logo
ಕನ್ನಡ ಸುದ್ದಿ  /  ಕ್ರೀಡೆ  /  Bcci: ಐಸಿಸಿ ಆದಾಯ ಹಂಚಿಕೆಯಲ್ಲಿ ಬಿಸಿಸಿಐಗೆ ಮತ್ತೆ ಸಿಂಹಪಾಲು; ಬೇರೆ ರಾಷ್ಟ್ರಗಳಿಗಿಂತ ಭಾರತಕ್ಕೆ ದುಪ್ಪಟ್ಟು

BCCI: ಐಸಿಸಿ ಆದಾಯ ಹಂಚಿಕೆಯಲ್ಲಿ ಬಿಸಿಸಿಐಗೆ ಮತ್ತೆ ಸಿಂಹಪಾಲು; ಬೇರೆ ರಾಷ್ಟ್ರಗಳಿಗಿಂತ ಭಾರತಕ್ಕೆ ದುಪ್ಪಟ್ಟು

HT Kannada Desk HT Kannada

Jul 14, 2023 05:32 PM IST

google News

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲ್ಲಾರ್ಡಿಸ್

    • Indian Cricket Team: ಡರ್ಬನ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಬಿಸಿಸಿಐ ಹೆಚ್ಚು ಲಾಭ ಗಳಿಸಿದೆ. ನೂತನ ಆದಾಯ ಹಂಚಿಕೆ ಸೂತ್ರಕ್ಕೆ ವಿವಿಧ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳು ಒಪ್ಪಿಗೆ ನೀಡಿದವು.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲ್ಲಾರ್ಡಿಸ್
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲ್ಲಾರ್ಡಿಸ್ (AFP)

ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿಯಾಗಿರುವ ಬಿಸಿಸಿಐಗೆ ಹಣಕಾಸಿನ ಸಮಸ್ಯೆಯಿಲ್ಲ. ಕ್ರಿಕೆಟ್‌ನ ಬ್ರಾಂಡ್‌ ಆಗಿ ಬೆಳೆದಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC)ನಿಂದ ಸಿಂಹಪಾಲು ಪಡೆಯುತ್ತಿದೆ. ಐಸಿಸಿಯ ಮಾಧ್ಯಮ ಹಕ್ಕುಗಳ ಆದಾಯದಿಂದ ದೊಡ್ಡ ಪಾಲು ಬಿಸಿಸಿಐಗೆ ಲಭಿಸಿದೆ. 2024-27ರ ಅವಧಿಯಲ್ಲಿ ಒಟ್ಟು ಅಂದಾಜು 3.2 ಶತಕೋಟಿ ಡಾಲರ್‌ನಲ್ಲಿ ಅಂದಾಜು 38.5 ಶೇಕಡಾ ಪಾಲು ಭಾರತಕ್ಕೆ ದಕ್ಕಲಿದೆ. ಈ ಬಗ್ಗೆ ಡರ್ಬನ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯ ಬಳಿಕ ತಿಳಿದುಬಂದಿದೆ.

ಭಾರತದ ಪಾಲಿನ ನಿಖರ ಮೊತ್ತವನ್ನು 'ಇನಷ್ಟೇ ನಿರ್ಧರಿಸಬೇಕಾಗಿದೆ' ಎಂದು ಐಸಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ ಕ್ರಿಕೆಟ್‌ ಮಂಡಳಿಯು ಪ್ರಸ್ತುತ ವಾರ್ಷಿಕವಾಗಿ 230 ಮಿಲಿಯನ್ ಡಾಲರ್‌ ತೆಗೆದುಕೊಳ್ಳುತ್ತದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚು. ಅಂದರೆ ಈ ಹಿಂದೆ 50 ಮಿಲಿಯನ್‌ ಡಾಲರ್‌ ಇದ್ದಿದ್ದು, ಈಗ 230 ಮಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಶೇಕಡಾವಾರು ಪ್ರಮಾಣದಲ್ಲಿ ನೋಡುವುದಾದರೆ 22 ಶೇಕಡದಿಂದ 38.5 ಶೇಕಡಕ್ಕೆ ಏರಿಕೆಯಾಗಿದೆ.

ಬಿಸಿಸಿಐಗೆ ಮಾತ್ರ ಎರಡಂಕಿ ಪಾಲು

ಬಿಸಿಸಿಐಗೆ ಹೋಲಿಸಿದರೆ, ಉಳಿದ ರಾಷ್ಟ್ರಗಳ ಕ್ರಿಕೆಟ್‌ ಮಂಡಳಿಗಳು ಬಿಸಿಸಿಐನ ಅರ್ಧದಷ್ಟು ಪಾಲು ಕೂಡಾ ಪಡೆಯುತ್ತಿಲ್ಲ. ಇಂಗ್ಲೆಂಡ್‌ನ ಇಸಿಬಿ, ಆಸ್ಟ್ರೇಲಿಯಾದ ಕ್ರಿಕೆಟ್‌ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ಪಿಸಿಬಿಯು ತಲಾ 6-7 ಶೇಕಡ ಪಾಲು ಪಡೆಯುತ್ತವೆ. ಬಿಸಿಸಿಐ ಬಳಿಕ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟ್ ಮಂಡಳಿಗಳು ಇವು ಮೂರು.

