Milk Purity: ಪರಿಶುದ್ಧ ಹಾಲೇಬೇಕು ಎನ್ನುವವರು ಈ ಸಂಗತಿಗಳನ್ನು ತಿಳಿದುಕೊಳ್ಳಿ, ಅಸಲಿ ಮತ್ತು ನಕಲಿ ಪ್ಯಾಕೆಟ್ ಹಾಲನ್ನು ಈ ರೀತಿ ಗುರುತಿಸಿ
Identify Purity of Milk: ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಪ್ಯಾಕೆಟ್ ಹಾಲುಗಳು ಶುದ್ಧವಾಗಿರುವುದಿಲ್ಲ. ಅವು ಕೂಡಾ ಕಲಬೆರಕೆಯಿಂದ ಕೂಡಿರುತ್ತದೆ ಎಂಬ ಸಂಗತಿ ಬಹಳಷ್ಟು ಜನರಿಗೆ ತಿಳಿದಿಲ್ಲ. ಹಾಲಿನ ಶುದ್ಧತೆಯ ಪರೀಕ್ಷೆಯನ್ನು ಮನೆಯಲ್ಲಿಯೇ ಸರಳವಾಗಿ ಮಾಡಬಹುದು. ಹೇಗೆ ಅಂತೀರಾ? ಇಲ್ಲಿದೆ ಓದಿ.
ಬೆಳಗ್ಗಿನ ಬಿಸಿ ಬಿಸಿ ಕಾಫಿ ಅಥವಾ ಚಹಾದಿಂದ ಹಿಡಿದು ಸಿಹಿ ತಿನಿಸುಗಳವರೆಗೆ ಹಾಲು ನಮ್ಮ ಅಡುಗೆಮನೆಯನ್ನು ಆವರಿಸಿರುವ ಅತ್ಯಂತ ಪ್ರಮುಖ ಆಹಾರವಾಗಿದೆ. ಮನೆಯಲ್ಲಿ ಹಾಲು ಇಲ್ಲ ಎಂದರೆ ಆ ದಿನ ಊಹಿಸಲೂ ಸಾಧ್ಯವಿಲ್ಲ. ಹಾಲು ಅಷ್ಟು ಅವಶ್ಯಕವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಾಲು ಬೇಕೇ ಬೇಕು. ಸುಲಭವಾಗಿ ಜೀರ್ಣವಾಗುವ, ಅಗಾಧ ಪೋಷಕಾಂಶಗಳನ್ನು ಹೊಂದಿರುವ ಹಾಲು ಒಂದು ಸಂಪೂರ್ಣ ಆಹಾರ. ನಿಯಮಿತವಾಗಿ ಹಾಲು ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆ ದೂರವಾಗಿ ಮೂಳೆಗಳು ಬಲಗೊಳ್ಳುತ್ತವೆ. ಅದೇ ಪರಿಪೂರ್ಣ ಆಹಾರವಾದ ಹಾಲಿನಲ್ಲಿ ಕಲಬೆರಕೆ ಕಂಡು ಬಂದರೆ, ಅದು ಆರೋಗ್ಯಕ್ಕೆ ಪ್ರಯೋಜನ ನೀಡುವ ಬದಲಾಗಿ, ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ಈಗ ಎಲ್ಲರೂ ಪ್ಯಾಕೆಟ್ ಹಾಲನ್ನೇ ಅವಲಂಬಿಸಿದ್ದಾರೆ. ಮನೆಯಲ್ಲಿ ಹಾಲು ಇಲ್ಲ ಅಂದ್ರೆ ಹತ್ತಿರದಲ್ಲಿರುವ ಅಂಗಡಿಗೆ ಹೋಗಿ ಹಾಲು ಖರೀದಿಸಿ ತರುತ್ತಾರೆ. ಹಾಗೆ ಖರೀದಿಸಿ ತಂದ ಎಲ್ಲಾ ಹಾಲು ಶುದ್ಧವಾಗಿರುವುದಿಲ್ಲ ಎಂಬುದು ಅತ್ಯಂತ ಆಘಾತಕಾರಿ ವಿಷಯವಾಗಿದೆ. ಹಾಗಾಗಿ ನೀವು ಕೊಂಡು ತಂದ ಪ್ಯಾಕೆಟ್ ಹಾಲು ಅಸಲಿ ಅಥವಾ ನಕಲಿ ಎಂದು ತಿಳಿಯಲು ಮನೆಯಲ್ಲಿಯೇ ಸುಲಭವಾಗಿ ಪರೀಕ್ಷಿಸಬಹುದು.
