logo
ಕನ್ನಡ ಸುದ್ದಿ  /  ಕ್ರೀಡೆ  /  24 ಗ್ರ್ಯಾಂಡ್ ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್​ ಮಣಿಸಿದ 21 ವರ್ಷದ ಅಲ್ಕರಾಜ್; ಫೆಡರರ್ ಕ್ಲಬ್ ಸೇರಿದ ಸ್ಪೇನ್ ಆಟಗಾರ

24 ಗ್ರ್ಯಾಂಡ್ ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್​ ಮಣಿಸಿದ 21 ವರ್ಷದ ಅಲ್ಕರಾಜ್; ಫೆಡರರ್ ಕ್ಲಬ್ ಸೇರಿದ ಸ್ಪೇನ್ ಆಟಗಾರ

Prasanna Kumar P N HT Kannada

Jul 14, 2024 10:48 PM IST

google News

24 ಗ್ರ್ಯಾಂಡ್ ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್​ ಮಣಿಸಿದ 21 ವರ್ಷದ ಅಲ್ಕರಾಜ್; ಫೆಡರರ್ ಕ್ಲಬ್ ಸೇರಿದ ಸ್ಪೇನ್ ಆಟಗಾರ

    • Carlos Alcaraz: ನೊವಾಕ್ ಜೊಕೊವಿಕ್ ಅವರನ್ನು ನೇರ ಸೆಟ್ ಗಳಲ್ಲಿ ಮಣಿಸಿದ ಕಾರ್ಲೋಸ್ ಅಲ್ಕರಾಜ್ 2024ರ ವಿಂಬಲ್ಡನ್ ಕಿರೀಟವನ್ನು ಉಳಿಸಿಕೊಂಡಿದ್ದಾರೆ. ಇದರೊಂದಿಗೆ ರೋಜರ್ ಫೆಡರರ್ ಅವರಿರುವ ವಿಶೇಷ ಕ್ಲಬ್​ ಸೇರಿದ್ದಾರೆ.
24 ಗ್ರ್ಯಾಂಡ್ ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್​ ಮಣಿಸಿದ 21 ವರ್ಷದ ಅಲ್ಕರಾಜ್; ಫೆಡರರ್ ಕ್ಲಬ್ ಸೇರಿದ ಸ್ಪೇನ್ ಆಟಗಾರ
24 ಗ್ರ್ಯಾಂಡ್ ಸ್ಲಾಮ್ ಒಡೆಯ ನೊವಾಕ್ ಜೊಕೊವಿಕ್​ ಮಣಿಸಿದ 21 ವರ್ಷದ ಅಲ್ಕರಾಜ್; ಫೆಡರರ್ ಕ್ಲಬ್ ಸೇರಿದ ಸ್ಪೇನ್ ಆಟಗಾರ

ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ 5 ವಾರಗಳ ನಂತರ ವಿಶ್ವದ ನಂಬರ್​​ 2 ನೊವಾಕ್ ಜೊಕೊವಿಕ್ ವಿರುದ್ಧ ಜುಲೈ 14ರ ಭಾನುವಾರ ನಡೆದ ವಿಂಬಲ್ಡನ್ ಚಾಂಪಿಯನ್​ಶಿಪ್​-2024 ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಗೆದ್ದ 21 ವರ್ಷದ ಕಾರ್ಲೋಸ್ ಅಲ್ಕರಾಜ್ ಮತ್ತೊಮ್ಮೆ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ಕಳೆದ ವಿಂಬಲ್ಡನ್​​ನಲ್ಲೂ ಅವರೇ ಚಾಂಪಿಯನ್ ಆಗಿದ್ದರು ಎಂಬುದು ವಿಶೇಷ.

