logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ 2024 25; ಈ ಸಲದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ, ಕರ್ನಾಟಕದ ಜನರ ನಿರೀಕ್ಷೆಗಳಿವು

ಕೇಂದ್ರ ಬಜೆಟ್ 2024 25; ಈ ಸಲದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ, ಕರ್ನಾಟಕದ ಜನರ ನಿರೀಕ್ಷೆಗಳಿವು

Umesh Kumar S HT Kannada

Jul 22, 2024 12:41 PM IST

google News

ಕೇಂದ್ರ ಬಜೆಟ್ 2024 25; ಈ ಸಲದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ, ಕರ್ನಾಟಕದ ಜನರ ನಿರೀಕ್ಷೆಗಳಿವು

  • ಕೇಂದ್ರ ಬಜೆಟ್ 2024 25; ಈ ಸಲದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ ನಿರೀಕ್ಷೆಗಳು ಹೆಚ್ಚಾಗಿವೆ. ಟಿಕೆಟ್ ದರ ಪರಿಷ್ಕರಣೆ, ಹೊಸ ಮಾರ್ಗ ಇತ್ಯಾದಿಗಳು ಗಮನಸೆಳೆದಿವೆ. ಇದೇ ವೇಳೆ, ಕರ್ನಾಟಕದ ಜನರ ನಿರೀಕ್ಷೆಗಳ ಪ್ರಮುಖ ಅಂಶಗಳ ವಿವರ ಇಲ್ಲಿದೆ.

ಕೇಂದ್ರ ಬಜೆಟ್ 2024 25; ಈ ಸಲದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ, ಕರ್ನಾಟಕದ ಜನರ ನಿರೀಕ್ಷೆಗಳಿವು
ಕೇಂದ್ರ ಬಜೆಟ್ 2024 25; ಈ ಸಲದ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣಿಕರ, ಕರ್ನಾಟಕದ ಜನರ ನಿರೀಕ್ಷೆಗಳಿವು

ನವದೆಹಲಿ/ ಬೆಂಗಳೂರು: ಸಂಸತ್ತಿನ ಮುಂಗಾರು ಅಧಿವೇಶನ ಶುರುವಾಗಿದ್ದು, ನಾಳೆ ಕೇಂದ್ರ ಬಜೆಟ್ 2024 25 (Union Budget 2024 25) ಮಂಡನೆಯಾಗಲಿದೆ. ಈ ಬಜೆಟ್‌ನಲ್ಲೇ ರೈಲ್ವೆ ಬಜೆಟ್ ಕೂಡ ಇರಲಿದ್ದು, ರೈಲ್ವೆ ವಲಯದ ನಿರೀಕ್ಷೆಗಳು ಗಮನಸೆಳೆದಿವೆ. ರೈಲ್ವೆ ಯ ರಾಜ್ಯ ಸಚಿವರಾಗಿ ರಾಜ್ಯದವರೇ ಆದ ವಿ. ಸೋಮಣ್ಣ ಅವರು ಇರುವ ಕಾರಣ ಕರ್ನಾಟಕದ ಜನರ ನಿರೀಕ್ಷೆಗಳು ಕೂಡ ಗರಿಗೆದರಿವೆ.

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರೈಲ್ವೇ ಅಭಿವೃದ್ಧಿಗೆ 2 ಲಕ್ಷ ಕೋಟಿಯಿಂದ 2.25 ಲಕ್ಷ ಕೋಟಿ ಬಜೆಟ್‌ ಮೀಸಲಿಡುವ ಸಾಧ್ಯತೆ ಇದೆ. ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆ ಸಚಿವಾಲಯಕ್ಕೆ 2.55 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿತ್ತು.

