logo
ಕನ್ನಡ ಸುದ್ದಿ  /  ಕ್ರೀಡೆ  /  Jonny Bairstow: ವಿವಾದಕ್ಕೆ ಕಾರಣವಾಯ್ತು ಬೈರ್‌ಸ್ಟೋ ರನೌಟ್; ಅಂಪೈರ್ ನಿರ್ಧಾರ ಸರಿಯೇ, ನಿಯಮಗಳು ಹೀಗೆ ಹೇಳುತ್ತವೆ

Jonny Bairstow: ವಿವಾದಕ್ಕೆ ಕಾರಣವಾಯ್ತು ಬೈರ್‌ಸ್ಟೋ ರನೌಟ್; ಅಂಪೈರ್ ನಿರ್ಧಾರ ಸರಿಯೇ, ನಿಯಮಗಳು ಹೀಗೆ ಹೇಳುತ್ತವೆ

Jayaraj HT Kannada

Jan 09, 2024 08:01 PM IST

google News

ಜಾನಿ ಬೈರ್‌ಸ್ಟೋ

    • England vs Australia Ashes: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಜಾನಿ ಬೈರ್‌ಸ್ಟೋವ್ ಅವರ ವಿಕೆಟ್, ಭಾರಿ ಚರ್ಚೆಗೆ ಕಾರಣವಾಗಿದೆ. ನಿಯಮಗಳ ಪ್ರಕಾರ, ಇದು ಸಂಪೂರ್ಣವಾಗಿ ನ್ಯಾಯಸಮ್ಮತವಾದ ನಿರ್ಧಾರವಾಗಿದೆ.
ಜಾನಿ ಬೈರ್‌ಸ್ಟೋ
ಜಾನಿ ಬೈರ್‌ಸ್ಟೋ (Getty)

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್‌ ಸರಣಿಯ ಎರಡನೇ ಪಂದ್ಯದಲ್ಲೂ ಆಸೀಸ್‌ ತಂಡ ಭರ್ಜರಿ ಗೆಲುವು ದಾಖಲಿಸಿತು. ಲಂಡನ್‌ನ ಐತಿಹಾಸಿಕ ಲಾರ್ಡ್ಸ್​​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ನಾಯಕ ಬೆನ್ ​ಸ್ಟೋಕ್ಸ್ ವಿರೋಚಿತ ಶತಕದ​ ಹೋರಾಟದ ನಡುವೆಯೂ‌, ಇಂಗ್ಲೆಂಡ್​​ ಕಾಂಗರೂಗಳಿಗೆ ಶರಣಾಯಿತು. 43 ರನ್‌​ಗಳಿಂದ ಗೆದ್ದ ಕಮಿನ್ಸ್‌ ಪಡೆಯು ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಈ ಪಂದ್ಯವು ಹಲವು ವಿಷಯಗಳಿಂದಾಗಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಅದೇ ರೀತಿ ವಿವಾದಗಳಿಗೂ ಕಾರಣವಾಗಿದೆ. ಅದರಲ್ಲಿ ಜಾನಿ ಬೈರ್‌ಸ್ಟೋ ರನೌಟ್‌ ಪ್ರಮುಖ ವಿವಾದ. ಜಾನಿ ಬೈರ್‌ಸ್ಟೋ ಅವರನ್ನು ಆಸೀಸ್‌ ವಿಕೆಟ್ ಕೀಪರ್‌ ಅಲೆಕ್ಸ್ ಕ್ಯಾರಿ ಸ್ಟಂಪಿಂಗ್ ಮಾಡಿರುವುದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಇದನ್ನು ರನ್‌ಔಟ್ ಎಂದು ಘೋಷಿಸುವ ಮೂಲಕ ಆಸೀಸ್‌ ಪಂದ್ಯದಲ್ಲಿ ಮುನ್ನಡೆ ಸಾಧಿಸಿತು. ಬೈರ್‌ಸ್ಟೋ ಅವರ ವಿಕೆಟ್‌ ಆಂಗ್ಲರ ಪಾಳಯದ ಆಕ್ರೋಶಕ್ಕೂ ಕಾರಣವಾಗಿದೆ.

