logo
ಕನ್ನಡ ಸುದ್ದಿ  /  ಕ್ರೀಡೆ  /  Rashid Latif On Arjun: ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಶೈಲಿಯನ್ನು ಮತ್ತೆ ಟೀಕಿಸಿದ ಪಾಕಿಸ್ತಾನದ ಮಾಜಿ ನಾಯಕ

Rashid Latif on Arjun: ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಶೈಲಿಯನ್ನು ಮತ್ತೆ ಟೀಕಿಸಿದ ಪಾಕಿಸ್ತಾನದ ಮಾಜಿ ನಾಯಕ

HT Sports Desk HT Kannada

Apr 25, 2023 07:00 AM IST

google News

ಅರ್ಜುನ್‌ ತೆಂಡೂಲ್ಕರ್

    • ಅರ್ಜುನ್ ಬೌಲಿಂಗ್ ಶೈಲಿಯನ್ನು ಕಟುವಾಗಿ ಟೀಕಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ತಂದೆಯ ಸಲಹೆಯನ್ನು ಅನುಸರಿಸುವ ಮೂಲಕ ಬೌಲಿಂಗ್‌ ಸುಧಾರಿಸುವಂತೆ ಸಚಿನ್ ಮಗನನ್ನು ಒತ್ತಾಯಿಸಿದ್ದಾರೆ.
ಅರ್ಜುನ್‌ ತೆಂಡೂಲ್ಕರ್
ಅರ್ಜುನ್‌ ತೆಂಡೂಲ್ಕರ್ (PTI)

ಅರ್ಜುನ್ ತೆಂಡೂಲ್ಕರ್ ವಿರುದ್ಧ ಅತಿರೇಕದ ಹೇಳಿಕೆ ನೀಡಿದ ಬೆನ್ನಲ್ಲೇ, ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ (Rashid Latif) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2023ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ (MI) ಪರ ಆಡುತ್ತಿರುವ ಆಲ್ ರೌಂಡರ್ ಬೌಲಿಂಗ್ ಶೈಲಿಯನ್ನು ಪಾಕ್‌ ಕ್ರಿಕೆಟಿಗ ಮತ್ತೊಮ್ಮೆ ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ ಸುಧಾರಿಸಲು ಕೆಲವೊಂದು ಸಲಹೆಯನ್ನು ನೀಡಿದ್ದಾರೆ.

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್, ಇತ್ತೀಚೆಗಷ್ಟೇ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡದ ಪರ ವಿಶ್ವದ ಶ್ರೀಮಂತ ಟಿ20 ಪಂದ್ಯಾವಳಿಗೆ ಪದಾರ್ಪಣೆ ಮಾಡಿದರು.

