logo
ಕನ್ನಡ ಸುದ್ದಿ  /  ಕ್ರೀಡೆ  /  ಚಿನ್ನದ ಹುಡುಗ ಅರ್ಷದ್ ನದೀಮ್‌ಗೆ ಕೋಟಿ ಕೋಟಿ ಬಹುಮಾನ; ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸೇರಿ ಮತ್ತಷ್ಟು ಗೌರವ

ಚಿನ್ನದ ಹುಡುಗ ಅರ್ಷದ್ ನದೀಮ್‌ಗೆ ಕೋಟಿ ಕೋಟಿ ಬಹುಮಾನ; ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸೇರಿ ಮತ್ತಷ್ಟು ಗೌರವ

Jayaraj HT Kannada

Aug 11, 2024 02:56 PM IST

google News

ಚಿನ್ನದ ಹುಡುಗ ಅರ್ಷದ್ ನದೀಮ್‌ಗೆ ಕೋಟಿ ಕೋಟಿ ಬಹುಮಾನ

    • ಒಲಿಂಪಿಕ್ಸ್‌ನಲ್ಲಿ ಬಂಗಾರ ಸಾಧನೆ ಮಾಡಿದ ಅರ್ಷದ್ ನದೀಮ್, ಪಾಕಿಸ್ತಾನದ ದೊಡ್ಡ ಸ್ಟಾರ್‌ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡುವ ಕುರಿತು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ ಕೋಟ್ಯಾಂತರ ನಗದು ಬಹುಮಾನ ಕೂಡಾ ಘೋಷಿಸಲಾಗಿದೆ.
ಚಿನ್ನದ ಹುಡುಗ ಅರ್ಷದ್ ನದೀಮ್‌ಗೆ ಕೋಟಿ ಕೋಟಿ ಬಹುಮಾನ
ಚಿನ್ನದ ಹುಡುಗ ಅರ್ಷದ್ ನದೀಮ್‌ಗೆ ಕೋಟಿ ಕೋಟಿ ಬಹುಮಾನ (AFP)

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಜಾವೆಲಿನ್‌ ಎಸೆತಗಾರ ಅರ್ಷದ್ ನದೀಮ್ (Arshad Nadeem) ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಒಲಿಂಪಿಕ್ ದಾಖಲೆಯನ್ನು ಮುರಿದು ನೂತನ ರೆಕಾರ್ಡ್‌ ಬರೆದ ಆಟಗಾರ, ಪಾಕಿಸ್ತಾನಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದ ದಾಖಲೆ ಬರೆದರು. ಇದರೊಂದಿಗೆ ಪಾಕಿಸ್ತಾನ ದೇಶದ ಕ್ರೀಡಾ ವಲಯದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಕೀರ್ತಿಗೆ ಭಾಜನರಾದರು. 92.97 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಪಾಕಿಸ್ತಾನಕ್ಕೆ 32 ವರ್ಷಗಳ ನಂತರ ಮೊದಲ ಒಲಿಂಪಿಕ್ ಪದಕ ಗೆದ್ದುಕೊಟ್ಟ ಕೀರ್ತಿ ಅರ್ಷದ್‌ಗೆ ಸಲ್ಲುತ್ತದೆ. ಹೀಗಾಗಿ ದೇಶದ ರಾಷ್ಟ್ರಗೀತೆಯನ್ನು ಪ್ಯಾರಿಸ್‌ನಲ್ಲಿ ಮೊಳಗಿಸಿದ ಆಟಗಾರನಿಗೆ ಪಾಕಿಸ್ತಾನದಲ್ಲಿ ಉನ್ನತ ಗೌರವ ದೊರಕಿದೆ. ದೇಶದ ಚಿನ್ನದ ಹುಡುಗನಿಗೆ ಹತ್ತು ಹಲವಾರು ನಗದು ಬಹುಮಾನಗಳು ಮತ್ತು ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.

ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಅರ್ಷದ್ ನದೀಮ್ ಅವರಿಗೆ ಪಾಕಿಸ್ತಾನ ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 150 ಮಿಲಿಯನ್ ಪಾಕಿಸ್ತಾನ ರೂಪಾಯಿಗಳಿಗಿಂದ ಹೆಚ್ಚು ನಗದು ಬಹುಮಾನ ಸಿಗಲಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು 4.5 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು. ಇದರಲ್ಲಿ ಪಾಕಿಸ್ತಾನದ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಅವರು ಒಟ್ಟು ಬಹುಮಾನದ ಮೊತ್ತದಲ್ಲಿ 100 ಮಿಲಿಯನ್ ಪಾಕಿಸ್ತಾನ ರೂಪಾಯಿ ಬಹುಮಾನ ಘೋಷಿಸಿದ್ದಾರೆ ಎಂದು ಪಾಕ್ ಮೂಲದ ಸುದ್ದಿ ಸಂಸ್ಥೆ ಡಾನ್‌ ವರದಿ ಮಾಡಿದೆ.

