ODI World Cup: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಭಾರತ-ಪಾಕಿಸ್ತಾನ ಪಂದ್ಯದ ಕ್ರೇಜ್; ಪ್ರತಿ 10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 30 ಲಕ್ಷ
Jul 27, 2023 01:42 PM IST
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಭಾರತ-ಪಾಕಿಸ್ತಾನ ಪಂದ್ಯದ ಕ್ರೇಜ್
- ODI World Cup 2023: ಭಾರತ-ಪಾಕಿಸ್ತಾನ (India vs Pakistan) ನಡುವಿನ ರೋಚಕ ಪಂದ್ಯದ ಲಾಭ ಪಡೆಯಲು ಪ್ರಸಾರಕರು ಚಿಂತನೆ ನಡೆಸಿದ್ದಾರೆ. ಇಂಡೋ-ಪಾಕ್ ಪಂದ್ಯದ ಲಾಭ ಪಡೆಯಲು ಡಿಸ್ನಿ ಸ್ಟಾರ್ ಸಂಸ್ಥೆಯು (Disney Star) ಯೋಜನೆ ರೂಪಿಸಿದೆ.
ಏಕದಿನ ವಿಶ್ವಕಪ್ ಟೂರ್ನಿ (ODI World Cup 2023) ಆರಂಭಕ್ಕೆ ಇನ್ನೇನು ಎರಡೇ ತಿಂಗಳಷ್ಟೇ ಬಾಕಿ ಉಳಿದಿದೆ. ದಿನಗಳು ಕಳೆದಂತೆಲ್ಲಾ, ರೋಚಕತೆಯೂ ಹೆಚ್ಚಾಗುತ್ತಿದೆ. ಅದರಲ್ಲೂ ಭಾರತ-ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನಕ್ಕೆ ದಿನೆದಿನೇ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಈ ಕ್ರಿಕೆಟ್ ಲೋಕದ ಅತಿದೊಡ್ಡ ಕಾಳಗವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು, ಕಾತರದಿಂದ ಕಾಯುತ್ತಿದ್ದಾರೆ. ಆದರೆ ಪ್ರಸಾರಕರು ಇದನ್ನೇ ಬಂಡವಾಳ ಮಾಡಿಕೊಳ್ಳಲು ಯತ್ನಿಸಿದ್ದಾರೆ.
10 ಸೆಕೆಂಡ್ಗೆ 30 ಲಕ್ಷ
ಹೌದು, ಈ ರೋಚಕ ಪಂದ್ಯದ ಲಾಭ ಪಡೆಯಲು ಪ್ರಸಾರಕರು ಚಿಂತನೆ ನಡೆಸಿದ್ದಾರೆ. ಇಂಡೋ-ಪಾಕ್ ಪಂದ್ಯದ ಲಾಭ ಪಡೆಯಲು ಡಿಸ್ನಿ ಸ್ಟಾರ್ ಸಂಸ್ಥೆಯು ಯೋಜನೆ ರೂಪಿಸಿದೆ. ಅತಿ ದೊಡ್ಡ ಪೈಪೋಟಿ ಪಂದ್ಯವು ಅಕ್ಟೋಬರ್ 15ರಂದು ನಡೆಯಲಿದೆ. ಪಂದ್ಯದ ವೇಳೆ ಪ್ರತಿ 10 ಸೆಕೆಂಡ್ ಜಾಹೀರಾತಿಗೆ ಬರೋಬ್ಬರಿ 30 ಲಕ್ಷ ನಿಗದಿಪಡಿಸಿದೆ ಎಂದು ವರದಿಯಾಗಿದೆ. ಆದರೆ ಭಾರತದ ಉಳಿದ ಪಂದ್ಯಗಳಿಗೆ 10 ಸೆಕೆಂಡ್ಗೆ 10 ಲಕ್ಷಕ್ಕೆ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಇನ್ನು ಆರಂಭಿಕ ಹಂತದಲ್ಲಿ ಇಂಡೋ-ಪಾಕ್ ಪಂದ್ಯದ ಸಂದರ್ಭದಲ್ಲಿ ಪ್ರತಿ 10 ಸೆಕೆಂಡ್ಗೆ 17 ರಿಂದ 18 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು. ಆದರೀಗ ಪಂದ್ಯಕ್ಕೆ ಬೇಡಿಕೆ ದಿನದಿಂದಲೂ ದಿನೇ ಏರಿಕೆ ಕಾಣುತ್ತಿದೆ. ಹಾಗಾಗಿ, ಡಿಸ್ನಿ ಹಾಟ್ಸ್ಟಾರ್ ಇದರ ಲಾಭಕ್ಕೆ ಮುಂದಾಗಿದ್ದು, ಜಾಹೀರಾತಿನ ಮೌಲ್ಯವನ್ನು ಏರಿಸಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾದರೂ ಅಚ್ಚರಿ ಪಡಬೇಕಿಲ್ಲ.
ಪಂದ್ಯದ ದಿನಾಂಕ ಬದಲಾವಣೆ ಸಾಧ್ಯತೆ?
