ಅರ್ಷದ್ ನದೀಂರನ್ನು ಪ್ಯಾರಿಸ್ ಒಲಿಂಪಿಕ್ಸ್ಗೆ ಕಳುಹಿಸಿದ್ದು ಗ್ರಾಮಸ್ಥರು, ಸಂಬಂಧಿಕರು ದೇಣಿಗೆ ಸಂಗ್ರಹಿಸಿ!
Aug 10, 2024 01:52 PM IST
ಅರ್ಷದ್ ನದೀಂರನ್ನು ಪ್ಯಾರಿಸ್ ಒಲಿಂಪಿಕ್ಸ್ಗೆ ಕಳುಹಿಸಿದ್ದು ಗ್ರಾಮಸ್ಥರು, ಸಂಬಂಧಿಕರು ದೇಣಿಗೆ ಸಂಗ್ರಹಿಸಿ!
Arshad Nadeem: ಗ್ರಾಮಸ್ಥರು, ಸಂಬಂಧಿಕರು ದೇಣಿಗೆ ಸಂಗ್ರಹಿಸಿ ಜಾವೆಲಿನ್ ಥ್ರೋನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಂ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್ಗೆ ಕಳುಹಿಸಿಕೊಟ್ಟಿದ್ದರು.
ಒಲಿಂಪಿಕ್ಸ್ನಲ್ಲಿ 1984ರಲ್ಲಿ (ಲಾಸ್ ಏಂಜಲೀಸ್) ಕೊನೆಯ ಚಿನ್ನ ಮತ್ತು 1992ರಲ್ಲಿ (ಬಾರ್ಸಿಲೋನಾ) ಕೊನೆಯ ಒಲಿಂಪಿಕ್ಸ್ ಪದಕ ಗೆದ್ದುಕೊಂಡಿದ್ದ ಪಾಕಿಸ್ತಾನ, ಕ್ರಮವಾಗಿ 40 ಮತ್ತು 32 ವರ್ಷಗಳ ನಂತರ ಪದಕದ ಬರ ನೀಗಿಸಿದ್ದು, ಒಂದೇ ಜಾವೆಲಿನ್ ಎಸೆತಕ್ಕೆ ಎರಡು ದಾಖಲೆಗಳು ಪುಡಿಯಾಗಿವೆ. ಜಾವೆಲಿನ್ ಥ್ರೋನಲ್ಲಿ ಚಿನ್ನಕ್ಕೆ ಗುರಿ ಇಡುವ ಮೂಲಕ ಅರ್ಷದ್ ನದೀಂ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆದರೆ, ಅರ್ಷದ್ ಒಲಿಂಪಿಕ್ಸ್ಗೆ ಬಂದಿದ್ದೇ ರೋಚಕ. ಅವರ ತಂದೆ ದೇಣಿಗೆ ಸಂಗ್ರಹಿಸಿ ಮಹೋನ್ನತ ಕ್ರೀಡಾಕೂಟಕ್ಕೆ ಕಳುಹಿಸಿದ್ದರು.
ಜಾವೆಲಿನ್ ಫೈನಲ್‌ನಲ್ಲಿ ಎಸೆದ 92.7 ಮೀಟರ್ ಎಸೆತದಷ್ಟೇ ನದೀಂ ಕಥೆಯು ಅದ್ಭುತವಾಗಿದೆ. ಈ ಬಗ್ಗೆ ಅರ್ಷದ್ ಅವರ ತಂದೆಯೇ ಸ್ವತಃ ಬಹಿರಂಗಪಡಿಸಿದ್ದಾರೆ. ನದೀಮ್ ತರಬೇತಿಗೆ ಹೆಚ್ಚು ಹಣವೇ ಇರಲಿಲ್ಲ. ಆದರೆ, ತರಬೇತಿಗಾಗಿ ಜನರೇ ಹಣ ಸಂಗ್ರಹಿಸಿಕೊಟ್ಟದ್ದಾರೆ ಎಂದು ಅವರ ತಂದೆ ಮುಹಮ್ಮದ್ ಅಶ್ರಫ್ ಹೇಳಿದ್ದಾರೆ. ಅರ್ಷದ್ ಇಂದು ಈ ಖ್ಯಾತಿ ಪಡೆಯಲು ಮತ್ತು ಪ್ಯಾರಿಸ್ಗೆ ಹೇಗೆ ಹೋದರೆಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಅವರ ಸಹವರ್ತಿ ಗ್ರಾಮಸ್ಥರು ಮತ್ತು ಸಂಬಂಧಿಕರು ದೇಣಿಗೆ ಸಂಗ್ರಹಿಸಿ ತರಬೇತಿ ಮತ್ತು ಈವೆಂಟ್ಗೆ ಬೇರೆ ದೇಶಕ್ಕೆ ಪ್ರಯಾಣಿಸಲು ನೆರವಾದರು ಎಂದು ತಿಳಿಸಿದ್ದಾರೆ.
