logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sylvester Dacunha: ವ್ಯಕ್ತಿ ವ್ಯಕ್ತಿತ್ವ ಅಂಕಣ; ಜಾಹೀರಾತು ಜಗತ್ತಿನಲ್ಲಿ ಪ್ರಚಾರ ಅಭಿಯಾನದ ಜೀವದಾತ ಸಿಲ್ವೆಸ್ಟರ್‌ ಡಾಕುನ್ಹಾ

Sylvester DaCunha: ವ್ಯಕ್ತಿ ವ್ಯಕ್ತಿತ್ವ ಅಂಕಣ; ಜಾಹೀರಾತು ಜಗತ್ತಿನಲ್ಲಿ ಪ್ರಚಾರ ಅಭಿಯಾನದ ಜೀವದಾತ ಸಿಲ್ವೆಸ್ಟರ್‌ ಡಾಕುನ್ಹಾ

Umesh Kumar S HT Kannada

Jun 26, 2023 06:00 PM IST

google News

ವ್ಯಕ್ತಿ ವ್ಯಕ್ತಿತ್ವ - ಸಿಲ್ವೆಸ್ಟರ್‌ ಡಾ ಕುನ್ಹಾ

  • Vyakti Vyaktitva: ಯಾರು ಈ ಡಾ ಕುನ್ಹಾ ಕಮ್ಯುನಿಕೇಷನ್ಸ್‌ನ ಅಧ್ಯಕ್ಷ ಸಿಲ್ವೆಸ್ಟರ್ ಡಾ ಕುನ್ಹಾ ಎಂಬ ಪ್ರಶ್ನೆಗೆ ಉತ್ತರವಾಗಿ ಕಣ್ಣಮುಂದೆ ನಿಲುವುದು ಜಗದ್ವಿಖ್ಯಾತ ʻಅಮುಲ್‌ ಗರ್ಲ್‌ʼ. ಹೌದು, ಜಾಹೀರಾತು ಜಗದಲ್ಲಿ ಅಮುಲ್‌ ಗರ್ಲ್‌ ಎಂದ ಕೂಡಲೇ ಸಿಲ್ವೆಸ್ಟರ್‌ ಡಾ ಕುನ್ಹಾ ಕಣ್ಣಮುಂದೆ ನಿಲ್ಲುತ್ತಾರೆ. ಅವರ ವ್ಯಕ್ತಿತ್ವದ ಕಿರುಚಿತ್ರಣವೂ ಹೌದು, ನುಡಿನಮನವೂ ಹೌದು.

ವ್ಯಕ್ತಿ ವ್ಯಕ್ತಿತ್ವ - ಸಿಲ್ವೆಸ್ಟರ್‌ ಡಾ ಕುನ್ಹಾ
ವ್ಯಕ್ತಿ ವ್ಯಕ್ತಿತ್ವ - ಸಿಲ್ವೆಸ್ಟರ್‌ ಡಾ ಕುನ್ಹಾ

ಅಮುಲ್‌ನೊಂದಿಗೆ 1960 ರ ದಶಕದಿಂದಲೂ ಸಂಬಂಧ ಹೊಂದಿದ್ದ ಭಾರತೀಯ ಜಾಹೀರಾತು ಉದ್ಯಮದ ಮುತ್ಸದ್ದಿ, ಡಾ ಕುನ್ಹಾ ಕಮ್ಯುನಿಕೇಷನ್ಸ್‌ನ ಅಧ್ಯಕ್ಷ ಸಿಲ್ವೆಸ್ಟರ್ ಡಾ ಕುನ್ಹಾ ಅವರು ಮುಂಬೈನಲ್ಲಿ ಕಳೆದ ರಾತ್ರಿ ನಿಧನರಾದರು ಎಂದು ತಿಳಿಸಲು ತುಂಬಾ ವಿಷಾದಿಸುತ್ತೇನೆ. ಅಮುಲ್ ಕುಟುಂಬವು ಈ ದುಃಖದಲ್ಲಿ ಭಾಗಿಯಾಗಿದೆ ಎಂದು ರಾಹುಲ್‌ ಡಾ ಕುನ್ಹಾ ಅವರನ್ನು ಟ್ಯಾಗ್‌ ಮಾಡಿದ ಜೂನ್‌ 20ರ ಟ್ವೀಟ್‌ ಬಹಳ ಸಂಚಲನ ಮೂಡಿಸಿತು.

