ಒಲಿಂಪಿಕ್ಸ್‌ನಲ್ಲಿ ಲಿಂಗ ವಿವಾದ; ಮಹಿಳಾ ಶಾಟ್‌ಪುಟ್‌ನಲ್ಲಿ ಅಮೆರಿಕದ ತೃತೀಯ ಲಿಂಗಿ ಭಾಗಿ, ವೀಕ್ಷಕ ವಿವರಣೆಕಾರ ಗೊಂದಲ
Aug 09, 2024 01:17 PM IST
ಒಲಿಂಪಿಕ್ಸ್‌ನಲ್ಲಿ ಲಿಂಗ ವಿವಾದ; ಮಹಿಳಾ ಶಾಟ್‌ಪುಟ್‌ನಲ್ಲಿ ಅಮೆರಿಕದ ತೃತೀಯ ಲಿಂಗಿ ಭಾಗಿ
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ತೃತೀಯ ಲಿಂಗ್ ಶಾಟ್ ಪುಟ್ ಆಟಗಾರರೊಬ್ಬರು ಭಾಗಿಯಾಗಿದ್ದಾರೆ. ಟೊಕಿಯೋ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದ ರಾವೆನ್ ಸಾಂಡರ್ಸ್, ಮೈದಾನಲ್ಲಿ ಕಾಣಿಸಿಕೊಂಡಾಗ ವೀಕ್ಷಕ ವಿವರಣೆಕಾರರು ಕೂಡಾ ಅವರನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಮತ್ತೊಮ್ಮೆ ಲಿಂಗ ವಿವಾದ ಎದ್ದಿದೆ. ಮಹಿಳೆಯರ ಶಾಟ್‌ಪುಟ್‌ನಲ್ಲಿ ತೃತೀಯ ಲಿಂಗಿ ಸ್ಪರ್ಧಿಸಿದ್ದು ವೀಕ್ಷಕವಿವರಣೆಕಾರರಿಗೆ ಗೊಂದಲ ಮೂಡಿಸಿದೆ. ಅಮೆರಿಕದ ಶಾಟ್ ಪುಟ್ ಕ್ರೀಡಾಪಟುವನ್ನು ಪರಿಚಯಿಸುವಾಗ, ವೀಕ್ಷಕ ವಿವರಣೆಕಾರ ಅವರ ಲಿಂಗವನ್ನು ತಪ್ಪಾಗಿ ಹೇಳಿದ್ದಾರೆ. ನೇರ ಪ್ರಸಾರದಲ್ಲಿಯೇ ಈ ತಪ್ಪು ತಿಳಿದುಬಂದಿದೆ. ಅಮೆರಿಕದ ತೃತೀಯ ಲಿಂಗಿ ಕ್ರೀಡಾಪಟು ರಾವೆನ್ ಸಾಂಡರ್ಸ್ ಅವರನ್ನು ಸ್ವಾಗತಿಸುವ ವೇಳೆ ಸರ್ವನಾಮ ಪದಗಳನ್ನು ತಪ್ಪಾಗಿ ಹೇಳಲಾಗಿದೆ. ಬಳಿಕ ಕಾಮೆಂಟೇಟರ್ ವಾಕ್ಯವನ್ನು ಸಹ ನಿರೂಪಕರು ನೇರ ಪ್ರಸಾರದಲ್ಲಿ ಸರಿಪಡಿಸಿದ್ದಾರೆ.
ಅಮೆರಿಕದ ತೃತೀಯ ಲಿಂಗಿ ಕ್ರೀಡಾಪಟುವಾದ 28 ವರ್ಷದ ರಾವೆನ್ ಸಾಂಡರ್ಸ್ ಅವರು, ಮಹಿಳೆಯರ ಶಾಟ್‌ಪುಟ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ತೃತೀಯ ಲಿಂಗಿ ಕ್ರೀಡಾಪಟುವನ್ನು ಸರ್ವನಾಮ ಬಳಸಿ ಹೇಳುವಾಗ "ಅವರು" ಎಂದು ಹೇಳಬೇಕಿತ್ತು. ಇವರು ತೃತೀಯ ಲಿಂಗಿ ಆಗಿದ್ದರೂ ಅವರನ್ನು ಅವನು ಅಥವಾ ಅವಳು ಎಂದು ಹೇಳುವಂತಿಲ್ಲ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಮಹಿಳಾ ಶಾಟ್ ಪುಟ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ರಾವೆನ್ ಸಾಂಡರ್ಸ್ ಮೈದಾನದಲ್ಲಿ ಕಾಣಿಸಿಕೊಂಡರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸಾಂಡರ್ಸ್, ಮಾಸ್ಕ್ ಧರಿಸಿ ಆಡಲು ಸಜ್ಜಾಗಿ ಬಂದಿದ್ದರು. ಇವರು ಟಿವಿ ಪರದೆಗಳಲ್ಲಿ ಕಾಣಿಸಿಕೊಂಡಾಗ ಬಿಬಿಸಿ ಮಾಧ್ಯಮದ ಒಲಿಂಪಿಕ್ಸ್ ವೀಕ್ಷಕವಿವರಣೆಕಾರ ಸ್ಟೀವ್ ಬ್ಯಾಕ್ಲಿ ಅವರು, ಸಾಂಡರ್ಸ್ ಅವರನ್ನು “ಅವಳು” ಎಂದು ತಪ್ಪಾಗಿ ಉಚ್ಛರಿಸಿದ್ದಾರೆ. ಈ ಕುರಿತು ಡೆಡ್‌ಲೈನ್ ವರದಿ ಮಾಡಿದೆ.
