ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರಿ ಗಾಳಿ ಮಳೆ ಹೆಚ್ಚಳಕ್ಕೇನು ಕಾರಣ; ಇನ್ನು 5ದಿನ ಭಾರಿ ಮಳೆ ಮುನ್ಸೂಚನೆ, ಗಮನಸೆಳೆದ 10 ಅಂಶ
Jul 30, 2024 01:44 PM IST
ಕರ್ನಾಟಕದ ಹವಾಮಾನ; ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರಿ ಗಾಳಿ ಮಳೆ ಹೆಚ್ಚಳಕ್ಕೇನು ಕಾರಣ; ಗಮನ ಸೆಳೆದ 10 ಅಂಶಗಳ ವಿವರ.
ಕರ್ನಾಟಕದ ಹವಾಮಾನ; ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರಿ ಗಾಳಿ ಮಳೆ ಹೆಚ್ಚಳಕ್ಕೇನು ಕಾರಣ ಎಂಬುದು ಸದ್ಯದ ಕುತೂಹಲ. ದಿಢೀರ್ ಮಳೆ ಕಾರಣ ಅನೇಕ ಅನಾಹುತಗಳಾಗಿದ್ದು, ಈ ಸಂದರ್ಭದಲ್ಲಿ ಗಮನ ಸೆಳೆದ 10 ಅಂಶಗಳು ಹೀಗಿವೆ.
ಬೆಂಗಳೂರು: ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಲ್ಲಿ ದಿಢೀರ್ ಗಾಳಿ ಮಳೆ ಪ್ರಮಾಣ ಹೆಚ್ಚಳವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಗಳಲ್ಲಿ ಇಂದು ನಸುಕಿನ ವೇಳೆ ಭಾರಿ ಗಾಳಿ ಬೀಸಿದ್ದು, ತರುವಾಯ ಭಾರಿ ಗಾಳಿ, ಆಕಾಶಕ್ಕೆ ತೂತುಬಿದ್ದಿದೆಯೇನೋ ಎಂಬಂತೆ ಧಾರಾಕಾರ ಮಳೆ ಸುರಿಯತೊಡಗಿದೆ. ಮುಂದಿನ ಐದು ದಿನಗಳ ಕಾಲ ಇದೇ ರೀತಿ ಧಾರಾಕಾರ ಮಳೆಯಾಗಬಹುದು ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.
ಅನೇಕ ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟ ಮೀರಿದ ಕಾರಣ ನದಿ ದಂಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ದಕ್ಷಿಣ ಕನ್ನಡದ ಪ್ರಮುಖ ನದಿಯಾಗಿರುವ ನೇತ್ರಾವತಿ ನದಿ ಇಂದು (ಜುಲೈ 30) ಅಪಾಯದ ಮಟ್ಟ 29 ಮೀಟರ್ ಮೀರಿ (29.6 Mtr) ಹರಿಯತೊಡಗಿದೆ.
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರಿ ಗಾಳಿ ಮಳೆ; ಗಮನಸೆಳೆದ 10 ಅಂಶಗಳಿವು
1) ಬೆಳ್ತಂಗಡಿ ತಾಲೂಕಿನಲ್ಲಿ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ತಹಸೀಲ್ದಾರ್ ರಜೆ ಘೋಷಿಸಿದ್ದಾರೆ.
2) ಹೆದ್ದಾರಿ ಕಾಮಗಾರಿ ಕಾರಣ ಪುಂಜಾಲಕಟ್ಟೆ - ಚಾರ್ಮಾಡಿ ರಸ್ತೆ ಸಂಚಾರ ಕಷ್ಟವಾಗಿದೆ. ಉಜಿರೆ, ಗುರುವಾಯನಕೆರೆ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಚಾರ್ಮಾಡಿಯಲ್ಲಿ ಮರ ಬಿದ್ದು 1 ಗಂಟೆ ಸಂಚಾರ ಅಸ್ತವ್ಯಸ್ತವಾಗಿತ್ತು.
3) ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ಅಪಾಯದ ಮಟ್ಟ ಮೀರಿ ಹರಿಯತೊಡಗಿದೆ. ಹೀಗಾಗಿ ನದಿ ತಟದ ಶಾಲೆಗಳಿಗೆ ಇಂದು (ಜುಲೈ 30) ರಜೆ ಘೋಷಿಸಲಾಗಿದೆ. ಬಂಟ್ವಾಳ ತಾಲೂಕು ತಹಸೀಲ್ದಾರ್ ಅವರು ರಜೆ ವಿಚಾರವನ್ನು ಶಾಲಾ ಆಡಳಿತ ಮಂಡಳಿ ವಿವೇಚನೆಗೆ ಬಿಟ್ಟ ಕಾರಣ, ಬಾಳ್ತಿಲ, ಪೆರ್ನೆ, ಕಡೆಶ್ವಾಲಯ ಮತ್ತಿತರ ಕಡೆ ಎಸ್‌ಡಿಎಂಸಿ ಮತ್ತು ಸಿಆರ್‌ಪಿಗಳು ಪರಿಸ್ಥಿತಿ ಅವಲೋಕಿಸಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಇನ್ನೊಂದೆಡೆ, ಸುಬ್ರಹ್ಮಣ್ಯ-ಸಕಲೇಶಪುರ ನಡುವಿನ ದೋಣಿಗಲ್‌ನಲ್ಲಿ ಭೂಕುಸಿತ ಉಂಟಾಗಿ ರೈಲ್ವೇ ಟ್ರ್ಯಾಕ್‌ಗೆ ಹಾನಿಯಾಗಿದೆ. ರೈಲು ಸಂಚಾರ ಸ್ಥಗಿತವಾಗಿದೆ. ಇಲ್ಲಿ 400ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಕಾರ್ಮಿಕರಿಂದ ಗಾಳಿ ಮಳೆ ಲೆಕ್ಕಿಸದೆ ರಾತ್ರಿ ಹಗಲು ದುರಸ್ಥಿ ಕಾರ್ಯ ನಡೆಯುತ್ತಿದೆ.
4) ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಮೂಲ್ಕಿ ತಾಲೂಕಿನಲ್ಲೂ ಭಾರಿ ಮಳೆಯಾಗುತ್ತಿದೆ. ಅಲ್ಲೂ ಬಹಳ ಕಡೆಗೆ ರಸ್ತೆಗಳು ಜಲಾವೃತವಾಗಿದ್ದು ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ.
5) ಚಿಕ್ಕಮಗಳೂರು ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಲಕ್ಕವಳ್ಳಿಯ ಭದ್ರಾ ಜಲಾಶಯದ ಹೊರ ಹರಿವನ್ನು ಮಂಗಳವಾರ ಬೆಳಗ್ಗೆ ಹೆಚ್ಚಿಸಲಾಗಿದೆ. ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ತೆರೆದು ನದಿಗೆ ನೀರು ಬಿಡಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, 183.2 ಅಡಿ ನೀರು ಭರ್ತಿಯಾಗಿದೆ. ಸುರಕ್ಷತೆ ದೃಷ್ಟಿಯಿಂದ 184 ಅಡಿ ತನಕ ಮಾತ್ರ ನೀರು ಭರ್ತಿ ಮಾಡಲಾಗುತ್ತದೆ. ಎರಡು ವರ್ಷಗಳ ಅವಧಿಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿರುವುದು ಇದೇ ಮೊದಲು. ಕಳೆದ ವರ್ಷ ಈ ಅವಧಿಯಲ್ಲಿ ಭದ್ರಾ ಜಲಾಶಯದ ನೀರಿ ನಮಟ್ಟ 161.6 ಅಡಿ ಮಾತ್ರ ಇತ್ತು.