ಅಮುಲ್‌ ದೇಶಾದ್ಯಂತ ಪರಿಚಿತವಾಗಿರುವ ಹಾಲು ಮತ್ತು ಹಾಲಿನ ಉತ್ಪನ್ನದ ಬ್ರ್ಯಾಂಡ್‌. ಈ ಅಮುಲ್‌ನ ಮಾತೃಸಂಸ್ಥೆ ಜಿಸಿಎಂಎಂಎಫ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಜಯಂತ್‌ ಮೆಹ್ತಾ ಅವರು ಈ ಟ್ವೀಟ್‌ ಮಾಡಿದ್ದು.

ಯಾರು ಈ ಡಾ ಕುನ್ಹಾ ಕಮ್ಯುನಿಕೇಷನ್ಸ್‌ನ ಅಧ್ಯಕ್ಷ ಸಿಲ್ವೆಸ್ಟರ್ ಡಾ ಕುನ್ಹಾ ಎಂಬ ಪ್ರಶ್ನೆಗೆ ಉತ್ತರವಾಗಿ ಕಣ್ಣಮುಂದೆ ನಿಲುವುದು ಜಗದ್ವಿಖ್ಯಾತ ʻಅಮುಲ್‌ ಗರ್ಲ್‌ʼ. ಹೌದು, ಜಾಹೀರಾತು ಜಗತ್ತಿನಲ್ಲಿ ಅಮುಲ್‌ ಗರ್ಲ್‌ ಎಂದ ಕೂಡಲೇ ಸಿಲ್ವೆಸ್ಟರ್‌ ಡಾ ಕುನ್ಹಾ ಕಣ್ಣಮುಂದೆ ನಿಲ್ಲುತ್ತಾರೆ. ಅಮುಲ್‌ನ ಅಟ್ಟರ್ಲಿ ಬಟರ್ಲಿ ಜಾಹೀರಾತು ಅಭಿಯಾನ ಮತ್ತು ಅಮುಲ್‌ ಗರ್ಲ್‌ ಮ್ಯಾಸ್ಕಾಟ್‌ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ಈ ಜಾಹೀರಾತು ಅಭಿಯಾನ ಮತ್ತು ಅಮುಲ್‌ ಗರ್ಲ್‌ ದೀರ್ಘ ಕಾಲದಿಂದ ಪ್ರಚಲಿತದಲ್ಲಿದ್ದು ಜಾಹೀರಾತು ಜಗತ್ತಿನಲ್ಲಿ ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ.

ಅವರು ವಿಶ್ವ ಬ್ಯಾಂಕ್, ಯುನಿಸೆಫ್‌ ಮತ್ತು ಪುನರ್ನಿರ್ಮಾಣ ಮತ್ತು ಇಂಟರ್‌ ನ್ಯಾಷನಲ್ ಬ್ಯಾಂಕ್ ಫಾರ್‌ ರಿಕನ್‌ಸ್ಟ್ರಕ್ಷನ್‌ ಆಂಡ್‌ ಡೆವಲಪ್‌ಮೆಂಟ್‌ ಸೇರಿ ಹಲವು ಬಹುರಾಷ್ಟ್ರೀಯ ಏಜೆನ್ಸಿಗಳಿಗೆ ಆಹಾರ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

ಸಿಲ್ವೆಸ್ಟರ್ ಡಾ ಕುನ್ಹಾ ಶುದ್ಧ ಪೋರ್ಚುಗೀಸ್-ಗೋವಾ ವಂಶದವರು…

ಡಾ ಕುನ್ಹಾ ಅವರು ಭಾರತದ ಜಾಹೀರಾತು ವೃತ್ತಿಪರರಷ್ಟೇ ಅಲ್ಲ, ರಂಗಕರ್ಮಿಯೂ ಹೌದು. ಡಾಕುನ್ಹಾ ಅವರ ವ್ಯಕ್ತಿಚಿತ್ರಕ್ಕಾಗಿ ಹುಡುಕಾಡುತ್ತಿದ್ದರೆ, ಹಿಂದುಸ್ತಾನ್‌ ಟೈಮ್ಸ್‌ನಲ್ಲಿ 2018ರಲ್ಲಿ ಪ್ರಕಟವಾದ ಲೇಖನದಲ್ಲಿ ಮುಂಬೈನ ಕುನಾಲ್‌ ವಿಜಯಕರ್‌ ಪುಟ್ಟ ನಾಲ್ಕು ಸಾಲಿನ ಚಿತ್ರಣ ನೀಡಿರುವುದು ಗಮನಸೆಳೆಯಿತು. ಆ ಲೇಖನದ ಆರಂಭದ ಸಾಲುಗಳು ಹೀಗಿವೆ -

