ಕೇಂದ್ರ ಬಜೆಟ್ 2024ರ ಕಡೆಗೆ ಎಲ್ಲರ ಚಿತ್ತ; ವೈಯಕ್ತಿಕ ತೆರಿಗೆದಾರರಿಂದ ಹಿಡಿದು ಉದ್ಯಮಿಗಳ ತನಕ ಪರಿಣಾಮ ಬೀರಬಲ್ಲ 11 ಅಂಶಗಳು
Jul 23, 2024 09:18 AM IST
ಕೇಂದ್ರ ಬಜೆಟ್ 2024ರ ಕಡೆಗೆ ಎಲ್ಲರ ಚಿತ್ತ ಹರಿದಿದೆ. ವೈಯಕ್ತಿಕ ತೆರಿಗೆದಾರರಿಂದ ಹಿಡಿದು ಉದ್ಯಮಿಗಳ ತನಕ ಪರಿಣಾಮ ಬೀರಬಲ್ಲ 11 ಅಂಶಗಳ ವಿವರ.
ಬಹು ನಿರೀಕ್ಷಿತ ಮೋದಿ 3.0 ಬಜೆಟ್ ಇಂದು ಮಂಡನೆಯಾಗುತ್ತಿದೆ. ಜನಜೀವನದ ಮೇಲೆ ಪರಿಣಾಮ ಬೀರಬಲ್ಲ ಕೇಂದ್ರ ಬಜೆಟ್ 2024ರ ಕಡೆಗೆ ಎಲ್ಲರ ಚಿತ್ತ ಹರಿದಿದೆ. ವೈಯಕ್ತಿಕ ತೆರಿಗೆದಾರರಿಂದ ಹಿಡಿದು ಉದ್ಯಮಿಗಳ ತನಕ ಪರಿಣಾಮ ಬೀರಬಲ್ಲ 11 ಅಂಶಗಳು ಹೀಗಿವೆ ನೋಡಿ.
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಇಂದು (ಜುಲೈ 23) ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ನಿರ್ಣಾಯಕ ದಾಖಲೆಯು ಸರ್ಕಾರದ ಆದಾಯ ಮತ್ತು ವೆಚ್ಚದ ಯೋಜನೆಗಳನ್ನು ರೂಪಿಸುವಂಥದ್ದಾಗಿದ್ದು, ರಾಷ್ಟ್ರದ ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯ ಮೇಲೆ ಪ್ರಭಾವ ಬೀರುತ್ತದೆ.
ಕಳೆದ 3 ವರ್ಷಗಳಂತೆಯೇ ಈ ವರ್ಷವೂ ಪೇಪರ್‌ಲೆಸ್ ಬಜೆಟ್ (ಡಿಜಿಟಲ್ ಬಜೆಟ್) ಅನ್ನು ಕೇಂದ್ರ ಪ್ರಕಟಿಸಲಿದೆ. ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಎಂಬುದು ಗಮನಿಸಬೇಕಾದ ಇನ್ನೊಂದು ವಿಚಾರ. ವಿಕಸಿತ ಭಾರತ 2047 ವಿಷನ್‌ಗೆ ಅನುಗುಣವಾಗಿ ಅರ್ಥ ವ್ಯವಸ್ಥೆಯ ವಿವಿಧ ವಿಭಾಗಗಳಲ್ಲಿ ಉಪಕ್ರಮಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ ಮೂಲಕ ಘೋಷಿಸುವ ನಿರೀಕ್ಷೆ ಇದೆ.
ಉದ್ಯೋಗದಿಂದ ಕೈಗೆಟುಕುವ ಮನೆಗಳವರೆಗೆ, 2024 ರ ಕೇಂದ್ರ ಬಜೆಟ್ ಭಾರತದ ಮಧ್ಯಮ ವರ್ಗದ ಮೇಲೆ, ಉದ್ಯಮಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ 11 ಅಂಶಗಳು ನಿರ್ಧರಿಸಲಿವೆ.
ಕೇಂದ್ರ ಬಜೆಟ್ 2024 25; ವೈಯಕ್ತಿಕ ತೆರಿಗೆದಾರರಿಂದ ಉದ್ಯಮಿಗಳ ತನಕ ಪರಿಣಾಮ ಬೀರಬಲ್ಲ 11 ಅಂಶ
1) ಆದಾಯ ತೆರಿಗೆ: ಕೇಂದ್ರ ಬಜೆಟ್‌ನಲ್ಲಿ ಜನ ಮೊದಲು ಗಮನಿಸುವ ಅಂಶ ಇದು. ಆದಾಯ ತೆರಿಗೆ ಪ್ರಸ್ತಾಪಗಳು ಭಾರತದ ಮಧ್ಯಮ ವರ್ಗದ ಮೇಲೆ ನೇರ ಪರಿಣಾಮ ಬೀರುತ್ತದೆ. ಹಿಂದಿನ ಬಜೆಟ್‌ಗಳಲ್ಲಿ, ಮಧ್ಯಮ ವರ್ಗದವರಿಗೆ ಪರಿಹಾರ ನೀಡಲು ಮತ್ತು ಖರ್ಚು ಮಾಡಬಹುದಾದ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನು ಮಾಡಿತ್ತು.