ಆಗಿದ್ದೇನು?

10 ರನ್‌ ಗಳಿಸಿ ಆಡುತ್ತಿದ್ದ ಬೈರ್‌ಸ್ಟೋ, ಆಸೀಸ್ ವೇಗಿ ಕ್ಯಾಮರೂನ್ ಗ್ರೀನ್ ಎಸೆದ ಎಸೆತದಲ್ಲಿ ರನ್‌ ಗಳಿಸಲು ಮುಂದಾಗಲಿಲ್ಲ. ಚೆಂಡನ್ನು ಅವರು ಬಿಟ್ಟಿದ್ದರಿಂದಾಗಿ ಚೆಂಡು ನೇರವಾಗಿ ವಿಕೆಟ್ ಕೀಪರ್‌ ಅಲೆಕ್ಸ್‌ ಕ್ಯಾರಿ ಕೈಸೇರಿತು. ಚೆಂಡನ್ನು ಡಾಟ್ ಮಾಡಿದ ಹಿನ್ನೆಲೆಯಲ್ಲಿ ಬೈರ್‌ಸ್ಟೋ ಕ್ರೀಸ್‌ ಬಿಟ್ಟು ಎದುರು ಬಂದರು. ಈ ವೇಳೆ ವಿಕೆಟ್‌ ವಿಕೆಟ್ ಕೀಪರ್ ಕ್ಯಾರಿ ಸ್ಟಂಪ್‌ನತ್ತ ಚೆಂಡನ್ನು ಎಸೆದರು. ವಿಕೆಟ್‌ಗೆ ಚೆಂಡು ಬಡಿದಿದ್ದರಿಂದ ಆಸೀಸ್‌ ಬಳಗದ ಸಂಭ್ರಮಾಚರಣೆ ಶುರುವಾಯ್ತು. ಆಸೀಸ್ ಮಾಡಿದ ಮನವಿಯನ್ನು ಪುರಸ್ಕರಿಸಿದ ಮೂರನೇ ಅಂಪೈರ್ ಕೂಡಾ ಬೈರ್‌ಸ್ಟೋ ಔಟೆಂದು ನಿರ್ಧಾರ ಪ್ರಕಟಿಸಿದರು.

ಇಂಗ್ಲೆಂಡ್‌ ಅಸಮಾಧಾನವೇನು?

ವಿಕೆಟ್‌ ಕೀಪರ್‌ನತ್ತ ಚೆಂಡು ಹೋಗುವುದನ್ನು ನೋಡಿದ ಬಳಿಕ ತಾನು ಕಾಲಿನಿಂದ ಕ್ರೀಸ್‌ ಅನ್ನು ಮುಟ್ಟಿ ಆ ಬಳಿಕ ಕ್ರೀಸ್‌​ನಿಂದ ಹೊರಬಂದಿದ್ದೇನೆ ಎಂಬುದು ಬೈರ್‌ಸ್ಟೋ ಅವರ ವಾದ. ಹೀಗಾಗಿ ಅದು ಔಟ್‌ ಅಲ್ಲ ಎಂಬುದು ಇಂಗ್ಲೆಂಡ್‌ ಆಟಗಾರರ ಅಭಿಪ್ರಾಯ.

ನಿಯಮ ಏನು ಹೇಳುತ್ತದೆ?

ಕ್ರಿಕೆಟ್‌ ನಿಯಮಗಳ ಪ್ರಕಾರ ಇದು ಸಂಪೂರ್ಣವಾಗಿ ನ್ಯಾಯಸಮ್ಮತವಾದ ನಿರ್ಧಾರವಾಗಿದೆ. ಆ ಪರಿಸ್ಥಿತಿಯಲ್ಲಿ ಬೈರ್‌ಸ್ಟೋ ಅವರ ಅರಿವಿನ ಕೊರತೆಯ ಲಾಭವನ್ನು ಆಸೀಸ್‌ ವಿಕೆಟ್‌ ಕೀಪರ್‌ ಕ್ಯಾರಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ

ನಿಯಮ ಸಂಖ್ಯೆ 1: ಚೆಂಡನ್ನು ಡೆಡ್ ಎಂದು ಘೋಷಿಸಿದಾಗ ಮಾತ್ರ...

