ಕುಸ್ತಿಪಟುವಿಗೆ 50 ಲಕ್ಷ ರೂ ನೀಡಿ ಕೈಸುಟ್ಟುಕೊಂಡ ಬಾಡಿಬಿಲ್ಡರ್ ಪೊಲೀಸ್ ಅಧಿಕಾರಿ; ವಂಚನೆ ಆರೋಪ
Aug 29, 2023 05:58 PM IST
ದೀಪಕ್ ಶರ್ಮಾ, ರೌನಕ್ ಗುಲಿಯಾ
- ವೃತ್ತಿಪರ ಕುಸ್ತಿಪಟು ಹಾಗೂ ಅವರ ಪತಿ ಬರೋಬ್ಬರಿ 50 ರೂಪಾಯಿ ಲಕ್ಷ ವಂಚಿಸಿದ್ದಾರೆ ಎಂದು ದೆಹಲಿಯ ತಿಹಾರ್ ಜೈಲಿನ ಸಹಾಯಕ ಎಸ್‌ಪಿ ದೂರು ನೀಡಿದ್ದಾರೆ.
ಕೆಲವೊಮ್ಮೆ ಎಷ್ಟೇ ವಿದ್ಯಾವಂತರಾದವರಾದರೂ ಬೇಗನೆ ವಂಚಕರ ಜಾಲಕ್ಕೆ ಬೀಳುತ್ತಾರೆ. ಇದೀಗ ಪೊಲೀಸ್ ಅಧಿಕಾರಿಯೊಬ್ಬರು ತಾನು ವಂಚನೆಗೆ ಒಳಗಾಗಿದ್ದಾಗಿ ದೆಹಲಿ ಪೊಲೀಸರಿಗೆ ಖುದ್ದು ದೂರು ನೀಡಿದ್ದಾರೆ.
ಆರೋಗ್ಯ ಉತ್ಪನ್ನ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ ಮಹಿಳೆ ಮತ್ತು ಅವರ ಪತಿ ಬರೋಬ್ಬರಿ 50 ರೂಪಾಯಿ ಲಕ್ಷ ವಂಚಿಸಿದ್ದಾರೆ ಎಂದು ದೆಹಲಿಯ ತಿಹಾರ್ ಜೈಲಿನ ಸಹಾಯಕ ಅಧೀಕ್ಷಕ ದೀಪಕ್ ಶರ್ಮಾ ಆರೋಪಿಸಿದ್ದಾರೆ. ಅಲ್ಲದೆ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿರುವ ದೀಪಕ್ ಶರ್ಮಾ, ತಮ್ಮ ಬಾಡಿಬಿಲ್ಡಿಂಗ್‌ನಿಂದಾಗಿ ಹೆಸರುವಾಸಿಯಾಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಅವರಿಗೆ ಅಪಾರ ಸಂಖ್ಯೆಯ ಫಾಲೋವರ್‌ಗಳಿದ್ದಾರೆ. ಕುಸ್ತಿಪಟುಗಳಾದ ರೌನಕ್ ಗುಲಿಯಾ ಮತ್ತು ಅವರ ಪತಿ ಅಂಕಿತ್ ಗುಲಿಯಾ 50 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಡಿಸ್ಕವರಿ ಚಾನೆಲ್‌ನ 'ಇಂಡಿಯಾಸ್ ಅಲ್ಟಿಮೇಟ್ ವಾರಿಯರ್' ಎಂಬ ರಿಯಾಲಿಟಿ ಶೋನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಕುಸ್ತಿ ಚಾಂಪಿಯನ್ ಆಗಿರುವ ಮಹಿಳೆ ರೌನಕ್ ಗುಲಿಯಾ ಅವರನ್ನು ಭೇಟಿಯಾದ ಶರ್ಮಾ, ಆ ಬಳಿಕ ವಂಚನೆಗೆ ಒಳಗಾಗಿರುವುದಾಗಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಪತಿ ಅಂಕಿತ್ ಒಬ್ಬ ಪ್ರಸಿದ್ಧ ಆರೋಗ್ಯ ಉತ್ಪನ್ನ ಉದ್ಯಮಿಯಾಗಿದ್ದು, ತಮ್ಮ ಉತ್ಪನ್ನಗಳಿಗೆ ಹೂಡಿಕೆದಾರರಿಗಾಗಿ ಹುಡುಕುತ್ತಿದ್ದಾರೆ ಎಂದು ಶರ್ಮಾ ಅವರಿಗೆ ಗುಲಿಯಾ ತಿಳಿಸಿದ್ದಾರಂತೆ. ಹೀಗಾಗಿ ಗುಲಿಯಾ ಅವರ ವ್ಯವಹಾರದಲ್ಲಿ 50 ಲಕ್ಷ ರೂಪಾಯಿ ಹೂಡಿಕೆ ಮಾಡಿರುವುದಾಗಿ ದೀಪಕ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ. ದೊಡ್ಡ ಮೊತ್ತದ ಲಾಭದ ಆಮಿಷವೊಡ್ಡಿ, ನಂತರ ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಪಶ್ಚಿಮ ವಿನೋದ್ ನಗರದಲ್ಲಿ ವಾಸಿಸುತ್ತಿರುವ ಸಂದೀಪ್ ಶರ್ಮಾ ಅವರು ಪೂರ್ವ ದೆಹಲಿಯ ಮಧು ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು, ದಂಪತಿ ಪತ್ತೆಗೆ ಯತ್ನಿಸುತ್ತಿದ್ದಾರೆ.
ಸಂದೀಪ್ ಶರ್ಮಾ ಮತ್ತು ಗುಲಿಯಾ ಇಬ್ಬರಿಗೂ ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ತಿಹಾರ್ ಜೈಲಿನ ಅಧಿಕಾರಿ ಫಿಟ್‌ನೆಸ್ ಫ್ರೀಕ್ ಕೂಡಾ ಹೌದು. ಅತ್ತ ಗುಲಿಯಾವನ್ನು ಇನ್ಸ್ಟಾಗ್ರಾಮ್‌ನಲ್ಲಿ 4.5 ಲಕ್ಷ ಫಾಲೋವರ್‌ಗಳಿದ್ದಾರೆ.