ಹಾಲಿ ಚಾಂಪಿಯನ್ ಅಲ್ಕರಾಜ್ ಮತ್ತು ಏಳು ಬಾರಿಯ ಚಾಂಪಿಯನ್ ಜೊಕೊವಿಕ್ ವಿಂಬಲ್ಡನ್ ಫೈನಲ್ ಪಂದ್ಯವು 3 ಗಂಟೆಗಳ ಕಾಲ ನಡೆಯಿತು. ಸೆಂಟರ್ ಕೋರ್ಟ್‌ನಲ್ಲಿ ನಡೆದ ಫೈನಲ್​​ ಪಂದ್ಯದಲ್ಲಿ 24 ಗ್ರ್ಯಾಂಡ್‌ ಸ್ಲಾಮ್‌ ಗೆದ್ದರುವ ಜೋಕೋವಿಕ್‌ಗೆ ಮತ್ತೆ ನಿರಾಸೆಯಾಯಿತು. ದಿಗ್ಗಜ ಆಟಗಾರನನ್ನು ಯುವ ಆಟಗಾರ ಅಲ್ಕರಾಜ್​ 6-2, 6-2, 7-6 (4) ಅಂತರದ ನೇರ ಸೆಟ್​ಗಳಿಂದ ಮಣಿಸಿ ದಾಖಲೆ ಬರೆದಿದ್ದಾರೆ.

ಗ್ರ್ಯಾಂಡ್ ಸ್ಲಾಮ್ ಫೈನಲ್​ನ ಆರಂಭಿಕ ಸೆಟ್​ನಲ್ಲಿ 2ನೇ ಶ್ರೇಯಾಂಕದ ಜೊಕೊವಿಕ್ ವಿರುದ್ಧ ಅಲ್ಕರಾಜ್ ಸರ್ವಾಂಗೀಣ ದಾಳಿ ನಡೆಸಿದರು. ಹೀಗಾಗಿ 6-2 ಅಂತರದಲ್ಲಿ ಜಯ ಸಾಧಿಸಿದರು. 2ನೇ ಸೆಟ್​​ನಲ್ಲಿ ಜೊಕೊವಿಕ್ ತಿರುಗೇಟು ನೀಡಲು ಮುಂದಾದರು. ಆದರೆ,​ ಅಲ್ಕರಾಜ್ ಚಾಣಾಕ್ಷ, ಅಗ್ರೆಸ್ಸಿವ್ ಆಟದ ಮುಂದೆ ಮತ್ತೆ 6-2ರಿಂದ ಸೋತರು. ಹೀಗಾಗಿ ಉಳಿದ 3 ಸೆಟ್​ಗಳಲ್ಲಿ ಗೆಲ್ಲುವ ಒತ್ತಡಕ್ಕೆ ಸಿಲುಕಿದ ಜೊಕೊ, 3ನೇ ಸೆಟ್​ನಲ್ಲೂ ಸೋತರು.

ಆಲ್ ಇಂಗ್ಲೆಂಡ್ ಕ್ಲಬ್​ನಲ್ಲಿ ತಮ್ಮ ಕಿರೀಟವನ್ನು ಉಳಿಸಿಕೊಳ್ಳಲು ಸ್ಪೇನ್​ನ ಅಲ್ಕರಾಜ್ ದಾಖಲೆಯ ಗ್ರ್ಯಾಂಡ್ ಸ್ಲಾಮ್ ವಿಜೇತರನ್ನು ಹಿಂದಿಕ್ಕಿದರು. ಅಲ್ಕರಾಜ್ ಮೂರನೇ ಸೆಟ್ ಟೈ-ಬ್ರೇಕ್ ಗೆದ್ದು 4ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಭದ್ರಪಡಿಸಿಕೊಂಡರು. ಅಲ್ಕರಾಜ್ ಪ್ರಸ್ತುತ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಟೆನಿಸ್ ಟೂರ್ನಿಯನ್ನು ಸತತ ಗೆದ್ದ ವಿಶ್ವದ ಆರನೇ ಟೆನಿಸ್ ಆಟಗಾರನಾಗಿದ್ದಾರೆ.