ಅಸಲಿ ಮತ್ತು ನಕಲಿ ಪ್ಯಾಕೆಟ್ ಹಾಲನ್ನು ಗುರುತಿಸುವುದು ಹೇಗೆ?
ಹಾಲಿನಲ್ಲಿ ಸ್ಟಾರ್ಚ್ ಸೇರಿರುವುದು: ನೀವು ಖರೀದಿಸಿ ತಂದ ಹಾಲಿನಲ್ಲಿ ಸ್ಟಾರ್ಚ್ ಅನ್ನು ಸೇರಿಸಲಾಗಿದೆಯೇ ಎಂಬುದನ್ನು ಬಹಳ ಸುಲಭವಾಗಿ ಕಂಡುಹಿಡಿಯಬಹುದು. 3 ಮಿಲಿ ಹಾಲಿಗೆ 2 ಚಮಚ ಉಪ್ಪು ಅಥವಾ ಅಯೋಡಿನ್ ಸೇರಿಸಿ. ಆಗ ಹಾಲಿನ ಬಣ್ಣ ನೀಲಿಯಾದರೆ, ಆಗ ನಿಮ್ಮ ಹಾಲಿನಲ್ಲಿ ಸ್ಟಾರ್ಚ್ ಸೇರಿದ ಎಂದು ತಿಳಿದುಕೊಳ್ಳಿ.
ಹಾಲಿನಲ್ಲಿ ಫಾರ್ಮಲಿನ್ ಸೇರಿರುವುದು: ಹೆಚ್ಚಿನ ಪ್ಯಾಕೆಟ್ ಹಾಲುಗಳನ್ನು ಬಹಳ ಸಮಯದವರೆಗೆ ಕೆಡದಂತೆ ಇಡುವ ಸಲುವಾಗಿ ಅದರಲ್ಲಿ ಫಾರ್ಮಲಿನ್ ಅನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಹಾಲಿನಲ್ಲಿ ಫಾರ್ಮಲಿನ್‌ನ ಬೆರೆಸಿರುವುದನ್ನು ಪರೀಕ್ಷಿಸಲು ಒಂದು ಟೆಸ್ಟ್ ಟ್ಯೂಬ್ ನಲ್ಲಿ 10 ಮಿಲಿ ಹಾಲು ತೆಗೆದುಕೊಳ್ಳಿ. ಅದಕ್ಕೆ 2 ರಿಂದ 3 ಹನಿ ಸಲ್ಫ್ಯೂರಿಕ್ ಆಸಿಡ್ ಹಾಕಿ. ಸ್ವಲ್ಪ ಸಮಯದ ನಂತರ ಹಾಲಿನ ಮೇಲ್ಭಾಗದಲ್ಲಿ ನೀಲಿ ಬಣ್ಣ ಬಂದರೆ, ಹಾಲಿನಲ್ಲಿ ಫಾರ್ಮಲಿನ್ ಬೆರೆಸಲಾಗಿದೆ ಎಂಬುದನ್ನು ತಿಳಿಯಿರಿ.
ಹಾಲಿನ ಪರಿಮಳ ನೋಡಿ: ಹಾಲಿನಲ್ಲಿ ಕಲಬೆರಕೆಯಾಗಿರುವುದನ್ನು ಪರೀಕ್ಷಿಸಲು ಹಾಲಿನ ವಾಸನೆಯನ್ನು ನೋಡಿ. ಹಾಲಿನಲ್ಲಿ ಸಾಬೂನಿನ ವಾಸನೆ ಕಂಡುಬಂದರೆ ಎಚ್ಚರದಿಂದಿರಿ. ಅದು ಸಿಂಥೆಟಿಕ್ ಹಾಲು ಎಂಬುದನ್ನು ಅರಿತುಕೊಳ್ಳಿ.
ಡಾಲ್ಡಾ ಅಥವಾ ವನಸ್ಪತಿಗಳನ್ನು ಸೇರಿಸಿರುವುದು: ವನಸ್ಪತಿಗಳು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತವೆ. ಹಾಲಿನಲ್ಲಿ ಅವುಗಳನ್ನು ಬೆರೆಸಿರುವುದನ್ನು ಕಂಡುಹಿಡಿಯಲು 2 ಚಮಚ ಹೈಡ್ರೋಕ್ಲೋರಿಕ್ ಆಸಿಡ್, 1 ಚಮಚ ಸಕ್ಕರೆ ಮತ್ತು ಒಂದು ಚಮಚ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಹಾಲಿನ ಬಣ್ಣ ಕೆಂಪಾದರೆ, ಆ ಹಾಲು ನಕಲಿ ಎಂದು ತಿಳಿಯಿರಿ.