ಪಂಜಾಬ್ ರಾಜ್ಯಪಾಲ ಸರ್ದಾರ್ ಸಲೀಮ್ ಹೈದರ್ ಖಾನ್ ಅವರು 2 ಮಿಲಿಯನ್ ಬಹುಮಾನವನ್ನು ಘೋಷಿಸಿದರೆ, ಸಿಂಧ್ ಸಿಎಂ 50 ಮಿಲಿಯನ್ ನಗದು ಘೋಷಿಸಿದ್ದಾರೆ. ಪಾಕಿಸ್ತಾನದ ಗಾಯಕ ಅಲಿ ಜಾಫರ್, ನದೀಮ್‌ಗೆ 1 ಮಿಲಿಯನ್ ನಗದು ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಕ್ರಿಕೆಟಿಗ ಅಹ್ಮದ್ ಶಹಜಾದ್ ಅವರು ತಮ್ಮ ಪ್ರತಿಷ್ಠಾನದ ಮೂಲಕ ಇಷ್ಟೇ ಮೊತ್ತವನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ.

ನಿಶಾನ್-ಇ-ಪಾಕಿಸ್ತಾನ್‌ ಗೌರವ

ರೇಡಿಯೋ ಪಾಕಿಸ್ತಾನದ ವರದಿಯ ಪ್ರಕಾರ, ಪಾಕಿಸ್ತಾನ ಸಂಸತ್ತಿನ ಕೆಳಮನೆಯು ನದೀಮ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಹೀಗಾಗಿ ನದೀಮ್‌ ಅವರಿಗೆ ನಿಶಾನ್-ಇ-ಪಾಕಿಸ್ತಾನದ ಗೌರವ ಸಿಗಲಿದೆ.

ಇದೇ ವೇಳೆ ಪಾಕ್ ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಅವರು ನದೀಮ್ ಅವರ ಸಾಧನೆಗಾಗಿ ಪಾಕಿಸ್ತಾನದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಹಿಲಾಲ್-ಇ-ಇಮ್ತಿಯಾಜ್ ಅನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಪಾಕಿಸ್ತಾನದ ಜಿಯೋ ನ್ಯೂಸ್ ವರದಿಯ ಪ್ರಕಾರ, ಸಿಂಧ್ ಸರ್ಕಾರದ ವಕ್ತಾರ ಮತ್ತು ಸುಕ್ಕೂರ್ ಮೇಯರ್ ಬ್ಯಾರಿಸ್ಟರ್ ಇಸ್ಲಾಂ ಶೇಖ್ ಅವರು ನದೀಮ್‌ಗೆ ಚಿನ್ನದ ಕಿರೀಟವನ್ನು ನೀಡಿ ಗೌರವಿಸಲಾಗುವುದು ಎಂದು ಘೋಷಿಸಿದ್ದಾರೆ. ಇದೇ ವೇಳೆ ಸುಕ್ಕೂರಿನ ಹೊಸ ಕ್ರೀಡಾಂಗಣಕ್ಕೂ ನದೀಮ್ ಹೆಸರಿಡಲಾಗುವುದು ಎಂದು ಶೇಖ್ ಹೇಳಿದ್ದಾರೆ.

ಕರಾಚಿಯಲ್ಲಿ 'ಅರ್ಷದ್ ನದೀಮ್ ಅಥ್ಲೆಟಿಕ್ಸ್ ಅಕಾಡೆಮಿ' ಸ್ಥಾಪಿಸಲಾಗುವುದು ಎಂದು ಕರಾಚಿ ಮೇಯರ್ ಮುರ್ತಾಜಾ ವಹಾಬ್ ಘೋಷಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಭರ್ಜರಿ ಸ್ವಾಗತ

ಚಿನ್ನದ ಪದಕ ಗೆದ್ದು ಪಾಕಿಸ್ತಾನ ಲಾಹೋರ್‌ಗೆ ಮರಳಿದ ಅರ್ಷದ್‌ಗೆ ಭರ್ಜರಿ ಸ್ವಾಗತ ನೀಡಲಾಯಿತು. ಸಾವಿರಾರು ಅಭಿಮಾನಿಗಳು ಜಯಘೋಷಣೆಗಳೊಂದಿಗೆ ಅವರನ್ನು ಬರಮಾಡಿಕೊಂಡರು. ಕೊರಳಿಗೆ ಹಾರವನ್ನು ಹಾಕಿ, "ಅರ್ಷದ್ ನದೀಮ್ ದೀರ್ಘಕಾಲ ಬಾಳಲಿ, ಪಾಕಿಸ್ತಾನ ದೀರ್ಘಕಾಲ ಬಾಳಲಿ" ಎಂಬ ಘೋಷಣೆ ಕೇಳಿ ಬಂದವು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