ಒಲಿಂಪಿಕ್ಸ್ನಲ್ಲಿ ಚೊಚ್ಚಲ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ 27 ವರ್ಷದ ನದೀಮ್, ಪಾಕಿಸ್ತಾನ ಪರ ಬಂಗಾರಕ್ಕೆ ಮುತ್ತಿಕ್ಕಿದ ನಾಲ್ಕನೇ ಆಟಗಾರ. ಇದಕ್ಕೂ ಮುನ್ನ 1960, 1968, 1984 ಪಾಕ್ ಚಿನ್ನ ಗೆದ್ದಿತ್ತು. 1948 ರಿಂದ ಈಚೆಗೆ ಪ್ರತ್ಯೇಕ ದೇಶವಾಗಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಪಾಕ್ ಒಟ್ಟು 11 ಪದಕ ಮಾತ್ರ ಗೆದ್ದಿದೆ. 4 ಚಿನ್ನ, 3 ಬೆಳ್ಳಿ, 4 ಕಂಚು ಗೆದ್ದಿದೆ. ಈ ವರ್ಷದ ಆರಂಭದಲ್ಲಿ ತರಬೇತಿಗಾಗಿ ನದೀಮ್ ಮನವಿ ಮಾಡಿದ್ದರು. ಆಗ ನೀರಜ್ ಚೋಪ್ರಾ ಕೂಡ ನೆರವಾಗುವ ಮೂಲಕ ಕ್ರೀಡಾ ಮನೋಭಾವ ತೋರಿದ್ದರು. ಟೊಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಈ ಬಾರಿ ಬೆಳ್ಳಿಗೆ ತೃಪ್ತಿಯಾದರು. ಬಂದ ದೇಣಿಗೆಯಲ್ಲೇ ಜಾವೆಲಿನ್ ಖರೀದಿಸಿದ್ದರು.
ಆದರೆ, ಅರ್ಷದ್ ಮತ್ತು ನೀರಜ್ ಇಬ್ಬರೂ ಕ್ರೀಡಾಪಟುಗಳು ಕಳೆದ ವರ್ಷ ಸಾಕಷ್ಟು ಫಿಟ್ನೆಸ್ ಸಮಸ್ಯೆಗಳನ್ನು ಎದುರಿಸಿದ್ದರು. ಮೊಣಕಾಲು ಶಸ್ತ್ರಚಿಕಿತ್ಸೆ, ಮೊಣಕೈ, ಮೊಣಕಾಲು ಮತ್ತು ಬೆನ್ನು ಸಮಸ್ಯೆಗಳು ಸೇರಿ ಹಲವು ಸವಾಲುಗಳನ್ನು ಎದುರಿಸಿದ್ದರು. ಇದರ ಹೊರತಾಗಿಯೂ ಈ ಜೋಡಿ ಒಲಿಂಪಿಕ್ಸ್ನಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದಿರುವುದು ಗಮನಾರ್ಹ ಸಾಧನೆಯಾಗಿದೆ. ಉನ್ನತ ಸೌಲಭ್ಯಗಳು, ಸಲಕರಣೆಗಳ ಕೊರತೆಯ ಹೊರತಾಗಿಯೂ ಪಾಕಿಸ್ತಾನದ ನದೀಂ ಕ್ರಿಕೆಟ್ ಬದಲಿಗೆ ಅಥ್ಲೆಟಿಕ್ಸ್ ಕಡೆ ಗಮನ ಹರಿಸುವಲ್ಲಿ ಯಶಸ್ಸು ಸಾಧಿಸಿರುವುದು ವಿಶೇಷ.
