ಸತತ 4ನೇ ಸೋಲನುಭವಿಸಿದ ಬೆಂಗಳೂರು ಬುಲ್ಸ್; ಪ್ರೊ ಕಬಡ್ಡಿ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರಂಭ
Dec 10, 2023 10:40 AM IST
ಪ್ರೊ ಕಬಡ್ಡಿಯಲ್ಲಿ ಸತತ 4ನೇ ಸೋಲನುಭವಿಸಿದ ಬೆಂಗಳೂರು ಬುಲ್ಸ್.
- Pro kabaddi league 10: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಸತತ 4ನೇ ಸೋಲು ಕಂಡಿದೆ. ಹರಿಯಾಣ ಸ್ಟೀಲರ್ಸ್ ವಿರುದ್ಧ ಘೋರ ಪರಾಭವಗೊಂಡಿದೆ.
ಪ್ರೊ ಕಬಡ್ಡಿ ಲೀಗ್ನಲ್ಲಿ (Pro kabaddi league 10) ಬೆಂಗಳೂರು ಬುಲ್ಸ್ ತಂಡವು ಸತತ ನಾಲ್ಕನೇ ಸೋಲು ಅನುಭವಿಸಿ ಮುಖಭಂಗಕ್ಕೆ ಒಳಗಾಗಿದೆ. ತವರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ 38-32 ಅಂಕಗಳ (Bengaluru Bulls vs Haryana Steelers) ಅಂತರದಲ್ಲಿ ಮುಗ್ಗರಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಗೆದ್ದ ಹರಿಯಾಣ ಸ್ಟೀಲರ್ಸ್ 9 ಸ್ಥಾನದಲ್ಲಿದೆ.
ನಿನ್ನೆಯಷ್ಟೇ (ಡಿಸೆಂಬರ್ 8) ದಬಾಂಗ್ ಡೆಲ್ಲಿ ವಿರುದ್ಧ ಸೋತ ಬುಲ್ಸ್, ಇಂದು ಪುಟಿದೇಳಲು ಮತ್ತೆ ವಿಫಲವಾಯಿತು. ಅಹ್ಮದಾಬಾದ್ ಚರಣದಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಗೂಳಿಗಳು ತವರಿನ ಮೈದಾನದಲ್ಲೂ ಆಡಿದ ಎರಡೂ ಪಂದ್ಯಗಳಲ್ಲೂ ಘೋರ ಪರಾಭವಗೊಂಡಿದ್ದು, ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಪ್ರೊ ಕಬಡ್ಡಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬುಲ್ಸ್ ಕೆಟ್ಟ ಆರಂಭ ಪಡೆದುಕೊಂಡಿದೆ.
ತವರಿನ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಸೋತರೂ ಹರಿಯಾಣ ವಿರುದ್ಧ ತಿರುಗಿಬೀಳುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಕಳಪೆ ಪ್ರದರ್ಶನದೊಂದಿಗೆ ತುಂಬಿ ತುಳುಕಿದ್ದ ಸ್ಟೇಡಿಯಂನಲ್ಲಿ ಕನ್ನಡಿಗ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ನಿನ್ನೆ (ಡಿ.8) ಡೆಲ್ಲಿ ಎದುರು 31-38 ರಿಂದ ಸೋತಿತ್ತು.
ಬೆಂಕಿ ಪ್ರದರ್ಶನ ಬರುತ್ತಿಲ್ಲ
ಬೆಂಗಳೂರು ಬುಲ್ಸ್ ತಂಡದಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಹೋರಾಟದ ಮನೋಭಾವ ತೋರುತ್ತಿಲ್ಲ. ಎದುರಾಳಿ ತಂಡದ ಮೇಲೆ ಒತ್ತಡ ಹಾಕುವ ಪ್ರಯತ್ನ ಹಾಕುತ್ತಿಲ್ಲ. ಭರತ್ ಹೊರತುಪಡಿಸಿ ಉಳಿದ ಆಟಗಾರರು ತೀವ್ರ ಕಳಪೆಯಾಟ ಆಡುತ್ತಿದ್ದಾರೆ. ಸುಲಭಕ್ಕೆ ಔಟ್ ಆಗುವ ಮೂಲಕ ಪ್ರತಿಸ್ಫರ್ಧಿ ಸ್ಕೋರ್ ಹೆಚ್ಚಿಸುತ್ತಿದ್ದಾರೆ.