ರೈಲ್ವೆ ಬಜೆಟ್‌; ಪ್ರಯಾಣಿಕರ ಪ್ರಮುಖ ನಿರೀಕ್ಷೆಗಳು

1) ರೈಲು ಟಿಕೆಟ್ ದರ ಪರಿಷ್ಕರಣೆ: ಭಾರತೀಯ ರೈಲ್ವೆಯು ಕೋವಿಡ್ ಸಂಕಷ್ಟಕ್ಕೆ ಮೊದಲು ಟಿಕೆಟ್ ದರಗಳನ್ನು ಇಳಿಸಿತ್ತು. ಈ ಹಿಂದೆ ಪ್ರಯಾಣಿಕರು ಪ್ಯಾಸೆಂಜರ್ ರೈಲು ಪ್ರಯಾಣಕ್ಕಾಗಿ ಎಕ್ಸ್‌ಪ್ರೆಸ್ ದರವನ್ನು ಪಾವತಿಸಬೇಕಾಗಿತ್ತು. ಆದರೆ, ಈ ಸಲದ ಬಜೆಟ್‌ನಲ್ಲಿ ಅದೇ ದರವನ್ನು ಸರ್ಕಾರ ಉಳಿಸಲಿದೆಯೇ ಅಥವಾ ಹೆಚ್ಚಿಸಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

2) ಹಿರಿಯ ನಾಗರಿಕರಿಗೆ ಟಿಕೆಟ್ ದರ ರಿಯಾಯಿತಿ: ಮಾರ್ಚ್ 2020 ರಲ್ಲಿ, ಭಾರತೀಯ ರೈಲ್ವೇಯು ಈ ಹಿಂದೆ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರೈಲು ದರಗಳ ಮೇಲಿನ ರಿಯಾಯಿತಿಗಳನ್ನು ಸ್ಥಗಿತಗೊಳಿಸಿತು. ಈ ನಿರ್ಧಾರದ ಕಾರಣ ಮಹಿಳಾ ಹಿರಿಯ ನಾಗರಿಕರಿಗೆ ಶೇಕಡ 50 ರಿಯಾಯಿತಿ ಮತ್ತು ಪುರುಷ ಮತ್ತು ತೃತೀಯಲಿಂಗಿ ಹಿರಿಯ ನಾಗರಿಕರಿಗೆ ಶೇಕಡ 40 ರಿಯಾಯಿತಿ ರದ್ದುಗೊಂಡಿತ್ತು. ಪರಿಣಾಮ, ಎಲ್ಲಾ ಪ್ರಯಾಣಿಕರಂತೆ ಹಿರಿಯ ನಾಗರಿಕರು ಕೂಡ ಈಗ ಸಂಪೂರ್ಣ ಪ್ರಯಾಣ ದರವನ್ನು ಪಾವತಿಸಿ ರೈಲು ಪ್ರಯಾಣ ಮಾಡಬೇಕಾಗಿದೆ.

ಈ ಸಲದ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ರೈಲು ದರದಲ್ಲಿ ಸ್ವಲ್ಪ ಪರಿಹಾರ ಸಿಗಬಹುದು ಎಂದು ತಜ್ಞರು ನಂಬಿದ್ದರೂ, ರೈಲು ದರಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

3) ಹೊಸ ರೈಲು ಸೇವೆ ಮೂಲಸೌಕರ್ಯ: ಈ ಸಲದ ಬಜೆಟ್ ಪ್ರಯಾಣಿಕರ ಸಾಮರ್ಥ್ಯ ಮತ್ತು ಸುರಕ್ಷತೆ ಸುಧಾರಣೆಗಳಿಗೆ ಆದ್ಯತೆ ನೀಡಬಹುದು. ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು, ಅಸ್ತಿತ್ವದಲ್ಲಿರುವ ರೈಲುಗಳನ್ನು (ವಂದೇ ಮೆಟ್ರೋ, ಚೇರ್ ಕಾರ್, ಸ್ಲೀಪರ್) ನವೀಕರಿಸುವುದು ಅಥವಾ ಹೊಸ ವಂದೇ ಭಾರತ್ ವಿಭಾಗಗಳ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿರುತ್ತದೆ. ಆದಾಗ್ಯೂ, ನಿರ್ದಿಷ್ಟ ಮಾರ್ಗಗಳಲ್ಲಿ ಹೆಚ್ಚಿನ ವಂದೇ ಭಾರತ್ ರೈಲುಗಳ ಪರಿಚಯ ಅಥವಾ ಇತ್ತೀಚೆಗೆ ಪ್ರಾರಂಭಿಸಲಾದ ನಮೋ ಭಾರತ್ ರೈಲುಗಳ ವಿಸ್ತರಣೆ ನಿರೀಕ್ಷಿಸಲಾಗುತ್ತಿದೆ.

