ಒಲಿಂಪಿಕ್ ವಿಜೇತರಿಗೆ ನೀಡುವ ಪದಕದಲ್ಲಿ ಎಷ್ಟು ಗ್ರಾಂ ಚಿನ್ನವಿರುತ್ತದೆ; ಮೂರು ಪದಕ ತಯಾರಿಕೆಗೆ ತಗಲುವ ಖರ್ಚೆಷ್ಟು?
Jul 20, 2024 05:47 PM IST
ಒಲಿಂಪಿಕ್ ವಿಜೇತರಿಗೆ ನೀಡುವ ಪದಕದಲ್ಲಿ ಎಷ್ಟು ಗ್ರಾಂ ಚಿನ್ನವಿರುತ್ತದೆ; ಮೂರು ಪದಕ ತಯಾರಿಕೆಗೆ ತಗಲುವ ಖರ್ಚೆಷ್ಟು?
- Olympic winners: ಒಲಿಂಪಿಕ್ಸ್ನಲ್ಲಿ ವಿಜೇತರಿಗೆ ನೀಡುವ ಗೋಲ್ಡ್ ಮೆಡಲ್ ಎಷ್ಟು ಗ್ರಾಂ ಚಿನ್ನ ಹೊಂದಿರುತ್ತದೆ. ಚಿನ್ನ, ಬೆಳ್ಳಿ, ಕಂಚಿನ ಪದಕಗಳ ತಯಾರಿಕೆಗೆ ತಗಲುವ ಖರ್ಚೆಷ್ಟು? ಇಲ್ಲಿದೆ ವಿವರ.
ಬಹುನಿರೀಕ್ಷಿತ 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ (Paris Olympic 2024) ದಿನಗಣನೆ ಆರಂಭಗೊಂಡಿದೆ. 33ನೇ ಆವೃತ್ತಿಯ ಒಲಿಂಪಿಕ್ಸ್, ಜುಲೈ 26 ರಿಂದ ಆಗಸ್ಟ್ 11ರ ತನಕ ಫ್ರಾನ್ಸ್ನ 16 ನಗರಗಳಲ್ಲಿ ಜರುಗಲಿದೆ. ಪ್ಯಾರಿಸ್ 3ನೇ ಬಾರಿಗೆ ಒಲಿಂಪಿಕ್ಸ್ಗೆ ಆತಿಥ್ಯ ವಹಿಸುತ್ತಿದೆ. ಒಲಿಂಪಿಕ್ಸ್ನಲ್ಲಿ ಗೆಲ್ಲುವ ಕ್ರೀಡಾಪಟುಗಳಿಗೆ ಮೊದಲು, 2ನೇ ಹಾಗೂ 3ನೇ ಸ್ಥಾನಿಗಳಿಗೆ 3 ಮಾದರಿಯಲ್ಲಿ ಪದಕಗಳನ್ನು ಹಂಚಿಕೆ ಮಾಡಲಾಗುತ್ತದೆ. ಮೂರು ಪದಕಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಪ್ರಥಮ ಸ್ಥಾನ ಪಡೆದ ಕ್ರೀಡಾಪಟುವಿಗೆ ಚಿನ್ನದ ಪದಕ ಸಿಗುತ್ತದೆ. ದ್ವಿತೀಯ ಸ್ಥಾನಿಗೆ ಬೆಳ್ಳಿ ಹಾಗೂ ತೃತೀಯ ಸ್ಥಾನ ಪಡೆದ ಆಟಗಾರನಿಗೆ ಕಂಚಿನ ಪದಕ ದೊರೆಯಲಿದೆ. ಹಾಗಾದರೆ, ಮೊದಲ ಆಟಗಾರನಿಗೆ ಸಿಗುವ ಚಿನ್ನದ ಪದಕದಲ್ಲಿ ಎಷ್ಟು ಗ್ರಾಂ ಚಿನ್ನವಿರುತ್ತದೆ. ಈ ಪದಕ ತಯಾರಿಸಲು ತಗಲುವ ವೆಚ್ಚ ಎಷ್ಟಿರಬಹುದು. ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಎಷ್ಟು ಗ್ರಾಂ ಇರುತ್ತದೆ? ಪದಕಗಳ ದಪ್ಪ, ತೂಕ ಹಾಗೂ ಎಷ್ಟು ಬೆಲೆ ಹೊಂದಿರುತ್ತದೆ ಎಂಬುದನ್ನು ಈ ಮುಂದೆ ತಿಳಿಯೋಣ.
ಪದಕಗಳ ನಿರ್ಮಾಣಕ್ಕೆ ತಗಲುವ ವೆಚ್ಚವೆಷ್ಟು?