"ಅದು 1988ರ ಕಾಲಘಟ್ಟ. ನಾನು ಆಗಷ್ಟೇ ಜಾಹೀರಾತಿನಲ್ಲಿ ತೊಡಗಿದ್ದೆ ಮತ್ತು ನನ್ನ ಬಾಸ್ ಗೋವಾದವರು. ಸಿಲ್ವೆಸ್ಟರ್ ಡಾ ಕುನ್ಹಾ ಶುದ್ಧ ಪೋರ್ಚುಗೀಸ್-ಗೋವಾ ವಂಶದವರು. ಅವರು ಕೊಂಕಣಿಗಿಂತ ಉತ್ತಮವಾಗಿ ಪೋರ್ಚುಗೀಸ್ ಭಾಷೆಯನ್ನು ಮಾತನಾಡುತ್ತಿದ್ದರು, ಸೂಟ್‌ ಧರಿಸುತ್ತಿದ್ದರು. ಅರ್ಪೋರಾ ಗ್ರಾಮದಲ್ಲಿ 500 ವರ್ಷಗಳಷ್ಟು ಹಳೆಯದಾದ ಮನೆಯನ್ನು ಹೊಂದಿದ್ದರು. ಅಷ್ಟೇ ಅಲ್ಲ ಫೀಜೋಡಾ ಎಂದರೇನು ಎಂದೂ ತಿಳಿದಿದ್ದರು...."

ಸೃಜನಶೀಲ ಮಾರ್ಗದರ್ಶಕರಾಗಿದ್ದರು ಅವರು…

ಭರತ್‌ ದಾಭೋಲ್ಕರ್‌ ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಗುರು ಸಿಲ್ವೆಸ್ಟರ್‌ ಡಾಕುನ್ಹಾ ಅವರಿಗೆ ನುಡಿನಮನ ಸಲ್ಲಿಸುತ್ತ ಬರೆದ ಕೆಲವು ಸಾಲುಗಳನ್ನು ಇಲ್ಲಿ ಅವರದೇ ಸಾಲುಗಳಲ್ಲಿ ಉಲ್ಲೇಖಿಸುವುದು ಸೂಕ್ತ. ಇದು ಸಿಲ್ವೆಸ್ಟರ್‌ ಡಾಕುನ್ಹಾ ಅವರ ವ್ಯಕ್ತಿಚಿತ್ರ ನೀಡುವಲ್ಲಿ ಸಹಕಾರಿಯಾದೀತು.

"ಜಾಹೀರಾತು ಜಗತ್ತಿಗೆ ನನ್ನನ್ನು ಪರಿಚಯಿಸಿದ್ದೇ ಅವರು. ಬಳಿಕ ರಂಗಭೂಮಿಗೂ ಪರಿಚಯಿಸಿದರು. ಈ ಎರಡೂ ವಿಚಾರಕ್ಕೆ ನಾನು ಅವರಿಗೆ ಋಣಿ. ಅವರ ಬಳಿ ಯಾವಾಗಲೂ ಹೊಸ ದಾರಿ ಸೃಷ್ಟಿಸಬಲ್ಲ ಚಿಂತನೆಗಳು ಇದ್ದೇ ಇರುತ್ತಿದ್ದವು. ಪುಟ್ಟ ಗುಜರಾತ್‌ ಮಿಲ್ಕ್‌ ಕೋಆಪರೇಟಿವ್‌ನ ಪ್ರಚಾರ ಕೈಗೆತ್ತಿಕೊಂಡು ಭಾರತದ ಮನೆಮಾತಾಗುವಂತೆ ಮಾಡಿದವರು ಅವರು.

