ಮಹಾರಾಷ್ಟ್ರದಲ್ಲಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದ ಮಹಾಯುತಿ; ಸಿಎಂ ಆದ ದೇವೇಂದ್ರ ಫಡ್ನವೀಸ್, ಎನ್‌ಡಿಒ ಒಗ್ಗಟ್ಟು ಪ್ರದರ್ಶನ
Dec 05, 2024 06:34 PM IST
ಮಹಾರಾಷ್ಟ್ರದ ಸಿಎಂ ಆಗಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿಗಳಾಗಿ ಏಕನಾಥ ಶಿಂಧೆ ಹಾಗೂ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು.
Maharashtra Politics: ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ , ಉಪಮುಖ್ಯಮಂತ್ರಿಯಾಗಿ ಶಿವಸೇನೆಯ ಏಕನಾಥ ಶಿಂಧೆ, ಎನ್‌ಸಿಪಿಯ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು.
ಮುಂಬೈ: ಮಹಾರಾಷ್ಟ್ರದಲ್ಲಿ ಹದಿಮೂರು ದಿನಗಳ ಹಿಂದೆಯೇ ಭಾರೀ ಬಹುಮತದೊಂದಿಗೆ ಬಿಜೆಪಿ ಶಿವಸೇನೆ ಹಾಗೂ ಎನ್‌ಸಿಪಿ ಮೈತ್ರಿಯೊಂದಿಗೆ ಮಹಾಯುತಿ ಮತ್ತೆ ಅಧಿಕಾರಕ್ಕೆ ಬಂದರೂ ಕೊನೆಗೂ ಹೊಂದಾಣಿಕೆ ಸಾಧ್ಯವಾಗಿ ಸರ್ಕಾರ ರಚನೆಯಾಗಿದೆ. ಮಹಾರಾಷ್ಟ್ರದ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡರು. ಈ ಮೂಲಕ ಬಿಜೆಪಿ ಇಲ್ಲಿ ಮತ್ತೆ ಚುಕ್ಕಾಣಿ ಹಿಡಿಯಿತು. ಡಿಸಿಎಂಗಳಾಗಿ ಏಕನಾಥ ಶಿಂಧೆ, ಅಜಿತ್ ಪವಾರ್ ಕೂಡ ಅಧಿಕಾರ ವಹಿಸಿಕೊಂಡರು.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಡಿಎ ಪಾಲುದಾರ ಸಿಎಂಗಳಾದ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಸಹಿತ ಬಿಜೆಪಿ ಆಡಳಿತ ಇರುವ ಎಲ್ಲಾ ಸಿಎಂಗಳ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. ಸದ್ಯ ಮೂವರು ಮಾತ್ರ ಪ್ರಮಾಣ ವಹಿಸಿಕೊಂಡಿದ್ದು. ಸಚಿವ ಸಂಪುಟ ವಿಸ್ತರಣೆ ಸದಸ್ಯವೇ ನಡೆಯಲಿದೆ.
ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ಗೌಪ್ಯತೆಯ ಪ್ರಮಾಣ ವಚನವನ್ನು ಮೂವರಿಗೂ ಬೋಧಿಸಿದರು. ಮೊದಲು ದೇವೇಂದ್ರ ಫಡ್ನವೀಸ್ ಅವರು ಸಿಎಂ ಆಗಿ, ನಂತರ ಏಕನಾಥ ಶಿಂಧೆ ಹಾಗೂ ಅಜಿತ್ ಪವಾರ್ ಡಿಸಿಎಂಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎರಡೂವರೆ ವರ್ಷದ ಹಿಂದೆ ದೇವೇಂದ್ರ ಡಿಸಿಎಂ ಆದರೆ, ಶಿಂಧೆ ಸಿಎಂ ಆಗಿದ್ದರು. ಈಗ ಅಧಿಕಾರ ಅದಲು ಬದಲಾಗಿದೆ.
ಭಾರೀ ಬಹುಮತದೊಂದಿಗೆ ಮಹಾರಾಷ್ಟ್ರದಲ್ಲಿ ಮಹಾಯುತಿ ಅಧಿಕಾರಕ್ಕೆ ಬಂದರೂ ಯಾರು ಸಿಎಂ ಆಗುವರು ಎನ್ನುವ ವಿಚಾರದಲ್ಲಿ ಗೊಂದಲವಿತ್ತು. ಅದರಲ್ಲೂ ಶಿವಸೇನೆ ಸಿಂಧೆ ಬಣ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿತ್ತು. ಮಾತುಕತೆಗಳ ಮೂಲಕ ಬಗೆಹರಿಸಿ ಅಧಿಕಾರ ಸ್ವೀಕಾರ ಸಮಾರಂಭ ನಿಗದಿ ಮಾಡಿ ಈಗ ಮೊದಲ ಹಂತದ ಪ್ರಕ್ರಿಯೆಯೂ ಮುಗಿದಿದೆ. ಎರಡನೇ ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಪ್ರಕ್ರಿಯೆ ಮುಂದುವರಿಯಲಿದೆ.
ಮೂವರು ತಾಯಿ ಹೆಸರನ್ನೂ ಸೇರಿಸಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಏಕನಾಥ ಶಿಂಧೆ ತಮ್ಮ ರಾಜಕೀಯ ಗುರು ಬಾಳಾ ಸಾಹೇಬ್ ಠಾಕ್ರೆ ಹಾಗೂ ಇತರರ ಹೆಸರನ್ನು ಉಲ್ಲೇಖಿಸಿದರು.
ಮಹಾಯುತಿ ಸರ್ಕಾರದ ರಚನೆ ಹಾಗೂ ಪ್ರಮಾಣ ವಚನ ಸಮಾರಂಭದಲ್ಲಿ ಗಣ್ಯರು ಭಾಗಿಯಾದರು. ಹದಿನೈದಕ್ಕೂ ಹೆಚ್ಚು ಸಿಎಂಗಳು ಭಾಗಿಯಾಗಿದ್ದು ವಿಶೇಷ. ಬಿಜೆಪಿ ಹಾಗೂ ಮಿತ್ರ ಪಕ್ಷ ಆಡಳಿತ ಇರುವ ಎಲ್ಲಾ ರಾಜ್ಯಗಳ ಸಿಎಂಗಳು ಬಂದಿದ್ದರು. ಕೇಂದ್ರದ ಹಲವಾರು ಸಚಿವರು ಆಗಮಿಸಿದ್ದರು.
ಅಲ್ಲದೇ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್, ನಟ ಶಾರುಖ್ ಖಾನ್, ರಣಬೀರ್ ಕಪೂರ್ ಸಹಿತ ಹಲವರು ಭಾಗಿಯಾದರು. 40 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಎರಡು ಸಾವಿರ ವಿಐಪಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಮೂವರಿಗೆ ಖುದ್ದು ಅಭಿನಂದನೆಗಳನ್ನು ಸಲ್ಲಿಸಿದರು. ಕೆಲವೇ ನಿಮಿಷದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಕ್ತಾಯವಾಯಿತು.
ವಿಭಾಗ