Korea Open 2023: ಚೊಚ್ಚಲ ಕೊರಿಯಾ ಓಪನ್ ಪ್ರಶಸ್ತಿ ಗೆದ್ದ ಭಾರತದ ಸಾತ್ವಿಕ್-ಚಿರಾಗ್; ತಾರಾ ಜೋಡಿಗಿದು ವರ್ಷದ 3ನೇ ಪ್ರತಿಷ್ಠಿತ ಚಿನ್ನದ ಪದಕ
Jul 23, 2023 02:33 PM IST
ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ.
- Korea Open 2023: ಜುಲೈ 23ರ ಭಾನುವಾರ ನಡೆದ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ನಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಭಾರತ ಸ್ಟಾರ್ ಷಟ್ಲರ್ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ (Satwiksairaj Rankireddy and Chirag Shetty), ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಕಳೆದ ತಿಂಗಳಷ್ಟೇ ಇಂಡೋನೇಷ್ಯಾ ಚಾಂಪಿಯನ್ಗಳಾಗಿದ್ದ ಈ ತಾರಾ ಡಬಲ್ಸ್ ಜೋಡಿ, ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಕೊರಿಯ ಓಪನ್ 500 ಪ್ರಶಸ್ತಿಗೆ (Korean Open 2023) ಮುತ್ತಿಕ್ಕಿದೆ. ಈ ಸಾಧನೆಯೊಂದಿಗೆ ಈ ವರ್ಷದಲ್ಲಿ ಮೂರನೇ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿ ಗೆದ್ದು ಅಮೋಘ ದಾಖಲೆ ಬರೆದಿದ್ದಾರೆ.
ಜುಲೈ 23ರ ಭಾನುವಾರ ನಡೆದ ರೋಚಕ ಫೈನಲ್ ಹೋರಾಟದಲ್ಲಿ ವಿಶ್ವದ ನಂ.1 ಶ್ರೇಯಾಂಕದ ಇಂಡೋನೇಷ್ಯಾದ ಜೋಡಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊಗೆ (Fajar Alfian and Muhammad Rian Ardianto) ಆಘಾತ ನೀಡಿದ ಭಾರತದ ಸಾತ್ವಿಕ್-ಚಿರಾಗ್, 17-21, 21-13, 21-14 ಅಂತರದ ಗೇಮ್ಗಳಿಂದ ಪ್ರಶಸ್ತಿಗೆ ಕೊರೊಳೊಡ್ಡಿದರು. ಆರಂಭಿಕ ಗೇಮ್ನಲ್ಲಿ 17-21 ಅಂತರದಲ್ಲಿ ಸೋತರೂ ಮುಂದಿನ ಗೇಮ್ಗಳಲ್ಲಿ ಕಂಬ್ಯಾಕ್ ಮಾಡಿ ಗೆದ್ದು, ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಆಕ್ರಮಣಕಾರಿ ಆಟ ಪ್ರದರ್ಶನ
ಮೊದಲ ಗೇಮ್ನಲ್ಲಿ 3ನೇ ವಿಶ್ವ ಶ್ರೇಯಾಂಕಿತ ಭಾರತದ ಜೋಡಿ ಕಡಿಮೆ ಅಂತರದಲ್ಲಿ ಶರಣಾಗಿತ್ತು. ಇದರಿಂದ ನಂಬರ್ 1 ಜೋಡಿಯ ವಿರುದ್ಧ ಸೋಲುವುದು ಪಕ್ಕಾ ಎಂದು ಹೇಳಲಾಗಿತ್ತು. ಆದರೆ, ಎದೆಗುಂದದ ಭಾರತದ ಜೋಡಿ, ಎದುರಾಳಿಗಳು ಅಚ್ಚರಿ ಪಡುವಂತೆ ಆಡಿದರು. ಬಲಿಷ್ಠ ಹೊಡೆತಗಳ ಮೂಲಕ ಇಂಡೋನೇಷ್ಯಾ ಜೋಡಿಗೆ ಶಾಕ್ ನೀಡಿದರು. ಹಾಗಾಗಿ 2ನೇ ಗೇಮ್ ಅನ್ನು ಗೆದ್ದುಕೊಂಡರು. ಮತ್ತು ನಿರ್ಣಾಯಕ ಮತ್ತು 3ನೇ ಗೇಮ್ನಲ್ಲೂ ಆಕ್ರಮಣಕಾರಿ ಆಟವಾಡಿದ ಸಾತ್ವಿಕ್ -ಚಿರಾಗ್, ಎದುರಾಳಿಗಳಿಗೆ ಮಣ್ಣುಮುಕ್ಕಿಸಿ ಪ್ರಶಸ್ತಿ ಗೆದ್ದರು.
ವರ್ಷದ ಮೂರನೇ ಪ್ರಶಸ್ತಿ
ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ, ಇದೇ ವರ್ಷ ಇಂಡೋನೇಷ್ಯಾ ಸೂಪರ್ 1000 ಹಾಗೂ ಸ್ವಿಸ್ ಓಪನ್ ಸೂಪರ್ 500 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದೀಗ ತಮ್ಮ ಅನುಭವದ ಆಟಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ತೋರುವ ಮೂಲಕ ಕೊರಿಯಾ ಓಪನ್ ಟೂರ್ನಿಯನ್ನೂ ಗೆದ್ದು ಬೀಗಿದ್ದಾರೆ. ಹಾಗಾಗಿ ಅವರ ಆಕ್ರಮಣಕಾರಿ ಆಟ ಮತ್ತು ಸಾಧನೆ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕದ ಭರವಸೆ ಮೂಡಿಸಿದೆ.
ಸೆಮಿಫೈನಲ್ನಲ್ಲಿ ಚೀನಾ ವಿರುದ್ಧ ಗೆಲುವು
ಜೂನ್ 22ರಂದು, ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಜೋಡಿಯನ್ನು ಸೋಲಿಸಿತ್ತು. 40 ನಿಮಿಷಗಳ ತೀವ್ರ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಚೀನಾ ಜೋಡಿ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ 21-15 24-22 ನೇರ ಗೇಮ್ಗಳಿಂದ ಜಯಿಸಿ ಫೈನಲ್ಗೆ ಲಗ್ಗೆ ಇಟ್ಟಿತ್ತು. ಸಾತ್ವಿಕ್ ಮತ್ತು ಚಿರಾಗ್ ಚೀನಾ ಜೋಡಿಯ ವಿರುದ್ಧ ದಾಲಿಸಿದ ಮೊದಲ ಗೆಲುವಾಗಿತ್ತು. ಇದಕ್ಕೂ ಮುನ್ನ ಶುಕ್ರವಾರ (ಜೂನ್ 21) ನಡೆದ ಕ್ವಾರ್ಟರ್ ಫೈನಲ್ನಲ್ಲಿ ಜಪಾನ್‌ನ ಟಕುರೊ ಹಾಕಿ ಮತ್ತು ಯುಗೊ ಕೊಬಯಾಶಿ ವಿರುದ್ಧ ನೇರ ಗೇಮ್‌ಗಳ ಗೆದ್ದು ಸೆಮಿಫೈನಲ್ಗೆ ಎಂಟ್ರಿ ನೀಡಿದ್ದರು.