ODI World Cup 2023: ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಅಕ್ಟೋಬರ್ 15ರ ಬದಲಿಗೆ ಈ ದಿನ ನಡೆಯಲಿದೆ ಇಂಡೋ-ಪಾಕ್ ಪಂದ್ಯ
Jul 26, 2023 02:05 PM IST
ಭಾರತ-ಪಾಕಿಸ್ತಾನ ಪಂದ್ಯದ ದಿನಾಂಕದಲ್ಲಿ ಬದಲಾವಣೆ
- ODI World Cup 2023: ಅಕ್ಟೋಬರ್ 15ರಂದು ಕ್ರಿಕೆಟ್ ಲೋಕದ ಅತಿದೊಡ್ಡ ಕಾಳಗವೆಂದೇ ಬಿಂಬಿತವಾಗಿರುವ ಇಂಡೋ-ಪಾಕ್ ಪಂದ್ಯಕ್ಕೆ (India vs Pakistan) ದಿನಾಂಕ ನಿಗದಿಯಾಗಿತ್ತು. ಆದರೀಗ ಈ ಪಂದ್ಯದ ದಿನಾಂಕ ಬದಲಾಗುವ ನಿರೀಕ್ಷೆ ಇದೆ.
ನಾಲ್ಕು ವರ್ಷಗಳಿಗೊಮ್ಮೆ ಬರುವ ಕ್ರಿಕೆಟ್ ಮಹಾಸಂಗ್ರಾಮ ಏಕದಿನ ವಿಶ್ವಕಪ್ ಟೂರ್ನಿಗೆ (ODI World Cup 2023) ಈಗಾಗಲೇ ವೇಳಾಪಟ್ಟಿ ಬಿಡುಗಡೆಯಾಗಿದೆ. ಆತಿಥ್ಯ ವಹಿಸಿರುವ ಭಾರತವು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಆದರೆ, ವಿಶ್ವಕಪ್ಗೆ ಇನ್ನೆರಡು ತಿಂಗಳು ಇರುವಾಗ ವೇಳಾಪಟ್ಟಿ ಬದಲಾವಣೆಯಾಗುವ ಸಾಧ್ಯತೆಗಳಿರುವ ಕುರಿತು ವರದಿಯಾಗಿದೆ. ಅಕ್ಟೋಬರ್ 15ರಂದು ಕ್ರಿಕೆಟ್ ಲೋಕದ ಅತಿದೊಡ್ಡ ಕಾಳಗವೆಂದೇ ಬಿಂಬಿತವಾಗಿರುವ ಇಂಡೋ-ಪಾಕ್ ಪಂದ್ಯಕ್ಕೆ (India vs Pakistan) ದಿನಾಂಕ ನಿಗದಿಯಾಗಿತ್ತು. ಆದರೀಗ ಈ ಪಂದ್ಯದ ದಿನಾಂಕ ಬದಲಾಗುವ ನಿರೀಕ್ಷೆ ಇದೆ.
ಕಾರಣ ಹೀಗಿದೆ
ಸದ್ಯ ಮೆಗಾ ಟೂರ್ನಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಬಿಸಿಸಿಐ ಸಾಕಷ್ಟು ಯೋಜನೆ ರೂಪಿಸಿದೆ. ಆದರೆ, ಇಂಡಿಯನ್ ಎಕ್ಸ್ಪ್ರೆಸ್ ವರದರಿಯಂತೆ ಅ. 15ರಂದು ಅಹ್ಮದಾಬಾದ್ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ (India vs Pakistan) ಮಧ್ಯೆಯ ಹೈವೋಲ್ಟೇಜ್ ಪಂದ್ಯದ ದಿನಾಂಕ ಬದಲಾಗಬಹುದು. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಫೈಟ್ ಪಂದ್ಯದ ದಿನಾಂಕ ಬದಲಾಗಲು ಇದಕ್ಕೆ ಕಾರಂಣವೂ ಇದೆ. ಹೌದು, ಈ ಪಂದ್ಯದ ದಿನದಂದೇ ನವರಾತ್ರಿ ಆರಂಭವಾಗಲಿದೆ.