ಲೈವ್‌ನಲ್ಲೇ ಸ್ಪಷ್ಟನೆ ಕೊಟ್ಟ ಸಹ ನಿರೂಪಕಿ
“ರಾವೆನ್ ಸಾಂಡರ್ಸ್ ಅವರ ವರ್ಣರಂಜಿತ ವ್ಯಕ್ತಿತ್ವ ಮತ್ತೆ ಒಲಿಂಪಿಕ್ಸ್‌ಗೆ ಹಿಂತಿರುಗಿದೆ. ಅವಳನ್ನು ಮತ್ತೊಮ್ಮೆ ನೋಡಲು ಖುಷಿಯಾಗುತ್ತಿದೆ,” ಎಂದು ಸಾಂಡರ್ಸ್ ಅವರ ಕುರಿತು ಬ್ಯಾಕ್ಲಿ ಹೇಳಿದ್ದಾರೆ. ಆಟದ ವೇಳೆ ಸಾಂಡರ್ಸ್ ಮಾಸ್ಕ್ ಹಾಕಿದ್ದರಿಂದ ಅವರು ಮುಖ ಕಾಣಸುತ್ತಿರಲಿಲ್ಲ. ಹೀಗಾಗಿ ವೀಕ್ಷಕ ವಿವರಣೆಕಾರ ಬ್ಯಾಕ್ಲಿ ಅವರನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು.
ಅಮೆರಿಕದ ತೃತೀಯ ಲಿಂಕಿ ಅಥ್ಲೀಟ್ ಅನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ ಸಹ ನಿರೂಪಕಿಯಾಗಿದ್ದ ಜಾಜ್ಮಿನ್ ಸಾಯರ್ಸ್ ಅವರು ಬ್ಯಾಕ್ಲಿ ಅವರನ್ನು ನೇರಪ್ರಸಾರದಲ್ಲಿಯೇ ಸರಿಪಡಿಸಿದ್ದಾರೆ. ಅವಳು ಎಂಬ ಪದದ ಬದಲಿಗೆ ಅವರು ಎಂದು ಬಳಸಿ, ಸಹ ನಿರೂಪಕನನ್ನು ತಿದ್ದಿದ್ದಾರೆ.
“ನಾವು ಅವರನ್ನು ಸರಿಯಾಗಿ ನೋಡಲು ಸಾಧ್ಯವಿಲ್ಲ. ರಾವೆನ್ ಸಾಂಡರ್ಸ್ ವಾಸ್ತವವಾಗಿ ತೃತೀಯ ಲಿಂಗಿ ಕ್ರೀಡಾಪಟು. ಇಲ್ಲಿ ಮಾಸ್ಕ್ ಧರಿಸಿ ಆಡುತ್ತಿದ್ದಾರೆ. ನಾವು ಅವರನ್ನು ಸಾಮಾನ್ಯವಾಗಿ ಇಂಥಾ ಆಸಕ್ತಿದಾಯಕ ಉಡುಗೆಯೊಂದಿಗೆ ನೋಡುತ್ತೇವೆ” ಎಂದು ಸಾಯರ್ಸ್ ಉತ್ತರಿಸಿದ್ದಾರೆ. ಈ ದೃಶ್ಯದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಿಂಗ ಗುರುತಿನ ಬಗ್ಗೆ ಭಾರಿ ಚರ್ಚೆ ವ್ಯಕ್ತವಾಗಿದೆ.
ಮಹಿಳೆಯರ ಸ್ಪರ್ಧೆಯಲ್ಲಿ ತೃತೀಯ ಲಿಂಗಿಗಳು ಭಾಗಿ ಯಾಕೆ?
ಇದೇ ವೇಳೆ ತೃತೀಯ ಲಿಂಗಿ ಕ್ರೀಡಾಪಟು ಮಹಿಳೆಯರ ಕ್ರೀಡೆಯಲ್ಲಿ ಸ್ಪರ್ಧಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಕೂಡಾ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. "ಮಹಿಳೆ ಅಲ್ಲದಿದ್ದರೆ ಒಲಿಂಪಿಕ್ಸ್ ಮಹಿಳಾ ಶಾಟ್ ಪುಟ್‌ನಲ್ಲಿ ಅವರು ಏಕೆ ಭಾಗಿಯಾಗಿದ್ದಾರೆ?" ಎಂದು ಎಕ್ಸ್ ಬಳಕೆದಾರ ಜೇಮ್ಸ್ ಎಸ್ಸೆಸ್ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಕೂಡಾ ವೈರಲ್ ಆಗಿದೆ.
"ಅವರು ಆನುವಂಶಿಕವಾಗಿ ಅಥವಾ ಹುಟ್ಟಿನಿಂದ ಮಹಿಳೆಯಾಗಿದ್ದ ಕಾರಣದಿಂದಾಗಿ, ಈಗ ಅವರು ತೃತೀಯ ಲಿಂಗಿ ಎಂದು ಗುರುತಿಸಿಕೊಂಡರೂ ಮಹಿಳೆಯಾಗಿ ಸ್ಪರ್ಧಿಸುವುದನ್ನು ನಾನು ಒಪ್ಪುತ್ತೇನೆ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟ 2024ರ ಇತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಅರ್ಷದ್ ಕೂಡಾ ನಮ್ಮ ಮಗನಂತೆಯೇ; ಪಾಕಿಸ್ತಾನ ಆಟಗಾರನ ಚಿನ್ನ ಗೆಲುವಿಗೆ ಖುಷಿಪಟ್ಟ ನೀರಜ್ ಚೋಪ್ರಾ ತಾಯಿ