ಆತಿಥ್ಯ ವಹಿಸುತ್ತಿರುವ ಕಾರಣ ವಿಶ್ವವಿಖ್ಯಾತ ಐಫೆಲ್ ಟವರ್ನಲ್ಲಿರುವ ಕಬ್ಬಿಣದ ತುಂಡುಗಳನ್ನು ಪ್ಯಾರಿಸ್ ಒಲಿಂಪಿಕ್ಸ್ ಜತೆಗೆ ಪ್ಯಾರಾಲಿಂಪಿಕ್ಸ್ನಲ್ಲಿ ನೀಡುವ ಪದಕಕ್ಕೆ ಬಳಸಲಾಗುತ್ತದೆ. ಪ್ಯಾರಿಸ್ಗೆ ಒಲಿಂಪಿಕ್ಸ್ ಮರಳುತ್ತಿರುವ ಕಾರಣ ತುಂಡುಗಳನ್ನು ಪದಕದಲ್ಲಿ ಸೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಪದಕದ ಮೇಲೂ ಐಫೆಲ್ ಟವರ್ನ 18 ಗ್ರಾಂ ತುಂಡನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ. 32 ಕ್ರೀಡೆಗಳ 329 ಈವೆಂಟ್ಗಳಲ್ಲಿ 10,714 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಒಟ್ಟು 5,084 ಪದಕಗಳನ್ನು ರೆಡಿ ಮಾಡಿಡಲಾಗಿದೆ.
ಚಿನ್ನ, ಬೆಳ್ಳಿ, ಕಂಚು ಪದಕಗಳ ದಪ್ಪ 9.2 ಮಿಲಿ ಮೀಟರ್, ಅಗಲ 85 ಮಿಲಿ ಮೀಟರ್ ಆಗಿರಲಿದೆ. ಸ್ವರ್ಣ ಪದಕ 529 ಗ್ರಾಂ ತೂಕ ಇದ್ದರೆ, ಬೆಳ್ಳಿ ಪದಕ 525 ಗ್ರಾಂ ತೂಕ, ಕಂಚು 455 ಗ್ರಾಂ ತೂಕ ಇರುತ್ತದೆ. ಚಿನ್ನದ ಪದಕ ನಿರ್ಮಿಸಲು ತಗಲುವ ವೆಚ್ಚ 758 ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 65,000 ರೂಪಾಯಿ. ಬೆಳ್ಳಿ ಪದಕ ನಿರ್ಮಿಸಲು ತಗುಲಿದ ವೆಚ್ಚ 450 ಡಾಲರ್ ಅಂದರೆ 37,602 ರೂಪಾಯಿ. ಕಂಚಿನ ಪದಕದ ಬೆಲೆ 5 ಡಾಲರ್ ಖರ್ಚಾಗುತ್ತದೆ.
ಪದಕದಲ್ಲಿ ಎಷ್ಟು ಗ್ರಾಂ ಚಿನ್ನ ಇರುತ್ತದೆ?
ಒಲಿಂಪಿಕ್ ವಿಜೇತರಿಗೆ ನೀಡುವ ಚಿನ್ನದ ಪದಕದಲ್ಲಿ ಸಂಪೂರ್ಣ ಚಿನ್ನ ಇರುವುದಿಲ್ಲ. ಆದರೆ ಕೇವಲ 6 ಗ್ರಾಂ ಚಿನ್ನ ಮಾತ್ರ ಇರಲಿದ್ದು, ಶೇಕಡಾ 92.5 ರಷ್ಟು ಬೆಳ್ಳಿಯಿಂದ ಮಾಡಲಾಗಿರುತ್ತದೆ. ಇನ್ನು ಬೆಳ್ಳಿ ಪದಕದಲ್ಲಿ ಶೇಕಡಾ 92.5 ರಷ್ಟು ಬೆಳ್ಳಿಯನ್ನೇ ಬಳಸಲಾಗಿರುತ್ತದೆ. ಉಳಿದ ಕಂಚಿನ ಪದಕದಲ್ಲಿ ಶೇಕಡಾ 97 ರಷ್ಟು ತಾಮ್ರ ಬಳಸಲಾಗುತ್ತದೆ. ಅಲ್ಲದೆ, 2.5 ರಷ್ಟು ಸತು ಮತ್ತು 0.5ರಷ್ಟು ತವರ ಬಳಕೆ ಮಾಡಲಾಗುತ್ತದೆ. ಒಲಿಂಪಿಕ್ನಲ್ಲಿ ಗೆಲ್ಲುವ ಕ್ರೀಡಾಪಟುಗಳಿಗೆ ಪದಕಗಳನ್ನು ಮಾತ್ರ ನೀಡಲಾಗುತ್ತದೆ. ಯಾವುದೇ ನಗದು ವಿತರಿಸುವುದಿಲ್ಲ. ಆದರೆ ಪದಕ ಗೆದ್ದ ಆಟಗಾರರಿಗೆ ಆಯಾ ದೇಶಗಳು ಕೋಟಿಗಟ್ಟಲೆ ನಗದು ಬಹುಮಾನ ನೀಡುತ್ತದೆ.