ಚಿನ್ನದ ಗೆದ್ದ ನಂತರ ಪಾಕ್ ಗ್ರಾಮಸ್ಥರ ಸಂಭ್ರಮ
ಗುರುವಾರ ತಡರಾತ್ರಿ ನಡೆದ ಜಾವೆಲಿನ್ ಫೈನಲ್‌ನಲ್ಲಿ ಅರ್ಷದ್ ಆಟ ವೀಕ್ಷಿಸಲು ಗ್ರಾಮಸ್ಥರು ಅವರ ಮನೆಯಲ್ಲಿ ನೆರೆದಿದ್ದರು. ಪಂಜಾಬ್ ಪ್ರಾಂತ್ಯದ ಮಿಯಾನ್ ಚನ್ನು ಬಳಿಯ ಅವರ ಕೃಷಿ ಗ್ರಾಮದಲ್ಲಿ ಟ್ರಕ್‌ನ ಹಿಂಭಾಗದಲ್ಲಿ ಸ್ಥಾಪಿಸಲಾದ ಪರದೆಯ ಮೇಲೆ ಡಿಜಿಟಲ್ ಪ್ರೊಜೆಕ್ಟರ್ ಮೂಲಕ ಈವೆಂಟ್ ಅನ್ನು ಲೈವ್ ಆಗಿ ತೋರಿಸಲಾಯಿತು. ನದೀಮ್ ಗೆಲುವು ಅಧಿಕೃತವಾಗುತ್ತಿದ್ದಂತೆ ಡೋಲು ಬಾರಿಸುತ್ತಾ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
27 ವರ್ಷದ ನದೀಮ್, ನಿವೃತ್ತ ಕಟ್ಟಡ ಕಾರ್ಮಿಕನ ಮಗ ಮತ್ತು 8 ಒಡಹುಟ್ಟಿದವರಲ್ಲಿ ಮೂರನೆಯವರು. ಆರಂಭದಲ್ಲಿ ಅನೇಕ ಪಾಕಿಸ್ತಾನಿಗಳಂತೆ ಕ್ರಿಕೆಟ್‌ಗೆ ಆಕರ್ಷಿತನಾಗಿದ್ದ ಅರ್ಷದ್, ಯಾವುದೇ ಮೀಸಲಾದ ಟ್ರ್ಯಾಕ್ ಮತ್ತು ಫೀಲ್ಡ್ ಸೌಲಭ್ಯಗಳ ಕೊರತೆ ನಡುವೆ ಅಮೋಘ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ಮೈದಾನಗಳಲ್ಲಿ ತರಬೇತಿ ನೀಡಲಾಗುತ್ತದೆ. ಕಳೆದ 7 ವರ್ಷಗಳಿಂದ ಹಾನಿಗೊಳಗಾದ ಒಂದೇ ಜಾವೆಲಿನ್ ಬಳಸುತ್ತಿದ್ದೇನೆ ಎಂದು ಮಾರ್ಚ್‌ನಲ್ಲಿ ನದೀಂ ಬಹಿರಂಗಪಡಿಸಿದ್ದರು. ಸಾಕಷ್ಟು ಸೌಲಭ್ಯ ಮತ್ತು ಸಲಕರಣೆಗಳ ಕೊರತೆಯ ನಡುವೆಯೂ ನದೀಮ್ ಚಿನ್ನ ಗೆದ್ದಿರುವುದು ನಿಜಕ್ಕೂ ಅದ್ಭುತವೇ ಸರಿ.