Dipa Karmakar: ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಾಕರ್ ನಿವೃತ್ತಿ; ಇವರ ಸಾಧನೆಗೆ ನಮ್ಮದೊಂದು ಸಲಾಂ
Oct 08, 2024 11:19 AM IST
ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಸಾಧನೆ
- Dipa Karmakar Retirement: ತ್ರಿಪುರಾದ ದೀಪಾ ಕರ್ಮಾಕರ್ ಭಾರತದ ಅಗ್ರ ಜಿಮ್ನಾಸ್ಟ್‌ಗಳಲ್ಲಿ ಒಬ್ಬರು. ಒಲಂಪಿಕ್ಸ್ ಜೊತೆಗೆ ಹಲವು ದೊಡ್ಡ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. 2018ರಲ್ಲಿ ಅವರು ಟರ್ಕಿಯ ಮರ್ಸಿನ್‌ನಲ್ಲಿ ನಡೆದ FIG ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನ ವಾಲ್ಟ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ಅದು 2016ರ ರಿಯೊ ಒಲಿಂಪಿಕ್ಸ್. ಬಹುಶಃ ಅಂದು ಮೊಟ್ಟ ಮೊದಲ ಬಾರಿಗೆ ಭಾರತೀಯರು ಜಿಮ್ನಾಸ್ಟಿಕ್ಸ್ ಅನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಅಂದಿಗೆ ನಮ್ಮ ಆಟಗಾರರು ಹಾಕಿ, ಕುಸ್ತಿ ಮತ್ತು ಬಾಕ್ಸಿಂಗ್‌ನಲ್ಲಿ ಮಾತ್ರ ಪದಕಗಳನ್ನು ಗೆಲ್ಲುತ್ತಿದ್ದರು. ಆದರೆ ಮೊದಲ ಬಾರಿಗೆ ಜಿಮ್ನಾಸ್ಟಿಕ್ಸ್‌ನಲ್ಲಿ ಪದಕದ ಭರವಸೆ ಇತ್ತು. ಇದಕ್ಕೆ ಕಾರಣರಾದವರು ದೀಪಾ ಕರ್ಮಾಕರ್. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಇವರು. ಆದರೆ, ಇದೀಗ ಇವರು ಕೇವಲ 31ನೇ ವಯಸ್ಸಿನಲ್ಲಿ ಅಚ್ಚರಿ ಎಂಬಂತೆ ನಿವೃತ್ತಿ ಘೋಷಿಸಿದ್ದಾರೆ.
ಈ ಮಾಹಿತಿಯನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಈ ವರ್ಷವೇ, ದೀಪಾ ಕರ್ಮಾಕರ್ ಏಷ್ಯನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಜಿಮ್ನಾಸ್ಟ್ ಕೂಡ ಆಗಿದ್ದರು. ರಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ದೀಪಾ, ಕೂದಲೆಳೆ ಅಂತರದಿಂದ ಕಂಚಿನ ಪದಕದಿಂದ ವಂಚಿತರಾಗಿದ್ದರು. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಿಮ್ನಾಸ್ಟಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
“ಸಾಕಷ್ಟು ಯೋಚಿಸಿದ ನಂತರ ನಾನು ಸ್ಪರ್ಧಾತ್ಮಕ ಜಿಮ್ನಾಸ್ಟಿಕ್ಸ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ಸುಲಭದ ನಿರ್ಧಾರವಲ್ಲ. ಆದರೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಜಿಮ್ನಾಸ್ಟಿಕ್ಸ್ ನನ್ನ ಜೀವನದ ಒಂದು ದೊಡ್ಡ ಭಾಗವಾಗಿದೆ ಮತ್ತು ಪ್ರತಿ ಕ್ಷಣಕ್ಕೂ ನಾನು ಕೃತಜ್ಞಳಾಗಿದ್ದೇನೆ,” ಎಂದು ಅವರು ಬರೆದುಕೊಂಡಿದ್ದಾರೆ.
ದೀಪಾ ಅವರ ಸಾಧನೆ:
- 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ವಾಲ್ಟ್ ಫೈನಲ್‌ನಲ್ಲಿ ದೀಪಾ ಕಂಚಿನ ಪದಕ ಗೆದ್ದಿದ್ದರು.
- ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- ಅಷ್ಟೇ ಅಲ್ಲ, 2015ರಲ್ಲಿ ಹಿರೋಷಿಮಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
- ಅವರು 2015 ರ ವರ್ಲ್ಡ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5 ನೇ ಸ್ಥಾನ ಪಡೆದರು.
ಗಾಯ ಮತ್ತು ಅಮಾನತು:
ಇತ್ತೀಚೆಗೆ ದೀಪಾ ಅವರು ಇಂಜುರಿ ಮತ್ತು ಡೋಪಿಂಗ್ ಅಮಾನತು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು. ಅವರು ಎರಡು ಬಾರಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಕೂಡ ಅವರನ್ನು 21 ತಿಂಗಳ ಕಾಲ ಅಮಾನತುಗೊಳಿಸಿದೆ. ಇದಾದ ನಂತರ ದೀಪಾ ಅದ್ಭುತ ಪುನರಾಗಮನ ಮಾಡಿದರು. ಮೇ 2024 ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಮಹಿಳೆಯರ ವಾಲ್ಟ್ ಈವೆಂಟ್‌ನಲ್ಲಿ 13.566 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯುವ ಮೂಲಕ ದೀಪಾ ಏಷ್ಯನ್ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಜಿಮ್ನಾಸ್ಟ್ ಎನಿಸಿಕೊಂಡರು.
ತ್ರಿಪುರಾದ ದೀಪಾ ಕರ್ಮಾಕರ್ ಭಾರತದ ಅಗ್ರ ಜಿಮ್ನಾಸ್ಟ್‌ಗಳಲ್ಲಿ ಒಬ್ಬರು. ಒಲಂಪಿಕ್ಸ್ ಜೊತೆಗೆ ಹಲವು ದೊಡ್ಡ ಕಾರ್ಯಕ್ರಮಗಳಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. 2018ರಲ್ಲಿ, ಅವರು ಟರ್ಕಿಯ ಮರ್ಸಿನ್‌ನಲ್ಲಿ ನಡೆದ FIG ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನ ವಾಲ್ಟ್ ಸ್ಪರ್ಧೆಯಲ್ಲಿ ದೇಶಕ್ಕಾಗಿ ಚಿನ್ನದ ಪದಕವನ್ನು ಗೆದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.