ಅಮುಲ್‌ ಮೂಲಕ ಅವರು ಎಲ್ಲ ಸಾಂಪ್ರದಾಯಿಕ ಜಾಹೀರಾತು ಚೌಕಟ್ಟು ಮತ್ತು ಮಾಧ್ಯಮ ಬಳಕೆಯನ್ನು ಮುರಿದು ಅಮುಲ್‌ ಗರ್ಲ್‌ ಅನ್ನು ಸೃಷ್ಟಿಸಿ, ಜಿಂಗಲ್‌ ಬರೆದರು. ಅದರ ಕೊನೆಯ ಸಾಲು ಅಮುಲ್‌ ಈಸ್‌ ದ ಆನ್ಸರ್‌ ಟು ಯುವರ್‌ ವಿಷಸ್‌, ಇಟ್ಸ್‌ ಅಟ್ಟರ್ಲಿ ಬಟರ್ಲಿ ಡೆಲಿಷಿಯಸ್‌ ಇಂದಿಗೂ ಚಾಲ್ತಿಯಲ್ಲಿದೆ.

ಜಾಹೀರಾತು ಜಗತ್ತಿನಲ್ಲಿ ಎರಡು ರೀತಿಯ ಜನ ಇದ್ದಾರೆ. ಒಂದು ತಮ್ಮಷ್ಟಕ್ಕೆ ತಾವೇ ಬಹಳ ಕ್ರಿಯೇಟಿವ್‌ ಆಗಿರುವ ಜನ. ಇತರರ ಸೃಜನಶೀಲತೆ ಗುರುತಿಸಿ ಅವರನ್ನು ಉತ್ತೇಜಿಸುವವರು ಇನ್ನೊಂದು ವರ್ಗದ ಜನ. ಈ ಎರಡೂ ಅಂಶಗಳನ್ನು ಒಳಗೊಂಡ ವಿರಳ ವ್ಯಕ್ತಿತ್ವ ಸಿಲ್ವೆಸ್ಟರ್‌ ಅವರದ್ದು...."

ಸಿಲ್ವೆಸ್ಟರ್‌ ಡಾಕುನ್ಹಾ ವೃತ್ತಿ ಜೀವನ ಹೀಗಿತ್ತು..

ಡಾಕುನ್ಹಾ ಅವರು 1951ರಲ್ಲಿ ಬ್ರಿಟಿಷ್ ಜಾಹೀರಾತು ಏಜೆನ್ಸಿಯಾದ ಎಲ್‌.ಎ. ಸ್ಟ್ರೋನಾಚ್ ಅಡ್ವರ್ಟೈಸಿಂಗ್‌ನಲ್ಲಿ ತಮ್ಮ ಜಾಹೀರಾತು ವೃತ್ತಿಯನ್ನು ಪ್ರಾರಂಭಿಸಿದರು. ಅವರು ಭಾರತಕ್ಕೆ ಹಿಂದಿರುಗುವ ಮೊದಲು ಮೂರು ವರ್ಷಗಳ ಕಾಲ ತಮ್ಮ ಲಂಡನ್ ಸಂಪರ್ಕ ಕಚೇರಿಯಲ್ಲಿ ಕೆಲಸ ಮಾಡಿದರು. ಲಂಡನ್‌ನಿಂದ ಹಿಂದಿರುಗುವಾಗ ಅವರು ಬಿರ್ಲಾ ಗ್ರೂಪ್‌ನ ಅಡ್ವರ್ಟೈಸಿಂಗ್‌ ಆಂಡ್‌ ಸೇಲ್ಸ್‌ ಪ್ರಮೋಷನ್ಸ್‌ (ಎಎಸ್‌ಪಿ) ಮ್ಯಾನೇಜರ್ ಜಾನ್ ಕುರಿಯನ್ ಅವರನ್ನು ಭೇಟಿಯಾದರು, ಅವರು ಡಾಕುನ್ಹಾ ಅವರಿಗೆ ಏಜೆನ್ಸಿಯಲ್ಲಿ ಉದ್ಯೋಗವನ್ನು ನೀಡಿದರು. ಎಎಸ್‌ಪಿಯಲ್ಲಿ, ಡಾಕುನ್ಹಾ ಅವರು ಆರಂಭದಲ್ಲಿ ಬಿರ್ಲಾ ಸಮೂಹದ ಕೆಲವು ಇನ್‌ಹೌಸ್ ಬ್ರಾಂಡ್‌ಗಳಾದ ಹಿಂದೂಸ್ತಾನ್ ಮೋಟಾರ್ಸ್ ಮತ್ತು ಸೆಂಚುರಿ ರೇಯಾನ್‌ಗಳನ್ನು ನಿರ್ವಹಿಸುತ್ತಿದ್ದರು. ಇದಕ್ಕೂಮೊದಲು ಜೀವ ವಿಮಾ ನಿಗಮ, ಗ್ಲಾಕ್ಸೋ ಮತ್ತು ಲ್ಯಾಕ್ಮೆ ಸೇರಿ ಹಲವು ಖಾತೆ ಪ್ರಚಾರಗಳನ್ನು ನಿರ್ವಹಿಸುತ್ತಿದ್ದರು. ಬಳಿಕ ಅಮುಲ್‌ ಬ್ರ್ಯಾಂಡ್‌ನ ಪ್ರಚಾರ ಅಭಿಯಾನ ಕೈಗೆತ್ತಿಕೊಂಡರು. ಅಮುಲ್‌ ಗರ್ಲ್‌ ಅನ್ನು ಸೃಷ್ಟಿಸಿದರು.