ವೆಸ್ಟ್ ಇಂಡೀಸ್‌ನ ಕ್ರಿಕೆಟ್ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾದ ಸಿಎಸ್‌ಎ, ನ್ಯೂಜಿಲೆಂಡ್‌ನ ಎನ್‌ಜೆಡ್‌ಸಿ, ಬಾಂಗ್ಲಾದೇಶದ ಬಿಸಿಬಿ ಮತ್ತು ಶ್ರೀಲಂಕಾದ ಎಸ್‌ಎಲ್‌ಸಿ ನಂತರದ ಸ್ಥಾನದಲ್ಲಿವೆ. ಮೂರನೇ ಹಂತದಲ್ಲಿ ಕ್ರಿಕೆಟ್‌ ಶಿಶುಗಳಾದ ಜಿಂಬಾಬ್ವೆ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಕ್ರಿಕೆಟ್ ಮಂಡಳಿಗಳು ಇರುತ್ತವೆ.

ಬಿಸಿಸಿಐ ಹೊರತುಪಡಿಸಿ ಪ್ರತಿ ಕ್ರಿಕೆಟ್ ಮಂಡಳಿಯು ಒಂದೇ ಅಂಕೆಯಲ್ಲಿ ಶೇಕಡಾವಾರು ಪಾಲನ್ನು ಪಡೆಯುತ್ತದೆ. ಬಿಸಿಸಿಐ ಮಾತ್ರ ಎರಡಂಕಿ ಪಾಲು ಪಡೆಯುವ ಮಂಡಳಿಯಾಗಿದೆ.

ಮಹಿಳೆಯರಿಗೂ ಸಮಾನ ನಗದು ಬಹುಮಾನ

ಅಂತಾರಾಷ್ಟ್ರೀಯ ಪಂದ್ಯಗಳಲಲಿ ಆಡುವ ಮಹಿಳಾ ಕ್ರಿಕೆಟರ್​​ಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಸಿಹಿ ಸುದ್ದಿ ನೀಡಿದೆ. ಐಸಿಸಿ ಟೂರ್ನಮೆಂಟ್​ಗಳಲ್ಲಿ ಪುರುಷರು ಮತ್ತು ಮಹಿಳಾ ತಂಡಗಳಿಗೆ ಇನ್ಮುಂದೆ ಸಮಾನ ನಗದು ಬಹುಮಾನ ಹಣ ನೀಡುವ ಐತಿಹಾಸಿಕ ಪ್ರಕಟಣೆ ಹೊರಡಿಸಿದೆ.

ಈ ನಿರ್ಧಾರವು ನಮ್ಮ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕ್ಷಣ. ಐಸಿಸಿ ಜಾಗತಿಕ ಟೂರ್ನಿಗಳಲ್ಲಿ ಕಣಕ್ಕಿಳಿಯುವ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳಿಗೆ ಇನ್ಮುಂದೆ ಸಮಾನ ವೇತನ ಸಿಗಲಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ. 2017ರಿಂದಲೂ ಐಸಿಸಿ ಮಹಿಳಾ ಟೂರ್ನಿಗಳಲ್ಲಿ ಸ್ಪಷ್ಟವಾಗಿ ಬಹುಮಾನದ ಮೊತ್ತವನ್ನು ಹೆಚ್ಚಿಸುತ್ತಾ ಬಂದಿದ್ದೇವೆ. ಆದರೆ ಇನ್ಮುಂದೆ ಅದರ ಚಿತ್ರ ಬದಲಾಗಿದೆ ಎಂದು ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ಹೇಳಿದ್ದಾರೆ.

ಐಸಿಸಿ ಟೂರ್ನಮೆಂಟ್​ಗಳಲ್ಲಿ ಪುರುಷರಷ್ಟೇ ಮಹಿಳೆಯರೂ ಸಮಾನ ನಗದು ಬಹುಮಾನ ಪಡೆಯಲಿದ್ದಾರೆ ಎಂಬ ಕ್ರಾಂತಿಕಾರಕ ಘೋಷಣೆಯನ್ನು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಹೊರಡಿಸಿದ್ದಾರೆ. ಆ ಮೂಲಕ ಬಹುಮಾನದ ತಾರತಮ್ಯಕ್ಕೆ ಪೂರ್ಣವಿರಾಮ ಇಡಲು ಮುಂದಾಗಿದ್ದಾರೆ. ಪುರುಷರ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್‌ನಲ್ಲಿ ವಿಜೇತರು, ರನ್ನರ್ ಅಪ್ ಹಾಗೂ ಇತರ ತಂಡಗಳು ಪಡೆಯುತ್ತಿದ್ದ ಬಹುಮಾನದ ಮೊತ್ತವನ್ನೂ ಮಹಿಳಾ ಟೂರ್ನಿಗಳಲ್ಲಿ ತಂಡಗಳಿಗೂ ನೀಡಲು ನಿರ್ಧರಿಸಲಾಗಿದೆ.

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