ಸದ್ಯದ ಮಾಹಿತಿ ಇಂಡೋ-ಪಾಕ್ ನಡುವಿನ ಪಂದ್ಯದ ದಿನಾಂಕ ಬದಲಾವಣೆಗೆ ಬಿಸಿಸಿಐ ಮತ್ತು ಐಸಿಸಿ ಚಿಂತನೆ ನಡೆಸಿದೆ. ಅಕ್ಟೋಬರ್ 15ರಂದು ಗುಜರಾತ್ನ ಅಹ್ಮದಾಬಾದ್ನಲ್ಲಿ ನವರಾತ್ರಿ ಆಚರಿಸುವ ಕಾರಣ, ಈ ದಿನಾಂಕದ ಪಂದ್ಯವನ್ನು ಒಂದು ದಿನ ಮುಂಚೆ ನಡೆಸಲು ತೀರ್ಮಾನಿಸಿದೆ. ಅಕ್ಟೋಬರ್ 14ರಂದು ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯ ನಡೆಯುವ ಸಾಧ್ಯತೆ ಇದೆ. ಭದ್ರತಾ ಏಜೆನ್ಸಿಗಳು ನೀಡಿರುವ ಮಾಹಿತಿಯಂತೆ ಭದ್ರತಾ ಸಮಸ್ಯೆ ಕಾಣಿಸಿಕೊಳ್ಳುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ.
ಸಾಕಷ್ಟು ನಷ್ಟ, ಅಭಿಮಾನಿಗಳಿಗೆ ತೊಂದರೆ!
ಸಾಂಪ್ರದಾಯಿಕ ಎದುರಾಳಿ ತಂಡವನ್ನು ಕಾದಾಟ ಕಣ್ತುಂಬಿಕೊಳ್ಳಲು, ಅಭಿಮಾನಿಗಳು ಹೋಟೆಲ್ಸ್, ವಿಮಾನ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ಆದರೆ ಪಂದ್ಯ ಬದಲಾವಣೆಯಾದರೆ, ಅಭಿಮಾನಿಗಳಿಗೆ ಸಾಕಷ್ಟು ನಷ್ಟ ಆಗಲಿದೆ. ಅಲ್ಲದೆ, ಇದು ಹೋಟೆಲ್ ಉದ್ಯಮಕ್ಕೂ ಹೊಡೆತ ಬೀಳಲಿದೆ. ಒಂದು ವೇಳೆ ಪಂದ್ಯವನ್ನು ಸ್ಥಳಾಂತರ ಮಾಡಿದರೆ, ಬಿಸಿಸಿಐಗೂ ನಷ್ಟ ತಪ್ಪಿದ್ದಲ್ಲ. ನರೇಂದ್ರ ಮೋದಿ ಮೈದಾನದಲ್ಲಿ 1.30 ಲಕ್ಷ ಪ್ರೇಕ್ಷಕರು ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು. ಆದರೆ ಪಂದ್ಯದ ಬದಲಾವಣೆ ಆದರೆ, ಲಾಭದ ನಿರೀಕ್ಷೆಯಲ್ಲಿದ್ದ ಬಿಸಿಸಿಐಗೂ ನಷ್ಟದ ಬಿಸಿ ತಟ್ಟಲಿದೆ.
10 ಸ್ಟೇಡಿಯಂಗಳಲ್ಲಿ ಪಂದ್ಯಗಳು
ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಪ್ರಮಾಣದಲ್ಲಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಇದಕ್ಕೂ ಮುನ್ನ ನೆರೆಯ ದೇಶಗಳ ಜಂಟಿ ಆಯೋಜನೆಯೊಂದಿಗೆ ಆತಿಥ್ಯ ವಹಿಸಿತ್ತು. ದೇಶದ 10 ಸ್ಟೇಡಿಯಂಗಳಲ್ಲಿ ಟೂರ್ನಿ ಜರುಗಲಿದೆ. 46 ದಿನಗಳ ಕಾಲ ಜರುಗಲಿರುವ ಮೆಗಾ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಫೈನಲ್ ಸೇರಿ 48 ಪಂದ್ಯಗಳು ನಡೆಯಲಿವೆ.
ಇಂದು ಸಭೆ
ಏಕದಿನ ವಿಶ್ವಕಪ್ ಸಿದ್ಧತೆಯ ಭಾಗವಾಗಿ ಮತ್ತು ಇಂಡೋ-ಪಾಕ್ ಪಂದ್ಯದ ಆಯೋಜನೆಗೆ ಸಂಬಂಧಿಸಿ ಬದಲಾವಣೆ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah), ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುವ ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜುಲೈ 27ರಂದು ಅಂದರೆ ಇಂದು ಸಭೆ ನಡೆಸಲಿದ್ದಾರೆ. ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸುತ್ತಿರುವ ಪ್ರತಿ ರಾಜ್ಯ ಕ್ರಿಕೆಟ್ ಸಂಸ್ಥೆಗೆ 50 ಕೋಟಿ ಅನುದಾನ ನೀಡುತ್ತಿದೆ.