logo
ಕನ್ನಡ ಸುದ್ದಿ  /  ಕ್ರೀಡೆ  /  Japan Open: ಜಪಾನ್ ಓಪನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಪ್ರಣಯ್, ಲಕ್ಷ್ಯ ಸೇನ್‌ ಮತ್ತು ಸಾತ್ವಿಕ್-ಚಿರಾಗ್ ಜೋಡಿ

Japan Open: ಜಪಾನ್ ಓಪನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಪ್ರಣಯ್, ಲಕ್ಷ್ಯ ಸೇನ್‌ ಮತ್ತು ಸಾತ್ವಿಕ್-ಚಿರಾಗ್ ಜೋಡಿ

Jayaraj HT Kannada

Jan 09, 2024 07:42 PM IST

google News

ಪ್ರಣಯ್ ಎಚ್ಎಸ್

    • Japan Open‌ 2023: ಕೊರಿಯಾ ಓಪನ್‌ ಗೆದ್ದ ಉತ್ಸಾಹದಲ್ಲಿರುವ ಭಾರತದ ಬಲಿಷ್ಠ ಡಬಲ್ಸ್ ಜೋಡಿ ಸಾತ್ವಿಕ್‌ ಮತ್ತು ಚಿರಾಗ್, ಇದೀಗ ಜಪಾನ್ ಓಪನ್‌ನಲ್ಲಿಯೂ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಪ್ರಣಯ್ ಎಚ್ಎಸ್
ಪ್ರಣಯ್ ಎಚ್ಎಸ್ (AFP)

ಜಪಾನ್‌ ಓಪನ್‌ನಲ್ಲಿಯೂ ಭಾರತದ ಷಟ್ಲರ್‌ಗಳು ಅಬ್ಬರಿಸುತ್ತಿದ್ದಾರೆ. ಗುರುವಾರ (ಜುಲೈ 28) ನಡೆದ ಜಪಾನ್ ಓಪನ್ (Japan Open badminton) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ (Lakshya Sen) ಮತ್ತು ಪುರುಷರ ಡಬಲ್ಸ್‌ನಲ್ಲಿ ಭಾರತದ ಸ್ಟಾರ್‌ ಜೋಡಿಯಾದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty) ಕ್ವಾರ್ಟರ್‌ಫೈನಲ್‌ಗೆ ಮುನ್ನಗ್ಗಿದ್ದಾರೆ. ಇದೇ ವೇಳೆ ಎಚ್‌ಎಸ್ ಪ್ರಣಯ್ ಕೂಡಾ ಮುಂದಿನ ಹಂತಕ್ಕೆ ಲಗ್ಗೆ ಹಾಕಿದ್ದಾರೆ.

21ರ ಹರೆಯದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಆಟಗಾರ ಲಕ್ಷ್ಯ ಸೇನ್‌, ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌‌ನ ಕಾಂಟಾ ತ್ಸುನೇಯಾಮಾ ವಿರುದ್ಧ 21-14, 21-16 ನೇರ ಸೆಟ್‌ಗಳಿಂದ ಜಯಗಳಿಸಿ ಕ್ವಾರ್ಟರ್‌ ಫೈನಲ್‌ಗೆ ಬಡ್ತಿ ಪಡೆದರು. 27 ವರ್ಷ ವಯಸ್ಸಿನ ಜಪಾನ್‌ ಷಟ್ಲರ್ ವಿರುದ್ಧ ಗೆಲುವು ಸಾಧಿಸಲು, ಸೇನ್ 50 ನಿಮಿಷಗಳನ್ನು ತೆಗೆದುಕೊಂಡರು.

ಇತ್ತೀಚೆಗಷ್ಟೇ ಕೊರಿಯಾ ಓಪನ್‌ ಗೆದ್ದು ಗೆಲುವಿನ ಭರ್ಜರಿ ಲಯದಲ್ಲಿರುವ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್ ಮತ್ತು ಚಿರಾಗ್ ಕೂಡ, ಡೆನ್ಮಾರ್ಕ್‌ನ ಜೋಡಿಯಾದ ಲಾಸ್ಸೆ ಮೊಲ್ಹೆಡೆ ಮತ್ತು ಜೆಪ್ಪೆ ಬೇ ವಿರುದ್ಧ ತಮ್ಮ ಪ್ರಬಲ ಜಯದೊಂದಿಗೆ ಎಂಟರ ಘಟ್ಟಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇವರಿಬ್ಬರೂ 21-17, 21-11 ಅಂತರದಿಂದ ಸುಲಭವಾಗಿ ಗೆದ್ದರು.