MCCಯ ಡೆಡ್ ಬಾಲ್ ನಿಯಮದ ಪ್ರಕಾರ, ಕಾನೂನು 20.1.1.1 ಹೀಗೆ ಹೇಳುತ್ತದೆ. ಬೌಲರ್‌ ಎಸೆದ ಚೆಂಡು ಬಾಲ್ ಅಂತಿಮವಾಗಿ ವಿಕೆಟ್ ಕೀಪರ್ ಕೈ ಸೇರಿದ ನಂತರ ಅದು ಡೆಡ್ ಆಗುತ್ತದೆ. ಆವರೆಗೂ ಚೆಂಡು ಸಕ್ರಿಯವಾಗಿರುತ್ತದೆ. ಆಸ್ಟ್ರೇಲಿಯನ್ನರ ವಾದವೇ ಇದು. ಕ್ಯಾರಿಯ ಕೈಯಲ್ಲಿ ಚೆಂಡು ಕ್ಷಣಮಾತ್ರಕ್ಕಿಂತ ಹೆಚ್ಚು ಹೊತ್ತು ಉಳಿದಿಲ್ಲ. ಅವರ ಕೈಗೆ ಚೆಂಡು ಬಂದ ತಕ್ಷಣವೇ ಅವನು ಅದನ್ನು ಸ್ಟಂಪ್‌ಗೆ ಎಸೆದಿದ್ದಾರೆ. ಆ ಮೂಲಕ ಸ್ಪಷ್ಟವಾಗಿ ಬೈರ್‌ಸ್ಟೋ ವಿಕೆಟ್‌ ಪಡೆಯಲು ಚಾಣಾಕ್ಷತನ ಉಪಯೋಗಿಸಿದ್ದಾರೆ.

ಇಂಗ್ಲೆಂಡ್‌ ತಂಡದ ವಾದವೇನು?

ಚೆಂಡನ್ನು ಕ್ಯಾರಿ ಕೈಯಲ್ಲಿ ಕೆಲಕಾಲ ಹಿಡಿದ ಬಳಿಕ ಸ್ಟಂಪ್‌ನತ್ತ ಎಸೆದಿದ್ದಾರೆ ಎಂಬುದು ಇಂಗ್ಲೆಂಡ್ ತಂಡದ ಆಟಗಾರರು ಮತ್ತು ಬೈರ್‌ಸ್ಟೋ ಅವರ ಅಭಿಪ್ರಾಯ. ಹೀಗಾಗಿ ಚೆಂಡು ಡೆಟ್‌ ಆಗಿದೆ ಎಂದು ಅವರು ಭಾವಿಸಿದ್ದರು.

ನಿಯಮ 20.2ರ ಪ್ರಕಾರ, "ಚೆಂಡನ್ನು ಡೆಡ್‌ ಬಾಲ್‌ ಎಂದು ಘೋಷಿಸಬೇಕೇ ಅಥವಾ ಇಲ್ಲವೇ ಎಂಬುದು ಅಂಪೈರ್ ಮಾತ್ರ ನಿರ್ಧರಿಸುವ ವಿಷಯವಾಗಿದೆ." ಇಲ್ಲಿ ಬೈರ್‌ಸ್ಟೋ ತಮ್ಮ ಕ್ರೀಸ್‌ನಿಂದ ಹೊರಗೆ ಬಂದಿರುವುದದರಿಂದ ಅವರನ್ನು ಔಟ್‌ ಎಂದು ಘೋಷಿಸಲಾಗಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