6) ಚಿಕ್ಕಮಗಳೂರಿನಲ್ಲಿ ಸೋಮವಾರ ರಾತ್ರಿಯಿಂದ ವಿಪರೀತ ಮಳೆಯಾಗುತ್ತಿದ್ದು, ಅಲ್ಲಲ್ಲಿ ಸೇತುವೆಗಳು, ಕಿರು ಸೇತುವೆಗಳು ಮುಳುಗಡೆಯಾಗಿವೆ. ಅನೇಕ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಬಾಳೆ ಹೊನ್ನೂರು ಮಾಗುಂಡಿ ರಸ್ತೆ ಜಲಾವೃತವಾಗಿದೆ. ಕಳಸ- ಬಾಳೆಹೊನ್ನೂರು ರಸ್ತೆಯ ತೆಪ್ಪದಗುಂಡಿ, ಬೈರೇಗುಡ್ಡದಲ್ಲಿ ಭದ್ರಾ ನದಿ ರಸ್ತೆ ಮೇಲೆ ಹರಿದಿರುವ ಕಾರಣ ವಾಹನ ಸಂಚಾರ ಸ್ಥಗಿತವಾಗಿದೆ. ಧಾರಾಕಾರ ಮಳೆಯ ಕಾರಣ ಚಿಕ್ಕಮಗಳೂರು ಜಿಲ್ಲೆಯ 5 ತಾಲೂಕುಗಳ (ಮೂಡಿಗೆರೆ, ಕೊಪ್ಪ, ಎನ್‌ಆರ್‌ಪುರ, ಕಳಸ, ಶೃಂಗೇರಿ) ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಇಂದು (ಜುಲೈ 30) ರಜೆ ಘೋಷಿಸಲಾಗಿದೆ.
7) ಕಾವೇರಿ ಹೊರಹರಿವು ಕಡಿಮೆಯಾದ ಕಾರಣ, ಪ್ರವಾಹ ಭೀತಿಯಲ್ಲಿದ್ದ ಕೊಳ್ಳೇಗಾಲ ತಾಲೂಕಿನ ದಾಸನಪುರ, ಮುಳ್ಳೂರು, ಹಳೆ ಅಣಗಳ್ಳಿ, ಹಳೆ ಹಂಪಾಪುರ ಮತ್ತು ಹರಳೆ ಗ್ರಾಮಗಳಲ್ಲಿ ಪ್ರವಾಹ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದೆ. ಪ್ರಸ್ತುತ ಕಾವೇರಿ ಜಲಾನಯನ ದಂಡೆಯಲ್ಲಿ ಕಂಡುಬರುವ ಯಾವುದೇ ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಇಲ್ಲ ಎಂದು ಡಿಸಿ ಶಿಲ್ಪಾನಾಗ್ ಮಾಹಿತಿ ನೀಡಿದ್ದಾರೆ.
8) ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯ ಗಡಿಭಾಗದಲ್ಲಿರುವ ಕನಕಪುರ ತಾಲೂಕಿನ ಸಂಗಮದಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, ತಮಿಳುನಾಡಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಮೇಕೆದಾಟುವಿನಲ್ಲಿ ಪ್ರವಾಸಿಗರಿಗೆ ನಿಷೇಧ: ಕೆಆರ್ಎಸ್ ಮತ್ತು ಕಬಿನಿ ಜಲಾಶಯದಿಂದ ಸತತ ಒಂದು ವಾರದಿಂದ ಅಪಾರ ನೀರು ಹೊರಬಿಟ್ಟಿರುವ ಕಾರಣ ಸಂಗಮ ಸ್ಥಳ ಮೇಕೆದಾಟು ಬಳಿ ನದಿ ಭೋರ್ಗರೆದು ಹರಿಯುತ್ತಿದೆ. ಹೀಗಾಗಿ ಇಲ್ಲಿ ಹೈ ಅಲರ್ಟ್ ಘೋಷಿಸಿರುವ ಜಿಲ್ಲಾಡಳಿತ, ಪ್ರವಾಸಿಗರಿಗೆ ನಿಷೇಧ ಹೇರಿದೆ.
09) ಮಹಾರಾಷ್ಟ್ರಭಾಗದಲ್ಲಿ ವ್ಯಾಪಕ ಮಳೆಯಾಗಿರುವ ಪರಿಣಾಮ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಕಾರಣಕ್ಕೆ ಉಪನದಿಗಳಾದ ಘಟಪ್ರಭಾ ಮತ್ತು ಮಲಪ್ರಭಾ ನದಿಗಳೂ ಮೈದುಂಬಿ ಹರಿಯುತ್ತಿವೆ. ಆದ್ದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಂಗಳವಾರವೂ ಜನ ಜೀವನ ತತ್ತರಿಸಿದೆ. ಮೂರು ನದಿಗಳ ಆರ್ಭಟಕ್ಕೆ ಅನೇಕ ಮನೆಗಳು ಜಲಾವೃತಗೊಂಡಿವೆ.
10) ಬೆಳಗಾವಿ ಜಿಲ್ಲೆಯಲ್ಲಿ ಏಳು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಕಾರಣ ಅದರ ಸುತ್ತಮುತ್ತಲಿನ ಗೋಕಾಕ್, ಮೂಡಲಗಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ಹುಕ್ಕೇರಿ ತಾಲೂಕಿನ 43 ಗ್ರಾಮಗಳು ಪ್ರವಾಹಕ್ಕೀಡಾಗಿವೆ.
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರಿ ಗಾಳಿ ಮಳೆ ಹೆಚ್ಚಳಕ್ಕೇನು ಕಾರಣ
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಭಾಗದಲ್ಲಿ ನಿನ್ನೆ (ಜುಲೈ 29) ರಾತ್ರಿಯಿಂದ ದಿಢೀರ್ ಭಾರಿ ಗಾಳಿ ಮಳೆ ಹೆಚ್ಚಳವಾಗಿದೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದ ಪರಿಸ್ಥಿತಿಯಲ್ಲಿ ಈ ಮಳೆಯ ಪ್ರಮಾಣ ಕಳವಳ ಮೂಡಿಸಿದೆ.
ಕೇರಳದ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಪ್ರಕಟಿಸಿದ ಮಾಹಿತಿಯಲ್ಲಿ ಗ್ರಾಫಿಕ್ಸ್ ಒಂದಿದ್ದು, ಅದು ಸದ್ಯದ ಪರಿಸ್ಥಿತಿಯನ್ನು ಸರಳವಾಗಿ ಅರ್ಥಮಾಡಿಕೊಡುವಂತೆ ಇದೆ. ಮುಂಗಾರು ಮಾರುತಗಳು ಭಾರತದ ಪಶ್ಚಿಮ ಕರಾವಳಿ ಕಡೆಗೆ ಬೀಸುವಾಗ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಅಥವಾ ಅದಕ್ಕೆ ತಡೆ ಒಡ್ಡುವ ಪ್ರಯತ್ನ ನಡೆದಿದೆ. ಆ ಮಾರುತಗಳು ಪೂರ್ವಕ್ಕೆ ಸಾಗುತ್ತಿದೆ. ಇದರ ಪರಿಣಾಮ ದಿಢೀರ್ ಆಗಿ ಗಾಳಿ ಮಳೆ ಬೀಸತೊಡಗಿದೆ.
ಕೇರಳ ಕರಾವಳಿಯಿಂದ ದಕ್ಷಿಣ ಗುಜರಾತ್ ಕರಾವಳಿಯವರೆಗೆ ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ, ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮತ್ತು ಜುಲೈ 29 ರಿಂದ ಆಗಸ್ಟ್ 01 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)