Kerala News: ಕುವೈತ್ ಅಗ್ನಿ ದುರಂತದಲ್ಲಿ ಮೃತಪಟ್ಟವರದಲ್ಲಿ ಕೇರಳದವರೇ 21 ಮಂದಿ
Jun 13, 2024 01:59 PM IST
ಕುವೈತ್‌ನ ಬೆಂಕಿ ದುರ್ಘಟನೆ
- Kuwait Fire ಕುವೈತ್‌ನಲ್ಲಿ ಬೆಂಕಿ ಹೊತ್ತಿಕೊಂಡು ಬಹುಮಹಡಿ ಕಟ್ಟಡದಲ್ಲಿ ಕಾರ್ಮಿಕರು ಮೃತಪಟ್ಟಿದ್ದು. ಇದರಲ್ಲಿ ಭಾರತೀಯರೇ ಅಧಿಕ. ಅವರಲ್ಲೂ ಕೇರಳದವರೇ ಹೆಚ್ಚು.
ದೆಹಲಿ: ದಕ್ಷಿಣ ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಜೀವ ಕಳೆದುಕೊಂಡವರು ಬಹುತೇಕ ಭಾರತೀಯರು. ಅದರಲ್ಲೂ ಕೇರಳದ ಪ್ರಜೆಗಳೇ ಹೆಚ್ಚು. ಉದ್ಯೋಗ ಅರಸಿ ಕುವೈತ್‌ಗೆ ತೆರಳಿ ಅಲ್ಲಿನ ಕಟ್ಟಡವೊಂದರಲ್ಲಿ ನೆಲೆಸಿದ್ದಾಗ ಬೆಂಕಿ ಹೊತ್ತಿಕೊಂಡು 49 ಮಂದಿ ಸುಟ್ಟು ಕರಕಲರಾಗಿದ್ದರು. ಇದರಲ್ಲಿ 40 ಮಂದಿ ಭಾರತೀಯರು. ಇವರಲ್ಲಿ 21 ಮಂದಿ ಕೇರಳದವರು ಎನ್ನುವುದು ವಿಚಾರಣೆಯಿಂದ ಬಯಲಾಗಿದೆ. ಭಾರತೀಯರ ಮೃತ ದೇಹಗಳನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ತರುವ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನಗಳು ನಡೆದಿವೆ. ಅಲ್ಲದೇ ಮೃತಪಟ್ಟ ಕೇರಳದವರಿಗೆ ಕೇರಳ ರಾಜ್ಯ ಸರ್ಕಾರ ತಲಾ ಐದು ಲಕ್ಷ ರೂ.ಗಳನ್ನು ಘೋಷಿಸಲಾಗಿದೆ.
ಭಾರತದ ವಿದೇಶಾಂಗ ರಾಜ್ಯ ಸಚಿವ ಕೀರ್ತಿವರ್ಧನಸಿಂಗ್ ಅವರು ಕುವೈತ್‌ಗೆ ದೌಡಾಯಿಸಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತೀಯರ ಮೃತ ದೇಹಗಳನ್ನು ಸುಸೂತ್ರವಾಗಿ ದೇಶಕ್ಕೆ ತಂದು ಕುಟುಂಬದವರಿಗೆ ಹಸ್ತಾಂತರಿಸಲು ಅವರು ಪ್ರಯತ್ನ ನಡೆಸಿದ್ದಾರೆ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೂ ಕೂಡ ಸಚಿವರಿಗೆ ಸಾಥ್ ನೀಡಿದ್ದಾರೆ.
ಈ ನಡುವೆ ಮೃತಪಟ್ಟವರು ಅಧಿಕರು ಕೇರಳದವರು ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸರ್ಕಾರವು ಸಚಿವೆ ವೀಣಾ ಜಾರ್ಜ್ ಹಾಗೂ ಅಧಿಕಾರಿಗಳ ತಂಡವನ್ನು ಕುವೈತ್ ಗೆ ಕಳುಹಿಸಿದೆ. ಅಲ್ಲಿ ಕೇರಳದವರಿಗೆ ಬೇಕಾದ ರೀತಿಯಲ್ಲಿ ನೆರವು ನೀಡಲು ಈ ತಂಡ ಮುಂದಾಗಿದೆ. ಈಗಾಗಲೇ ಸಚಿವೆ ಹಾಗೂ ಅಧಿಕಾರಿಗಳು ಕುವೈತ್ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಮೃತರ ದೇಹಗಳನ್ನು ಸುಸೂತ್ರವಾಗಿ ಕುಟುಂಬಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಕುವೈತ್ ನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದಾರೆ.