2024ರ ವಿಂಬಲ್ಡನ್ ಪ್ರಶಸ್ತಿಗೆ ಅಲ್ಕರಾಜ್ ಹಾದಿ

ಸುತ್ತು (ಅಲ್ಕರಾಜ್ ಗೆಲುವಿನ ಹಾದಿ)ವಿರುದ್ಧಫಲಿತಾಂಶ
ಮೊದಲ ಸುತ್ತುಮಾರ್ಕ್​ ಲಾಜಲ್7-6 (7/3), 7-5, 6-2
ಎರಡನೇ ಸುತ್ತುಅಲೆಕ್ಸಾಂಡರ್​ ವುಕಿಕ್7-6 (7/5), 6-2, 6-2
ಮೂರನೇ ಸುತ್ತುಫ್ರಾನ್ಸಿಸ್ ಟಿಯಾಫೋ5-7, 6-2, 4-6, 7-6 (7/2), 6-2
ನಾಲ್ಕನೇ ಸುತ್ತುಉಗೋ ಹಂಬರ್ಟ್6-3, 6-4, 1-6, 7-5
ಕ್ವಾರ್ಟರ್​ಫೈನಲ್ಟಾಮಿ ಪೌಲ್5-7, 6-4, 6-2, 6-2
ಸೆಮಿಫೈನಲ್ಡೇನಿಯಲ್ ಮೆಡ್ವಡೇವ್6-7 (1/7), 6-3, 6-4, 6-4
ಫೈನಲ್ನೊವಾಕ್ ಜೊಕೊವಿಕ್6-2, 6-2, 7-6 (7/4)

ವಿಂಬಲ್ಡನ್ ಪ್ರಶಸ್ತಿ ಗೆದ್ದ ಅಲ್ಕರಾಜ್ ಅವರು ರೋಜರ್ ಫೆಡರರ್​​ ಅವರ ಎಲೈಟ್ ಪಟ್ಟಿಗೆ ಸೇರಿದರು. ಫೆಡರರ್ ನಂತರ ವೃತ್ತಿಪರ ಯುಗದಲ್ಲಿ ತಮ್ಮ ಮೊದಲ 4 ಪ್ರಮುಖ ಫೈನಲ್​​​​​ಗಳಲ್ಲೂ ಗೆಲುವುದಾಖಲಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ವಿಶ್ವದ ನಂಬರ್ 3 ಆಟಗಾರ ಪಾತ್ರರಾಗಿದ್ದಾರೆ. ವಿಂಬಲ್ಡನ್ ಚಾಂಪಿಯನ್ 1968ರ ನಂತರ ಒಂದೇ ವರ್ಷದಲ್ಲಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೂರನೇ ಪುರುಷರ ಆಟಗಾರರಾಗಿದ್ದಾರೆ. ರಾಡ್ ಲೇವರ್, ಜಾರ್ನ್ ಬೋರ್ಗ್, ರಾಫೆಲ್ ನಡಾಲ್, ಫೆಡರರ್ ಮತ್ತು ಜೊಕೊವಿಕ್ ಅವರೊಂದಿಗೆ 21 ವರ್ಷದ ಯುವಕ ವಿಶೇಷ ಕ್ಲಬ್​ ಸೇರಿದ್ದಾರೆ.

ಜೊಕೊವಿಕ್ 8ನೇ ವಿಂಬಲ್ಡನ್ ಪ್ರಶಸ್ತಿ ಕನಸು ನುಚ್ಚು ನೂರು

ಈ ಹಿಂದೆ 7 ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದಿರುವ ಜೊಕೊವಿಕ್, 8ನೇ ಕಿರೀಟ ಗೆಲ್ಲಲು ವಿಫಲರಾದರು. ಜೊಕೊವಿಕ್ ಎಂಟು ವಿಂಬಲ್ಡನ್ ಟ್ರೋಫಿ ಗೆದ್ದಿರುವ ಫೆಡರರ್ ಅವರ ದಾಖಲೆ ಸರಿಗಟ್ಟುವ ಪ್ರಯತ್ನದಲ್ಲಿ ವಿಫಲರಾದರು.

ನೊವಾಕ್ ಕುರಿತು ಅಲ್ಕರಾಜ್ ಹೇಳಿದ್ದೇನು?