ಭಾರತದವರೇ ಆದ ಎಚ್‌ಎಸ್‌ ಪ್ರಣಯ್ ಮತ್ತು ಕಿಡಂಬಿ ಶ್ರೀಕಾಂತ್ ನಡುವಿನ ಪಂದ್ಯದಲ್ಲಿ, ಪ್ರಣಯ್ 19-21, 21-9, 21-9 ಗೆಲುವಿನೊಂದಿಗೆ ಸೂಪರ್ 750 ಪಂದ್ಯಾವಳಿಯ ಕ್ವಾರ್ಟರ್‌‌ ಫೈನಲ್‌ಗೆ ಮುನ್ನಡೆದರು. ಭಾರತದ ಉಭಯ ಷಟ್ಲರ್‌ಗಳ ನಡುವೆ ಜಿದ್ದಾಜಿದ್ದಿನ ಪಂದ್ಯ ನಡೆಯಿತು.

ಮಹಿಳೆಯರ ಡಬಲ್ಸ್‌ ಜೋಡಿಗೆ ಸೋಲು

ಮಹಿಳೆಯರ ಡಬಲ್ಸ್‌ ಜೋಡಿಯಾದ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ಅವರು 16ರ ಸುತ್ತಿನಲ್ಲಿ ನಮಿ ಮತ್ಸುಯಾಮಾ ಮತ್ತು ಚಿರಾರು ಶಿದಾ ವಿರುದ್ಧ 21-23, 19-21 ಅಂತರದಲ್ಲಿ ರೋಚಕ ಸೋಲು ಕಂಡು ಟೂರ್ನಿಯಿಂದ ನಿರ್ಗಮಿಸಿದರು.

ಸಾತ್ವಿಕ್ ಮತ್ತು ಚಿರಾಗ್ ಜೋಡಿಯು ಈ ವರ್ಷ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಏಷ್ಯನ್ ಚಾಂಪಿಯನ್‌ಗಳು ಈ ಋತುವಿನಲ್ಲಿ ಕೊರಿಯಾ ಓಪನ್ (ಸೂಪರ್ 500), ಸ್ವಿಸ್ ಓಪನ್ (ಸೂಪರ್ 300) ಮತ್ತು ಇಂಡೋನೇಷ್ಯಾ ಓಪನ್ (ಸೂಪರ್ 1000) ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೀಗ ನಾಲ್ಕನೇ ಟೂರ್ನಿ ಗೆಲ್ಲಲು ಸಜ್ಜಾಗಿದ್ದಾರೆ.

ಬಿಡಬ್ಲ್ಯೂಎಫ್‌ ವರ್ಲ್ಡ್ ಟೂರ್ ಅನ್ನು ಒಟ್ಟು ಆರು ಹಂತಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ವರ್ಲ್ಡ್ ಟೂರ್ ಫೈನಲ್ಸ್, ನಾಲ್ಕು ಸೂಪರ್ 1000, ಆರು ಸೂಪರ್ 750, ಏಳು ಸೂಪರ್ 500, ಮತ್ತು 11 ಸೂಪರ್ 300.

ಮೊದಲನೇ ಸುತ್ತಿನಲ್ಲೇ ಸೋತು ಹೊರಬಿದ್ದ ಪಿವಿ ಸಿಂಧು

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು, ಬುಧವಾರ (ಜುಲೈ 26) ನಡೆದ ಜಪಾನ್ ಓಪನ್‌ನಲ್ಲಿ (Japan Open) ಚೀನಾದ ಜಾಂಗ್ ಯಿ ಮಾನ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಕೇವಲ 32 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 12-21 13-21ರಿಂದ ಸುಲಭವಾಗಿ ಪರಾಭವಗೊಂಡಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ನಡೆದ ಒಟ್ಟು 13 ಬಿಡಬ್ಲ್ಯೂಎಫ್‌ ವರ್ಲ್ಡ್ ಟೂರ್ (BWF World Tour) ಈವೆಂಟ್‌ಗಳಲ್ಲಿ ಇದು ಏಳನೇ ಬಾರಿಗೆ ಮೊದಲ ಸುತ್ತಿನಲ್ಲೇ ಸೋತು ಸಿಂಧು ನಿರ್ಗಮಿಸಿದ್ದಾರೆ.

ಬ್ಯಾಡ್ಮಿಂಟನ್‌ ಕುರಿತ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