ನವರಾತ್ರಿಯನ್ನು ಉತ್ತರ ಭಾರತದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲೂ ಗುಜರಾತ್ನಲ್ಲಿ ಇನ್ನೂ ಹೆಚ್ಚು. ಸಂಭ್ರಮ, ಸಡಗರದಿಂದ ಆಚರಿಸುವ ಆ ದಿನದಂದು ರಾತ್ರಿಯಿಡೀ ಗಾರ್ಬಾ ನೃತ್ಯದ ಮೂಲಕ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ, ಭದ್ರತಾ ಹಿನ್ನೆಲೆಯಲ್ಲೂ ಕೊಂಚ ಹಿನ್ನೆಡೆಯಾಗಿದೆ. ಏಕೆಂದರೆ, ಹಬ್ಬದ ದಿನದಂದೇ ಹೈವೋಲ್ಟೇಜ್ ಪಂದ್ಯ ನಡೆದರೆ, ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಹಬ್ಬವನ್ನು ರಾತ್ರಿಯಿಡೀ ಆಚರಿಸಲಾಗುತ್ತದೆ. ಹಾಗಾಗಿ ಅಕ್ಟೋಬರ್ 15ರಂದು ನಿಗದಿಯಾಗಿದ್ದ ಪಂದ್ಯವನ್ನು ಅಕ್ಟೋಬರ್ 14ರಂದು ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಅದೇ ಮೈದಾನದಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭದ್ರತೆಯೇ ಸಮಸ್ಯೆ
ಜೊತೆಗೆ ಪಂದ್ಯ ನಡೆದರೆ ಆ ಪಂದ್ಯಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಬರುತ್ತಾರೆ. ಒಂದೆಡೆ ಹಬ್ಬ, ಮತ್ತೊಂದೆಡೆ ಪಂದ್ಯ, ಹಾಗೆಯೇ ಪ್ರೇಕ್ಷಕರು. ಹಾಗಾಗಿ ಭದ್ರತಾ ವಿಚಾರದಲ್ಲಿ ಸಮಸ್ಯೆ ಹೆಚ್ಚು ಉಂಟಾಗುತ್ತದೆ. ಭದ್ರತಾ ಸಂಸ್ಥೆಗಳು ಬಿಸಿಸಿಐಗೆ ತಿಳಿಸಿವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಾಗಿ, ಈ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಬಿಸಿಸಿಐ ಸೇರಿ ಅನೇಕರಿಗೆ ನಷ್ಟ
ಇಂಡೋ-ಪಾಕ್ ಪಂದ್ಯವನ್ನು ಮರು ನಿಗದಿಪಡಿಸಿದ್ದೇ ಆದರೆ, ಈಗಾಗಲೇ ಟಿಕೆಟ್ ಖರೀದಿಸಿರುವ ಅಭಿಮಾನಿಗಳಿಗೆ ಸಮಸ್ಯೆಯಾಗುತ್ತದೆ. ಪಂದ್ಯಕ್ಕಾಗಿ ಮುಂಗಡ ಬುಕಿಂಗ್ ಆಗಿರುವ ಹೋಟೆಲ್ಗಳಿಗೂ ನಷ್ಟವಾಗಲಿದೆ. ಇದು ಜಾಹೀರಾತುದಾರರಿಗೂ ಹೊಡೆತ ಬೀಳಲಿದೆ. ಜೊತೆಗೆ ಪ್ರಸಾರಕರ ಟಿಆರ್ಪಿಗೂ ಹೊಡೆತ ಬೀಳಲಿದೆ. ಇದಿಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೂ ನಾಂದಿ ಹಾಡುತ್ತದೆ.
ಬಿಸಿಸಿಐಗೂ ಸಾಕಷ್ಟು ನಷ್ಟವಾಗಲಿದೆ. ನರೇಂದ್ರ ಮೋದಿ ಮೈದಾನವು ದೊಡ್ಡದಾಗಿತ್ತು. 1.30 ಲಕ್ಷ ಪ್ರೇಕ್ಷಕರು ಏಕಕಾಲಕ್ಕೆ ಪಂದ್ಯವನ್ನು ವೀಕ್ಷಿಸಬಹುದು. ಹಾಗಾಗಿ ಇಂಡೋ-ಪಾಕ್ ಪಂದ್ಯವನ್ನು ಈ ಸ್ಟೇಡಿಯಂನಲ್ಲಿ ನಿಗದಿ ಮಾಡಲಾಗಿತ್ತು. ಇದರಿಂದ ಉತ್ತಮ ಲಾಭದ ನಿರೀಕ್ಷೆಯಲ್ಲೂ ಇತ್ತು. ಆದರೀಗ ಬಿಸಿಸಿಐ ಕನಸಿಗೆ ಕೊಳ್ಳಿ ಬಿದ್ದಿದೆ. ಈ ಪಂದ್ಯವಷ್ಟೇ ಅಲ್ಲ, ಪ್ರಮುಖ ಹೈವೋಲ್ಟೇಜ್ ಪಂದ್ಯಗಳನ್ನೂ ಇದೇ ಮೈದಾನದಲ್ಲಿ ಆಯೋಜಿಸಿತ್ತು. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳೂ ಈ ಮೈದಾನದಲ್ಲಿ ಸೆಣಸಾಟ ನಡೆಸಲಿವೆ. ಇದರ ಲಾಭ ಪಡೆಯುವುದು ಬಿಸಿಸಿಐ ಗುರಿಯಾಗಿತ್ತು.
ನಾಳೆ ಸಭೆ
ಸದ್ಯ ದೊಡ್ಡ ಸಮಸ್ಯೆಗೆ ಸಿಲುಕಿರುವ ಬಿಸಿಸಿಐ, ಸಭೆ ಮೇಲೆ ಸಭೆ ನಡೆಸುತ್ತಿದೆ. ಇದೀಗ ಜುಲೈ 27ರಂದು ದೆಹಲಿಯಲ್ಲಿ ಮತ್ತೊಂದು ದೊಡ್ಡ ಸಭೆ ಸೇರಲು ನಿರ್ಧರಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ವಿಶ್ವಕಪ್ ಆಯೋಜನೆಯ ಎಲ್ಲಾ ಮೈದಾನಗಳ ಸದಸ್ಯರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂಡೋ-ಪಾಕ್ ಪಂದ್ಯದ ಆಯೋಜನೆಗೆ ಸಂಬಂಧಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.