ಎಎಸ್‌ಪಿಯಲ್ಲಿ 14 ವರ್ಷ ಕೆಲಸ ಮಾಡಿದ ಬಳಿಕ ಮುಂದೆ 1969ರಲ್ಲಿ ಡಾಕುನ್ಹಾ ಅಸೋಸಿಯೇಟ್ಸ್‌ ಎಂಬ ತಮ್ಮದೇ ಜಾಹೀರಾತು ಕಂಪನಿ ಆರಂಭಿಸಿದರು. ಅಮುಲ್‌ ಸಹಿತ ಎಎಸ್‌ಪಿಯ ಹಲವು ಕ್ಲೈಂಟ್‌ಗಳು ಡಾಕುನ್ಹಾ ಅಸೋಸಿಯೇಟ್ಸ್‌ಗೆ ಶಿಫ್ಟ್‌ ಆದರು. ಅಮುಲ್‌ನ ಲೇಟೆಸ್ಟ್‌ ಟಾಪಿಕಲ್‌ ಅಡ್ವರ್ಟೈಸ್‌ಮೆಂಟ್‌ಗಳನ್ನು ಮುನ್ನಡೆಸಿದ್ದು ಡಾಕುನ್ಹಾ ಅವರ ಪುತ್ರ ರಾಹುಲ್‌. 1993ರಿಂದ ಇದು ಚಾಲ್ತಿಯಲ್ಲಿದ್ದು, ಅತಿ ದೀರ್ಘ ಅವಧಿಯ ಪ್ರಚಾರ ಅಭಿಯಾನದ ಗಿನ್ನೆಸ್‌ ವಿಶ್ವದಾಖಲೆಗೆ ಭಾಜನವಾಗಿದೆ.

ಅಮುಲ್‌ ಗರ್ಲ್‌ ಸೃಷ್ಟಿಯ ಸನ್ನಿವೇಶ ಹೀಗಿತ್ತು...

ಅಮುಲ್‌ ಗರ್ಲ್‌ ಸೃಷ್ಟಿಸಬೇಕು ಎಂದು ಸಿಲ್ವೆಸ್ಟರ್‌ ಡಾಕುನ್ಹಾ ನಿರ್ಧರಿಸಿದಾಗ, 700ಕ್ಕೂ ಪುಟ್ಟಮಕ್ಕಳ ಫೋಟೋಗಳನ್ನು ತರಿಸಿಕೊಂಡಿದ್ದರು. ಕೊನೆಗೆ ಶಶಿ ತರೂರ್‌ ಅವರ ಸಹೋದರಿ ಶೋಭಾ ತರೂರ್‌ ಅವರ ಫೋಟೋ ಅಮುಲ್‌ ಗರ್ಲ್‌ ಸೃಷ್ಟಿಗೆ ಪ್ರೇರಣೆಯಾಯಿತು. ಈ ವಿಚಾರವನ್ನು ಶೋಭಾ ತರೂರ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು ಹೀಗಿದೆ ಆ ಬರೆಹ..