ಈ ನಡುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಂತಾಪ ಸೂಚಿಸಿದ್ದು. ಕುವೈತ್ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಘೋಷಿಸಿದ್ದಾರೆ. ಗಾಯಾಳುಗಳಿಗೆ ನೆರವು ನೀಡುವುದಾಗಿ ಹೇಳಿದ್ದಾರೆ.
ಕೇರಳದಲ್ಲಿ ಮೃತಪಟ್ಟವರ ಕಣ್ಣೀರ ಕಥೆ ಬೇಸರದಾಯಕವಾಗಿಯೇ ಇವೆ. ಉತ್ತರ ಕೇರಳದ ರಂಜಿತ್ ಎಂಬಾತ ವರ್ಷದ ಹಿಂದೆ ಕೇರಳದಲ್ಲಿ ಮನೆ ಕಟ್ಟಿದ್ದ.ಕುಟುಂಬದವರೊಂದಿಗೆ ಗೃಹಪ್ರವೇಶವನ್ನೂ ನಡೆಸಿದ್ದ,. ಮನೆ ಮೇಲಿನ ಸಾಲ ತೀರಿಸುವ ನಿಟ್ಟಿನಲ್ಲಿ ಕುವೈತ್ ಗೆ ಉದ್ಯೋಗಕ್ಕೆಂದು ತೆರಳಿದ್ದ. ವರ್ಷ ಆಗಿದ್ದರಿಂದ ಜುಲೈಗೆ ಕೇರಳಕ್ಕೆ ಬಂದು ಹೋಗಲು ಸಿದ್ದತೆ ಮಾಡಿಕೊಂಡಿದ್ದ. ಕೆಲವೇ ದಿನಗಳಲ್ಲಿ ಮನೆಗೆ ಬರಬೇಕಾಗಿತ್ತು. ಅದಕ್ಕೂ ಮೊದಲೇ ಆತ ಶವವಾಗಿ ಬರುತ್ತಿರುವುದು ಇಡೀ ಗ್ರಾಮವನ್ನೇ ಕಣ್ಣೀರಿಗೆ ದೂಡಿದೆ. ಆತ ಕಷ್ಟಪಟ್ಟು ಮನೆ ಕಟ್ಟಿಕೊಂಡಿದ್ದ. ಮನೆಯವರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಈಗ ಈ ರೀತಿಯಾಗಿದೆ ಎಂದು ರಂಜಿತ್ ಗ್ರಾಮಸ್ಥರು ಬೇಸರದಿಂದಲೇ ಹೇಳಿಕೊಂಡರು. ಇಂತಹ ಹಲವು ಬೇಸರದಾಯಕ ಸನ್ನಿವೇಶಗಳನ್ನು ಕುವೈತ್ ಅಗ್ನಿ ದುರಂತ ಸೃಷ್ಟಿಸಿದೆ.
ದೊಡ್ಡ ಕಟ್ಟಡದಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎನ್ನುವ ಕುರಿತು ಕುವೈತ್ ತಂಡ ಮಾಹಿತಿ ಕಲೆ ಹಾಕುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅಲ್ಲಿ ಹೊತ್ತಿಕೊಂಡ ಬೆಂಕಿ ಇಡೀ ಕಟ್ಟಡವನ್ನು ಆವರಿಸಿದೆ. ಒಟ್ಟು 195 ಮಂದಿ ಕಾರ್ಮಿಕರು ಮಂಗಾಫಿ ಕಟ್ಟಡದಲ್ಲಿ ನೆಲೆಸಿದ್ದರು. ಎಲ್ಲರೂ ಬೆಳಗಿನಜಾವವಾಗಿದ್ದರಿಂದ ಗಾಢ ನಿದ್ರೆಯಲ್ಲಿದ್ದರು. ಈ ವೇಳೆ ಉಸಿರುಗಟ್ಟಿಯೇ ಬಹುತೇಕರು ಮೃತಪಟ್ಟಿದಾರೆ. ಇನ್ನೂ ಕೆಲವರು ತಪ್ಪಿಸಿಕೊಂಡು ಹೊರಗೆ ಬಂದಿದ್ದಾರೆ. ಹಲವರಿಗೆ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆಯೂ ನಡೆದಿದೆ. ಈಗಾಗಲೇ ಹೆಚ್ಚು ಕಾರ್ಮಿಕರನ್ನು ಅಲ್ಲಿ ಇರಿಸಿಕೊಂಡಿದ್ದರ ಆರೋಪದ ಮೇಲೆ ಕಟ್ಟಡದ ಮಾಲೀಕರ ವಿರುದ್ದವೂ ಮೊಕದ್ದಮೆ ದಾಖಲಿಸಲಾಗಿದೆ. ಕೆಲ ಅಧಿಕಾರಿಗಳನ್ನು ಅಮಾನತುಪಡಿಸಲಾಗಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸಲಾಗಿದೆ.
ವಿಭಾಗ