ಏಷ್ಯನ್ ಗೇಮ್ಸ್‌ಗೆ ಅದ್ಧೂರಿ ಚಾಲನೆ; ತ್ರಿವರ್ಣ ಧ್ವಜ ಹಿಡಿದು ಭಾರತವನ್ನು ಮುನ್ನಡೆಸಿದ ಲೊವ್ಲಿನಾ, ಹರ್ಮನ್‌ಪ್ರೀತ್
Sep 23, 2023 06:33 PM IST
ಭಾರತದ ಧ್ವಜಾಧಾರಿಗಳಾಗಿ ಪರೇಡ್‌ನಲ್ಲಿ ಮುನ್ನಡೆದ ಹರ್ಮನ್‌ಪ್ರೀತ್ ಸಿಂಗ್ ಮತ್ತು ಲೊವ್ಲಿನಾ ಬೊರ್ಗೊಹೈನ್
- Asian Games 2023 opening ceremony 2023: ಏಷ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ತ್ರಿವರ್ಣ ಧ್ವಜ ಹಿಡಿದು ಭಾರತ ಏಷ್ಯನ್ ಗೇಮ್ಸ್ ತಂಡವನ್ನು ಮುನ್ನಡೆಸಿದರು.
ಏಷ್ಯಾದ ದೇಶಗಳನ್ನು ಒಟ್ಟುಗೂಡಿಸುವ ಏಷ್ಯಾಖಂಡದ ಅತಿ ದೊಡ್ಡ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ದೊರೆತಿದೆ. 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ (Asian Games 2023)ಗೆ ಚೀನಾದ ಹ್ಯಾಂಗ್ಝೌ (Hangzhou, China) ನಗರ ಆತಿಥ್ಯ ವಹಿಸಿದ್ದು, ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನಡೆದಿದೆ.
ಏಷ್ಯನ್ ಗೇಮ್ಸ್ 2023ರ ಉದ್ಘಾಟನಾ ಸಮಾರಂಭಕ್ಕೆ ಪ್ರಮುಖ ಅತಿಥಿಗಳು ಸಾಕ್ಷಿಯಾದರು. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಉಪಸ್ಥಿಯತಿಯಲ್ಲಿ ವರ್ಣರಂಜಿತ ಕಾರ್ಯಕ್ರಮ ಆರಂಭವಾಯಿತು. ಉದ್ಘಾಟನಾ ಸಮಾರಂಭದ ವೇಳೆ ನಡೆಯುವ ಅಥ್ಲೀಟ್‌ಗಳ ಪರೇಡ್‌ನಲ್ಲಿ ವಿವಿಧ ರಾಷ್ಟ್ರಗಳ ಅಥ್ಲೀಟ್‌ಗಳು ಭಾಗವಹಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಮುನ್ನಡೆದರು. ತ್ರಿವರ್ಣ ಧ್ವಜ ಹಿಡಿದು ಉದ್ಘಾಟನಾ ಪರೇಡ್‌ನಲ್ಲಿ ಹೆಜ್ಜೆ ಹಾಕಿದರು.
45 ದೇಶಗಳ 12 ಸಾವಿರ ಕ್ರೀಡಾಪಟುಗಳು ಭಾಗಿ
ಕಳೆದ 4 ದಿನಗಳಿಂದ ಕ್ರೀಡಾಕೂಟದ ವಿವಿಧ ವಿಭಾಗಗಳ ಕ್ರೀಡೆಗಳು ಆರಂಭವಾಗಿವೆ. ಆದರೆ, ಇಂದು ವರ್ಣರಂಜಿತ ಆರಂಭೋತ್ಸವ ನಡೆಸಲಾಗಿದೆ. ಏಷ್ಯಾದ ಒಟ್ಟು 45 ದೇಶಗಳ ಬರೋಬ್ಬರಿ 12 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಡ್ರ್ಯಾಗನ್ ರಾಷ್ಟ್ರದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ವರ್ಷ ನಡೆಯಬೇಕಿದ್ದ ಕೂಟವು, ಕೊರೊನಾ ಕಾರಣದಿಂದ ಒಂದು ವರ್ಷ ತಡವಾಗಿ ಆರಂಭಗೊಂಡಿದೆ.
ಭಾರತದ 655 ಅಥ್ಲೀಟ್‌ಗಳು
ಏಷ್ಯನ್ ಗೇಮ್ಸ್‌ನಲ್ಲಿ ನಡೆಯಲಿರುವ 39 ಕ್ರೀಡಾ ವಿಭಾಗಗಳಲ್ಲಿ ಭಾರತದ ಒಟ್ಟು 655 ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ.