ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು ಕ್ಲಾಸ್ ನಿರ್ಲಕ್ಷಿಸಿದ್ರಾ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು; ಗಮನ ಸೆಳೆಯುವ 4 ಅಂಶಗಳು
Nov 23, 2024 07:09 PM IST
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ಎಡ ಚಿತ್ರ) ಸಮ್ಮುಖದಲ್ಲಿ ಜುಲೈನಲ್ಲಿ ನಡೆದ ಸಭೆಯಲ್ಲಿ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು (ಬಲ ಚಿತ್ರ) ಕ್ಲಾಸ್‌ನ ಮುಖ್ಯ ಅಂಶಗಳನ್ನು ನಿರ್ಲಕ್ಷಿಸಿದ್ರಾ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಎಂಬ ಪ್ರಶ್ನೆ ಎದುರಾಗಿದೆ.
Maharashtra Assembly Election 2024 outcomes: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಅವಲೋಕನ ಶುರುವಾಗಿದೆ. ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು ಕ್ಲಾಸ್ ನಿರ್ಲಕ್ಷಿಸಿದ್ರಾ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಎಂಬ ಪ್ರಶ್ನೆಯೂ ಎದುರಾಗಿದೆ.
Maharashtra Assembly Election 2024 outcomes: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾಯಿತು. ಇದರ ಬೆನ್ನಿಗೆ ಚುನಾವಣಾ ತಂತ್ರಗಾರಿಕೆ ವಿಚಾರ ಮುನ್ನೆಲೆಗೆ ಬಂದಿದೆ. ವಿಶೇಷವಾಗಿ ಮಹಾ ವಿಕಾಸ್ ಅಘಾಡಿಯ ಹೀನಾಯ ಸೋಲು ಮತ್ತು ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರಿಕೆ ಹೊಣೆ ಹೊತ್ತಿದ್ದ ಸುನಿಲ್ ಕನುಗೋಳು ಸಹಜವಾಗಿಯೇ ಗಮನಸೆಳೆದಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತ ಪೂರ್ವ ಗೆಲುವು ದೊರಕಿಸಿಕೊಟ್ಟ ಸುನಿಲ್ ಕನುಗೋಳು ಜುಲೈನಲ್ಲಿ ಮಹಾರಾಷ್ಟ್ರ ಚುನಾವಣೆ ತಂತ್ರಗಾರಿಕೆಯ ಹೊಣೆಗಾರಿಕೆ ವಹಿಸಿಕೊಂಡರು. ಕರ್ನಾಟಕದ ಫಾರ್ಮುಲಾವನ್ನೇ ತೆಲಂಗಾಣದಲ್ಲಿ ಪುನರಾವರ್ತಿಸಿ ಅಲ್ಲಿ ಗೆಲುವು ದಾಖಲಿಸಿದ್ದರು. ಆದರೆ ಅವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ತಂತ್ರಗಾರಿಕೆ ತಂಡದ ಭಾಗವಾಗಿರಲಿಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೆಲಸ ಮಾಡಿದ ಚುನಾವಣಾ ತಂತ್ರಗಾರ ಸುನಿಲ್ ಕನುಗೋಳು ಅವರ ತಂತ್ರ ಮಹಾರಾಷ್ಟ್ರದಲ್ಲಿ ಫೇಲ್ ಆಗಿದ್ದೇಕೆ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ನಡೆದ ಸುನಿಲ್ ಕನಗೋಳು ಕ್ಲಾಸನ್ನು ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ನಿರ್ಲಕ್ಷಿಸಿದ್ರಾ? ಅಥವಾ ಮಹಾರಾಷ್ಟ್ರದ ರಾಜಕಾರಣವನ್ನು ಅಂದಾಜಿಸುವಲ್ಲಿ ಸುನಿಲ್ ಕನಗೋಳು ಎಡವಿದ್ರಾ? ಹೀಗೆ ಸಾಲು ಸಾಲು ಪ್ರಶ್ನೆಗಳು ಎದುರಾಗಿವೆ. ಲಭ್ಯ ಮಾಹಿತಿಗೆ ಅನುಗುಣವಾಗಿ ಒಂದು ಹಿನ್ನೋಟ.
2014ರಿಂದೀಚೆಗೆ ಚುನಾವಣಾ ತಂತ್ರಗಾರಿಕೆ ಸವಾಲು
ಭಾರತದಲ್ಲಿ 2014ರಲ್ಲಿ ದೇಶದ ಉದ್ದಗಲಕ್ಕೂ ನರೇಂದ್ರ ಮೋದಿ ಹವಾ ಸೃಷ್ಟಿಸಿದ್ದು ಚುನಾವಣಾ ತಂತ್ರಗಾರಿಕೆ. ಸಾಮಾಜಿಕ ಮಾಧ್ಯಮಗಳ ಬಳಕೆ, ವೈಯಕ್ತಿಕಗೊಳಿಸಿದ ಪ್ರಚಾರ ಕಾರ್ಯ ಮುಂತಾದವು ಗಮನಸೆಳೆದವು. ಆ ಚುನಾವಣೆಯಲ್ಲಿ ಬಿಜೆಪಿಗೆ ಮೊದಲ ಬಾರಿ ಭರ್ಜರಿ ಬಹುಮತ ಸಿಕ್ಕಿತು. ಇದರೊಂದಿಗೆ ಪ್ರಶಾಂತ್ ಕಿಶೋರ್, ಸುನಿಲ್ ಕನಗೋಳು ಹೀಗೆ ಚುನಾವಣಾ ತಂತ್ರಗಾರರ ಹೆಸರುಗಳು ಬಹಿರಂಗವಾದವು. ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸುನಿಲ್ ಕನಗೋಳು ಅವರಿಗೆ ಭಾರಿ ಬೇಡಿಕೆ. ಕಾರಣ ಇಷ್ಟೆ. ಕರ್ನಾಟಕದಲ್ಲಿ ಭಾರಿ ಭಿನ್ನಮತ, ಬಣ ಜಗಳ ಇದ್ದರೂ ಎಲ್ಲರನ್ನೂ ಒಗ್ಗೂಡುವಂತೆ ಮಾಡಿ 2023ರ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಒದಗಿಸಿಕೊಟ್ಟಿದ್ದರು. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ, ಶೇಕಡ 40 ಕಮಿಷನ್ ಸರ್ಕಾರ ಮುಂತಾದ ಅಭಿಯಾನ ನಡೆಸಿ, ಆಡಳಿತ ಪಕ್ಷದ ವಿರುದ್ಧ ಅಲೆ ಸೃಷ್ಟಿಸಿದ್ದಲ್ಲದೆ, ಮತದಾರರನ್ನು ಸೆಳೆಯಲು 5 ಗ್ಯಾರಂಟಿ ಯೋಜನೆಗಳನ್ನು ಮುಂಚಿತವಾಗಿ ಪ್ರಕಟಿಸಿದ್ದರು. ಇದು ಕೆಲಸ ಮಾಡಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರು ಒಂದು ವರ್ಷದೊಳಗೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದರು. ತೆಲಂಗಾಣ ಚುನಾವಣಗೆ ಕರ್ನಾಟಕ ಮಾದರಿಯಾಯಿತು. ಅಲ್ಲೂ ಗೆಲುವು ಸಿಕ್ಕಿತು. ಆದರೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಫಾರ್ಮುಲಾ ವರ್ಕ್‌ಔಟ್ ಆಗಲಿಲ್ಲ. ಯಾಕೆ ಅನ್ನೋದನ್ನು ಗಮನಿಸುವುದಾದರೆ, ಲಭ್ಯ ಮಾಹಿತಿಗಳ ಪ್ರಕಾರ ಗಮನಸೆಳೆಯುವ ಅಂಶಗಳಿವು.
ಮಹಾರಾಷ್ಟ್ರ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ನ ಕರ್ನಾಟಕ ಫಾರ್ಮುಲಾ ಕೆಲಸ ಮಾಡದಿರುವುದೇಕೆ
1) ಚುನಾವಣಾ ತಂತ್ರಗಾರಿಕೆಗೆ ಸುನಿಲ್ ಕನಗೋಳು: ಕಾಂಗ್ರೆಸ್ ಪಕ್ಷದ ನೀತಿ ಸಮಿತಿಯ ಹೊಣೆಗಾರಿಕೆ ಸುನಿಲ್ ಕನುಗೋಳು ಅವರ ಹೆಗಲೇರಿತ್ತು. ರಾಹುಲ್ ಗಾಂಧಿ ಅವರ ಆಪ್ತವಲಯದಲ್ಲಿ ಸುನಿಲ್ ಸೇರಿಕೊಂಡಿದ್ದಾರೆ. ಕರ್ನಾಟಕದ ಪೇಸಿಎಂ ಮಾದರಿ ಅಭಿಯಾನ ನಡೆಸುವುದಕ್ಕೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರ ಜತೆಗೆ ಮಾತುಕತೆ ನಡೆಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ನಾಯಕರಿಗೆ ಈ ವಿಚಾರ ಹೇಳಲಾಗಿತ್ತು. ಸುನಿಲ್ ಕನಗೋಳು ಹೇಳುವುದನ್ನು ಅನುಸರಿಸುವಂತೆ ಹೈಕಮಾಂಡ್ ಸೂಚಿಸಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಸ್ವರಾಜ್ ಮಾಗ್ ವರದಿ ಮಾಡಿದೆ.
2) ಪ್ರಾದೇಶಿಕ ಸಮಸ್ಯೆ: ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಾಡಿದಂತೆ ಮಹಾರಾಷ್ಟ್ರದಲ್ಲೂ ಪ್ರಾದೇಶಿಕ ಸಮಸ್ಯೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಪಟ್ಟಿಮಾಡುವಂತೆ ಸೂಚಿಸಲಾಗಿತ್ತು. ಅದನ್ನು ಇಟ್ಟುಕೊಂಡು ಪ್ರಚಾರ ಅಭಿಯಾನ ರೂಪಿಸುವ ಸಿದ್ಧತೆ ನಡೆದಿತ್ತು. ಇದಕ್ಕೆ ಸ್ಪಂದಿಸುವಂತೆ ಮಹಾರಾಷ್ಟ್ರ ನಾಯಕರಿಗೆ ಸೂಚಿಸಲಾಗಿತ್ತು ಎಂದು ವರದಿ ಹೇಳಿದೆ.
3) ಬಿಜೆಪಿ ಸರ್ಕಾರದ ವೈಫಲ್ಯ ಮತ್ತು ಭ್ರಷ್ಟಾಚಾರ: ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಬೇಕು. ಭ್ರಷ್ಟಾಚಾರಕ್ಕೆ ಸಂಬಂಧಿಸಿ ದಾಖಲೆಗಳನ್ನು ಒಟ್ಟುಗೂಡಿಸಿ ಅಭಿಯಾನ ನಡೆಸಬೇಕು ಎಂಬ ತಂತ್ರಗಾರಿಕೆಯೂ ಇತ್ತು. ಈ ವಿಚಾರದಲ್ಲಿ ಸುನಿಲ್ ಕನುಗೋಳು ಅವರ ಪರಿಣತಿ ಬಳಸಬೇಕು ಎಂದು ಸೂಚಿಸಲಾಗಿತ್ತು.
4) ತಳಮಟ್ಟದಲ್ಲಿ ಕೆಲಸ ಮತ್ತು ಮತದಾರರೊಂದಿಗೆ ಸಂಪರ್ಕ: ಕಾಂಗ್ರೆಸ್ ಪಕ್ಷ ತಳಮಟ್ಟದ ಕಾರ್ಯಕರ್ತರಿಗೆ ಸ್ಪಂದಿಸಿ ಕೆಲಸ ಮಾಡುವಂತೆ ಮಾಡಬೇಕು. ಅಭಿಯಾನವನ್ನು ತಳಮಟ್ಟದಲ್ಲಿ ಬಲಪಡಿಸಬೇಕು. ಅವರು ಮತದಾರರ ಜೊತೆಗೆ ಬೆರೆಯುವಂತೆ ಮಾಡಬೇಕು. ಕಾರ್ಯಕ್ರಮಕ್ಕೆ ಸ್ವಯಂಸೇವಕರನ್ನು ಒಗ್ಗೂಡಿಸುವುದು, ಸಾಂಕೇತಿಕ ಪ್ರತಿಭಟನೆ ನಡೆಸುವುದು ಹೀಗೆ ಅಗತ್ಯ ತಂತ್ರಗಳನ್ನು ಸಂದರ್ಭಕ್ಕೆ ತಕ್ಕಂತೆ ಮಾಡಬೇಕು ಎಂದು ಸೂಚಿಸಲಾಗಿತ್ತು.
ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಗಳನ್ನು ಗಮನಿಸಿದಾಗ ಬಹುತೇಕ ಎಲ್ಲವೂ ಗ್ಯಾರಂಟಿ ಯೋಜನೆಗಳ ಮೇಲೆ ಅವಲಂಬಿತವಾಗಿತ್ತು. ಕರ್ನಾಟಕ ಮತ್ತು ತೆಲಂಗಾಣ ಮಾದರಿ ಮುಂದಿಟ್ಟು ಚುನಾವಣೆ ಗೆಲ್ಲಲು ಮಹಾರಾಷ್ಟ್ರ ನಾಯಕರು ಯೋಜನೆ ರೂಪಿಸಿಕೊಂಡಂತೆ ಕಂಡುಬಂದಿತ್ತು. ಆದರೆ ಬಿಜೆಪಿ ಇದಕ್ಕೆ ಪ್ರತಿಯಾಗಿ ಮಾಧ್ಯಮಗಳಲ್ಲಿ ಕರ್ನಾಟಕ ಮಾದರಿಗೆ ಸೆಡ್ಡು ಹೊಡೆದು ಅಲ್ಲಿ ಬೊಕ್ಕಸದಲ್ಲಿ ಹಣ ಇಲ್ಲ ಎಂಬ ಮಾಧ್ಯಮ ವರದಿಗಳನ್ನು ಮುಂದಿಟ್ಟು ಜಾಹೀರಾತು ಅಭಿಯಾನ ನಡೆಸಿತು. ಇದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಹಿನ್ನಡೆ ಉಂಟು ಮಾಡಿದಂತೆ ತೋರುತ್ತದೆ.
ಏಕೆ ನಡೆಯಲಿಲ್ಲ ಸುನಿಲ್ ಮ್ಯಾಜಿಕ್? ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಬಿಆರ್‌ಎಸ್ ಸದಸ್ಯ ಕ್ರಿಶನ್ ಕೆ ಎಂಬುವವರು ಸುನಿಲ್ ಕನುಗೋಳು ಅವರ ತಂತ್ರಗಾರಿಕೆ ಹರಿಯಾಣದಲ್ಲಿ ನಡೆಯಲಿಲ್ಲ. ಈಗ ಮಹಾರಾಷ್ಟ್ರದಲ್ಲೂ ತಿಸ್ಕರಿಸಿದ್ರಾ ಎಂದು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ. ಇದು ಏಕೆ ನಡೆಯಲಿಲ್ಲ ಸುನಿಲ್ ಮ್ಯಾಜಿಕ್? ಎಂಬ ಚರ್ಚೆಗೆ ಗ್ರಾಸ ಒದಗಿಸಿತು.
ಕ್ರಿಶನ್ ಕೆ ಅವರ ಟ್ವೀಟ್ 20 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು 680ಕ್ಕೂ ಹೆಚ್ಚು ಮೆಚ್ಚುಗೆ ಗಳಿಸಿವೆ. ಕಾಮೆಂಟ್‌ಗಳನ್ನು ಗಮನಿಸಿದರೆ, ಕೆಲವರು ವೈಯಕ್ತಿಕವಾಗಿ ಟೀಕೆ ಮಾಡಿದ್ದರೆ ಇನ್ನು ಕೆಲವು ಮಹಾರಾಷ್ಟ್ರ ಯಾಕೆ ತೆಲಂಗಾಣ ಮಾತ್ರ ನೋಡಿ ಎಂದಿದ್ದಾರೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಏನಾಯಿತು ಎಂಬುದನ್ನು ಅಲ್ಲಿನ ಜನ ನೋಡಿದ್ದಾರೆ ಅದಕ್ಕೆ ಹಾಗಾಗಿದೆ ಎಂದು ಸಿಕೆ ರವಿ ಕಾಮೆಂಟ್ ಮಾಡಿದ್ದಾರೆ.
- ಉಮೇಶ್ ಕುಮಾರ್ ಶಿಮ್ಲಡ್ಕ, ಸುದ್ದಿ ಸಂಪಾದಕ, ಹಿಂದೂಸ್ತಾನ್ ಟೈಮ್ಸ್ ಕನ್ನಡ