4) ರೈಲ್ವೆ ಪ್ರಯಾಣಿಕರ ಸುರಕ್ಷತೆ: ಕಳೆದ ವರ್ಷದಲ್ಲಿ ಸಂಭವಿಸಿದ ಬೃಹತ್ ರೈಲು ಅಪಘಾತಗಳು ನಿಜವಾಗಿಯೂ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರದ ಗಮನವನ್ನು ಸೆಳೆದಿದೆ.ನಿಲ್ದಾಣದ ಉಪಕರಣಗಳು ಸೇರಿದಂತೆ ರೈಲ್ವೆ ಹಳಿಗಳಲ್ಲಿ ಕವಚವನ್ನು ಸ್ಥಾಪಿಸುವ ವೆಚ್ಚವು ಪ್ರತಿ ಕಿಲೋಮೀಟರ್‌ಗೆ 50 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಈ ಸಲದ ಬಜೆಟ್ ಇದನ್ನು ಪರಿಗಣನೆಗೆ ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡುವ ನಿರೀಕ್ಷೆ ಇದೆ.

5) ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ: ಪ್ರಯಾಣದ ಸಮಯ ಕಡಿಮೆ ಮಾಡುವುದು ಮತ್ತು ವರ್ಧಿತ ಸಂಪರ್ಕ ಒದಗಿಸುವುದಕ್ಕಾಗಿ ರೈಲ್ವೆ ಮೂಲಸೌಕರ್ಯವನ್ನು ಹೆಚ್ಚಿಸುವುದು ರೈಲ್ವೆಯ ಪ್ರಾಥಮಿಕ ಉದ್ದೇಶ. ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್‌ನಂತಹ ಹೈ-ಸ್ಪೀಡ್ ರೈಲು ಯೋಜನೆ ಮುಂತದ ಪ್ರಮುಖ ಉಪಕ್ರಮಗಳು ಅನುಷ್ಠಾನಗೊಳಿಸುವುದನ್ನು ಒಳಗೊಂಡಿವೆ. ಇದು ಪ್ರಮುಖ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು ಬಹಳ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದಲ್ಲದೆ, ನಿಲ್ದಾಣದ ಪುನರಾಭಿವೃದ್ಧಿ ಯೋಜನೆಗಳು ಪ್ರಯಾಣಿಕರ ಚಲನೆಯನ್ನು ಸುಗಮಗೊಳಿಸಲು ಮತ್ತು ಸೌಕರ್ಯಗಳನ್ನು ಸುಧಾರಿಸಲು, ಬೋರ್ಡಿಂಗ್ ಮತ್ತು ಇಳಿಯುವಿಕೆಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಸೌಲಭ್ಯಗಳನ್ನು ಆಧುನೀಕರಿಸುವುದನ್ನು ಒಳಗೊಂಡಿರುತ್ತದೆ.

ರೈಲ್ವೆ ಬಜೆಟ್ 2024 25 - ಕರ್ನಾಟಕದ ಜನರ ನಿರೀಕ್ಷೆಗಳಿವು

ಕರ್ನಾಟಕದವರೇ ಆದ ವಿ ಸೋಮಣ್ಣ ಅವರು ಈ ಸಲ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದು, ಇತ್ತೀಚಿನ ಭಾರಿ ಮಳೆ ಸಂದರ್ಭದಲ್ಲಿ ಬೆಂಗಳೂರು- ಮಂಗಳೂರು, ಕುಂದಾಪುರ ಜನರ ಬೇಡಿಕೆಗೆ ಬಹುಬೇಗ ಸ್ಪಂದಿಸಿ ವಿಶೇಷ ರೈಲು ಸಂಚಾರ ಒದಗಿಸಿದ್ದಾರೆ. ಈ ರೀತಿ ಸ್ಪಂದನೆ ಸಿಕ್ಕಿರುವುದು ಇದೇ ಮೊದಲಾದ ಕಾರಣ, ಈ ಬಾರಿ ಕರ್ನಾಟಕದ ಜನರ ನಿರೀಕ್ಷೆ ಗರಿಗೆದರಿದೆ. ಅವುಗಳ ವಿವರ ಹೀಗಿದೆ.

1) ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣ ಶೇಕಡ 87 ಆಗಿದ್ದು, ಕರಾವಳಿ ಭಾಗದಲ್ಲಿ ಹಳಿಗಳ ವಿದ್ಯುದ್ದೀಕರಣಕ್ಕೆ ವೇಗ ಸಿಗಬೇಕು. ಕರಾವಳಿ ಭಾಗಕ್ಕೆ ಹೆಚ್ಚಿನ ರೈಲ್ವೆ ಯೋಜನೆಗಳ ಅಗತ್ಯವಿದೆ. ಕೊಂಕಣ ರೈಲ್ವೆ ವಿಭಾಗವನ್ನು ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರಿಸಬೇಕು. ಮಂಗಳೂರು ರೈಲ್ವೇ ವಲಯವನ್ನು ಸ್ಥಾಪಿಸಬೇಕು.

2) ಕೊಲ್ಲೂರು-ಧರ್ಮಸ್ಥಳ-ಕುಕ್ಕೆ ಸುಬ್ರಮಣ್ಯ ರೈಲು ಯೋಜನೆ ಸಮೀಕ್ಷೆ ಕಾರ್ಯ ಆರಂಭಿಸುವ ಭರವಸೆಯನ್ನು ಸಚಿವ ವಿ. ಸೋಮಣ್ಣ ನೀಡಿರುವ ಕಾರಣ ಈ ಕುರಿತ ನಿರೀಕ್ಷೆ ಹೆಚ್ಚಾಗಿದೆ. ಸಕಲೇಶಪುರ ಮಾರ್ಗದ ಕುಕ್ಕೆ ಸುಬ್ರಮಣ್ಯ ಸಂಪರ್ಕ ರೈಲು ಪ್ರಯಾಣಕ್ಕೆ 3 ಗಂಟೆ ಬೇಕಾಗುತ್ತದೆ. ಈ ಅವಧಿಯನ್ನು ಕಡಿಮೆ ಮಾಡಲು ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆಯ ವರದಿ ಪ್ರಕಾರ ಘೋಷಣೆ ನಿರೀಕ್ಷೆ ಇದೆ.

3) ಮುನಿರಾಬಾದ್‌ - ಮೆಹಬೂಬ್‌ನಗರ ರೈಲ್ವೇ ಕಾಮಗಾರಿಗೆ ಆದ್ಯತೆ ಸಿಗಬೇಕು. ಕುಡಚಿ - ಬಾಗಲಕೋಟೆ, ಗದಗ - ವಾಡಿ ರೈಲ್ವೇ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಬೇಕು. ಎಲ್ಲೆಲ್ಲಿ ಅಗತ್ಯವೋ ಅಲ್ಲಿ ಡಬ್ಲಿಂಗ್‌ ಕಾಮಗಾರಿಗಳನ್ನು ಮಾಡಬೇಕು.

4) ಬೆಂಗಳೂರು - ಮುಂಬೈ ಮಾರ್ಗದಲ್ಲಿ ಹೊಸ ಅಮೃತ್‌ ಭಾರತ್‌ ರೈಲು ಸಂಚಾರ ಶುರುವಾಗಬೇಕಿದ್ದು, ಅದು ಹುಬ್ಬಳ್ಳಿ - ಬೆಳಗಾವಿ - ಮೀರಜ್‌ ಮಾರ್ಗ, ಕಲಬುರಗಿ, ಗುತ್ತಿ ಮಾರ್ಗವಾಗಿ ಸಾಗಬೇಕು ಎಂಬ ಬೇಡಿಕೆ ಇದೆ.

5) ಬೆಂಗಳೂರು ಉಪನಗರ ರೈಲ್ವೇ ಯೋಜನೆ ಜಾರಿಯಾಗಬೇಕು. ಅದೇ ರೀತಿ, ಚಾಮರಾಜನಗರ - ಬಿಡದಿ ರೈಲ್ವೇ ಮಾರ್ಗಕ್ಕೆ ಅನುಮೋದನೆ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

6) ಕೊಟ್ಟೂರು - ಹರಿಹರ ಹೊಸ ರೈಲು ಮಾರ್ಗದ ಮತ್ತು ಕೊಟ್ಟೂರು -ಹೊಸಪೇಟೆ ನಡುವೆ ಮೀಟರ್‌ಗೇಜ್‌ನಿಂದ ಬ್ರಾಡ್‌ ಗೇಜ್‌ ಕಾಮಗಾರಿಗೆ ವೇಗ ನೀಡಬೇಕು ಎಂಬ ಆಗ್ರಹ ಇದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ತಾಜಾ ವಿದ್ಯಮಾನ ಮತ್ತು ಬಜೆಟ್‌ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