ಸಿಲ್ವೆಸ್ಟರ್‌ ಡಾಕುನ್ಹಾ ಕೌಟುಂಬಿಕ ಹಿನ್ನೆಲೆ ಹೀಗಿದೆ

ಡಾಕುನ್ಹಾ ಅವರು ಪೋರ್ಚುಗೀಸ್ ಮೂಲದ ಬಾಂಬೆ ಗೋವಾ ಕುಟುಂಬದಲ್ಲಿ1930ರ ಅಕ್ಟೋಬರ್ 19‌ ರಂದು ಜನಿಸಿದರು. ಅವರ ಕುಟುಂಬವು ಮೂಲತಃ ಉತ್ತರ ಗೋವಾದ ಬರ್ದೇಜ್ ತಾಲೂಕಿನವರು. ನಂತರ ಅವರು ಬಾಂಬೆಯ (ಈಗ ಮುಂಬೈ) ಮಜಗಾಂವ್ ನೆರೆಹೊರೆಗೆ ಸ್ಥಳಾಂತರಗೊಂಡರು.ಅವರ ಸಹೋದರ ಗೆರ್ಸನ್ ಡಾಕುನ್ಹಾ ಕೂಡ ಜಾಹೀರಾತು ವೃತ್ತಿಪರ. ಅವರ ಚಿಕ್ಕಪ್ಪ ಜೋಸ್ ಗೆರ್ಸನ್ ಡಾಕುನ್ಹಾ, ವೈದ್ಯ ಮತ್ತು ಇತಿಹಾಸಕಾರ. ಬಾಂಬೆಯ ಮೂಲವನ್ನು ದಾಖಲಿಸುವ ಮೊದಲ ಐತಿಹಾಸಿಕ ಕೃತಿಗಳಲ್ಲಿ ಒಂದಾದ ದಿ ಒರಿಜಿನ್ಸ್ ಆಫ್ ಬಾಂಬೆ ಕೃತಿಯನ್ನು ಬರೆದರು. ಡಾಕುನ್ಹಾ ಸೀನಿಯರ್ ಆಗಾ ಖಾನ್ ಅವರ ಕುಟುಂಬ ವೈದ್ಯರಾಗಿದ್ದರು. ಡಾಕುನ್ಹಾ ಅವರು 1941ರಲ್ಲಿ ತಮ್ಮ 11ನೇ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು.

ವೈಯಕ್ತಿಕ ಬದುಕಿನ ಚಿತ್ರಣ

ಸಿಲ್ವೆಸ್ಟರ್‌ ಡಾಕುನ್ಹಾ ಅವರು ನಿಶಾ ಡ ಕುನ್ಹಾ ಅವರನ್ನು ವಿವಾಹವಾದರು. ನಿಶಾ ಅವರು ಲೇಖಕಿ ಮತ್ತು ಮೊದಲು ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿ ಆಗಿದ್ದರು. ದಂಪತಿಗೆ ಒಬ್ಬ ಮಗ - ರಾಹುಲ್ ಡಾ ಕುನ್ಹಾ. ರಾಹುಲ್‌ ಅವರು ಕೂಡ ಒಬ್ಬ ಜಾಹೀರಾತು ವೃತ್ತಿಪರ. ಡಾ ಕುನ್ಹಾ ಮುಂಬೈನಲ್ಲಿ 20 ಜೂನ್ 2023 ರಂದು 92 ನೇ ವಯಸ್ಸಿನಲ್ಲಿ ನಿಧನರಾದರು. ಜಾಹೀರಾತು ಜಗತ್ತಿನಲ್ಲಿ ಚಿರಸ್ಥಾಯಿ ಛಾಪು ಮೂಡಿಸಿ ಅಗಲಿದ ಜಾಹೀರಾತು ದಿಗ್ಗಜರ ಆತ್ಮಕ್ಕೆ ಚಿರಶಾಂತಿ ಕೋರೋಣ.

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

--------------------------------------

ಪೂರಕ ಓದಿಗೆ

ಮುಂಬೈನ ಕುನಾಲ್‌ ವಿಜಯಕರ್‌ ಅವರ ಆಂಗ್ಲ ಲೇಖನದ ಪೂರ್ಣ ಓದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ - Maska Maarke: Oh poie! Goan food is back with a bang

ಭರತ್‌ ಧಾಬೋಲ್ಕರ್‌ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ ಹೀಗಿದೆ

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