ವರದಿ ಮುನ್ನ ತಿರುಪತಿ ಲಡ್ಡುತುಪ್ಪ ಕಲಬೆರಕೆಯೆಂದು ಹೇಗೆ ಹೇಳಿದಿರಿ, ದೇವರನ್ನು ಯಾಕೆ ರಾಜಕೀಯಕ್ಕೆ ಎಳೆಯುತ್ತೀರಿ: ನಾಯ್ಡುಗೆ ಸುಪ್ರೀಂ ತಪರಾಕಿ
Sep 30, 2024 04:49 PM IST
ತಿರುಪತಿ ತಿರುಮಲ ಲಡ್ಡು ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ನೀಡಿದೆ.
- ತಿರುಪತಿ ತಿರುಮಲ ಲಡ್ಡು ಪ್ರಸಾದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ದೆಹಲಿ: ಪ್ರಸಿದ್ದ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲದ ಲಡ್ಡು ಪ್ರಸಾದದಲ್ಲಿ ಗುಣಮಟ್ಟದ ತುಪ್ಪ ಬಳಸದೇ ಪ್ರಾಣಿಜನ್ಯ ವಸ್ತುಗಳಿಂದ ತಯಾರಿಸಿದ ಕಲಬೆರಕೆ ತುಪ್ಪ ಬೆರಸಲಾಗಿದೆ ಎನ್ನುವ ಅಧಿಕೃತ ವರದಿಗಳೇ ಬರುವ ಮುನ್ನ ನೀವು ಇಂತಹ ಹೇಳಿಕೆ ಹೇಗೆ ನೀಡಿದಿರಿ.ಈಗ ಬಂದಿರುವ ವರದಿಗಳಲ್ಲಿ ಕಲಬೆರಕೆ ತುಪ್ಪ ಬಳಸಿದ ಅಂಶವಿಲ್ಲ. ದೇವರನ್ನು ದಯಮಾಡಿ ನಿಮ್ಮ ರಾಜಕೀಯಗಳಿಂದ ದೂರ ಇಡಿ. ಇದನ್ನು ನಾವು ನಿಮ್ಮಿಂದ ನಿರೀಕ್ಷಿಸುವ ಮೊದಲ ಕೆಲಸ. ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೇ ಎನ್ನುವ ಕುರಿತು ಕೇಂದರ ಸರ್ಕಾರದ ಅಭಿಪ್ರಾಯ ಕೇಳಿ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ. ಇದು ಸರ್ವೋಚ್ಚ ನ್ಯಾಯಾಲಯವು ತಿರುಪತಿ ತಿರುಮಲದ ಲಡ್ಡು ಪ್ರಸಾದದ ವಿಚಾರದಲ್ಲಿ ಸೋಮವಾರ ನೀಡಿದ ಲಟ್ಟು ನಿಟ್ಟಿನ ಸೂಚನೆ.
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುಗಳ ತಯಾರಿಕೆಗೆ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂದು ಸಾರ್ವಜನಿಕ ಆರೋಪ ಮಾಡಿದ್ದಕ್ಕಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್ 30) ತರಾಟೆಗೆ ತೆಗೆದುಕೊಂಡಿತು.
ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಯಾವುದೇ ವರದಿ ಬಾರದೇ ಗಂಭೀರವಾಘಿ ಹೇಳಿಕೆ ನೀಡುವುದರ ಔಚಿತ್ಯವನ್ನು ಕೋರ್ಟ್ ಪ್ರಶ್ನಿಸಿತು. ಪ್ರಯೋಗಾಲಯದ ವರದಿಯು ಪ್ರಾಥಮಿಕ ಪರೀಕ್ಷೆಗೆ ಒಳಪಟ್ಟಿರುವ ತಿರಸ್ಕರಿಸಿದ ತುಪ್ಪದ ಮಾದರಿಗಳು ಎಂದು ಸೂಚಿಸಿರುವುದನ್ನು ಪೀಠವು ಮೌಖಿಕವಾಗಿ ಗಮನಿಸಿತು. ದೇವರುಗಳನ್ನು ರಾಜಕೀಯದಿಂದ ದೂರವಿಡಬೇಕೆಂದು ನಾವು ಎಲ್ಲಾ ರಾಜಕೀಯ ಪಕ್ಷಗಳಿಂದ ನಿರೀಕ್ಷಿಸುತ್ತೇವೆ ಎಂದು ಸುಪ್ರೀಂಕೋರ್ಟ್ ಗಂಭೀರವಾಗಿಯೇ ಸೂಚನೆ ನೀಡಿತು.
ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಪೀಠವು ತಿರುಪತಿ ಲಡ್ಡು ಪ್ರಸಾದಕ್ಕೆ ಸಂಬಂಧಿಸಿದ ವಿವಾದವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಕೇಂದ್ರೀಯ ತನಿಖೆ ಅಗತ್ಯವಿದೆಯೇ ಎಂಬುದರ ಕುರಿತು ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯ ಸೂಚಿಸುವ ಜತೆಗೆ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಒಂದು ಗಂಟೆ ಸುದೀರ್ಘ ವಿಚಾರಣೆ ವೇಳೆ ಹಲವು ವಿಚಾರ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು,ಈ ಮನವಿಯು ಇಡೀ ವಿಶ್ವದಲ್ಲಿ ವಾಸಿಸುವ ಕೋಟ್ಯಂತರ ಜನರ ಭಾವನೆಗಳಿಗೆ ಸಂಬಂಧಿಸಿದೆ. ಹಿಂದಿನ ಆಡಳಿತದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ತಿರುಪತಿ ತಿರುಮಲ ದೇವಸ್ತಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಡ ಇಂತಹ ಕಲಬೆರಕೆ ತುಪ್ಪವನ್ನು ಬಳಸಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ರೀತಿಯ ಪರಿಸ್ಥಿತಿ ಇರುವಾಗ, ಅಧಿಕೃತ ವರದಿಯೇ ಬಾರದೇ ಇದ್ದಾಗ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಈ ರೀತಿ ಹೇಳಿಕೆ ಹೇಗೆ ನೀಡಿದರು ಎಂದು ಕಟು ಮಾತುಗಳಲ್ಲಿಯೇ ಪ್ರಶ್ನಿಸಿದರು.
ಟಿಟಿಡಿ ಪರವಾಗಿ ಹಾಜರಾದ ಅಡ್ವ ಸಿದ್ದಾರ್ಥ್ ಲೂತ್ರಾ ಅವರ ಪ್ರಕಾರ, ಜೂನ್‌ನಲ್ಲಿ ಮತ್ತು ಜುಲೈ 4 ರವರೆಗೆ ಅದೇ ಪೂರೈಕೆದಾರರಿಂದ ಸರಬರಾಜು ಮಾಡಿದ ತುಪ್ಪವನ್ನು ವಿಶ್ಲೇಷಣೆಗೆ ಕಳುಹಿಸಲಾಗಿಲ್ಲ. ಆದರೆ, ಜುಲೈ 6 ಮತ್ತು 12 ರಂದು ತಲಾ ಎರಡು ಟ್ಯಾಂಕರ್‌ಗಳಲ್ಲಿ ಬಂದ ತುಪ್ಪವನ್ನು ಎನ್‌ಡಿಡಿಬಿಗೆ ಕಳುಹಿಸಲಾಗಿದೆ. ನಾಲ್ಕೂ ಮಾದರಿಗಳಲ್ಲಿ ತುಪ್ಪ ಕಲಬೆರಕೆಯಾಗಿರುವುದು ಕಂಡುಬಂದಿದೆ. ಜೂನ್‌ನಲ್ಲಿ ಮತ್ತು ಜುಲೈ 4 ರವರೆಗೆ ಸರಬರಾಜು ಮಾಡಿದ ಮಾದರಿಗಳಲ್ಲಿನ ತುಪ್ಪವನ್ನು ಲಡ್ಡು ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ವಿವರಣೆ ನೀಡಿದರು.
ರಾಜ್ಯ ಸರ್ಕಾರದ ಪ್ರಕಾರ, ತನಿಖೆ ಅಗತ್ಯವಾಗಿತ್ತು ಮತ್ತು ಸೆಪ್ಟೆಂಬರ್ 25 ರ ಎಫ್‌ಐಆರ್ ತನಿಖೆಗೆ ಎಸ್‌ಐಟಿ ರಚನೆಯಾಯಿತು. ಆದ್ದರಿಂದ ಮುಖ್ಯಮಂತ್ರಿ ನೀಡಿದ ಹೇಳಿಕೆಯು ಎಫ್‌ಐಆರ್ ಮತ್ತು ಎಸ್‌ಐಟಿಯ ಸಂವಿಧಾನಕ್ಕೆ ಮುಂಚಿತವಾಗಿಯೇ ಇತ್ತು ಎಂದು ಹೇಳಬಹುದು. ಏಕೆಂದರೆ ಮುಖ್ಯಮಂತ್ರಿ ಸೆಪ್ಟೆಂಬರ್ 18 ರಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ತನಿಖೆಯ ಹಂತದಲ್ಲಿದ್ದಾಗ, ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವಂತಹ ಹೇಳಿಕೆಯನ್ನು ಉನ್ನತ ಸಾಂವಿಧಾನಿಕ ಪ್ರಾಧಿಕಾರವು ನೀಡುವುದು ಸೂಕ್ತವಲ್ಲ ಎಂದು ನಾವು ಭಾವಿಸುತ್ತೇವೆ. ಈ ವಿಷಯದ ದೃಷ್ಟಿಯಿಂದ, ರಾಜ್ಯದ ಎಸ್‌ಐಟಿಯನ್ನು ಮುಂದುವರಿಸಬೇಕೆ ಅಥವಾ ಸ್ವತಂತ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕೆ ಎಂಬುದರ ಕುರಿತು ನಿರ್ಧರಿಸಿ ಕೋರ್ಟ್‌ಗೆ ತಿಳಿಸಿ ಎಂದು ನ್ಯಾಯಮೂರ್ತಿಗಳು ಸೂಚಿಸಿ ವಿಚಾರಣೆ ಮುಂದಕ್ಕೆ ಹಾಕಿದರು.