇರುವ ಕೆಲವು ಪ್ರದೇಶ ಹೊರತುಪಡಿಸಿ ಬೆಂಗಳೂರಿನ ಪ್ರತಿ ಗಲ್ಲಿಯಲ್ಲೂ ದೊರೆಯುತ್ತದೆ. ವಿಧಾನಸೌಧ, ಸದಾಶಿವನಗರ, ಡಾಲರ್ಸ್‌ ಕಾಲನಿಯಲ್ಲಿ ಈ ರೀತಿ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಇದೇ ಕಾರಣಕ್ಕಾಗಿಯೇ ಬಿಬಿಎಂಪಿಯು ಭ್ರಷ್ಟಾಚಾರ ಕುರಿತ ಪಿಎಚ್‌ಡಿ ಮಾಡಲು ವಿಶ್ವವಿದ್ಯಾಲಯವಾಗಿದೆ ಹಾಗೂ ಇದಕ್ಕೆ ಸರ್ಕಾರವೇ ಕುಲಾಧಿಪತಿಯಾಗಿ ರಕ್ಷಣೆ ನೀಡುತ್ತಿದೆ.