ಲೀಗ್ನ ಆರಂಭಿಕ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿದ್ದು ಬಿಟ್ಟರೆ ಉಳಿದ 3 ಪಂದ್ಯಗಳಲ್ಲಿ ಪ್ರಾರಂಭದಿಂದಲೇ ಹಿನ್ನಡೆ ಅನುಭವಿಸುತ್ತಿದೆ. ಹರಿಯಾಣ ಸ್ಟೀಲರ್ಸ್ ಎದುರು ಸಹ ಆರಂಭದಿಂದಲೂ ಮುನ್ನಡೆ ಸಾಧಿಸಲು ವಿಫಲವಾಯಿತು. ಕೊನೆಯಲ್ಲಿ ಕೊಂಚ ಪುಟಿದೆದ್ದರೂ ಗೆಲುವು ಸಾಧ್ಯವಾಗಲಿಲ್ಲ.
ಭರತ್ ಮಾತ್ರ ಹೋರಾಟ, ಉಳಿದವರಿಂದ ನೀರಸ
ಡೆಲ್ಲಿ ವಿರುದ್ಧ 12 ಪಾಯಿಂಟ್ಸ್ ಕಲೆ ಹಾಕಿದ್ದ ಬುಲ್ಸ್ ತಂಡದ ಸ್ಟಾರ್ ರೈಡರ್ ಹರಿಯಾಣ ಎದುರು ಸಹ ಮಿಂಚಿನ ಪ್ರದರ್ಶನ ನೀಡಿದರು. 3 ಬೋಸನ್ ಸೇರಿದಂತೆ ಒಟ್ಟು 14 ಅಂಕವನ್ನು ತಂಡಕ್ಕೆ ನೀಡಿದರು. ಸುರ್ಜೀತ್ ಸಿಂಗ್ 5 ಟ್ಯಾಕಲ್ ಅಂಕ ಗಳಿಸಿದರು. ಸೌರಭ್ ನಂದಾಲ್ 3 ಅಂಕ, ಸುಶೀಲ್, ಅಭಿಷೇಕ್ ಸಿಂಗ್, ಮೋನು ತಲಾ 2 ಅಂಕ ಪಡೆದರು. ಆದರೆ ಭರತ್ರಂತೆ ಆಕ್ರಮಣಕಾರಿ ಆಟ ಯಾರಿಂದಲೂ ಬರಲಿಲ್ಲ. ಇದು ಸೋಲಿಗೆ ಪ್ರಮುಖ ಕಾರಣ.
ಹರಿಯಾಣ ಪ್ಲೇಯರ್ಸ್ ಆಲ್ರೌಂಡ್ ಪ್ರದರ್ಶನ
ಗೆದ್ದ ಹರಿಯಾಣ ಸ್ಟೀಲರ್ಸ್, ಆಲ್ರೌಂಡ್ ಪ್ರದರ್ಶನ ನೀಡಿತು. ಬಹುತೇಕ ಆಟಗಾರರು ಬುಲ್ಸ್ ತಂಡಕ್ಕೆ ಹೆಚ್ಚು ಆಘಾತ ನೀಡಿದ್ದಾರೆ. ವಿನಯ್ 8 ಅಂಕ ಪಡೆದರೆ, ಸಿದ್ದಾರ್ಥ್ ದೇಸಾಯಿ 7 ಅಂಕ, ಜಯದೀಪ್ 6 ಅಂಕ, ಮೋಹಿತ್ ಕಾಲೆರ್ 5 ಅಂಕ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಯುಪಿ ಯೋಧಾಸ್ಗೆ ಜಯ
ಡಿಸೆಂಬರ್ 9ರಂದು ನಡೆದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಯುಪಿ ಯೋಧಾಸ್ ಭರ್ಜರಿ ಗೆಲುವು ದಾಖಲಿಸಿದೆ. ಕಂಠೀರವ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ 48-33 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಯುಪಿ ಯೋಧಾಸ್ 2 ಸ್ಥಾನಕ್ಕೇರಿದರೆ, ಟೈಟಾನ್ಸ್ ಕೊನೆಯ 12ನೇ ಸ್ಥಾನದಲ್ಲಿದೆ.