2) ತೆರಿಗೆ ಸ್ಲ್ಯಾಬ್‌ಗಳ ಹೊಂದಾಣಿಕೆ: ತೆರಿಗೆ ಸ್ಲ್ಯಾಬ್ ಹೊಂದಾಣಿಕೆಯ ಪ್ರಕಾರ, ಮೂಲ ವಿನಾಯಿತಿ ಮಿತಿಯು ಈಗ 3 ಲಕ್ಷ ರೂಪಾಯಿ. ಸರಳವಾಗಿ ಹೇಳಬೇಕು ಎಂದರೆ ಇಷ್ಟು ಆದಾಯ ಹೊಂದಿದವರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಇದಲ್ಲದೆ, ಅನೇಕ ವ್ಯಕ್ತಿಗಳಿಗೆ ಒಟ್ಟಾರೆ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಕಳೆದ ಕೆಲವು ಬಜೆಟ್‌ಗಳಲ್ಲಿ ವಿವಿಧ ಸ್ಲ್ಯಾಬ್‌ಗಳಿಗೆ ಆದಾಯ ತೆರಿಗೆ ದರಗಳನ್ನು ಸರಿಹೊಂದಿಸಲಾಗಿದೆ.
3) ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳ: ಆದಾಯ ತೆರಿಗೆ ವಿನಾಯಿತಿಗಳ ಪೈಕಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಈಗಿರುವ 50,000 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಸರ್ಕಾರ ಏರಿಸಬಹುದು. ತೆರಿಗೆ ಲೆಕ್ಕಾಚಾರವನ್ನು ಸರಳೀಕರಿಸುವುದು ಮತ್ತು ಸಂಬಳ ಪಡೆಯುವ ನೌಕರರಿಗೆ ಖರ್ಚು ಮಾಡಬಹುದಾದ ಆದಾಯವನ್ನು ಹೆಚ್ಚಿಸಬಹುದು ಎಂಬ ಮಾತು ಕೇಳಿಬರುತ್ತಿದೆ.
4) ಸಾಮಾಜಿಕ ಭದ್ರತೆ: ಹಿಂದುಳಿದವರಿಗೆ ಪಿಂಚಣಿ ಮತ್ತು ವಿಮೆ ಸೇರಿದಂತೆ ಸಾಮಾಜಿಕ ಭದ್ರತೆಗಾಗಿ ವರ್ಧಿತ ನಿಬಂಧನೆಗಳು ದುರ್ಬಲ ವರ್ಗದ ಜನರಿಗೆ ಸುರಕ್ಷಾ ಯೋಜನೆಗಳ ಪ್ರಯೋಜನವನ್ನು ಒದಗಿಸುವ ನಿರೀಕ್ಷೆಯಿದೆ.
ವ್ಯಾಪಾರ, ಉದ್ಯಮಗಳಿಗೆ ವಿನಾಯಿತಿ, ಸಮಾಜ ಕಲ್ಯಾಣ, ಮೂಲಸೌಕರ್ಯ
ಭಾರತದ ಆರ್ಥಿಕತೆಯ ಬೆನ್ನೆಲುವಾಗಿರುವ ವ್ಯಾಪಾರೋದ್ಯಮಗಳಿಗೆ ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ ಹಲವು ಉಪಕ್ರಮಗಳನ್ನು ಘೋಷಿಸಬಹುದು. ಇದೇ ರೀತಿ ಸಮಾಜ ಕಲ್ಯಾಣ, ಮೂಲಸೌಕರ್ಯಗಳು ಕೂಡ ಜನಜೀವನದ ಮೇಲೆ ಪರಿಣಾಮ ಬೀರುವಂಥವು.
5) ಕಾರ್ಪೊರೇಟ್ ತೆರಿಗೆ: ಕೇಂದ್ರ ಸರ್ಕಾರಕ್ಕೆ ಗಮನಾರ್ಹ ಆದಾಯದ ಮೂಲವಾಗಿ, ಕಾರ್ಪೊರೇಟ್ ತೆರಿಗೆಯಲ್ಲಿನ ಯಾವುದೇ ಬದಲಾವಣೆಗಳು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚುವರಿಯಾಗಿ, ಸ್ಟಾರ್ಟ್‌ಅಪ್‌ಗಳು ಮತ್ತು SMEಗಳಿಗೆ ಪ್ರೋತ್ಸಾಹವನ್ನು ನಿರೀಕ್ಷಿಸಲಾಗಿದೆ.
6) ವ್ಯವಹಾರ ಸರಳಗೊಳಿಸುವುದು (Ease of doing business): ಭಾರತದಲ್ಲಿ ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ಸರಳೀಕೃತ ನಿಯಮಗಳು ಮತ್ತು ಪ್ರಕ್ರಿಯೆಗಳ ಡಿಜಿಟಲೀಕರಣವನ್ನು ನಿರೀಕ್ಷಿಸಲಾಗಿದೆ. ಜೊತೆಗೆ ವ್ಯಾಪಾರ ಪರಿಸರವನ್ನು ಸುಧಾರಿಸಲು ಗಮನಾರ್ಹ ಮೂಲಸೌಕರ್ಯ ಒದಗಿಸುವ ಘೋಷಣೆ ಕೂಡ ಆಗಬಹುದು.
7) ಆರೋಗ್ಯ ಮತ್ತು ಶಿಕ್ಷಣ: ವೈದ್ಯಕೀಯ ಕಾಲೇಜುಗಳಲ್ಲಿ ಸಂಭಾವ್ಯ ಹೂಡಿಕೆಗಳು ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಡಿಜಿಟಲ್ ಉಪಕ್ರಮಗಳೊಂದಿಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಅನುದಾನ ಹಂಚಿಕೆಗಳ ಘೋಷಣೆಯಾಗಲಿದೆ.
8) ಮೂಲಸೌಕರ್ಯ ಅಭಿವೃದ್ಧಿ: ರಸ್ತೆ, ರೈಲ್ವೆ ಮತ್ತು ನಗರಾಭಿವೃದ್ಧಿ ಸೇರಿ ಮೂಲಸೌಕರ್ಯದಲ್ಲಿ ಗಮನಾರ್ಹ ಹೂಡಿಕೆ ಹಾಗೂ ಉದ್ಯೋಗಗಳನ್ನು ಸೃಷ್ಟಿಸುವ ಉಪಕ್ರಮಗಳು ಕೂಡ ಪರಿಣಾಮ ಬೀರುವಂಥವು. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಯೋಜನೆಗಳನ್ನು ಕೂಡ ನಿರೀಕ್ಷಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನ ಮತ್ತು ಹಸಿರು ಯೋಜನೆಗಳ ಮೇಲೆ ಕೇಂದ್ರೀಕರಿಸುವುದು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
9) ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ: ರೈತರ ಆದಾಯ ಮತ್ತು ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಕ್ರಮಗಳೊಂದಿಗೆ ಕೃಷಿಯು ಈ ಸಲ ಬಜೆಟ್‌ನ ಆದ್ಯತೆಯಾಗಬಹುದು ಎಂಬ ಆಶಯವಿದೆ.
10) ಗ್ರಾಮೀಣ ಮೂಲಸೌಕರ್ಯ, ಕೃಷಿ ತಂತ್ರಜ್ಞಾನ: ರಸ್ತೆಗಳು, ನೀರಾವರಿ ಮತ್ತು ಶೇಖರಣಾ ಸೌಲಭ್ಯಗಳಂತಹ ಗ್ರಾಮೀಣ ಮೂಲಸೌಕರ್ಯಗಳಲ್ಲಿನ ಹೂಡಿಕೆಗಳು ಕೃಷಿ ಉತ್ಪಾದಕತೆ ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಅದೇ ರೀತಿ, ಅಗ್ರಿ-ಟೆಕ್ ಸ್ಟಾರ್ಟಪ್‌ಗಳು ಮತ್ತು ಆಧುನಿಕ ಕೃಷಿ ತಂತ್ರಗಳಿಗೆ ನೀಡುವ ಬೆಂಬಲವು ರೈತರಿಗೆ ಅವರ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
11) ನೇರ ಲಾಭ ವರ್ಗಾವಣೆಗಳು (ಡಿಬಿಟಿ): ನೇರ ಲಾಭ ವರ್ಗಾವಣೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ನಿರೀಕ್ಷಿಸಲಾಗುತ್ತಿದೆ. ಇದರಲ್ಲಿ, ಸಬ್ಸಿಡಿಗಳು ಮತ್ತು ಸಹಾಯಧನದ ಪ್ರಯೋಜನಗಳನ್ನು ನೇರವಾಗಿ ರೈತರಿಗೆ ತಲುಪುವುದನ್ನು ಖಚಿತಪಡಿಸಲಾಗುತ್ತದೆ. ಸೋರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ತಾಜಾ ವಿದ್ಯಮಾನ ಮತ್ತು ಬಜೆಟ್ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)