ಅರ್ಜುನ್ ಅವರ ಪ್ರದರ್ಶನವು ಈಗಾಗಲೇ ಐಪಿಎಲ್‌ನಲ್ಲಿ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಕೊನೆಯ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ರನ್‌ ಸೋರಿಕೆಯಾಗಿದ್ದರೂ, ಅವರ ಬೌಲಿಂಗ್‌ ಹಲವರ ಮೆಚ್ಚುಗೆಗೆ ಕಾರಣವಾಗಿದೆ. ಈ ನಡುವೆ ಪಾಕಿಸ್ತಾನದ ಮಾಜಿ ನಾಯಕ ಲತೀಫ್, ಮುಂಬೈ ಇಂಡಿಯನ್ಸ್ ಯುವ ಆಟಗಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅರ್ಜುನ್ ಬೌಲಿಂಗ್ ಕುರಿತು ತಮ್ಮ ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ಸದ್ಯ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅರ್ಜುನ್ ಅವರ ಬೌಲಿಂಗ್ ಶೈಲಿಯನ್ನು ಕಟುವಾಗಿ ಟೀಕಿಸಿರುವ ಪಾಕಿಸ್ತಾನದ ಮಾಜಿ ವಿಕೆಟ್‌ ಕೀಪರ್ ಹಾಗೂ ಬ್ಯಾಟರ್, ತಂದೆಯ ಸಲಹೆಯನ್ನು ಅನುಸರಿಸುವ ಮೂಲಕ ಅರ್ಜುನ್‌ ಬೌಲಿಂಗ್‌ ಕುರಿತಾಗಿ ಕೆಲಸ ಮಾಡಲು ಸಚಿನ್ ಮಗನನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಫೋಟೋ ಸಮೇತ ವಿವರಿಸಿರುವ ಅವರು, “ಕೆಳಗಿನ ಹಂತಗಳನ್ನು ಸುಧಾರಿಸಬೇಕಾಗಿದೆ. ಅವನು ಇನ್ನೂ ತುಂಬಾ ಚಿಕ್ಕವನು. ಆದ್ದರಿಂದ ಅವನು ಈ ಅಂಶಗಳ ಮೇಲೆ ಕೆಲಸ ಮಾಡಬಹುದು” ಎಂದು ಲತೀಫ್ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಅರ್ಜುನ್ ಕುರಿತಾಗಿ ಲತೀಫ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೂ ಮೊದಲು ಅರ್ಜುನ್‌ ಬಗ್ಗೆ ಮಾತನಾಡಿದ್ದ ಅವರು, ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ತನ್ನ ವೃತ್ತಿಜೀವನದ ಆರಂಭಿಕ ಹಂತದಲ್ಲಿರುವುದರಿಂದ ಬಯೋಮೆಕಾನಿಕಲ್ ತಜ್ಞರು ಅರ್ಜುನ್‌ಗೆ ಸಹಾಯ ಮಾಡಬಹುದು ಎಂದು ಪ್ರತಿಪಾದಿಸಿದ್ದರು. "ಅವನು ಇನ್ನೂ ಆರಂಭಿಕ ಹಂತದಲ್ಲಿದ್ದಾನೆ. ಅವನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು. ಅವನ ಹೊಂದಾಣಿಕೆ ಉತ್ತಮವಾಗಿಲ್ಲ. ವೇಗವನ್ನು ಹೆಚ್ಚಿಸಲು ಅವನಿಂದ ಆಗುತ್ತಿಲ್ಲ ಎಂದು ಲತೀಫ್ ಹೇಳಿದ್ದರು.

ಪಂಜಾಬ್ ಕಿಂಗ್ಸ್ (PBKS) ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ, ಸಚಿನ್ ಅವರ ಮಗ ಅರ್ಜುನ್ ಪಂದ್ಯಾವಳಿಯ ಜಂಟಿ ಅತ್ಯಂತ ದುಬಾರಿ ಓವರ್ ಅನ್ನು ಬೌಲಿಂಗ್‌ ಮಾಡಿದರು. ಆ ಮೂಲಕ ಅನಗತ್ಯ ದಾಖಲೆ ರಚಿಸಿದರು. 16ನೇ ಓವರ್‌ ಎಸೆದ ಅರ್ಜುನ್, ಪಂಜಾಬ್‌ ಸ್ಟಾರ್‌ಗಳಾದ ಸ್ಯಾಮ್ ಕರನ್ ಮತ್ತು ಹರ್‌ಪ್ರೀತ್ ಭಾಟಿಯಾ ಬ್ಯಾಟಿಂಗ್‌ನಿಂದಾಗಿ 31 ರನ್‌ಗಳನ್ನು ಬಿಟ್ಟುಕೊಟ್ಟರು. ಐಪಿಎಲ್‌ನ 2023ರ ಆವೃತ್ತಿಯಲ್ಲಿ ಇದು ಎರಡನೇ ಅತ್ಯಂತ ದುಬಾರಿ ಓವರ್. ಗುಜರಾತ್ ಟೈಟಾನ್ಸ್ (ಜಿಟಿ) ವೇಗಿ ಯಶ್ ದಯಾಲ್ ಇತ್ತೀಚೆಗೆ ಇಷ್ಟೇ ಸಂಖ್ಯೆಯ ರನ್‌ ಬಿಟ್ಟುಕೊಟ್ಟಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