ಜೊಕೊವಿಕ್ ಅಸಾಧಾರಣ ಹೋರಾಟಗಾರ. ಅವರಿಗೆ ಅವಕಾಶಗಳು ಸಿಗಲಿವೆ ಎಂದು ನನಗೆ ತಿಳಿದಿತ್ತು. ಇದು ಕಷ್ಟಕರವಾಗಿತ್ತು. ಈ ವೇಳೆ ನಾನು ಅತ್ಯುತ್ತಮ ಟೆನಿಸ್ ಆಡಲು ಪ್ರಯತ್ನಿಸಿದೆ. ಕೊನೆಯಲ್ಲಿ ನಾನು ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಯಿತು ಎಂದು ಲಂಡನ್​​ನಲ್ಲಿ ಸತತ ಎರಡನೇ ವಿಂಬಲ್ಡನ್ ಪ್ರಶಸ್ತಿ ಗೆಲುವಿನ ನಂತರ ಅಲ್ಕರಾಜ್ ಹೇಳಿದರು.

ನಿಮಗೆ ತಿಳಿದಿದೆಯೇ?

2024ರ ವಿಂಬಲ್ಡನ್ ಚಾಂಪಿಯನ್, 2022ರ ಯುಎಸ್ ಓಪನ್, 2023ರ ವಿಂಬಲ್ಡನ್ ಹಾಗೂ 2024ರ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿರುವ ಅಲ್ಕರಾಜ್, ತನ್ನ 4ನೇ ವಯಸ್ಸಿನಲ್ಲೇ ಟೆನಿಸ್ ಆಡಲು ಪ್ರಾರಂಭಿಸಿದರು. ಅವರ ತಂದೆ ಆ ಸಮಯದಲ್ಲಿ ಟೆನಿಸ್ ಅಕಾಡೆಮಿ ನಿರ್ದೇಶಕರಾಗಿದ್ದರು. ಅಲ್ಕರಾಜ್ 2020ರ ರಿಯೋ ಓಪನ್​ನ ಎಟಿಪಿಯಲ್ಲಿ ಪದಾರ್ಪಣೆ ಮಾಡಿದ್ದರು (ವಯಸ್ಸು 16). ಒಂದೇ ಪಂದ್ಯಾವಳಿಯಲ್ಲಿ ರಾಫೆಲ್ ನಡಾಲ್ ಮತ್ತು ಜೊಕೊವಿಕ್ ಅವರನ್ನು ಸೋಲಿಸಿದ ಮೊದಲ ಹದಿಹರೆಯದ ಆಟಗಾರ.

ಫೈನಲ್​ನಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್ ವಿರುದ್ಧ ಪ್ರಸಿದ್ಧ ಗೆಲುವಿನೊಂದಿಗೆ ಅಲ್ಕರಾಜ್ 2022ರ ಯುಎಸ್ ಓಪನ್​​​ನಲ್ಲಿ ತಮ್ಮ ಮೊದಲ ಪ್ರಶಸ್ತಿ ಗೆದ್ದಿದ್ದರು. 1990ರಲ್ಲಿ ಅಮೆರಿಕದ ಪೀಟ್ ಸಾಂಪ್ರಾಸ್ (19) ನಂತರ ಚಾಂಪಿಯನ್ ಆಗಿದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಪ್ಯಾನಿಷ್ ಸೂಪರ್​​ಸ್ಟಾರ್​ ಪಾತ್ರರಾಗಿದ್ದರು. 2024ರ ಫ್ರೆಂಚ್ ಓಪನ್ ಫೈನಲ್​ನಲ್ಲಿ ಅಲೆಕ್ಸಾಂಡರ್ ಝ್ವೆರೆವ್ ವಿರುದ್ಧ ಜಯ ಗಳಿಸಿ ಎಲ್ಲಾ ಮೂರು ಮೇಲ್ಮೈಗಳಲ್ಲಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಅತ್ಯಂತ ಕಿರಿಯ ಪುರುಷರ ಆಟಗಾರ (21) ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